2 ಪೂರ್ವ 34
34
ಯೆಹೂದದ ಅರಸನಾದ ಯೋಷೀಯನು
1ಯೋಷೀಯನು ಅರಸನಾದಾಗ ಅವನು ಎಂಟು ವರ್ಷದವನಾಗಿದ್ದನು. ಅವನು ಯೆರೂಸಲೇಮಿನಲ್ಲಿ ಮೂವತ್ತೊಂದು ವರ್ಷಗಳ ಕಾಲ ಆಳಿದನು. 2ಅವನು ಯೆಹೋವನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಳ್ಳದೆ ತನ್ನ ಪೂರ್ವಿಕನಾದ ದಾವೀದನ ಮಾರ್ಗದಲ್ಲೇ ಯೆಹೋವನ ಚಿತ್ತಾನುಸಾರವಾಗಿ ನಡೆದನು.
3ಅವನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಇನ್ನೂ ಯೌವನಸ್ಥನಾಗಿರುವಾಗಲೇ ತನ್ನ ಪೂರ್ವಿಕನಾದ ದಾವೀದನ ದೇವರನ್ನು ಹುಡುಕುವವನಾದನು. ಹನ್ನೆರಡನೆಯ ವರ್ಷ ಯೆಹೂದದಲ್ಲಿಯೂ ಯೆರೂಸಲೇಮಿನಲ್ಲಿ ಇದ್ದ ಪೂಜಾಸ್ಥಳಗಳನ್ನೂ, ಅಶೇರ ಸ್ತಂಭಗಳನ್ನೂ, ಕೆತ್ತಿದ ಮತ್ತು ಎರಕದ ವಿಗ್ರಹಗಳನ್ನೂ ತೆಗೆದುಹಾಕಿ ದೇಶವನ್ನು ಶುದ್ಧಿಗೊಳಿಸಿದನು. 4ಇದಲ್ಲದೆ ಅವನು ಬಾಳ್ ದೇವತೆಗಳ ಯಜ್ಞವೇದಿಗಳನ್ನು ತನ್ನೆದುರಿನಲ್ಲಿಯೇ ಕೆಡವಿಸಿ ಅವುಗಳ ಮೇಲಿದ್ದ ಸೂರ್ಯಸ್ತಂಭಗಳನ್ನು ಕಡಿಸಿ, ಕೆತ್ತಿಸಿದ ಅಶೇರ ಸ್ತಂಭ ಮತ್ತು ಎರಕದ ವಿಗ್ರಹಗಳನ್ನು ಒಡೆದುಹಾಕಿಸಿ ಪುಡಿಪುಡಿ ಮಾಡಿಸಿ ಅವುಗಳಿಗೆ ಯಜ್ಞವನ್ನರ್ಪಿಸಿದವರ ಸಮಾಧಿಗಳ ಮೇಲೆ ಆ ಧೂಳನ್ನು ಚೆಲ್ಲಿಸಿದನು. 5ಪೂಜಾರಿಗಳ ಎಲುಬುಗಳನ್ನು ಆ ಯಜ್ಞವೇದಿಗಳ ಮೇಲೆ ಸುಡಿಸಿ ಯೆಹೂದ ಮತ್ತು ಯೆರೂಸಲೇಮನ್ನು ಶುದ್ಧಪಡಿಸಿದನು. 6ಮನಸ್ಸೆ, ಎಫ್ರಾಯೀಮ್, ಸಿಮೆಯೋನ್, ನಫ್ತಾಲಿ ಪ್ರಾಂತ್ಯಗಳ ಸುತ್ತಣ ಊರುಗಳಲಿಯೂ ಬಯಲುಗಳಲ್ಲಿದ್ದ, 7ಯಜ್ಞವೇದಿಗಳನ್ನು ಕೆಡವಿಸಿ ಅಶೇರ ಸ್ತಂಭಗಳನ್ನೂ, ವಿಗ್ರಹಗಳನ್ನೂ ಒಡೆದು ಪುಡಿಪುಡಿ ಮಾಡಿಸಿ ಇಸ್ರಾಯೇಲ್ ದೇಶದಲ್ಲಿದ್ದ ಸೂರ್ಯಸ್ತಂಭಗಳನ್ನು ಕೆಡವಿಹಾಕಿಸಿ ಯೆರೂಸಲೇಮಿಗೆ ಹಿಂದಿರುಗಿದನು.
