YouVersion Logo
Search Icon

ಮತ್ತಾಯ 8

8
ಕುಷ್ಠರೋಗಿಯ ಮೇಲೆ ಕೃಪೆ
(ಮಾರ್ಕ. 1:40-45; ಲೂಕ. 5:12-16)
1ಯೇಸುಸ್ವಾಮಿ ಬೆಟ್ಟದಿಂದ ಇಳಿದುಬಂದಾಗ ಜನರು ಗುಂಪುಗುಂಪಾಗಿ ಅವರನ್ನು ಹಿಂಬಾಲಿಸಿದರು. 2ಆಗ ಒಬ್ಬ ಕುಷ್ಠರೋಗಿ ಯೇಸುವಿನ ಮುಂದೆ ಬಂದು, ತಲೆಬಾಗಿ, “ಸ್ವಾಮೀ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ,” ಎಂದು ಬೇಡಿದನು. 3ಯೇಸು ಕೈಚಾಚಿ ಅವನನ್ನು ಮುಟ್ಟಿ, “ಖಂಡಿತವಾಗಿಯೂ ನನಗೆ ಮನಸ್ಸಿದೆ, ಗುಣಹೊಂದು,” ಎಂದರು. ತಕ್ಷಣವೇ ಅವನ ಕುಷ್ಠವು ಮಾಯವಾಯಿತು. 4ಯೇಸು ಅವನಿಗೆ, “ಎಚ್ಚರಿಕೆ, ನೀನು ಗುಣಹೊಂದಿರುವುದನ್ನು ಯಾರಿಗೂ ಹೇಳಕೂಡದು. ಆದರೆ ನೆಟ್ಟಗೆ ಯಾಜಕನ ಬಳಿಗೆ ಹೋಗು; ಅವನು ನಿನ್ನನ್ನು ಪರೀಕ್ಷಿಸಿನೋಡಲಿ. ಅನಂತರ ಮೋಶೆ ನಿಯಮಿಸಿರುವ ಪ್ರಕಾರ ಶುದ್ಧೀಕರಣವಿಧಿಯನ್ನು ಅನುಸರಿಸು. ಇದು ಜನರಿಗೆ ಸಾಕ್ಷಿಯಾಗಿರಲಿ,” ಎಂದರು.
ಅನ್ಯಧರ್ಮೀಯನಲ್ಲೂ ಅತಿಶಯ ವಿಶ್ವಾಸ
(ಲೂಕ. 7:1-10)
5ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. 6“ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ,” ಎಂದು ವಿನಂತಿಸಿದನು. 7ಯೇಸು, “ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ,” ಎಂದರು. 8ಅದಕ್ಕೆ ಆ ಶತಾಧಿಪತಿ, “ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. 9ಏಕೆಂದರೆ, ನಾನೂ ಮತ್ತೊಬ್ಬರ ಕೈಕೆಳಗಿರುವವನು. ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, ‘ಬಾ’ ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, ‘ಹೋಗು’ ಎಂದರೆ ಹೋಗುತ್ತಾನೆ. ಸೇವಕನಿಗೆ, ‘ಇಂಥದ್ದನ್ನು ಮಾಡು’ ಎಂದರೆ ಮಾಡುತ್ತಾನೆ,” ಎಂದನು. 10ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: “ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. 11ಪೂರ್ವ. ಪಶ್ಚಿಮ ದಿಕ್ಕುಗಳಿಂದ ಅನೇಕ ಜನರು ಬಂದು ಅಬ್ರಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು. 12ಆದರೆ ಯಾರು ಈ ಸಾಮ್ರಾಜ್ಯಕ್ಕೆ ಬಾಧ್ಯಸ್ಥರೋ ಅವರನ್ನೇ ಹೊರಗೆ ದಬ್ಬಲಾಗುವುದು; ಅಲ್ಲಿ, ಆ ಕಾರ್ಗತ್ತಲಲ್ಲಿ, ಅವರ ಗೋಳಾಟವೇನು! ಹಲ್ಲು ಕಡಿತವೇನು!”
