ಕೀರ್ತನೆಗಳು 37
37
ಸಜ್ಜನ ದುರ್ಜನರ ಬಲಾಬಲ
1ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I
ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II
2ಅವರು ಒಣಗಿಹೋಗುವರು ಕಾಡುಗರಿಕೆಯಂತೆ I
ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II
3ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I
ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II
4ಪ್ರಭುವಿನಿಂದಲೆ ಬಯಸು ನಿನ್ನಾನಂದವನು I
ನೆರವೇರಿಸುವನಾತ ನಿನ್ನ ಮನದಾಸೆಯನು II
5ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I
ಭರವಸೆಯಿಂದಿರು, ಆತನದನು ಸಾಗಿಸುವನು II
6ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I
ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II
7ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I
ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II
8ಅಡಗಿಸು ಕೋಪವನು; ವರ್ಜಿಸು ಕ್ರೋಧವನು I
ಕಿಡಿಕಿಡಿಯಾಗಬೇಡ, ತರುವುದದು ಕೇಡನು II
9ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I
ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II
10ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I
ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II
11ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I
ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II
12ದುರ್ಜನನು ಹೂಡಿಹನು ಒಳಸಂಚು ಸಜ್ಜನನ ವಿರುದ್ಧ I
ಕಟಕಟನೆ ಹಲ್ಲು ಕಡಿಯುತಿಹನಿದೋ ಆತನ ವಿರೋಧ II
13ಅಂಥವನ ಕಂಡು ಪ್ರಭು ನಸುನಗುತಿಹನು I
ಅವನಿಗೊದಗಲಿಹ ಗತಿಯನು ಕಾಣುತಿಹನು II
14ಹಿಡಿದಿಹರು ದುರುಳರು ಕತ್ತಿಯನು, ಎತ್ತಿಹರು ಬಿಲ್ಲನು I
ಕೆಡಹಲು ದೀನದಲಿತರನು, ಕೊಲ್ಲಲು ಸಜ್ಜನರನು II
15ಹಿಡಿದ ಕತ್ತಿ ಹಿಡಿದವರೆದೆಯನೆ ಇರಿವುದು I
ಎತ್ತಿದ ಬಿಲ್ಲುಬಾಣ ಸಿಡಿದು ಮುರಿವುದು II
16ದುರುಳರ ವಿಪುಲ ಆಸ್ತಿಪಾಸ್ತಿಗಿಂತಲು I
ಸತ್ಯವಂತರ ಬಡತನವೆನಿತೊ ಮಿಗಿಲು II
17ಬತ್ತಿಹೋಗುವುದು ದುರ್ಜನರ ಭುಜಬಲ I
ಸತ್ಯವಂತರಿಗೆ ಪ್ರಭುವೇ ಉನ್ನತಬಲ II
18ಸಜ್ಜನರಿಗೆ ಸಿಗುವ ಸೊತ್ತು ಶಾಶ್ವತ I
ಪ್ರಭುವಿಗೆ ಗೊತ್ತು ಅವರ ಬಾಳಿನಂತ್ಯ II
19ಮಾನನಷ್ಟವಿರದು ಕಷ್ಟಕಾಲದಲಿ I
ಕುಂದುಕೊರತೆಯಿರದು ಬರಗಾಲದಲಿ II