8ಅವನು ತನ್ನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ದೇಶವನ್ನೂ, ದೇವಾಲಯವನ್ನೂ ಶುದ್ಧಿಪಡಿಸಿದ ಮೇಲೆ ತನ್ನ ದೇವರಾದ ಯೆಹೋವನ ಆಲಯವನ್ನು ಜೀರ್ಣೋದ್ಧಾರ ಮಾಡಿಸುವುದಕ್ಕಾಗಿ ಅಚಲ್ಯನ ಮಗನಾದ ಶಾಫಾನನನ್ನೂ ಪಟ್ಟಣದ ಅಧಿಕಾರಿಯಾದ ಮಾಸೇಯನನ್ನೂ ಪ್ರಧಾನಮಂತ್ರಿಯಾಗಿದ್ದ ಯೋವಾಹಾಜನ ಮಗನಾದ ಯೋವಾಹನನ್ನೂ ಕಳುಹಿಸಿದನು. 9ಇವರು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗಿ ದೇವಾಲಯಕ್ಕಾಗಿ ಸಂಗ್ರಹವಾದ ಹಣವನ್ನು ಅಂದರೆ ದ್ವಾರಪಾಲಕರಾದ ಲೇವಿಯರು ಮನಸ್ಸೆ, ಎಫ್ರಾಯೀಮ್ ಮುಂತಾದ ಇಸ್ರಾಯೇಲ್ ಕುಲಗಳಲ್ಲಿ ಉಳಿದವರಿಂದಲೂ, ಎಲ್ಲಾ ಯೆಹೂದ ಬೆನ್ಯಾಮೀನ್ಯರಿಂದಲೂ, ಯೆರೂಸಲೇಮಿನವರಿಂದಲೂ ಕೂಡಿಸಿದ್ದ ಹಣವನ್ನು 10ಯೆಹೋವನ ದೇವಾಲಯದ ಕೆಲಸಮಾಡಿಸುವವರಿಗೆ ಕೊಡುವುದಕ್ಕಾಗಿ ಅವನಿಗೆ ಒಪ್ಪಿಸಿದರು. ದೇವಾಲಯದ ಕೆಲಸಮಾಡಿಸುತ್ತಿದ್ದವರು ಆ ಹಣವನ್ನು 11ಕೆತ್ತಿದ ಕಲ್ಲು, ಜೋಡಿಸತಕ್ಕ ತೊಲೆ ಇವುಗಳನ್ನು ಕೊಂಡುಕೊಳ್ಳುವುದಕ್ಕಾಗಿಯೂ, ಯೆಹೂದ ರಾಜರ ಅಲಕ್ಷ್ಯದಿಂದ ಹಾಳಾಗಿದ್ದ ಕಟ್ಟಡಗಳಿಗೆ ಮಾಳಿಗೆ ಹಾಕುವುದಕ್ಕಾಗಿಯೂ, ದೇವಾಲಯವನ್ನೂ ಜೀರ್ಣೋದ್ಧಾರಮಾಡಿ ಭದ್ರಪಡಿಸುವುದಕ್ಕೆ ಬಡಗಿಗಳಿಗೂ ಶಿಲ್ಪಿಗಳಿಗೂ ಕೊಟ್ಟರು. 12ಕೆಲಸಮಾಡುವವರು ನಂಬಿಗಸ್ತರಾಗಿದ್ದರು; ಮೆರಾರಿಯರಲ್ಲಿ ಯಹತ್, ಓಬದ್ಯ ಎಂಬ ಲೇವಿಯರೂ ಕೆಹಾತ್ಯರಲ್ಲಿ ಜೆಕರ್ಯ, ಮೆಷುಲ್ಲಾಮ್ ಎಂಬ ಲೇವಿಯರೂ ಅವರ ಮೇಲ್ವಿಚಾರಕರಾಗಿದ್ದರು. 13ಗಾಯನ ನಿಪುಣರಾದ ಲೇವಿಯರೆಲ್ಲರೂ ಹೊರೆಹೊರುವವರ ಮೇಲ್ವಿಚಾರಕರಾಗಿದ್ದು ಎಲ್ಲಾ ವಿಧವಾದ ಕೆಲಸಮಾಡುವವರನ್ನು ನಡೆಸುತ್ತಿದ್ದರು; ಲೇವಿಯರಲ್ಲಿ ಕೆಲವರು ಲೇಖಕರೂ, ಕೆಲವರು ಅಧಿಕಾರಿಗಳೂ, ದ್ವಾರಪಾಲಕರೂ ಲೇವಿಯರೇ ಆಗಿದ್ದರು.
