YouVersion Logo
Search Icon

ಕೀರ್ತನೆಗಳು 37:1-11

ಕೀರ್ತನೆಗಳು 37:1-11 KANCLBSI

ಕೇಡು ಮಾಡುವವರ ನೋಡಿ ಸಿಡಿಮಿಡಿಯಾಗಬೇಡ I ದುರಾಚಾರಿಗಳ ಕಂಡು ಮಚ್ಚರಗೊಳ್ಳಬೇಡ II ಅವರು ಒಣಗಿಹೋಗುವರು ಕಾಡುಗರಿಕೆಯಂತೆ I ಬೇಗ ಬಾಡಿಹೋಗುವರು ಕಾಯಿಪಲ್ಯದಂತೆ II ಒಳಿತನು ಮಾಡು ಪ್ರಭುವಿನಲಿ ಭರವಸೆ ಇಟ್ಟು I ಸುರಕ್ಷಿತನಾಗಿ ಬಾಳು ಸಿರಿನಾಡಿನಲ್ಲಿದ್ದು II ಪ್ರಭುವಿನಿಂದಲೆ ಬಯಸು ನಿನ್ನಾನಂದವನು I ನೆರವೇರಿಸುವನಾತ ನಿನ್ನ ಮನದಾಸೆಯನು II ಪ್ರಭುವಿಗೆ ಬಿಡು ಜೀವನಯಾತ್ರಾ ಚಿಂತೆಯನು I ಭರವಸೆಯಿಂದಿರು, ಆತನದನು ಸಾಗಿಸುವನು II ಬೆಳಗಿಸುವನು ನಿನ್ನ ಸತ್ಯಸಂಧತೆಯನು ಸೂರ್ಯೋದಯದಂತೆ I ಪ್ರಕಟಿಸುವನು ನಿನ್ನಾ ನ್ಯಾಯನಿಷ್ಠೆಯನು ನಡುಹಗಲಿನಂತೆ II ಪ್ರಭುವಿನ ಮುಂದೆ ಪ್ರಶಾಂತನಾಗಿರು, ಆತನಿಗೋಸ್ಕರ ಕಾದಿರು I ಸ್ವಾರ್ಥಿಗಳ, ಕುತಂತ್ರಿಗಳ ಏಳಿಗೆಯ ಕಂಡು ಉರಿಗೊಳ್ಳದಿರು II ಅಡಗಿಸು ಕೋಪವನು; ವರ್ಜಿಸು ಕ್ರೋಧವನು I ಕಿಡಿಕಿಡಿಯಾಗಬೇಡ, ತರುವುದದು ಕೇಡನು II ವಧಿತರಾಗಿ ನಾಶವಾಗುವರು, ಕೇಡು ಮಾಡುವವರು I ಪ್ರಭುವಿಗಾಗಿ ಕಾಯುವವರು ನಾಡಿಗೊಡೆಯರಾಗುವರು II ದುರುಳನು ಕಾಣದೆ ಹೋಗುವನು ಕೊಂಚಕಾಲದೊಳು I ಹುಡುಕಿದರು ಕಾಣಸಿಗನಾಗ ಊರು ಕೇರಿಗಳೊಳು II ದೀನದಲಿತರು ಬಾಧ್ಯಸ್ಥರಾಗುವರು ನಾಡಿಗೆ I ಆನಂದಿಸುವರು ಅಲ್ಲಿ ದೊರಕುವ ಸುಖಶಾಂತಿಗೆ II