YouVersion Logo
Search Icon

ಮತ್ತಾಯ 3

3
ಸ್ನಾನಿಕ ಯೊವಾನ್ನನ ಬೋಧನೆ
(ಮಾರ್ಕ. 1:1-8; ಲೂಕ. 3:1-18; ಯೊವಾ. 1:19-28)
1ಆ ಕಾಲದಲ್ಲಿ ಸ್ನಾನಿಕ ಯೊವಾನ್ನನು ಜುದೇಯ ಪ್ರಾಂತ್ಯದ ಬೆಂಗಾಡಿಗೆ ಹೋಗಿ ಬೋಧನೆಮಾಡಲು ಪ್ರಾರಂಭಿಸಿದನು. 2“ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿರಿ, ದೇವರಿಗೆ ಅಭಿಮುಖರಾಗಿರಿ, ಸ್ವರ್ಗಸಾಮ್ರಾಜ್ಯವು ಸಮೀಪಿಸಿತು,” ಎಂದು ಸಾರಿ ಹೇಳುತ್ತಾ ಬಂದನು.
3“ಸರ್ವೇಶ್ವರನಿಗೆ ಮಾರ್ಗವನ್ನು ನೇರಪಡಿಸಿರಿ,
ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ,
ಎಂದು ಬೆಂಗಾಡಿನಲ್ಲೊಬ್ಬನು ಘೋಷಿಸುತ್ತಿದ್ದಾನೆ,”
ಎಂದಾಗ ಪ್ರವಾದಿ ಯೆಶಾಯನು ಸೂಚಿಸಿದ ವ್ಯಕ್ತಿ ಈತನೇ. 4ಒಂಟೆ ತುಪ್ಪಟದ ಹೊದಿಕೆ, ಸೊಂಟದಲ್ಲಿ ತೊಗಲಿನ ನಡುಕಟ್ಟು - ಇವೇ ಈತನ ಉಡುಗೆ. ಮಿಡತೆ ಮತ್ತು ಕಾಡುಜೇನು ಇವೇ ಈತನ ಆಹಾರ. 5ಜನರು ಜೆರುಸಲೇಮಿನಿಂದಲೂ ಇಡೀ ಜುದೇಯ ಪ್ರಾಂತ್ಯದಿಂದಲೂ ಜೋರ್ಡನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಿಂದಲೂ ಈತನ ಬಳಿಗೆ ಬರುತ್ತಿದ್ದರು; 6ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಳ್ಳುತ್ತಾ ಜೋರ್ಡನ್ ನದಿಯಲ್ಲಿ ಈತನಿಂದ ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು.
7ಫರಿಸಾಯರಲ್ಲೂ ಸದ್ದುಕಾಯರಲ್ಲೂ ಅನೇಕರು ತನ್ನಿಂದ ಸ್ನಾನದೀಕ್ಷೆ ಪಡೆಯಲು ಬರುವುದನ್ನು ಯೊವಾನ್ನನು ನೋಡಿದನು. ಅವರನ್ನು ಉದ್ದೇಶಿಸಿ, “ಎಲೈ ವಿಷಸರ್ಪಗಳ ಪೀಳಿಗೆಯೇ, ಬರಲಿರುವ ದೈವಕೋಪದಿಂದ ತಪ್ಪಿಸಿಕೊಳ್ಳಬಹುದೆಂದು ನಿಮಗೆ ಎಚ್ಚರಿಕೆ ಕೊಟ್ಟವರಾರು? 8ನೀವು ಪಾಪಕ್ಕೆ ವಿಮುಖರಾಗಿದ್ದೀರಿ ಎಂಬುದನ್ನು ಸತ್ಕಾರ್ಯಗಳಿಂದ ವ್ಯಕ್ತಪಡಿಸಿರಿ. 9‘ಅಬ್ರಹಾಮನೇ ನಮ್ಮ ಪಿತಾಮಹ’ ಎಂದು ನಿಮ್ಮಲ್ಲೇ ಕೊಚ್ಚಿಕೊಳ್ಳಬೇಡಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಸಂತಾನ ಪ್ರಾಪ್ತವಾಗುವಂತೆ ಮಾಡಬಲ್ಲರೆಂದು ನಾನು ನಿಮಗೆ ಹೇಳುತ್ತೇನೆ. 