YouVersion Logo
Search Icon

ವಿಮೋ 6

6
ಯೆಹೋವನು ಇಸ್ರಾಯೇಲರನ್ನು ಬಿಡುಗಡೆಗೊಳಿಸುವುದಾಗಿ ವಾಗ್ದಾನವನ್ನು ಮಾಡಿದ್ದು
1ಆನಂತರ ಯೆಹೋವನು ಮೋಶೆಗೆ, “ನಾನು ಫರೋಹನಿಗೆ ಮಾಡುವುದನ್ನು ನೀನು ಈಗ ನೋಡುವೆ. ಅವನು ನನ್ನ ಬಲವಾದ ಹಸ್ತವನ್ನು ನೋಡಿ ಅವರನ್ನು ಹೋಗಗೊಡಿಸುವನು. ನನ್ನ ಭುಜಬಲದಿಂದ ಪೀಡಿತನಾಗಿ ಅವರನ್ನು ತನ್ನ ದೇಶದಿಂದ ಹೊರಡಿಸುವನು” ಅಂದನು.
2ದೇವರು ಮೋಶೆಯ ಸಂಗಡ ಪುನಃ ಮಾತನಾಡಿ ಇಂತೆಂದನು, “ನಾನೇ ಯೆಹೋವನು, 3ನಾನು ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ #6:3 ಎಲ್ ಷಡಾಯ್.ಸರ್ವಶಕ್ತನಾದ ದೇವರಾಗಿ ಕಾಣಿಸಿಕೊಂಡಿದ್ದೆನು. ಆದರೆ ಯೆಹೋವನೆಂಬ ನನ್ನ ಹೆಸರಿನಲ್ಲಿ ಅವರಿಗೆ ಗೋಚರವಾಗಿರಲಿಲ್ಲ. 4ನಾನು ಅವರಿಗೆ ಕಾನಾನ್ ದೇಶವನ್ನು ಅಂದರೆ, ಅವರು ಪರದೇಶದವರಾಗಿ ವಾಸವಾಗಿದ್ದ ಪ್ರವಾಸದ ದೇಶವನ್ನು ನಾನು ಅವರಿಗೆ ಕೊಡುವೆನೆಂದು ಅವರ ಸಂಗಡ ನನ್ನ ಒಡಂಬಡಿಕೆಯನ್ನು ಮಾಡಿಕೊಂಡಿರುವೆನು. 5ಐಗುಪ್ತರು ದಾಸರಾಗಿ ಮಾಡಿಕೊಂಡಿರುವ ಇಸ್ರಾಯೇಲರ ಗೋಳು ಈಗ ನನಗೆ ಕೇಳಿಸಿತು. ನಾನು ಮಾಡಿದ ವಾಗ್ದಾನವನ್ನು ಪುನಃ ನೆನಪುಮಾಡಿಕೊಂಡೆನು. 6ಆದುದರಿಂದ, ನೀನು ಇಸ್ರಾಯೇಲರಿಗೆ ನನ್ನ ಹೆಸರಿನಲ್ಲಿ ಹೇಳಬೇಕಾದದ್ದೇನೆಂದರೆ, ‘ನಾನೇ ಯೆಹೋವನು ಐಗುಪ್ತರು ನಿಮ್ಮಿಂದ ಮಾಡಿಸುವ ಬಿಟ್ಟೀ ಕೆಲಸಗಳನ್ನು ತಪ್ಪಿಸಿ, ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ, ನನ್ನ ಕೈಚಾಚಿ ಅವರಿಗೆ ಮಹಾ ಶಿಕ್ಷೆಗಳನ್ನು ವಿಧಿಸಿ ನಿಮ್ಮನ್ನು ರಕ್ಷಿಸುವೆನು. 7ನಾನು ನಿಮ್ಮನ್ನು ನನ್ನ ಪ್ರಜೆಗಳನ್ನಾಗಿ ಆರಿಸಿಕೊಂಡು ನಿಮಗೆ ದೇವರಾಗಿರುವೆನು. ಐಗುಪ್ತ್ಯರು ಮಾಡಿಸುವ ಬಿಟ್ಟೀ ಸೇವೆಯನ್ನು ನಾನು ನಿಮಗೆ ತಪ್ಪಿಸಿದಾಗ ಯೆಹೋವನೆಂಬ ನಾನೇ ನಿಮ್ಮ ದೇವರಾಗಿದ್ದೇನೆ ಎಂಬುದು ನಿಮಗೆ ತಿಳಿಯುವುದು. 8ಇದಲ್ಲದೆ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ನಾನು ಕೈ ಎತ್ತಿ ಪ್ರಮಾಣಮಾಡಿದ ದೇಶದಲ್ಲಿ ನಿಮ್ಮನ್ನು ಬರಮಾಡಿ, ಅದನ್ನು ನಿಮಗೆ ಸ್ವತ್ತಾಗಿ ಕೊಡುವೆನೆಂದು ಹೇಳಿದವನು ಯೆಹೋವನೆಂಬ ನಾನೇ’ ಎಂದು ಅವರಿಗೆ ಹೇಳು” ಅಂದನು. 