2 ಅರಸು 11
11
ಅತಲ್ಯ
1ಅಹಜ್ಯನು ಮರಣಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಪಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು. 2ಆದರೆ ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ತಂಗಿಯೂ ಆದ ಯೆಹೋಷೆಬಳೆಂಬಾಕೆಯು ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗನಾದ ಯೆಹೋವಾಷನನ್ನು ಅತಲ್ಯಳಿಂದ ಹತರಾಗಿದ್ದ ರಾಜಪುತ್ರರ ಮಧ್ಯದಿಂದ ಅವನ ದಾದಿಯರೊಡನೆ ಅವನನ್ನು ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು 3ಹೀಗೆ ಅವನು ಅತಲ್ಯಳಿಂದ ಹತವಾಗದಂತೆ ತಪ್ಪಿಸಿ ಕೊಂಡು ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಯೆಹೋವನ ಆಲಯದಲ್ಲಿದ್ದನು. ಆ ಆರು ವರ್ಷಗಳಲ್ಲಿ ಅತಲ್ಯಳೇ ದೇಶವನ್ನು ಆಳುತ್ತಿದ್ದಳು.
4ಏಳನೆಯ ವರ್ಷದಲ್ಲಿ, ಯೆಹೋಯಾದಾವನು ಕಾರಿಯರ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಯೆಹೋವನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಆಪ್ತನಾಗಿದ್ದು ಪ್ರಮಾಣಪೂರ್ವಕವಾದ ಒಡಂಬಡಿಕೆಯನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು. 5ಯೆಹೋಯಾದಾವನು ಅವರಿಗೆ, “ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ರಾಜರ ಅರಮನೆಯನ್ನು ಕಾಯಬೇಕು, 6ಮೂರರಲ್ಲೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು. 7ಇದಲ್ಲದೆ, ಸಬ್ಬತ್ ದಿನದಲ್ಲಿ ಅರಸನೊಂದಿಗೆ ಯೆಹೋವನ ಆಲಯವನ್ನು ಕಾಯುವುದಕ್ಕಾಗಿ ಬರುವ ಸೈನ್ಯವು ಇಬ್ಬಗೆಯಾಗಿದ್ದುಕೊಂಡು ಯೆಹೋವನ ಆಲಯವನ್ನು ಕಾಯಬೇಕು. 8ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅವನ ಸುತ್ತಲೂ ನಿಂತು, ಅವನ ಗುಂಪಿನಲ್ಲಿ ನುಗ್ಗುವಂತವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗಲೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು. ಇದೇ ನನ್ನ ಅಪ್ಪಣೆ” ಎಂದು ಹೇಳಿದನು. 9ಯಾಜಕನಾದ ಯೆಹೋಯಾದಾಮನು ಆಜ್ಞಾಪಿಸಿದಂತೆ, ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ರಾಜಪುತ್ರನ ಬಳಿಗೆ ಬಂದರು. 10ಯಾಜಕನಾದ ಯೆಹೋಯಾದಾವನು ಆ ಶತಾಧಿಪತಿಗಳಿಗೆ ಯೆಹೋವನ ಆಲಯದಲ್ಲಿ ಇಡಲ್ಪಟ್ಟಿದ್ದ ರಾಜನಾದ ದಾವೀದನ ಬರ್ಜಿಯನ್ನೂ, ಗುರಾಣಿಗಳನ್ನೂ ಕೊಟ್ಟನು.
11ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕೋಸ್ಕರ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಂತರು. 12ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನು ಇಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆ ತಟ್ಟುತ್ತಾ, “ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದರು.
13ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ ಅವರು ಸೇರಿ ಬಂದಿದ್ದ ಯೆಹೋವನ ಆಲಯಕ್ಕೆ ಬಂದಳು. 14ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಅಧಿಪತಿಗಳೂ, ತುತ್ತೂರಿಯನ್ನು ಊದುವವರೂ ಅರಸನ ಹತ್ತಿರ ನಿಂತಿದ್ದರು. ದೇಶದ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು.
15ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ, ಶತಾಧಿಪತಿಗಳಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ ಸಿಪಾಯಿಗಳ ಮಧ್ಯದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರಿ ಮತ್ತು ಆಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು. 16ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ರಾಜನ ಅರಮನೆಗೆ ಕರೆದೊಯ್ದು ಅಲ್ಲಿ ಹತ್ಯೆ ಮಾಡಿದರು.
ಯೆಹೋಯಾದಾವನಿಂದ ಧಾರ್ಮಿಕ ಸುಧಾರಣೆ
17ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ, ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಅಲ್ಲಿ ಪ್ರಮಾಣ ಮಾಡಿದರು. ಇದಲ್ಲದೆ ರಾಜಪ್ರಜೆಗಳೂ ಒಡಂಬಡಿಕೆಮಾಡಿಕೊಂಡರು. 18ಯೆಹೂದ್ಯರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಎದುರಿನಲ್ಲಿಯೇ ಕೊಂದು, ದೇವಸ್ಥಾನವನ್ನೂ ಅದರಲ್ಲಿದ್ದ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ಯೆಹೋವನ ದೇವಾಲಯಕ್ಕೆ ಕಾವಲಿಟ್ಟನು.
19ಅಲ್ಲದೆ ಯೆಹೋಯಾದಾವನು ಶತಾಧಿಪತಿಗಳನ್ನು, ಕಾರಿಯರು ಎನ್ನಿಸಿಕೊಳ್ಳುವ ಸೈನ್ಯಗಳ ಕಾವಲುದಂಡನ್ನು, ಸಾಧಾರಣ ಜನರನ್ನು ಅವರೊಡನೆ ಅರಸನಾದ ಯೆಹೋವಾಷನನ್ನು ಯೆಹೋವನ ಆಲಯದಲ್ಲಿ ಕಾವಲುದಂಡಿನವರ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. 20ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿ ನೆಲೆಸಿತು. ಅತಲ್ಯಳನ್ನು ರಾಜನ ಅರಮನೆಯ ಸಮೀಪದಲ್ಲಿ ಕತ್ತಿಯಿಂದ ಸಂಹರಿಸಿದರು. 21ಯೆಹೋವಾಷನು ಅರಸನಾದಾಗ ಅವನು ಏಳು ವರ್ಷದವನಾಗಿದ್ದನು.
Currently Selected:
2 ಅರಸು 11: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.