2 ಪೂರ್ವ 26
26
ಯೆಹೂದದ ಅರಸನಾದ ಉಜ್ಜೀಯನು
1ಆನಂತರ ಎಲ್ಲಾ ಯೆಹೂದ್ಯರು ಅಮಚ್ಯನ ಮಗನಾದ ಉಜ್ಜೀಯನನ್ನು ಅರಸನ್ನನ್ನಾಗಿ ಮಾಡಿದರು. ಉಜ್ಜೀಯನು ಅರಸನಾದಾಗ ಹದಿನಾರು ವರ್ಷದವನಾಗಿದ್ದ. 2ಇವನು ಏಲೋತ್ ಪಟ್ಟಣವನ್ನು ಪುನಃ ಯೆಹೂದ ರಾಜ್ಯಕ್ಕೆ ಸೇರಿಸಿಕೊಂಡು ಭದ್ರಪಡಿಸಿದನು. 3ಅವನು ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷಗಳ ಕಾಲ ಆಳಿದನು. ಯೆರೂಸಲೇಮಿನವಳಾದ ಯೆಕೊಲ್ಯ ಎಂಬಾಕೆಯು ಅವನ ತಾಯಿ. 4ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವನ ಚಿತ್ತಾನುಸಾರವಾಗಿ ನಡೆದನು. 5ದೈವಭಕ್ತಿಯನ್ನು #26:5 ಅಥವಾ ಜೆಕರ್ಯನು ದೈವೋಕ್ತಿಗಳಲ್ಲಿ ಪರಿಣಿತನಾಗಿದ್ದನು.ಬೋಧಿಸುತ್ತಿದ್ದ ಜೆಕರ್ಯನ ಜೀವಮಾನಕಾಲದಲ್ಲಿ ಅವನು ದೇವರನ್ನು ಅವಲಂಬಿಸಿಕೊಂಡಿದ್ದನು; ಹೀಗೆ ಅವನು ಯೆಹೋವನನ್ನು ಅವಲಂಬಿಸಿದ್ದ ಕಾಲದಲ್ಲೆಲ್ಲಾ ದೇವರಾದ ಯೆಹೋವನು ಅವನನ್ನು ಅಭಿವೃದ್ಧಿಗೆ ತಂದನು. 6ಅವನು ಫಿಲಿಷ್ಟಿಯರ ಮೇಲೆ ಯುದ್ಧಕ್ಕಾಗಿ ಹೊರಟು ಗತ್ ಊರು, ಯಬ್ನೆ, ಅಷ್ಡೋದ್ ಎಂಬ ಪಟ್ಟಣಗಳ ಗೋಡೆಗಳನ್ನು ಕೆಡವಿಬಿಟ್ಟು ಅಷ್ಡೋದಿನ ಮತ್ತು ಫಿಲಿಷ್ಟಿಯರ ಪ್ರಾಂತ್ಯಗಳಲ್ಲಿ ಪಟ್ಟಣಗಳನ್ನು ಕಟ್ಟಿಸಿದನು. 7ಫಿಲಿಷ್ಟಿಯರೊಡನೆ ಗೂರ್ ಬಾಳಿನಲ್ಲಿರುವ ಅರಬಿಯರೊಡನೆ ಹಾಗು ಮೆಗೂನ್ಯರೊಡನೆ ಯುದ್ಧ ಮಾಡಿದಾಗ ಯೆಹೋವನು ಅವನಿಗೆ ಸಹಾಯ ಮಾಡಿದನು. 8ಅಮ್ಮೋನಿಯರೂ ಉಜ್ಜೀಯನಿಗೆ ಕಪ್ಪವನ್ನು ಕೊಡುತ್ತಿದ್ದರು. ಅವನು ಅಧಿಕಬಲವುಳ್ಳವನ್ನಾದುದರಿಂದ ಅವನ ಹೆಸರು ಐಗುಪ್ತದ ಮೇರೆಯವರೆಗೂ ಹಬ್ಬಿತು. 9ಉಜ್ಜೀಯನು ಯೆರೂಸಲೇಮಿನಲ್ಲಿ ಮೂಲೆಬಾಗಿಲು, ತಗ್ಗಿನ ಬಾಗಿಲು, ಗೋಡೆ ತಿರುಗುವ ಭಾಗಗಳ ಮೇಲೆ ಗೋಪುರಗಳನ್ನು ಕಟ್ಟಿಸಿ ಭದ್ರಗೊಳಿಸಿದನು. 