9ಮೋಶೆ ಈ ಮಾತುಗಳನ್ನು ಅದೇ ಪ್ರಕಾರವಾಗಿ ಇಸ್ರಾಯೇಲರಿಗೆ ಹೇಳಿದಾಗ, ಅವರ ಮನಸ್ಸು ಕುಗ್ಗಿಹೋದದ್ದರಿಂದಲೂ, ಕಠಿಣವಾಗಿ ದಾಸತ್ವದ ಸೇವೆ ಮಾಡಬೇಕಾಗಿ ಬಂದದ್ದರಿಂದಲೂ ಅವರು ಮೋಶೆಯ ಮಾತಿಗೆ ಕಿವಿಗೊಡಲೇ ಇಲ್ಲ. 10ಆಗ ಯೆಹೋವನು ಮೋಶೆಯ ಸಂಗಡ ಮಾತನಾಡಿ, 11“ನೀನು ಐಗುಪ್ತ್ಯರ ಅರಸನಾದ ಫರೋಹನ ಬಳಿಗೆ ಹೋಗಿ ಅವನು ಇಸ್ರಾಯೇಲರನ್ನು ತನ್ನ ದೇಶದಿಂದ ಹೊರಟು ಹೋಗುವಂತೆ ಅವನ ಸಂಗಡ ಮಾತನಾಡು” ಅಂದನು. 12ಅದಕ್ಕೆ ಮೋಶೆ ಯೆಹೋವನ ಸನ್ನಿಧಿಯಲ್ಲಿ, “ಇಗೋ, ಇಸ್ರಾಯೇಲರೇ ನನ್ನ ಮಾತುಗಳನ್ನು ಕೇಳುತ್ತಿಲ್ಲ; ಹೀಗಿರುವಾಗ #6:12 ಇಬ್ರಿಯ ಭಾಷೆಯಲ್ಲಿ ಸುನ್ನತಿಯಿಲ್ಲದ ತುಟಿಗಳುಳ್ಳ ಮನುಷ್ಯನು.ತೊದಲು ಮಾತನಾಡುವ ನನ್ನ ಮಾತುಗಳಿಗೆ ಫರೋಹನು ಕಿವಿಗೊಟ್ಟಾನೇ?” ಅಂದನು. 13ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ, ಇಸ್ರಾಯೇಲರನ್ನು ಐಗುಪ್ತದೇಶದೊಳಗಿಂದ ಬರಮಾಡಬೇಕೆಂದು ಅವರಿಗೆ ಆಜ್ಞಾಪಿಸಿ ಅವರನ್ನು ಇಸ್ರಾಯೇಲರ ಬಳಿಗೂ ಐಗುಪ್ತದ ಅರಸನಾದ ಫರೋಹನ ಬಳಿಗೂ ಕಳುಹಿಸಿದನು.
ಮೋಶೆ ಮತ್ತು ಆರೋನರ ವಂಶಾವಳಿ
14ಇಸ್ರಾಯೇಲ್ ಗೋತ್ರಗಳ ಕುಟುಂಬಗಳ ಮುಖ್ಯಸ್ಥರು: ಇಸ್ರಾಯೇಲನ ಚೊಚ್ಚಲು ಮಗನಾದ ರೂಬೇನನ ಮಕ್ಕಳು: ಹನೋಕ್, ಫಲ್ಲು, ಹೆಚ್ರೋನ್, ಕರ್ಮೀ. ಇವರೇ ರೂಬೇನಿನಿಂದ ಉಂಟಾದ ಗೋತ್ರಗಳ ಮೂಲ ಪುರುಷರು. 15ಸಿಮೆಯೋನನ ಮಕ್ಕಳಾದ; ಯೆಮೂಯೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ ಇವರು ಸಿಮೆಯೋನನಿಂದುಂಟಾದ ಗೋತ್ರಗಳಿಗೆ ಮೂಲ ಪುರುಷರು. 16ವಂಶಾವಳಿಗಳ ಪ್ರಕಾರ ಲೇವಿಯರ ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ, ಇವರೇ. ಲೇವಿಯು ನೂರ ಮೂವತ್ತೇಳು ವರ್ಷ ಬದುಕಿದ್ದನು. 17ಗೋತ್ರಗಳಿಗನುಸಾರವಾಗಿ ಗೇರ್ಷೋನನ ಮಕ್ಕಳು: ಲಿಬ್ನೀ ಮತ್ತು ಶಿಮ್ಮಿ. 18ಕೊಹಾತನ ಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೆಹಾತನು ನೂರ ಮೂವತ್ತಮೂರು ವರ್ಷ ಬದುಕಿದನು. 19ಮೆರಾರೀಯ ಮಕ್ಕಳು: ಮಹ್ಲೀ, ಮೂಷೀ ವಂಶಾವಳಿಗಳ ಪ್ರಕಾರ ಲೇವಿಯಿಂದುಂಟಾದ ಗೋತ್ರಗಳು ಇವೇ ಆಗಿದ್ದವು. 