10ಈಗಾಗಲೇ ಮರದ ಬುಡಕ್ಕೆ ಕೊಡಲಿ ಬಿದ್ದಿದೆ; ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಗೆ ಹಾಕಲಾಗುವುದು. 11ಹೃದಯ ಪರಿವರ್ತನೆಯ ಗುರುತಾಗಿ ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದೇನೆ. ಆದರೆ ನನ್ನ ನಂತರ ಬರುವ ಒಬ್ಬರು ನಿಮಗೆ ಪವಿತ್ರಾತ್ಮ ಹಾಗೂ ಅಗ್ನಿಯಿಂದ ದೀಕ್ಷಾಸ್ನಾನ#3:11 ಕ್ಲಿಷ್ಟಪದಗಳ ಅರ್ಥ ನೋಡಿ. ಕೊಡುವರು. ಅವರು ನನಗಿಂತಲೂ ಶಕ್ತರು. ಅವರ ಪಾದರಕ್ಷೆಗಳನ್ನು ಹೊರಲು ಸಹ ನಾನು ಅರ್ಹನಲ್ಲ. 12ಅವರ ಕೈಯಲ್ಲಿ ಮೊರವಿದೆ; ತಮ್ಮ ಕಣದಲ್ಲಿಯ ರಾಶಿಯನ್ನು ತೂರುವರು. ಗಟ್ಟಿಕಾಳನ್ನು ಮಾತ್ರ ಕಣಜದಲ್ಲಿ ತುಂಬುವರು; ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಎಚ್ಚರಿಸಿದನು.
ಸ್ವಾಮಿಗೂ ಸ್ನಾನದೀಕ್ಷೆಯೇ?
(ಮಾರ್ಕ. 1:9-11; 3:21-22)
13ಯೊವಾನ್ನನಿಂದ ಸ್ನಾನದೀಕ್ಷೆ ಪಡೆಯಲು ಯೇಸುಸ್ವಾಮಿ ಗಲಿಲೇಯದಿಂದ ಹೊರಟು ಜೋರ್ಡನ್ ನದಿಯ ಬಳಿಗೆ ಬಂದರು. ಯೊವಾನ್ನನು ಅವರನ್ನು ತಡೆಯಲೆತ್ನಿಸಿದನು. 14“ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ ನೀವು ನನ್ನ ಬಳಿಗೆ ಬರುವುದೇ?’ಎಂದನು. 15ಆದರೆ ಯೇಸು, “ಸದ್ಯಕ್ಕೆ ತಡೆಯದಿರು; ನಾವು ದೈವನಿಯಮಕ್ಕೆ ತಲೆಬಾಗುವುದು ಒಳಿತು,” ಎಂದರು. ಯೊವಾನ್ನನು ಅದಕ್ಕೆ ಸಮ್ಮತಿಸಿದನು.
16ಯೇಸು ದೀಕ್ಷಾಸ್ನಾನ ಪಡೆದು ನೀರಿನಿಂದ ಮೇಲಕ್ಕೆ ಬಂದದ್ದೇ ಆಕಾಶವು ಫಕ್ಕನೆ ತೆರೆಯಿತು. ದೇವರಾತ್ಮ ಪಾರಿವಾಳದ ರೂಪದಲ್ಲಿ ತಮ್ಮ ಮೇಲೆ ಇಳಿದುಬಂದು ನೆಲಸುವುದನ್ನು ಕಂಡರು. 17ಆಗ ಆಕಾಶದಿಂದ, “ಇವನೇ ನನ್ನ ಪುತ್ರ; ನನಗೆ ಪರಮಪ್ರಿಯನು, ನನ್ನ ಅಪಾರ ಮೆಚ್ಚುಗೆಗೆ ಪಾತ್ರನು,” ಎಂಬ ದೈವವಾಣಿ ಕೇಳಿಸಿತು.

Highlight

Share

Copy

None

Want to have your highlights saved across all your devices? Sign up or sign in