2 ಅರಸು 16
16
ಯೆಹೂದದ ಅರಸನಾದ ಆಹಾಜನು
1ರೆಮಲ್ಯನ ಮಗನಾದ ಪೆಕಹನ ಆಳ್ವಿಕೆಯ ಹದಿನೇಳನೆಯ ವರ್ಷದಲ್ಲಿ ಯೆಹೂದ ರಾಜನಾದ ಯೋತಾಮನ ಮಗ ಆಹಾಜನು ಆಳತೊಡಗಿದನು. 2ಆಹಾಜನು ಪಟ್ಟಕ್ಕೆ ಬಂದಾಗ ಇಪ್ಪತ್ತು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಇವನು ತನ್ನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರಲಿಲ್ಲ. ತನ್ನ ಪೂರ್ವಿಕನಾದ ದಾವೀದನ ಮಾರ್ಗವನ್ನು ಬಿಟ್ಟು ಇಸ್ರಾಯೇಲರ ಮಾರ್ಗವನ್ನು ಹಿಡಿದನು. 3ಇದಲ್ಲದೆ, ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದುದಲ್ಲದೆ, ಯೆಹೋವನು ಇಸ್ರಾಯೇಲರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳ ಅಸಹ್ಯವಾದ ಪೂಜಾಕಾರ್ಯಗಳನ್ನು ಅನುಸರಿಸಿ ತನ್ನ ಮಗನನ್ನು ಅಗ್ನಿಗೆ ಬಲಿಕೊಟ್ಟನು. 4ಪೂಜಾಸ್ಥಳಗಳಲ್ಲಿಯೂ, ದಿನ್ನೆಗಳ ಮೇಲೆಯೂ, ಎಲ್ಲಾ ಹಸಿರು ಮರಗಳ ಕೆಳಗಡೆಯೂ ಯಜ್ಞಧೂಪಗಳನ್ನು ಸಮರ್ಪಿಸಿದನು. 5ಇವನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ್, ಇಸ್ರಾಯೇಲರ ಅರಸನೂ, ರೆಮಲ್ಯನ ಮಗನೂ ಆದ ಪೆಕಹ ಎಂಬುವವರು ಒಟ್ಟಿಗೆ ಸೇರಿ ಯೆರೂಸಲೇಮಿಗೆ ವಿರೋಧವಾಗಿ ಬಂದು ಆಹಾಜನನ್ನು ಸುತ್ತಿಕೊಂಡರು. ಆದರೆ ಅವನನ್ನು ಜಯಿಸುವುದು ಅವರಿಂದ ಆಗಲಿಲ್ಲ. 6ಇದೇ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನನು ಏಲತ್ ಪಟ್ಟಣವನ್ನು ಅರಾಮ್ ರಾಜ್ಯಕ್ಕೆ ಸೇರಿಸಿಕೊಂಡು ಅದರಲ್ಲಿದ್ದ ಯೆಹೂದ್ಯರನ್ನೆಲ್ಲಾ ಓಡಿಸಿದನು. ಎದೋಮ್ಯರು ಬಂದು ಅಲ್ಲಿ ವಾಸಿಸತೊಡಗಿದರು.ಅವರು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೆ. 7ಆಹಾಜನು ಅಶ್ಶೂರ್ ದೇಶದ ಅರಸನಾದ ತಿಗ್ಲತ್ಪಿಲೆಸೆರನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ನಿನ್ನ ದಾಸನೂ, ಮಗನೂ ಆಗಿದ್ದೇನೆ. ನೀನು ಬಂದು ನನ್ನನ್ನು, ನನಗೆ ವಿರೋಧವಾಗಿ ಎದ್ದಿರುವ ಅರಾಮ್ಯರ ಮತ್ತು ಇಸ್ರಾಯೇಲರ ಅರಸುಗಳ ಕೈಗೆ ಸಿಕ್ಕದಂತೆ ತಪ್ಪಿಸು” ಎಂದು ಕೇಳಿಕೊಂಡನು. 8ಇದಲ್ಲದೆ, ಆಹಾಜನು ಯೆಹೋವನ ಆಲಯದಲ್ಲಿಯೂ, ಅರಮನೆಯ ಭಂಡಾರದಲ್ಲಿಯೂ ಇದ್ದ, ಬೆಳ್ಳಿಬಂಗಾರವನ್ನು ತೆಗೆದುಕೊಂಡು ಅಶ್ಶೂರದ ಅರಸನಿಗೆ ಕಾಣಿಕೆಯಾಗಿ ಕಳುಹಿಸಿದನು. 9ಅಶ್ಶೂರದ ಅರಸನು ಇವನ ಮಾತಿಗೆ ಒಪ್ಪಿ, ದಮಸ್ಕ ಪಟ್ಟಣಕ್ಕೆ ವಿರೋಧವಾಗಿ ಹೋಗಿ ರೆಚೀನನನ್ನು ಕೊಂದು ನಿವಾಸಿಗಳನ್ನು ಸೆರೆಹಿಡಿದು, ಕೀರ್ ಪ್ರಾಂತ್ಯಕ್ಕೆ ತಂದನು.
