YouVersion Logo
Search Icon

2 ಪೂರ್ವ 32

32
ಅರಸನಾದ ಸನ್ಹೇರೀಬನು ಯೆರೂಸಲೇಮಿಗೆ ಬೆದರಿಕೆ ಹಾಕಿದ್ದು
1ಈ ಭಕ್ತಿ ಕಾರ್ಯಗಳಾದ ನಂತರ ಅಶ್ಶೂರದ ಅರಸನಾದ ಸನ್ಹೇರೀಬನು ಯುದ್ಧಕ್ಕೆ ಹೊರಟು ಯೆಹೂದದಲ್ಲಿ ನುಗ್ಗಿ ಕೋಟೆಕೊತ್ತಲುಗಳುಳ್ಳ ಪಟ್ಟಣಗಳನ್ನು ಸ್ವಾಧೀನಮಾಡಿ ಕೊಳ್ಳಬೇಕೆಂದು ಅವುಗಳಿಗೆ ಮುತ್ತಿಗೆ ಹಾಕಿದನು. 2ದೇಶದೊಳಗೆ ನುಗ್ಗಿದ ಸನ್ಹೇರೀಬನು ಯೆರೂಸಲೇಮಿನ ಮೇಲೆಯೂ ಯುದ್ಧಕ್ಕಾಗಿ ಬರಬೇಕೆಂದಿರುವುದು ಹಿಜ್ಕೀಯನಿಗೆ ತಿಳಿದುಬಂದಿತು. 3ಅವನು ಪಟ್ಟಣದ ಹೊರಗಿರುವ ಎಲ್ಲಾ ಒರತೆಗಳನ್ನು ಮುಚ್ಚಿಸಬೇಕೆಂದು ಮನಸ್ಸು ಮಾಡಿ ತನ್ನ ಸರದಾರರ ಮತ್ತು ಶೂರರ ಮುಂದೆ ಆ ಪ್ರಸ್ತಾಪವನ್ನೆತ್ತಿ ಅವರ ಸಹಾಯವನ್ನು ಪಡೆದುಕೊಂಡನು. 4ಆಗ ಅನೇಕರು ಸೇರಿ, “ಇಲ್ಲಿಗೆ ಬರುವ ಅಶ್ಶೂರದ ರಾಜರು ಬೇಕಾದಷ್ಟು ನೀರನ್ನು ನೋಡುವುದೇತಕ್ಕೆ?” ಎಂದುಕೊಂಡು ಎಲ್ಲಾ ಒರತೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹೊಳೆಯನ್ನು ಮುಚ್ಚಿಬಿಟ್ಟರು. 5ಇದರಿಂದ ಅರಸನು ಧ್ಯೆರ್ಯಗೊಂಡು, ಅಲ್ಲಲ್ಲಿ ಬಿದ್ದುಹೋಗಿದ್ದ ಪೌಳಿಗೋಡೆಯನ್ನು ಜೀರ್ಣೋದ್ಧಾರ ಮಾಡಿಸಿ, ಅದರ ಮೇಲೆ ಗೋಪುರಗಳನ್ನೂ, ಹೊರಗೆ ಇನ್ನೊಂದು ಗೋಡೆಯನ್ನೂ ಕಟ್ಟಿಸಿದನು. ದಾವೀದನಗರದ ಮಿಲ್ಲೋ ಕೋಟೆಯನ್ನು ಭದ್ರಪಡಿಸಿದಲ್ಲದೆ. ಅನೇಕ ಆಯುಧಗಳನ್ನೂ, ಗುರಾಣಿಗಳನ್ನೂ ಮಾಡಿಸಿದನು. 6ಅನಂತರ ಅವನು ಜನರನ್ನು ಮುನ್ನಡೆಸಲು ಸೇನಾಪತಿಗಳನ್ನು ನೇಮಿಸಿ ಅವರನ್ನು ಊರುಬಾಗಲಿನ ಬಯಲಿನಲ್ಲಿ ಒಟ್ಟಾಗಿ ಸೇರಿಸಿಕೊಂಡು ಅವರಿಗೆ, 7“ಶೂರರಾಗಿರಿ, ಧೈರ್ಯದಿಂದಿರಿ; ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದ್ದು. ಅವನೊಂದಿಗಿರುವದಕ್ಕಿಂತ ದೊಡ್ಡವನಾಗಿರುವವನು ನಮ್ಮೊಂದಿಗಿದ್ದಾನೆ. 8ಅವನಿಗಿರುವ ಸಹಾಯವು ನಶ್ವರವಾದ ತೋಳುಬಲ; ನಮಗಾದರೋ ನಮ್ಮ ಸಹಾಯಕನು ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ, ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು” ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.