20ದುರುಳರ ಬೆಡಗೋ ಬಾಡಿಹೋಗುವುದು ಹುಲ್ಲಿನಂತೆ I
ಪ್ರಭುವಿನ ಶತ್ರುಗಳು ತೇಲಿಹೋಗುವರು ಹೊಗೆಯಂತೆ II
21ಕೊಂಡ ಸಾಲವನು ತೀರಿಸಲಾರನಾ ದುರ್ಜನನು I
ಉದಾರವಾಗಿ ದಾನ ಧರ್ಮಮಾಳ್ಪನಾ ಸಜ್ಜನನು II
22ಪ್ರಭುವಿನಿಂದ ಆಶೀರ್ವದಿತರು ನಾಡಿಗೆ ಬಾಧ್ಯಸ್ಥರು I
ಆತನಿಂದ ಶಾಪಗ್ರಸ್ಥರು ಬಹಿಷ್ಕೃತರು II
23ಪ್ರಭುವಿಗೆ ಪ್ರಿಯವು ಮಾನವನ ಪ್ರವರ್ತನ I
ಅವನ ನಡತೆಗೆ ಆತನೆ ಮಾರ್ಗದರ್ಶನ II
24ಬಿದ್ದರೂ ಅವನೆದ್ದೇ ತೀರುವನು I
ಪ್ರಭು ಅವನಿಗೆ ಊರುಗೋಲಾಗಿಹನು II
25ಸಜ್ಜನ ದಿಕ್ಕಿಲ್ಲದಿರುವುದನು, ಅವನ ಸಂತತಿ ಭಿಕ್ಷೆ ಬೇಡುವುದನು I
ನಾ ಕಾಣೆನು, ವೃದ್ಧ ನಾನೆಂದೂ ಕಾಣೆನು, ಬಾಲ್ಯದಿಂದ ಕಾಣೆನು II
26ದಾನ ನೀಡುವನು, ಸಾಲ ನಿರಾಕರಿಸನು ಸಜ್ಜನನು I
ಆತನ ಸಂತಾನ ಹೊಂದುವುದು ಆಶೀರ್ವಾದವನು II
27ಕೆಟ್ಟದನು ಬಿಡು, ಒಳ್ಳೆಯದನು ಮಾಡು I
ಸಿರಿನಾಡಿನಲಿ ಚಿರಕಾಲ ಬಾಳು II
28ಪ್ರಭುವು ನ್ಯಾಯಪ್ರಿಯನು, ಭಕ್ತಜನರ ಪರಿಪಾಲಕನು I
ಚಿರವುಳಿಸುವನು ಇವರನು, ಅಳಿಸುವನು ದುರುಳರ ಪೀಳಿಗೆಯನು II
29ಸಜ್ಜನರು ಸಿರಿನಾಡಿಗೆ ಬಾಧ್ಯಸ್ಥರು I
ಅಲ್ಲವರು ಶಾಶ್ವತವಾಗಿ ಬಾಳುವರು II
30ಸಜ್ಜನರ ಬಾಯಿ ಆಡುವುದು ಸುಜ್ಞಾನವನು I
ಅವನ ನಾಲಿಗೆ ನುಡಿಯುವುದು ನ್ಯಾಯನೀತಿಯನು II
31ಅವನ ಎದೆಯಲ್ಲಿದೆ ದೇವರ ನಿಯಮ I
ನೆಲೆತಪ್ಪದು ಅವನ ನಡತೆಯ ಕ್ರಮ II
32ದುಷ್ಟನಿಟ್ಟಿರುವನು ಕಣ್ಣನು ಸಜ್ಜನರ ಮೇಲೆ I
ಹೊಂಚುಹಾಕಿ ನೋಡುತಿಹನು ಮಾಡಲವರ ಕೊಲೆ II
33ಪ್ರಭು ಬಿಡನವನನು ದುಷ್ಟ ಶಕ್ತಿಯ ವಶಕ್ಕೆ I
ಗುರಿಪಡಿಸನು ನ್ಯಾಯಸ್ಥಾನದ ಶಿಕ್ಷೆಗೆ II
34ಪ್ರಭುವನು ನಂಬಿ ನಡೆ ಆತನ ಪಥದಲೇ I
ಉದ್ಧಾರವಾಗುವೆ, ನಾಡಿಗೊಡೆಯನಾಗುವೆ I
ದುಷ್ಟರ ವಿನಾಶವನು ಕಣ್ಣಾರೆ ಕಾಣುವೆ II
35ದುರುಳನೋರ್ವ ಮಹಾಗರ್ವದಿಂದ ಬಾಳುತ್ತಿದ್ದ I
ಹುಲುಸಾಗಿ ಬೆಳೆದ ದೇವದಾರು ಮರದಂತಿದ್ದ II
36ಕ್ರಮೇಣ ನಾನು ಆ ಮಾರ್ಗವಾಗಿ ನಡೆಯಲು I
ಕಾಣಲಿಲ್ಲ, ಗುರುತೂ ಇರಲಿಲ್ಲ ಹುಡುಕಲು II
37ನಿರಪರಾಧಿಯನ್ನು ಲಕ್ಷಿಸು, ಸತ್ಪುರುಷನನು ವೀಕ್ಷಿಸು I
ಶಾಂತಿಪ್ರಿಯನಿಗಿದೆ ಸಂತಾನವೃದ್ಧಿ, ಇದ ಗಮನಿಸು II
38ನಾಶವಾಗುವುದು ನಿಜ, ದೋಷಿಗಳ ಮನೆತನ I
ನಿರ್ಮೂಲವಾಗುವುದು ದುರುಳರ ಸಂತಾನ II
39ಸಜ್ಜನರ ಜೀವೋದ್ಧಾರ ಪ್ರಭುವಿನಿಂದ I
ಆಪತ್ಕಾಲದಲಿ ಆಶ್ರಯ ಆತನಿಂದ II
40ತನ್ನಾಶ್ರಿತರನು ಪ್ರಭು ಕೈ ನೀಡಿ ಕಾಪಾಡುವನು I
ದುಷ್ಟರ ವಶದಿಂದವರನು ತಪ್ಪಿಸಿ ಉದ್ಧರಿಸುವನು II
Currently Selected:
ಕೀರ್ತನೆಗಳು 37: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.