13ಅನಂತರ ಯೇಸು ಆ ಶತಾಧಿಪತಿಗೆ, “ಇನ್ನು ಮನೆಗೆ ಹೋಗು, ನೀನು ವಿಶ್ವಾಸಿಸಿದಂತೆಯೇ ಆಗುವುದು,” ಎಂದರು. ಅದೇ ಕ್ಷಣದಲ್ಲಿ ಅವನ ಸೇವಕನು ಸ್ವಸ್ಥನಾದನು.
ಕಾಯಿಲೆ ಕಷ್ಟಗಳ ನಿವಾರಣೆ
(ಮಾರ್ಕ. 1:29-34; ಲೂಕ. 4:38-41)
14ತರುವಾಯ ಯೇಸುಸ್ವಾಮಿ ಪೇತ್ರನ ಮನೆಗೆ ಬಂದರು. ಅಲ್ಲಿ ಪೇತ್ರನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು. 15ಯೇಸು ಆಕೆಯ ಕೈಮುಟ್ಟಿದುದೇ ಜ್ವರ ಬಿಟ್ಟುಹೋಯಿತು, ಆಕೆ ಎದ್ದು ಅವರನ್ನು ಸತ್ಕರಿಸಿದಳು.
16ಸಂಜೆಯಾಯಿತು, ದೆವ್ವ ಹಿಡಿದ ಅನೇಕರನ್ನು ಯೇಸುವಿನ ಬಳಿಗೆ ಕರೆತರಲಾಯಿತು. ಯೇಸು ತಮ್ಮ ಒಂದು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದರು. ಮಾತ್ರವಲ್ಲ, ರೋಗಪೀಡಿತರೆಲ್ಲರನ್ನೂ ಗುಣಪಡಿಸಿದರು. 17ಹೀಗೆ,
“ನಮ್ಮ ದುರ್ಬಲತೆಗಳನ್ನು ವಹಿಸಿಕೊಂಡನು;
ನಮ್ಮ ರೋಗರುಜಿನಗಳನ್ನು ಆತನೇ ಪರಿಹರಿಸಿದನು,”
ಎಂಬ ಯೆಶಾಯನ ಪ್ರವಾದನೆ ಈಡೇರಿತು.
ಶಿಷ್ಯರಲ್ಲಿರಬೇಕಾದ ವೈರಾಗ್ಯ
(ಲೂಕ. 9:57-62)
18ದೊಡ್ಡ ಜನಸಮೂಹ ತಮ್ಮ ಸುತ್ತಲೂ ನಿಂತಿರುವುದನ್ನು ಯೇಸುಸ್ವಾಮಿ ನೋಡಿದರು. ಸರೋವರದ ಆಚೆಯ ದಡಕ್ಕೆ ಹೋಗಲು ತಮ್ಮ ಶಿಷ್ಯರಿಗೆ ಅಪ್ಪಣೆಮಾಡಿದರು. 19ಆಗ ಒಬ್ಬ ಧರ್ಮಶಾಸ್ತ್ರಿ ಬಂದು, “ಗುರುವೇ, ನೀವು ಎಲ್ಲಿಗೆಹೋದರೂ ನಿಮ್ಮನ್ನು ಹಿಂಬಾಲಿಸಿ ಬರುತ್ತೇನೆ,” ಎಂದನು. 20ಅದಕ್ಕೆ ಯೇಸು, “ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಟ್ಟು ಮಲಗಲೂ ಸ್ಥಳ ಇಲ್ಲ,” ಎಂದರು. 21ಶಿಷ್ಯರಲ್ಲಿ ಮತ್ತೊಬ್ಬನು ಮುಂದೆ ಬಂದು, “ಸ್ವಾಮೀ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸಲು ಸಮಯ ಕೊಡಿ,” ಎಂದು ಕೇಳಿದನು. 22ಅವನಿಗೆ ಯೇಸು, “ಸತ್ತವರೇ ತಮ್ಮ ಸತ್ತವರನ್ನು ಸಮಾಧಿ ಮಾಡಿಕೊಳ್ಳಲಿ; ನೀನು ನನ್ನನ್ನು ಹಿಂಬಾಲಿಸು,” ಎಂದರು.
ಯೇಸು ಕಡಲಿಗೂ ಒಡೆಯ
(ಮಾರ್ಕ. 4:35-41; ಲೂಕ. 8:22-25)
23ಆಮೇಲೆ ಯೇಸುಸ್ವಾಮಿ ದೋಣಿಯನ್ನು ಹತ್ತಿದರು. ಶಿಷ್ಯರೂ ಹತ್ತಿ ಅವರ ಸಂಗಡಹೋದರು. 24ಇದ್ದಕ್ಕಿದ್ದ ಹಾಗೆ ಸರೋವರದಲ್ಲಿ ರಭಸವಾದ ಬಿರುಗಾಳಿ ಎದ್ದಿತು. ದೋಣಿ ಅಲೆಗಳಿಂದ ಮುಳುಗಿಹೋಗುವುದರಲ್ಲಿತ್ತು. ಯೇಸುವಾದರೋ ನಿದ್ರಾವಶರಾಗಿದ್ದರು. 25ಶಿಷ್ಯರು ಹತ್ತಿರಕ್ಕೆ ಬಂದು ಅವರನ್ನು ಎಬ್ಬಿಸಿ, “ಸ್ವಾಮೀ, ಕಾಪಾಡಿ. ನಾವು ನೀರುಪಾಲಾಗುತ್ತಿದ್ದೇವೆ,” ಎಂದರು. 26ಅದಕ್ಕೆ ಯೇಸು, “ಅಲ್ಪವಿಶ್ವಾಸಿಗಳೇ, ನಿಮಗೇಕೆ ಇಷ್ಟು ಭಯ?” ಎಂದರು. ಅನಂತರ ಎದ್ದು ನಿಂತು ಸುಂಟರಗಾಳಿಯನ್ನೂ ಸರೋವರವನ್ನೂ ಗದರಿಸಿದರು. 27ಆಗ ವಾತಾವರಣ ಪ್ರಶಾಂತವಾಯಿತು. ಶಿಷ್ಯರು ನಿಬ್ಬೆರಗಾದರು. “ಗಾಳಿಯೂ ಸರೋವರವೂ ಇವರು ಹೇಳಿದ್ದಂತೆ ಕೇಳಬೇಕಾದರೆ ಇವರೆಂತಹ ವ್ಯಕ್ತಿಯಾಗಿರಬೇಕು!” ಎಂದುಕೊಂಡರು.
ದೆವ್ವ ಹಿಡಿದಿದ್ದ ಮತ್ತಿಬ್ಬರಿಗೆ ವಿಮೋಚನೆ
(ಮಾರ್ಕ. 5:1-20; ಲೂಕ. 8:26-39)
28ಯೇಸುಸ್ವಾಮಿ ಗಲಿಲೇಯ ಸರೋವರವನ್ನು ದಾಟಿ, ಆಚೆಯ ಕಡೆಯಿದ್ದ ಗದರೇನ ಎಂಬ ಪ್ರಾಂತ್ಯಕ್ಕೆ ಬಂದರು. ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಹೊರಬಂದು ಅವರಿಗೆ ಎದುರಾದರು. ಅವರಿಬ್ಬರೂ ಮಹಾಕ್ರೂರಿಗಳು. ಈ ಕಾರಣ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ. 29ಅವರು ಯೇಸುವನ್ನು ನೋಡಿದೊಡನೆಯೇ, “ಓ ದೇವರ ಪುತ್ರನೇ, ನಿಮಗೇಕೆ ನಮ್ಮ ಗೊಡವೆ? ನಿಯಮಿತಕಾಲಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಬಂದಿರಾ?” ಎಂದು ಕೂಗಿಕೊಂಡರು.
30ಹಂದಿಗಳ ದೊಡ್ಡ ಹಿಂಡೊಂದು ಅಲ್ಲಿಂದ ಸ್ವಲ್ಪದೂರದಲ್ಲೇ ಮೇಯುತ್ತಿತ್ತು. 31“ನೀವು ನಮ್ಮನ್ನು ಹೊರದೂಡಿದ್ದೇ ಆದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ,” ಎಂದು ಆ ದೆವ್ವಗಳು ಯೇಸುವನ್ನು ಬೇಡಿಕೊಂಡವು. 32ಯೇಸು, “ಹೋಗಿ” ಎಂದು ಅಪ್ಪಣೆಯಿತ್ತರು. ದೆವ್ವಗಳು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆ ಕ್ಷಣವೇ ಆ ಹಿಂಡೆಲ್ಲಾ ಬೆಟ್ಟದ ಕಡಿದಾದ ಬದಿಯಿಂದ ಧಾವಿಸಿ, ಸರೋವರಕ್ಕೆ ಬಿದ್ದು, ನೀರುಪಾಲಾಗಿಹೋಯಿತು. 33ಹಂದಿ ಮೇಯಿಸುತ್ತಿದ್ದವರು ಅಲ್ಲಿಂದ ಪಲಾಯನಮಾಡಿ ಊರಿಗೆ ಓಡಿಹೋಗಿ ನಡೆದದ್ದೆಲ್ಲವನ್ನೂ ಮತ್ತು ದೆವ್ವ ಮೆಟ್ಟಿದ್ದವರಿಗೆ ಸಂಭವಿಸಿದ್ದನ್ನೂ ವರದಿಮಾಡಿದರು. 34ಆಗ ಊರಿಗೆ ಊರೇ ಯೇಸುವನ್ನು ನೋಡಲು ಬಂದಿತು. ಅವರನ್ನು ಕಂಡು ತಮ್ಮ ಆಸುಪಾಸನ್ನು ಬಿಟ್ಟುಹೋಗಬೇಕೆಂದು ಮನವಿಮಾಡಿಕೊಂಡಿತು.

Highlight

Share

Copy

None

Want to have your highlights saved across all your devices? Sign up or sign in