9ಇದಾದ ಮೇಲೆ, ಸರ್ವಸೇನೆಯೊಡನೆ ಲಾಕೀಷಿನ ಎದುರಿನಲ್ಲಿ ಪಾಳೆಯಮಾಡಿಕೊಂಡಿದ್ದ ಅಶ್ಶೂರದ ಅರಸನಾದ ಸನ್ಹೇರೀಬನು ತನ್ನ ಸೇವಕರನ್ನು ಯೆರೂಸಲೇಮಿಗೆ ಕಳುಹಿಸಿದನು. ಅವರ ಮುಖಾಂತರ ಯೆಹೂದದ ಅರಸನಾದ ಹಿಜ್ಕೀಯನಿಗೂ ಯೆರೂಸಲೇಮಿನಲ್ಲಿದ್ದ ಎಲ್ಲಾ ಯೆಹೂದ್ಯರಿಗೂ ಹೀಗೆ ಹೇಳಿ ಕಳುಹಿಸಿದನು, 10“ಅಶ್ಶೂರದ ಅರಸನಾದ ಸನ್ಹೇರೀಬನು ಈ ರೀತಿಯಾಗಿ ಹೇಳುತ್ತಿದ್ದಾನೆ: ನೀವು ಯಾವುದರ ಮೇಲೆ ಭರವಸೆಯಿಟ್ಟು ಮುತ್ತಿಗೆಗೆ ಗುರಿಯಾಗಲಿರುವ ಯೆರೂಸಲೇಮಿನಲ್ಲಿ ನಿಂತಿದ್ದೀರಿ? 11ಹಿಜ್ಕೀಯನು, ‘ನಮ್ಮ ದೇವರಾದ ಯೆಹೋವನು ಅಶ್ಶೂರದ ಅರಸನ ಕೈಯಿಂದ ನಮ್ಮನ್ನು ರಕ್ಷಿಸುವನು’ ಎಂಬ ನಂಬಿಕೆ ನಿಮ್ಮಲ್ಲಿ ಹುಟ್ಟಿಸುವುದಕ್ಕೆ ಪ್ರಯತ್ನಿಸುತ್ತಿರುವುದು ನಿಮ್ಮನ್ನು ಹಸಿವೆ ನೀರಡಿಕೆಗಳಿಂದ ಸಾಯಿಸುವುದಕ್ಕಾಗಿಯೇ ಅಲ್ಲದೆ ಮತ್ತ್ಯಾವುದಕ್ಕೂ ಅಲ್ಲ. 12ಹಿಜ್ಕೀಯನು ಒಂದೇ ಯಜ್ಞವೇದಿಯ ಮುಂದೆ ಆರಾಧನೆ ಮಾಡಿ ಅದರ ಮೇಲೆಯೇ ಧೂಪಹಾಕಬೇಕೆಂಬುದಾಗಿ ಯೆಹೂದ್ಯರಿಗೂ, ಯೆರೂಸಲೇಮಿನವರಿಗೂ ಆಜ್ಞಾಪಿಸಿ, ದೇವರ ಬೇರೆ ಎಲ್ಲಾ ಪೂಜಾಸ್ಥಳಗಳನ್ನೂ ಯಜ್ಞವೇದಿಗಳನ್ನೂ ಕೆಡವಿಸಿ ಬಿಟ್ಟನಲ್ಲವೆ? 13ನಾನೂ, ನನ್ನ ತಂದೆ, ತಾತಂದಿರೂ ಎಲ್ಲಾ ದೇಶಗಳ ಜನಾಂಗಗಳಿಗೆ ಮಾಡಿದ್ದನ್ನು ಕೇಳಲಿಲ್ಲವೋ? ಆ ಜನಾಂಗಗಳ ದೇವತೆಗಳಿಗೆ ಅವರ ದೇಶವನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸುವುದಕ್ಕೆ ಸಾಧ್ಯವಾಯಿತೋ? 