“ಶೂರರಾಗಿರಿ, ಧೈರ್ಯದಿಂದಿರಿ; ಅಶ್ಶೂರದ ಅರಸನಿಗೂ ಅವನೊಂದಿಗಿರುವ ಆ ದೊಡ್ಡ ಗುಂಪಿಗೂ ಅಂಜಬೇಡಿರಿ, ಕಳವಳಪಡಬೇಡಿರಿ. ಅವನಿಗಿರುವ ಸಹಾಯಕ್ಕಿಂತ ನಮಗಿರುವ ಸಹಾಯವು ದೊಡ್ಡದ್ದು. ಅವನೊಂದಿಗಿರುವದಕ್ಕಿಂತ ದೊಡ್ಡವನಾಗಿರುವವನು ನಮ್ಮೊಂದಿಗಿದ್ದಾನೆ. ಅವನಿಗಿರುವ ಸಹಾಯವು ನಶ್ವರವಾದ ತೋಳುಬಲ; ನಮಗಾದರೋ ನಮ್ಮ ಸಹಾಯಕನು ದೇವರಾದ ಯೆಹೋವನೇ. ಆತನು ನಮಗೆ ನೆರವಾಗಿ, ಯುದ್ಧಗಳಲ್ಲಿ ನಮಗೋಸ್ಕರ ಕಾದಾಡುವನು” ಎಂದು ಹೇಳಿ ಧೈರ್ಯಪಡಿಸಿದನು. ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳನ್ನು ಕೇಳಿ ಭರವಸೆಯುಳ್ಳವರಾದರು.