10ಅರಸನಾದ ಆಹಾಜನು ಅಶ್ಶೂರದ ಅರಸನಾದ ತಿಗ್ಲತ್ಪಿಲೆಸೆರನ ದರ್ಶನಕ್ಕಾಗಿ ದಮಸ್ಕಕ್ಕೆ ಹೋದನು. ಅವನು ಅಲ್ಲಿದ್ದ ಯಜ್ಞವೇದಿಯನ್ನು ಕಂಡು, ಅದರ ಒಂದು ಪ್ರತಿಮೆಯನ್ನೂ, ಅದರ ಎಲ್ಲಾ ಅಲಂಕಾರದ ನಕ್ಷೆಯನ್ನೂ ಬರೆಯಿಸಿ, ಯಾಜಕನಾದ ಊರೀಯನಿಗೆ ಕಳುಹಿಸಿದನು. 11ಅರಸನಾದ ಆಹಾಜನು ದಮಸ್ಕದಿಂದ ಬರುವಷ್ಟರಲ್ಲಿ ಊರೀಯನು ಅರಸನಿಂದ ತನಗೆ ಬಂದ ಮಾದರಿಯ ಪ್ರಕಾರ ಒಂದು ಯಜ್ಞವೇದಿಯನ್ನು ಮಾಡಿಸಿಟ್ಟಿದ್ದನು. 12ಅರಸನು ದಮಸ್ಕದಿಂದ ಹಿಂತಿರುಗಿ ಬಂದ ಮೇಲೆ ಆ ಯಜ್ಞವೇದಿಯನ್ನು ಕಂಡು, ಸಮೀಪಕ್ಕೆ ಹೋಗಿ, ಅದರ ಮೇಲೆ ಬಲಿಗಳನ್ನು ಅರ್ಪಿಸಿದನು. 13ತಾನು ತಂದ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯನೈವೇದ್ಯ ಇವುಗಳನ್ನು ಸಮರ್ಪಿಸಿ ಸಮಾಧಾನಯಜ್ಞಕ್ಕಾಗಿ ವಧಿಸಿದ ಪಶುಗಳ ರಕ್ತವನ್ನು ಅದರ ಮೇಲೆ ಚಿಮುಕಿಸಿದನು. 14ಇದಲ್ಲದೆ, ಯೆಹೋವನ ಆಲಯಕ್ಕೂ, ತನ್ನ ವೇದಿಗೂ ಮಧ್ಯದಲ್ಲಿದ್ದು ಆ ವರೆಗೂ ಯೆಹೋವನ ಸೇವೆಗೆ ಉಪಯೋಗಿಸಲ್ಪಡುತ್ತಿದ್ದ ತಾಮ್ರ ಯಜ್ಞವೇದಿಯನ್ನೂ ಆಲಯದ ಎದುರಿನಿಂದ ತೆಗೆಯಿಸಿ, ತನ್ನ ಯಜ್ಞವೇದಿಯ ಉತ್ತರ ದಿಕ್ಕಿನಲ್ಲಿಡಿಸಿದನು. 15ಅರಸನಾದ ಆಹಾಜನು ಯಾಜಕನಾದ ಊರೀಯನಿಗೆ, “ಉದಯಕಾಲದಲ್ಲಿ ಸರ್ವಾಂಗಹೋಮವನ್ನೂ, ಸಾಯಂಕಾಲದಲ್ಲಿ ಧಾನ್ಯನೈವೇದ್ಯವನ್ನೂ, ಅರಸನು ತರುವ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ ಇವುಗಳನ್ನೂ, ಜನರು ತರುವ ಸರ್ವಾಂಗಹೋಮದ್ರವ್ಯ, ಧಾನ್ಯನೈವೇದ್ಯ, ಪಾನದ್ರವ್ಯ ಇವುಗಳನ್ನೂ ಈ ಮಹಾವೇದಿಯ ಮೇಲೆ ಸಮರ್ಪಿಸಬೇಕು ಮತ್ತು ಸರ್ವಾಂಗಹೋಮಯಜ್ಞಗಳಿಗಾಗಿ ವಧಿಸುವ ಪಶುಗಳ ರಕ್ತವನ್ನು ಇದರ ಮೇಲೆಯೇ ಚಿಮುಕಿಸಬೇಕು. ತಾಮ್ರ ಯಜ್ಞವೇದಿಯನ್ನು ಕುರಿತಾಗಿ ನಾನೇ ಆಲೋಚಿಸಿ ನೋಡಿಕೊಳ್ಳುವೆನು” ಎಂದು ಹೇಳಿದನು.
16ಯಾಜಕನಾದ ಊರೀಯನು ಅರಸನಾದ ಆಹಾಜನು ಹೇಳಿದಂತೆಯೇ ಮಾಡಿದನು. 17ಅರಸನಾದ ಆಹಾಜನು ಅಶ್ಶೂರದ ಅರಸನ ನಿಮಿತ್ತವಾಗಿ ಯಜ್ಞವೇದಿಗಳ ಪಟ್ಟಿಗಳನ್ನು ಕತ್ತರಿಸಿದನು, ಅವುಗಳ ಮೇಲಿದ್ದ ಗಂಗಾಳಗಳನ್ನು ತೆಗೆದಿಟ್ಟನು. ಕಡಲೆನಿಸುವ ಪಾತ್ರೆಯನ್ನು ತಾಮ್ರದ ಹೋರಿಗಳ ಮೇಲಣಿಂದ ಇಳಿಸಿ ಕಲ್ಲುಕಟ್ಟೆಗಳ ಮೇಲೆ ಇಡಿಸಿದನು. 18ಯೆಹೋವನ ಆಲಯದ ಪ್ರಾಕಾರದೊಳಗೆ ಸಬ್ಬತ್ ದಿನದ ಆರಾಧನೆಗಾಗಿ ರಾಜರಿಗಾಗಿ ಕಟ್ಟಲ್ಪಟ್ಟಿದ್ದ ಮಂಟಪವನ್ನು ಹಾಗೂ ಅರಮನೆಯಿಂದ ದೇವಸ್ಥಾನಕ್ಕೆ ಹೋಗುವ ಹೊರಗಿನ ಬಾಗಿಲನ್ನೂ ಬದಲಾಯಿಸಿದವನು ಅಶ್ಶೂರದ ಅರಸನಾದ ಈ ಆಹಾಜನೇ. 19ಆಹಾಜನ ಉಳಿದ ಚರಿತ್ರೆಯೂ, ಅವನ ಕೃತ್ಯಗಳೂ ಯೆಹೂದ್ಯರ ರಾಜಕಾಲ ಇತಿಹಾಸ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಿದೆ. 20ಆಹಾಜನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನ ಪಟ್ಟಣದೊಳಗೆ ಅವನ ಕುಟುಂಬ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ನಂತರ ಅವನ ಮಗನಾದ ಹಿಜ್ಕೀಯನು ಅರಸನಾದನು.
Currently Selected:
2 ಅರಸು 16: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.