14ನನ್ನ ತಂದೆತಾತಂದಿರು ನಾಶಮಾಡಿಬಿಟ್ಟ ಆ ಜನಾಂಗಗಳ ದೇವರುಗಳಲ್ಲಿ ಯಾವನು ತಾನೆ ತನ್ನ ಪ್ರಜೆಯನ್ನು ನನ್ನ ಕೈಯಿಂದ ಬಿಡಿಸುವುದಕ್ಕೆ ಸಮರ್ಥನಾಗಿದ್ದನು? ಹೀಗಿರುವಲ್ಲಿ ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕದಂತೆ ತಪ್ಪಿಸಿ ಕಾಪಾಡುವುದಕ್ಕೆ ಶಕ್ತನಾಗಿದ್ದಾನೆಯೋ 15ನೀವು ಹಿಜ್ಕೀಯನಿಂದ ಮರುಳಾಗಿ ಈ ರೀತಿಯಾಗಿ ಮೋಸಹೋಗಬೇಡಿರಿ, ಅವನನ್ನು ನಂಬಲೂ ಬೇಡಿರಿ. ಯಾವ ರಾಜ್ಯಜನಾಂಗಗಳ ದೇವತೆಗಳೂ ತನ್ನ ಪ್ರಜೆಗಳನ್ನು ನನ್ನ ಮತ್ತು ನನ್ನ ಪೂರ್ವಿಕರ ಕೈಯಿಂದ ಬಿಡಿಸಲಾರದೆ ಹೋದನು ಅಂದ ಮೇಲೆ, ನಿಮ್ಮ ದೇವರು ನಿಮ್ಮನ್ನು ನನ್ನ ಕೈಗೆ ಸಿಕ್ಕಿದಂತೆ ತಪ್ಪಿಸಬಲ್ಲನೇ?” ಎಂದು ಹೇಳಿಸಿದನು. 16ಸನ್ಹೇರೀಬನು ದೇವರಾದ ಯೆಹೋವನಿಗೂ ಆತನ ಸೇವಕನಾದ ಹಿಜ್ಕೀಯನಿಗೂ ವಿರುದ್ಧವಾಗಿ ಆಡಿದ ಈ ಮಾತುಗಳನ್ನು ತನ್ನ ಸೇವಕರ ಮುಖಾಂತರ ಹೇಳಿ ಕಳುಹಿಸಿದನು. 17ಅಷ್ಟು ಮಾತ್ರವಲ್ಲದೆ, ಇಸ್ರಾಯೇಲಿನ ದೇವರಾದ ಯೆಹೋವನನ್ನು ನಿಂದಿಸಿ ದೂಷಿಸುವುದಕ್ಕಾಗಿ, “ಅನ್ಯದೇಶಗಳವರ ದೇವರುಗಳು ತಮ್ಮ ಜನರನ್ನು ನನ್ನ ಕೈಯಿಂದ ಬಿಡಿಸಲಾರದೆ ಹೋದಂತೆ ಹಿಜ್ಕೀಯನ ದೇವರು ತನ್ನ ಪ್ರಜೆಗಳನ್ನು ನನ್ನ ಕೈಯಿಂದ ಬಿಡಿಸಲಾರನು” ಎಂಬುದಾಗಿ ಪತ್ರದಲ್ಲಿ ಬರೆದು ಕಳುಹಿಸಿದನು. 18ಯೆರೂಸಲೇಮಿಗೆ ಬಂದ ಆ ಅಶ್ಶೂರ್ಯರು ಗೋಡೆಯ ಮೇಲಿದ್ದ ಜನರನ್ನು ಬೆದರಿಸಿ, ದಿಗ್ಭ್ರಮೆಗೊಳಿಸಿ ಪಟ್ಟಣವನ್ನು ಸ್ವಾಧೀನಮಾಡಿಕೊಳ್ಳುವುದಕ್ಕಾಗಿ ಗಟ್ಟಿಯಾಗಿ ಕೂಗುತ್ತಾ ಅವರೊಡನೆ ಯೆಹೂದ್ಯರ ಭಾಷೆಯಲ್ಲಿ ಅವರಿಗೆ 19ಯೆರೂಸಲೇಮಿನ ದೇವರಾದ ಯೆಹೋವನು ಮನುಷ್ಯರ ಕೈಕೆಲಸವಾಗಿರುವ ಅನ್ಯದೇಶಗಳವರ ದೇವತೆಗಳಿಗೆ ಸಮಾನನಾಗಿರುವನನು ಎಂದು ಅನ್ಯದೇವರುಗಳಿಗೆ ಹೋಲಿಸಿ ಮಾತನಾಡಿದರು.
20ಈ ಕಾರಣದಿಂದ ಅರಸನಾದ ಹಿಜ್ಕೀಯನು ಹಾಗು ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಪರಲೋಕದ ದೇವರಿಗೆ ಮೊರೆಯಿಟ್ಟು ಪ್ರಾರ್ಥಿಸಿದರು. 