10ಅವನಿಗೆ ಇಳಿಜಾರಿನ ಪ್ರದೇಶದಲ್ಲಿಯೂ, ತಪ್ಪಲ ಸೀಮೆಯಲ್ಲಿಯೂ ಅಲ್ಲದೆ ಅಡವಿಯಲ್ಲಿಯೂ ಪಶುಗಳ ದೊಡ್ಡ ಮಂದೆಗಳು ಇದ್ದವು. ಆದುದರಿಂದ ಆ ಅಡವಿಯಲ್ಲಿ ಗೋಪುರಗಳನ್ನು ಕಟ್ಟಿಸಿ ಅನೇಕ ಬಾವಿಗಳನ್ನು ತೋಡಿಸಿದನು. ಅವನಿಗೆ ವ್ಯವಸಾಯದಲ್ಲಿ ಬಹಳ ಅಭಿರುಚಿ ಇದ್ದುದರಿಂದ ಗುಡ್ಡ, ಫಲವತ್ತಾದ ಬಯಲು, ಇವುಗಳಲ್ಲಿ ಹೊಲ ಹಾಗು ದ್ರಾಕ್ಷಿ ತೋಟಗಳಲ್ಲಿ ಕೆಲಸಗಾರರನ್ನು ನೇಮಿಸಿದನು. 11ಇದಲ್ಲದೆ, ಉಜ್ಜೀಯನಿಗೆ ಯುದ್ಧಕ್ಕೋಸ್ಕರ ಸೈನ್ಯವೂ ಇತ್ತು. ಲೇಖಕನಾದ ಯೆಗೀಯೇಲ್, ಅಧಿಕಾರಿಯಾದ ಮಾಸೇಯ ಇವರು ಹಾಕಿಕೊಟ್ಟ ಪಟ್ಟಿಯಕ್ರಮ ಪ್ರಕಾರ ಅರಸನ ಸರದಾರರಲ್ಲಿ ಒಬ್ಬನಾದ ಹನನ್ಯನ ಆಜ್ಞಾನುಸಾರವಾಗಿ. ಆಯಾ ಗುಂಪುಗಳು ಯುದ್ಧಕ್ಕೆ ಹೊರಡುತ್ತಿದ್ದವು. 12ಯುದ್ಧವೀರರೂ ಎಲ್ಲಾ ಗೋತ್ರಪ್ರಧಾನರ ಸಂಖ್ಯೆಯು ಎರಡು ಸಾವಿರದ ಆರು ನೂರು. 13ಇವರ ಕೈಕೆಳಗಿದ್ದ ಭಟರ ಸಂಖ್ಯೆಯು ಮೂರು ಲಕ್ಷದ ಏಳು ಸಾವಿರದ ಐನೂರು; ಇವರು ಅರಸನ ಸೇವೆಯಲ್ಲಿದ್ದು ಅವನ ವೈರಿಗಳಿಗೆ ವಿರುದ್ಧವಾಗಿ ಪರಾಕ್ರಮದಿಂದ ಯುದ್ಧಮಾಡುತ್ತಿದ್ದರು. 14ಉಜ್ಜೀಯನು ಈ ಎಲ್ಲಾ ಸೈನ್ಯದವರಿಗೆ ಬೇಕಾದ ಗುರಾಣಿ, ಬರ್ಜಿ, ಶಿರಸ್ತ್ರಾಣ, ಕವಚ, ಬಿಲ್ಲು, ಕವಣೆಯಕಲ್ಲು ಇವುಗಳನ್ನು ಒದಗಿಸಿ ಕೊಟ್ಟನು. 15ಇದಲ್ಲದೆ, ಅವನು ಬಾಣಗಳನ್ನೂ, ದೊಡ್ಡ ಕಲ್ಲುಗಳನ್ನು ಬಳಸುವುದಕ್ಕಾಗಿ, ತಜ್ಞರ ಆಜ್ಞೆಯ ಮೇರೆಗೆ ಯಂತ್ರಗಳನ್ನೂ ಮಾಡಿಸಿ, ಅವುಗಳನ್ನು ಯೆರೂಸಲೇಮಿನ ಗೋಪುರಗಳ ಮೇಲೆಯೂ, ಕೋಟೆಕೊತ್ತಲಗಳನ್ನು ಮೇಲೆಯೂ ಇಡಿಸಿದ್ದನು. ಅವನು ಬಲಿಷ್ಠನಾಗುವ ಹಾಗೆ ದೇವರ ಅತಿಶಯವಾದ ಸಹಾಯವು ಆಶ್ಚರ್ಯವಾದ ರೀತಿಯಲ್ಲಿ ಅವನಿಗೆ ದೊರೆಯುತ್ತಿದ್ದುದರಿಂದ; ಅವನ ಕೀರ್ತಿಯೂ ಬಹು ದೂರದ ಮೇರೆಯವರೆಗೂ ಹಬ್ಬಿತು.