20ಅಮ್ರಾಮನು ತನ್ನ ತಂದೆಯ ತಂಗಿ ಯೋಕೆಬೆದಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಗೆ ಆರೋನನನ್ನೂ, ಮೋಶೆಯನ್ನೂ ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದನು. 21ಇಚ್ಹಾರನ ಮಕ್ಕಳು ಕೋರಹ, ನೆಫೆಗ್ ಮತ್ತು ಚಿಕ್ರಿ. 22ಉಜ್ಜೀಯೇಲನ ಮಕ್ಕಳು: ಮೀಷಾಯೇಲ್, ಎಲ್ಜಾಫಾನ್ ಮತ್ತು ಸಿತ್ರಿ. 23ಆರೋನನು ಅಮ್ಮೀನಾದಾಬನ ಮಗಳೂ ನಹಶೋನನ ತಂಗಿಯೂ ಆಗಿದ್ದ, ಎಲೀಶೇಬಳನ್ನು ಮದುವೆಯಾದನು. ಆಕೆಯಲ್ಲಿ ಅವನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬವರು ಹುಟ್ಟಿದರು. 24ಕೋರಹನ ಮಕ್ಕಳು: ಅಸ್ಸೀರ್, ಎಲ್ಕಾನ್, ಅಬೀಯಾಸಾಫ್ ಇವರೇ ಕೋರಹೀಯರ ಗೋತ್ರಗಳು. 25ಆರೋನನ ಮಗನಾದ ಎಲ್ಲಾಜಾರನು ಪೂಟಿಯೇಲನ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆಯನ್ನು ಮದುವೆ ಮಾಡಿಕೊಂಡನು. ಆಕೆ ಅವನಿಗೆ ಫೀನೆಹಾಸನನ್ನು ಹೆತ್ತಳು. ಅವರವರ ಗೋತ್ರದ ಪ್ರಕಾರ ಇವರೇ ಲೇವಿಯರ ಪೂರ್ವಿಕರು. 26ಇಸ್ರಾಯೇಲರನ್ನು ಅವರ ಗೋತ್ರಗಳಿಗನುಸಾರವಾಗಿ, ಐಗುಪ್ತದೇಶದಿಂದ ಹೊರಗೆ ಬರಮಾಡಬೇಕೆಂದು ಯೆಹೋವನು ಯಾರಿಗೆ ಹೇಳಿದನೋ ಅವರೇ ಆರೋನ್ ಮತ್ತು ಮೋಶೆ. 27ಇಸ್ರಾಯೇಲರನ್ನು ಐಗುಪ್ತದೇಶದಿಂದ ಹೊರಗೆ ಬರಮಾಡುವುದಕ್ಕಾಗಿ ಐಗುಪ್ತ್ಯರ ಅರಸನಾದ ಫರೋಹನ ಸಂಗಡ ಮಾತನಾಡಿದಂತಹ ಮೋಶೆ ಮತ್ತು ಆರೋನರು ಇವರೇ.
ಮೋಶೆ ಆರೋನರು ದೇವರ ಆಜ್ಞೆಗೆ ವಿಧೇಯರಾದದ್ದು
28ಯೆಹೋವನು ಐಗುಪ್ತದೇಶದಲ್ಲಿ, ಮೋಶೆಯ ಸಂಗಡ ಮಾತನಾಡಿದಾಗ 29ಆತನು ಮೋಶೆಗೆ, “ನಾನು ಯೆಹೋವನು ನಾನು ನಿನಗೆ ಹೇಳುವುದನ್ನೆಲ್ಲಾ ನೀನು ಐಗುಪ್ತ್ಯರ ಅರಸನಾದ ಫರೋಹನನಿಗೆ ತಿಳಿಸು” ಎಂದನು. 30ಆದರೆ ಮೋಶೆಯು ಯೆಹೋವನಿಗೆ, “ಇಗೋ, ಸ್ವಾಮಿ ನಾನು ಮಾತನಾಡುವುದರಲ್ಲಿ ಜಾಣನಲ್ಲ, ಫರೋಹನು ನನ್ನ ಮಾತನ್ನು ಹೇಗೆ ಕೇಳಾನು” ಅಂದನು.

Currently Selected:

ವಿಮೋ 6: IRVKan

Highlight

Share

Copy

None

Want to have your highlights saved across all your devices? Sign up or sign in