ಧರ್ಮೋಪದೇಶ ಗ್ರಂಥವು ದೊರೆತದ್ದು
14ಯೆಹೋವನ ಆಲಯದಲ್ಲಿ ಸಂಗ್ರಹವಾಗಿದ್ದ ಹಣವನ್ನು ಹೊರಗೆ ತೆಗೆಯುವಾಗ ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಧರ್ಮೋಪದೇಶ ಗ್ರಂಥವು ಯಾಜಕನಾದ ಹಿಲ್ಕೀಯನಿಗೆ ಸಿಕ್ಕಿತು. 15ಹಿಲ್ಕೀಯನು ಲೇಖಕನಾದ ಶಾಫಾನನಿಗೆ, “ಯೆಹೋವನ ಆಲಯದಲ್ಲಿ ನನಗೆ ಧರ್ಮೋಪದೇಶ ಗ್ರಂಥವು ಸಿಕ್ಕಿರುತ್ತದೆ” ಎಂದು ಹೇಳಿ ಅದನ್ನು ಅವನ ಕೈಯಲ್ಲಿ ಕೊಟ್ಟನು. 16ಶಾಫಾನನು ಆ ಗ್ರಂಥವನ್ನು ಅರಸನ ಬಳಿಗೆ ತೆಗೆದುಕೊಂಡು ಹೋಗಿ, “ನೀನು ಆಜ್ಞಾಪಿಸಿದ್ದೆಲ್ಲವನ್ನೂ ನಿನ್ನ ಸೇವಕರು ಮಾಡುತ್ತಿದ್ದಾರೆ. 17ಯೆಹೋವನ ದೇವಾಲಯದಲ್ಲಿ ಸಂಗ್ರಹವಾದ ಹಣವನ್ನು ತೆಗೆದು ಕೆಲಸ ಮಾಡಿಸುವವರಿಗೂ, ಮಾಡುವವರಿಗೂ ಒಪ್ಪಿಸಿದರು” ಎಂದು ತಿಳಿಸಿದನು. 18ಇದಲ್ಲದೆ, ಲೇಖಕನಾದ ಶಾಫಾನನು ಅರಸನಿಗೆ, “ಯಾಜಕನಾದ ಹಿಲ್ಕೀಯನು ನನಗೊಂದು ಗ್ರಂಥವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅವನ ಮುಂದೆ ಅದನ್ನು ಓದಿದನು.