ಉಜ್ಜೀಯನ ಪಾಪವೂ ಶಿಕ್ಷೆಯೂ
16ಆದರೆ ಅವನು ಬಲಿಷ್ಠನಾದ ಮೇಲೆ ಅವನ ಅವನತಿಗಾಗಿ ಗರ್ವಿಷ್ಠನಾಗಿ ಭ್ರಷ್ಟನಾದನು; ತನ್ನ ದೇವರಾದ ಯೆಹೋವನಿಗೆ ದ್ರೋಹಿಯಾಗಿ ಧೂಪವೇದಿಯ ಮೇಲೆ ತಾನೇ ಧೂಪ ಹಾಕಬೇಕೆಂದು ಯೆಹೋವನ ಆಲಯದೊಳಗೆ ಪ್ರವೇಶಿಸಿದನು. 17ಆಗ ಮಹಾಯಾಜಕನಾದ ಅಜರ್ಯನೂ ಹಾಗು ಧೈರ್ಯಶಾಲಿಗಳಾದ ಯೆಹೋವನ ಎಂಭತ್ತು ಮಂದಿ ಇತರ ಯಾಜಕರೂ ಅರಸನಾದ ಉಜ್ಜೀಯನ ಹಿಂದೆಯೇ ಹೋಗಿ 18ಅರಸನ ಎದುರಿಗೆ ನಿಂತು ಅವನಿಗೆ, “ಉಜ್ಜೀಯನೇ, ಯೆಹೋವನಿಗೋಸ್ಕರ ಧೂಪ ಹಾಕುವುದು ನಿನ್ನ ಕೆಲಸವಲ್ಲ; ಅದಕ್ಕೋಸ್ಕರ ಆರೋನನ ಸಂತಾನದವರಾದ ಯಾಜಕರು ಪ್ರತಿಷ್ಠಿತರಾಗಿದ್ದಾರೆ. ಪವಿತ್ರಾಲಯವನ್ನು ಬಿಟ್ಟುಹೋಗು; ನೀನು ಮಾಡುತ್ತಿರುವುದು ದ್ರೋಹ. ಇದಕ್ಕೆ ದೇವರಾದ ಯೆಹೋವನಿಂದ ನಿನಗೆ ಗೌರವ ದೊರಕಲಾರದು” ಎಂದರು. 19ಆಗ ಧೂಪ ಹಾಕಬೇಕೆಂದು ಕೈಯಲ್ಲಿ ಧೂಪಾರತಿಯನ್ನು ಹಿಡಿದುಕೊಂಡಿದ್ದ ಉಜ್ಜೀಯನು ಕೋಪಗೊಂಡನು. ಅವನು ಯೆಹೋವನ ಆಲಯದ ಧೂಪವೇದಿಯ ಬಳಿಯಲ್ಲಿ ನಿಂತು, ಯಾಜಕರೊಡನೆ ಸಿಟ್ಟಿನಿಂದ ಮಾತನಾಡುತ್ತಿರುವಾಗಲೆ ಯಾಜಕರ ಸಮಕ್ಷಮದಲ್ಲೇ, ಅವನ ಹಣೆಯ ಮೇಲೆ ಕುಷ್ಠವು ಕಾಣಿಸಿಕೊಂಡಿತು. 20ಮಹಾಯಾಜಕನಾದ ಅಜರ್ಯನೂ ಎಲ್ಲಾ ಯಾಜಕರೂ ಅವನನ್ನು ದೃಷ್ಟಿಸಿ ನೋಡಿದಾಗ, ಅವನ ಹಣೆಯಲ್ಲಿ ಕುಷ್ಠವು ಕಂಡುಬಂದ ಕಾರಣ, ಅವನನ್ನು ಶೀಘ್ರವಾಗಿ ಅಲ್ಲಿಂದ ಹೊರಡಿಸಿದರು. ಯೆಹೋವನು ತನ್ನನ್ನು ಬಾಧಿಸಿದ್ದಾನೆಂದು ಅವನಿಗೆ ತಿಳಿಯಿತು. ಅವನೂ ಶೀಘ್ರವಾಗಿ ಹೊರಗೆ ಹೋಗಲು ಆತುರಪಟ್ಟನು. 21ಉಜ್ಜೀಯನು ಜೀವದಿಂದಿರುವ ವರೆಗೂ ಕುಷ್ಠರೋಗಿಯಾಗಿದ್ದು, ಯೆಹೋವನ ಆಲಯಕ್ಕೆ ಬಾರದಂತೆ ಬಹಿಷ್ಕೃತನಾದನು. ಅವನು ಕುಷ್ಠದ ದೆಸೆಯಿಂದ ಪ್ರತ್ಯೇಕವಾದ ಮನೆಯಲ್ಲಿ ವಾಸಮಾಡಬೇಕಾಯಿತು. ರಾಜಗೃಹಾದಿಪತ್ಯವನ್ನೂ ಮತ್ತು ಪ್ರಜಾಪಾಲನೆಯನ್ನೂ ಅವನ ಮಗನಾದ ಯೋತಾಮನು ನೋಡಿಕೊಳ್ಳುತ್ತಿದ್ದನು. 22ಉಜ್ಜೀಯನ ಉಳಿದ ಪೂರ್ವೋತ್ತರ ಚರಿತ್ರೆಯನ್ನು ಆಮೋಚನ ಮಗನಾದ ಯೆಶಾಯನೆಂಬ ಪ್ರವಾದಿಯು ಬರೆದಿದ್ದಾನೆ. 23ಉಜ್ಜೀಯನು ತನ್ನ ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಕುಷ್ಠ ರೋಗಿಯದೆಂದು ಬಗೆದು, ರಾಜ ಕುಟುಂಬದ ಸ್ಮಶಾನವಿದ್ದ ಹೊಲದಲ್ಲಿ ಸಮಾಧಿ ಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು.
Currently Selected:
2 ಪೂರ್ವ 26: IRVKan
Highlight
Share
Copy
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fen.png&w=128&q=75)
Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.