YouVersion Logo
Search Icon

ವಿಮೋ 1

1
ಐಗುಪ್ತ ದೇಶದಲ್ಲಿ ಇಸ್ರಾಯೇಲರು ಹಿಂಸಿಸಲ್ಪಟ್ಟರು
1ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು: 2ರೂಬೇನ್, ಸಿಮೆಯೋನ್, ಲೇವಿ, ಯೆಹೂದ, 3ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್, 4ದಾನ್, ಗಾದ್, ನಫ್ತಾಲಿ ಮತ್ತು ಆಶೇರ್. 5ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು.
6ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು. 7ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು. 8ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು. 9ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ. 10ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ 11ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು. 12ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು. 13ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು. 14ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು. 15ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು. 16ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು. 17ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು. 18ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು. 19ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು. 20ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು. 21ಸೂಲಗಿತ್ತಿಯರು ದೇವರಿಗೆ ಭಯಪಟ್ಟಿದ್ದರಿಂದ, ಆತನು ಅವರಿಗೆ ವಂಶಾಭಿವೃದ್ಧಿಯನ್ನು ಅನುಗ್ರಹಿಸಿದನು. ಇಸ್ರಾಯೇಲರು ಹೆಚ್ಚಿ ಬಲಗೊಂಡರು.
22ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.

Currently Selected:

ವಿಮೋ 1: IRVKan

Highlight

Share

Copy

None

Want to have your highlights saved across all your devices? Sign up or sign in