19ಅರಸನು ಧರ್ಮಶಾಸ್ತ್ರದ ವಾಕ್ಯಗಳನ್ನು ಕೇಳಿದಾಗ ಬಟ್ಟೆಗಳನ್ನು ಹರಿದುಕೊಂಡನು. 20ಅರಸನು ಹಿಲ್ಕೀಯ, ಶಾಫಾನನ ಮಗನಾದ ಅಹೀಕಾಮ್, ಮೀಕನ ಮಗನಾದ ಅಬ್ದೋನ್, ಲೇಖಕನಾದ ಶಾಫಾನ್, ಅರಸನ ಸಹಕಾರಿಯಾದ ಅಸಾಯ ಎಂಬುವವರಿಗೆ ಅಜ್ಞಾಪಿಸಿದೇನೆಂದರೆ, 21“ನಮ್ಮ ಪೂರ್ವಿಕರು ಈ ಗ್ರಂಥದಲ್ಲಿ ಬರೆದಿರುವ ಯೆಹೋವನ ಆಜ್ಞೆಗಳನ್ನೆಲ್ಲಾ ಕೈಕೊಳ್ಳದೆ ಹೋದುದರಿಂದಲೇ ಯೆಹೋವನು ತನ್ನ ಮಹಾರೌದ್ರವನ್ನು ನಮ್ಮ ಮೇಲೆ ಸುರಿದಿದ್ದಾನೆ; ಆದುದರಿಂದ ನೀವು ನನಗೋಸ್ಕರವೂ ಹಾಗೂ ಇಸ್ರಾಯೇಲ್ಯರಲ್ಲಿ, ಯೆಹೂದ್ಯರಲ್ಲಿ ಉಳಿದಿರುವವರಿಗೋಸ್ಕರವೂ ಯೆಹೋವನ ಬಳಿಗೆ ಹೋಗಿ ನಮಗೆ ಸಿಕ್ಕಿರುವ ಈ ಗ್ರಂಥದ ವಾಕ್ಯಗಳ ಅರ್ಥವನ್ನು ವಿವರವಾಗಿ ತಿಳಿದು ಬರಲು” ಆಜ್ಞಾಪಿಸಿದನು. 22ಆಗ ಹಿಲ್ಕೀಯನೂ ಅರಸನ ಜನರೂ ಹುಲ್ದ ಎಂಬ ಪ್ರವಾದಿನಿಯ ಬಳಿಗೆ ಹೋಗಿ, ಆಕೆಯ ಹತ್ತಿರ ವಿಚಾರಿಸಿದರು. ಹಸ್ರನ ಮೊಮ್ಮಗನೂ ತೊಕ್ಹತನ ಮಗನೂ ರಾಜವಸ್ತ್ರಾಗಾರದ ಅಧಿಪತಿಯೂ ಆಗಿದ್ದ ಶಲ್ಲೂಮನು ಆಕೆಯ ಗಂಡನು. ಆಕೆಯು ಯೆರೂಸಲೇಮಿನ ಎರಡನೆಯ ಕೇರಿಯಲ್ಲಿ ವಾಸವಾಗಿದ್ದಳು. 23ಹುಲ್ದಳು ಅವರಿಗೆ, ನಿಮ್ಮನ್ನು ಕಳುಹಿಸಿದವನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಮಾತುಗಳನ್ನು ತಿಳಿಸಿರಿ, 24ಯೆಹೋವನು ಹೇಳಿದ್ದೇನೆಂದರೆ, “ಈ ದೇಶದ ಮೇಲೆಯೂ, ಜನರ ಮೇಲೆಯೂ ಯೆಹೂದದ ಅರಸನ ಮುಂದೆ ಪಾರಾಯಣವಾದ ಆ ಗ್ರಂಥದಲ್ಲಿ ಬರೆದಿರುವ ಎಲ್ಲಾ ಶಾಪಗಳನ್ನು ಬರಮಾಡುವೆನು; 25ಅವರು ನನ್ನನ್ನು ಬಿಟ್ಟು ಅನ್ಯ ದೇವತೆಗಳಿಗೆ ಧೂಪಹಾಕಿ ತಮ್ಮ ದುಷ್ಕೃತ್ಯಗಳಿಂದ ನನ್ನನ್ನು ರೇಗಿಸಿದ್ದರಿಂದ ಈ ದೇಶದ ಮೇಲೆ ಉರಿಯುತ್ತಿರುವ ನನ್ನ ಕೋಪಾಗ್ನಿಯು ಆರಿಹೋಗುವುದಿಲ್ಲ” ಎನ್ನುತ್ತಾನೆ. 26ತಾನು ಕೇಳಿದ ವಾಕ್ಯಗಳ ವಿಷಯವಾಗಿ, ಇಸ್ರಾಯೇಲ್ ದೇವರಾದ ಯೆಹೋವನ ಬಳಿಯಲ್ಲಿ ವಿಚಾರಿಸುವುದಕ್ಕೆ ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ತಿಳಿಸಬೇಕಾದ ಮಾತೇನೆಂದರೆ, 27“ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ; ಈ ದೇಶದ ಮತ್ತು ಅದರ ನಿವಾಸಿಗಳ ವಿಷಯ ನಾನು ಹೇಳಿದ ಮಾತುಗಳನ್ನು ಕೇಳಿದಾಗ ನೀನು ದುಃಖಪಟ್ಟು ದೇವರಾದ ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದಲೂ, ದೀನಮನಸ್ಸಿನಿಂದ ಬಟ್ಟೆಗಳನ್ನು ಹರಿದುಕೊಂಡು ಕಣ್ಣೀರು ಸುರಿಸಿದ್ದರಿಂದಲೂ ನಿನ್ನನ್ನು ಲಕ್ಷಿಸಿದೆನು. 