21ಯೆಹೋವನು ದೂತನನ್ನು ಕಳುಹಿಸಿ ಅಶ್ಶೂರದ ಅರಸನ ದಂಡಿನಲ್ಲಿದ್ದ ಎಲ್ಲಾ ಶೂರರನ್ನೂ, ನಾಯಕರನ್ನೂ, ಅಧಿಪತಿಗಳನ್ನೂ ಸಂಹರಿಸಿದನು; ಅಶ್ಶೂರದ ಅರಸನು ನಾಚಿಕೆಯಿಂದ ತನ್ನ ದೇಶಕ್ಕೆ ಹಿಂದಿರುಗಿಹೋಗಬೇಕಾಯಿತು. ಅಲ್ಲಿ ಅವನು ತನ್ನ ದೇವರ ಗುಡಿಗೆ ಹೋಗಿದ್ದಾಗ ಅವನ ಸ್ವಂತ ಮಕ್ಕಳೇ ಅವನನ್ನು ಕತ್ತಿಯಿಂದ ಕೊಂದು ಹಾಕಿದರು. 22ಹೀಗೆ ಯೆಹೋವನು ಹಿಜ್ಕೀಯನನ್ನೂ ಯೆರೂಸಲೇಮಿನವರನ್ನೂ ಅಶ್ಶೂರ್ಯದ ಅರಸನಾದ ಸನ್ಹೇರೀಬನ ಕೈಗೂ ಸುತ್ತಲಿನ ಎಲ್ಲಾ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿ ಕಾಪಾಡುತ್ತಿದ್ದನು. 23ಅನೇಕರು ಯೆಹೋವನಿಗೋಸ್ಕರ ಕಾಣಿಕೆಗಳನ್ನೂ, ಯೆಹೂದ್ಯರ ಅರಸನಾದ ಹಿಜ್ಕೀಯನಿಗೋಸ್ಕರ ಶ್ರೇಷ್ಠ ವಸ್ತುಗಳನ್ನೂ ಯೆರೂಸಲೇಮಿಗೆ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಹಳ ದೊಡ್ಡವನೆಂದು ಪರಿಗಣಿಸುತ್ತಿದ್ದರು.
ಹಿಜ್ಕೀಯನ ರೋಗ ಮತ್ತು ಅಹಂಕಾರ
24ಆ ಕಾಲದಲ್ಲಿ ಹಿಜ್ಕೀಯನು ಮರಣಕರವಾದ ರೋಗಕ್ಕೆ ತುತ್ತಾದನು ಆಗ ಅವನು ಯೆಹೋವನಿಗೆ ಪ್ರಾರ್ಥಿಸಲು ಆತನು ಅದ್ಭುತವಾಗಿ ಸದುತ್ತರವನ್ನು ದಯಪಾಲಿಸಿ ಅವನಿಗೆ ಒಂದು ಗುರುತನ್ನು ಅನುಗ್ರಹಿಸಿದನು. 25ಆದರೆ ಹಿಜ್ಕೀಯನು ಈ ಉಪಕಾರಕ್ಕೆ ತಕ್ಕಂತೆ ನಡೆಯದೆ ಅಹಂಕಾರಿಯಾದನು. ಆದುದರಿಂದ ಯೆಹೂದದ ಮೇಲೆಯೂ ಯೆರೂಸಲೇಮಿನವರ ಮೇಲೆಯೂ ದೇವರ ಕೋಪವುಂಟಾಯಿತು. 26ಆಗ ಹಿಜ್ಕೀಯನ ತನ್ನ ಗರ್ವವನ್ನು ಬಿಟ್ಟು, ಯೆರೂಸಲೇಮಿನವರೊಡನೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ಅವನ ಉಳಿದ ಜೀವಮಾನದಲ್ಲಿ ಯೆಹೋವನ ಕೋಪವು ಅವನ ಮೇಲೆ ಬರಲಿಲ್ಲ.
27ಹಿಜ್ಕೀಯನಿಗೆ ಅತ್ಯಧಿಕವಾದ ಧನ ಘನತೆಗಳು ಒದಗಿದವು; ಅವನು ಬೆಳ್ಳಿಬಂಗಾರ, ರತ್ನ, ಪರಿಮಳ ದ್ರವ್ಯ, ಗುರಾಣಿ, ಆಭರಣ#32:27 ಆಭರಣ ಅಥವಾ ಪಾತ್ರೆ. ಮುಂತಾದ ಶ್ರೇಷ್ಠಾಯುಧಗಳನ್ನು ಇಡುವುದಕ್ಕೋಸ್ಕರ ಭಂಡಾರಗಳನ್ನು ಸಿದ್ಧಪಡಿಸಿದನು 28ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು ಸಂಗ್ರಹಿಸುವುದಕ್ಕಾಗಿ ಉಗ್ರಾಣಗಳನ್ನು ಕಟ್ಟಿಸಿದನು.ಆಯಾ ಜಾತಿಯ ಪಶುಗಳಿಗೋಸ್ಕರ ಕೊಟ್ಟಿಗೆಗಳನ್ನೂ, ಆಡುಕುರಿಗಳ ಹಿಂಡುಗಳಿಗೋಸ್ಕರ ಹಟ್ಟಿಗಳನ್ನೂ ಸಿದ್ಧಮಾಡಿಸಿಕೊಂಡನು. 29ಇದಲ್ಲದೆ, ಪಟ್ಟಣಗಳನ್ನೂ ಕಟ್ಟಿಸಿ ದನಕುರಿಗಳ ದೊಡ್ಡ ಹಿಂಡುಗಳನ್ನು ಸಂಪಾದಿಸಿಕೊಂಡನು. ದೇವರು ಅವನಿಗೆ ಕೊಟ್ಟ ಸಂಪತ್ತು ಅಪರಿಮಿತವಾಗಿತ್ತು. 30ಮೇಲಣ ಗೀಹೋನ್ ಎಂಬ ಬುಗ್ಗೆಗೆ ಅಣೆಕಟ್ಟು ಕಟ್ಟಿಸಿ ಅದರ ನೀರು ನೆಟ್ಟಗೆ ದಾವೀದನಗರದ ಪಡುವಣ ತಗ್ಗಿಗೆ ಹರಿಯುವಂತೆ ಮಾಡಿದವನು ಹಿಜ್ಕೀಯನೇ. ಅವನು ತನ್ನ ಎಲ್ಲಾ ಕಾರ್ಯಗಳಲ್ಲಿಯೂ ಕೃತಾರ್ಥನಾದನು. 31ಆದರೂ ಅವನ ದೇಶದಲ್ಲಿ ಉಂಟಾದ ಅದ್ಭುತ ವಿಷಯವನ್ನು ವಿಚಾರಿಸುವುದಕ್ಕಾಗಿ ಬಾಬೆಲಿನ ಅರಸನ ರಾಯಭಾರಿಗಳು ಅವನ ಬಳಿಗೆ ಬಂದಾಗ, ದೇವರು ಅವನನ್ನು ಪರೀಕ್ಷಿಸುವುದಕ್ಕೂ ಹಾಗು ಅವನ ಸರ್ವಾಂತರ್ಯವನ್ನು ತಿಳಿದುಕೊಳ್ಳುವುದಕ್ಕೂ ಅವನನ್ನು ಬಿಟ್ಟುಕೊಟ್ಟನು 32ಹಿಜ್ಕೀಯನ ಉಳಿದ ಚರಿತ್ರೆಯೂ ಅವನ ಭಕ್ತಿ ಕಾರ್ಯಗಳೂ ಆಮೋಚನ ಮಗನಾದ, ಪ್ರವಾದಿಯಾದ ಯೆಶಾಯನ ದರ್ಶನಗ್ರಂಥದಲ್ಲಿಯೂ, ಯೆಹೂದ್ಯರ ಮತ್ತು ಇಸ್ರಾಯೇಲರ ರಾಜ ಗ್ರಂಥದಲ್ಲಿಯೂ ಬರೆದಿರುತ್ತವೆ. 33ಹಿಜ್ಕೀಯನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದವಂಶದವರ ಕುಟುಂಬ ಸ್ಮಶಾನ ಭೂಮಿಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನ ಉತ್ತರಕ್ರಿಯೆ ನಡೆಯುವಾಗ ಎಲ್ಲಾ ಯೆಹೂದ್ಯರೂ, ಯೆರೂಸಲೇಮಿನವರು ಅವನನ್ನು ಬಹಳವಾಗಿ ಸನ್ಮಾನಿಸಿದರು. ಅವನಿಗೆ ಬದಲಾಗಿ ಅವನ ಮಗನಾದ ಮನಸ್ಸೆಯು ಅರಸನಾದನು.

Currently Selected:

2 ಪೂರ್ವ 32: IRVKan

Highlight

Share

Copy

None

Want to have your highlights saved across all your devices? Sign up or sign in