YouVersion Logo
Search Icon

ಮತ್ತಾಯ ಮುನ್ನುಡಿ

ಮುನ್ನುಡಿ
ಲೋಕೋದ್ಧಾರಕನೊಬ್ಬನನ್ನು ಧರೆಗೆ ಕಳುಹಿಸುವುದಾಗಿ ದೇವರು ಆದಿಯಲ್ಲೇ ವಾಗ್ದಾನಮಾಡಿದ್ದರು. ಯೇಸುಸ್ವಾಮಿಯೇ ಆ ಉದ್ಧಾರಕ, ಜಗದ್‍ರಕ್ಷಕ, ‘ಬೈಬಲ್’ ಪವಿತ್ರ ಗ್ರಂಥದ ‘ಹಳೆಯ ಒಡಂಬಡಿಕೆ’ ಎಂಬ ಪೂರ್ವಭಾಗದಲ್ಲಿ ಅಡಗಿರುವ ದೇವದತ್ತ ವಾಗ್ದಾನಗಳನ್ನೆಲ್ಲ ಈ ಯೇಸುಸ್ವಾಮಿಯ ಮುಖಾಂತರವೇ ಈಡೇರಿಸಲಾಗಿವೆ. ಸಂತಸದಾಯಕವಾದ ಈ ಸುದ್ದಿಯನ್ನು ಶ್ರೀ ಮತ್ತಾಯನು ತನ್ನ ಈ ಶುಭಸಂದೇಶದಲ್ಲಿ ಒತ್ತಿ ಹೇಳುತ್ತಾನೆ. ಈ ಶುಭಸಂದೇಶವು ಸ್ವಾಮಿಯ ಸ್ವಜನರಾದ ಯೆಹೂದ್ಯರಿಗೆ ಮಾತ್ರವಲ್ಲ. ಇಡೀ ಜಗತ್ತಿಗೆ ಎಂದು ಕೂಡ ಸಾರಿಹೇಳುತ್ತಾನೆ.
ಯೇಸುವಿನ ಜನನದಿಂದ ಪ್ರಾರಂಭವಾಗುವ ಈ ಕೃತಿ, ಅವರು ಸ್ವೀಕರಿಸಿದ ಸ್ನಾನದೀಕ್ಷೆ, ಜಯಿಸಿದ ಪೈಶಾಚಿಕ ಪ್ರಲೋಭನೆಗಳು, ಮಾಡಿದ ಮಧುರ ಬೋಧನೆ, ಗಲಿಲೇಯದಲ್ಲಿ ಸಾಧಿಸಿದ ಕಾಯಿಲೆಕಷ್ಟಗಳ ನಿವಾರಣೆ - ಇವುಗಳನ್ನು ಸುವ್ಯವಸ್ಥಿತವಾಗಿ ವರ್ಣಿಸುತ್ತದೆ. ತದನಂತರ ಗಲಿಲೇಯದಿಂದ ಜೆರುಸಲೇಮಿಗೆ ಯೇಸು ಕೈಗೊಂಡ ಯಾತ್ರೆಯ ವಿವರಣೆಯಿದೆ. ಜೀವನದ ಕಡೆಯ ವಾರದಲ್ಲಿ ಅವರು ಅನುಭವಿಸಿದ ಭೀಕರ ಶಿಲುಬೆಮರಣ, ಬಳಿಕ ಸಿದ್ಧಿಸಿದ ಪುನರುತ್ಥಾನ ಇವುಗಳೊಂದಿಗೆ ಈ ಶುಭಸಂದೇಶ ಮುಕ್ತಾಯವಾಗುತ್ತದೆ.
ಪ್ರಭುಯೇಸು ಅಪ್ರತಿಮ ಬೋಧಕ, ಧಾರ್ಮಿಕ ನಿಯಮಗಳ ಅಧಿಕೃತ ವಿಮರ್ಶಕ ಹಾಗೂ ದೈವೀಸಾಮ್ರಾಜ್ಯದ ಸಂಸ್ಥಾಪಕ ಎಂದು ಬಣ್ಣಿಸಿದ್ದಾನೆ, ಮತ್ತಾಯನು. ಅವರ ಬೋಧನಾ ವಿಷಯಗಳನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ - 1. ಬೆಟ್ಟದ ಮೇಲಿನ ಬೋಧೆ; ದೈವೀಸಾಮ್ರಾಜ್ಯದ ಪ್ರಜೆಗಳಲ್ಲಿರಬೇಕಾದ ಗುಣಲಕ್ಷಣಗಳು ಹಾಗೂ ಗುರಿಧ್ಯೇಯಗಳು, ಅವರ ಕರ್ತವ್ಯಗಳು ಹಾಗೂ ಹಕ್ಕುಬಾಧ್ಯತೆಗಳು (ಅಧ್ಯಾಯ 5-7); 2. ಪ್ರೇಷಿತರಾದ ಶಿಷ್ಯರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಪಾಲಿಸಬೇಕಾದ ನೀತಿನಿಯಮಗಳು (ಅಧ್ಯಾಯ 10); 3. ದೇವರ ಸಾಮ್ರಾಜ್ಯವನ್ನು ಕುರಿತಾದ ಸಾಮತಿಗಳು (ಅಧ್ಯಾಯ 13); 4. ಶಿಷ್ಯತ್ವದ ನೈಜಾರ್ಥ (ಅಧ್ಯಾಯ 18); 5. ಪ್ರಸ್ತುತ ಯುಗದ ಅಂತ್ಯ ಮತ್ತು ಸ್ವರ್ಗಸಾಮ್ರಾಜ್ಯದ ಆಗಮನ (ಅಧ್ಯಾಯ 24-25).
ಮತ್ತಾಯನು ಯೆಹೂದ್ಯ ಓದುಗರನ್ನು ಮುಂದಿಟ್ಟುಕೊಂಡು ಈ ಸಂದೇಶವನ್ನು ಬರೆದಿದ್ದಾನೆ. ಈ ಕಾರಣದಿಂದಲೇ ಯೆಹೂದ್ಯ ವಾಚಕರಿಗೆ ಸುಪರಿಚಿತವಾದ ಹಳೆಯ ಒಡಂಬಡಿಕೆಯ ಹೇಳಿಕೆಗಳನ್ನೂ ಪ್ರವಾದನೆಗಳನ್ನೂ ಉದಾಹರಿಸುತ್ತಾನೆ. ಅವು ಕ್ರಿಸ್ತಯೇಸುವಿನಲ್ಲಿ ಸಂಪೂರ್ಣವಾಗಿ ಈಡೇರಿವೆ ಎಂದು ವಾದಿಸುತ್ತಾನೆ. ಆದುದರಿಂದ ಹಳೆಯ ಒಡಂಬಡಿಕೆಯ ಪರಿಚಯವಿಲ್ಲದ ಹಾಗೂ ಯೆಹೂದ್ಯ ಸಂಸ್ಕೃತಿಯನ್ನು ಅರಿಯದ ಕನ್ನಡ ಓದುಗರಿಗೆ ಈ ಕೃತಿಯನ್ನು ಸರಾಗವಾಗಿ ಓದಲು ಅಡ್ಡಿಯಾಗಬಹುದು. ಆದರೆ ಅನಂತರ ಬರುವ ಭಾಗಗಳಲ್ಲಿ ಈ ಸಮಸ್ಯೆ ಹಗುರವಾಗುತ್ತದೆ.
ಪರಿವಿಡಿ
ಯೇಸುಸ್ವಾಮಿಯ ವಂಶಾವಳಿ ಮತ್ತು ಜನನ 1:1—2:23
ಸ್ನಾನಿಕ ಯೊವಾನ್ನನ ಪ್ರಕರಣ 3:1-12
ಯೇಸು ಸ್ವೀಕರಿಸಿದ ಸ್ನಾನದೀಕ್ಷೆ ಮತ್ತು ಜಯಿಸಿದ ಪ್ರಲೋಭನೆಗಳು 3:13—4:11
ಗಲಿಲೇಯದಲ್ಲಿ ಯೇಸುವಿನ ಬಹಿರಂಗ ಸೇವಾವೃತ್ತಿ 4:12—18:35
ಗಲಿಲೇಯದಿಂದ ಜೆರುಸಲೇಮಿಗೆ ಯಾತ್ರೆ 19:1—20:34
ಜೆರುಸಲೇಮ್ ಮತ್ತು ಪರಿಸರದಲ್ಲಿ ಅಂತಿಮ ದಿನಗಳು 21:1—27:66
ಸ್ವಾಮಿಯ ಪುನರುತ್ಥಾನ ಮತ್ತು ದಿವ್ಯದರ್ಶನ 28:1-20

Highlight

Share

Copy

None

Want to have your highlights saved across all your devices? Sign up or sign in