28ನಾನು ಈ ದೇಶದ ಮೇಲೆಯೂ, ಅದರ ನಿವಾಸಿಗಳ ಮೇಲೆಯೂ ಬರಮಾಡುವ ಶಿಕ್ಷೆಗಳಲ್ಲಿ ನೀನು ಒಂದನ್ನೂ ನೋಡದೆ ಸಮಾಧಾನದಿಂದ ಮರಣಹೊಂದಿ ಸಮಾಧಿ ಸೇರುವಂತೆ ಅನುಗ್ರಹಿಸುವೆನು ಎಂಬುದಾಗಿ ತಿಳಿಸಿದೆ ಎಂದು ಅರಸನಿಗೆ ತಿಳಿಸಿರಿ” ಎಂದು ಹೇಳಿದಳು. 29ಅನಂತರ ಅರಸನು ದೂತರ ಮುಖಾಂತರ ಯೆರೂಸಲೇಮಿನ ಮತ್ತು ಯೆಹೂದದ ಎಲ್ಲಾ ಹಿರಿಯರನ್ನು ಒಟ್ಟಾಗಿ ಸೇರಿಸಿದನು. 30ಅರಸನು ಯೆರೂಸಲೇಮಿನವರನ್ನೂ, ಬೇರೆ ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಲೇವಿಯರನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ದೊಡ್ಡವರು ಮೊದಲುಗೊಂಡು ಚಿಕ್ಕವರವರೆಗೂ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು. 31ಅರಸನು ತನ್ನ ಸ್ಥಳದಲ್ಲಿ ನಿಂತು, ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ ಆತನ ಆಜ್ಞಾನಿಯಮ ವಿಧಿಗಳನ್ನು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಕೈಕೊಳ್ಳುವುದಾಗಿಯೂ ಮತ್ತು ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಪ್ರಮಾಣಮಾಡಿದನು. 32ಆಮೇಲೆ ಎಲ್ಲಾ ಯೆರೂಸಲೇಮಿನವರಿಂದಲೂ, ಬೆನ್ಯಾಮೀನ್ಯರಿಂದಲೂ ಪ್ರಮಾಣಮಾಡಿಸಿದನು. ಯೆರೂಸಲೇಮಿನವರು ಏಕದೇವರಾದ ತಮ್ಮ ಪೂರ್ವಿಕರ ದೇವರ ನಿಬಂಧನೆಯನ್ನು ಕೈಕೊಳ್ಳುವವರಾದರು. 33ಯೋಷೀಯನು ಇಸ್ರಾಯೇಲರಿಗೆ ಸೇರಿದ ಎಲ್ಲಾ ಪ್ರಾಂತ್ಯಗಳೊಳಗಿನ ಅಸಹ್ಯ ಮೂರ್ತಿಗಳನ್ನೆಲ್ಲಾ ತೆಗೆದುಹಾಕಿಸಿ, ಇಸ್ರಾಯೇಲರಲ್ಲಿ ಉಳಿದಿರುವವರು ತಮ್ಮ ದೇವರಾದ ಯೆಹೋವನನ್ನೇ ಆರಾಧಿಸುವಂತೆ ಮಾಡಿದನು. ಅವನ ಜೀವಮಾನದಲ್ಲೆಲ್ಲಾ ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ಬಿಡದೆ ಹಿಂಬಾಲಿಸಿದರು.
Currently Selected:
2 ಪೂರ್ವ 34: IRVKan
Highlight
Share
Copy
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.