YouVersion Logo
Search Icon

ಲೂಕ. 22

22
ಯೇಸುವಿನ ಕೊಲೆಗೆ ಒಳಸಂಚು
(ಮತ್ತಾ. 26:1-5; ಮಾರ್ಕ. 14:1-2; ಯೊವಾ. 11:45-53)
1ಪಾಸ್ಕಮಹೋತ್ಸವವು ಸಮೀಪಿಸುತ್ತಿತ್ತು. ಅದು ಹುಳಿರಹಿತ ರೊಟ್ಟಿಯನ್ನು ಭುಜಿಸುವ ಹಬ್ಬ. 2ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಯೇಸುಸ್ವಾಮಿಯನ್ನು ಕೊಲ್ಲಿಸಲು ಆಲೋಚನೆ ಮಾಡುತ್ತಿದ್ದರು; ಜನರ ಭಯ ಅವರಿಗೆ ಇದ್ದುದರಿಂದ ಅದಕ್ಕೆ ಗುಟ್ಟಾದ ಮಾರ್ಗವನ್ನು ಹುಡುಕುತ್ತಿದ್ದರು.
3ಅಷ್ಟರಲ್ಲಿ ಯೇಸುವಿನ ಹನ್ನೆರಡುಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತಿನ ಯೂದನು ಸೈತಾನನಿಗೆ ವಶನಾದನು. 4ಆ ಯೂದನು ಮುಖ್ಯಯಾಜಕರ ಬಳಿಗೆ ಹಾಗೂ ಮಹಾದೇವಾಲಯದ ಪಹರೆಯ ದಳಪತಿಗಳ ಬಳಿಗೆ ಹೋಗಿ, ಯೇಸುವನ್ನು ಅವರಿಗೆ ಹಿಡಿದುಕೊಡುವ ವಿಧಾನವನ್ನು ಕುರಿತು ಸಮಾಲೋಚಿಸಿದನು. 5ಇದರಿಂದ ಅವರಿಗೆ ಅತ್ಯಾನಂದವಾಯಿತು. ಅವರು ಹಣಕೊಡುವುದಾಗಿ ವಾಗ್ದಾನ ಮಾಡಿದರು. 6ಅವನೂ ಸಮ್ಮತಿಸಿ, ಜನಜಂಗುಳಿ ಇಲ್ಲದ ಸಂದರ್ಭದಲ್ಲಿ ಯೇಸುವನ್ನು ಹಿಡಿದು ಒಪ್ಪಿಸಲು ಸಮಯ ಕಾಯುತ್ತಾ ಇದ್ದನು.
ಹಬ್ಬದೂಟಕ್ಕೆ ಸಿದ್ಧತೆ
(ಮತ್ತಾ. 26:17-25; ಮಾರ್ಕ. 14:12-21; ಯೊವಾ. 13:21-30)
7ಹುಳಿರಹಿತ ರೊಟ್ಟಿಯ ಹಬ್ಬ ಆರಂಭವಾಯಿತು. ಪಾಸ್ಕ ಕುರಿಮರಿಯನ್ನು ಕೊಯ್ಯಬೇಕಾದ ದಿನವು ಬಂದಿತು. 8ಆದುದರಿಂದ ಯೇಸುಸ್ವಾಮಿ ತಮ್ಮ ಶಿಷ್ಯರಾದ ಪೇತ್ರ ಹಾಗೂ ಯೊವಾನ್ನನನ್ನು ಕರೆದು, “ಹೋಗಿ, ಪಾಸ್ಕಭೋಜನ ಸಿದ್ಧಮಾಡಿರಿ,” ಎಂದರು. 9“ಎಲ್ಲಿ ಸಿದ್ಧಪಡಿಸಬೇಕು?” ಎಂದು ಅವರು ಕೇಳಿದಾಗ, 10“ನೀವು ಪಟ್ಟಣವನ್ನು ಪ್ರವೇಶಿಸುವಾಗ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬನನ್ನು ಎದುರುಗೊಳ್ಳುವಿರಿ. ಅವನನ್ನು ಹಿಂಬಾಲಿಸಿ, ಅವನು ಹೋಗುವ ಮನೆಗೆ ಹೋಗಿರಿ. 11ಆ ಮನೆಯ ಯಜಮಾನನಿಗೆ, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕಭೋಜನ ಮಾಡಲು ಕೊಠಡಿ ಎಲ್ಲಿ, ಎಂದು ನಿಮ್ಮನ್ನು ವಿಚಾರಿಸಲು ನಮ್ಮ ಗುರು ಹೇಳಿದ್ದಾರೆ,’ ಎನ್ನಿ. 12ಅವನು ಮೇಲ್ಮಾಳಿಗೆಯಲ್ಲಿ ವಿಶಾಲವಾದ ಹಾಗೂ ಸುಸಜ್ಜಿತವಾದ ಕೊಠಡಿಯೊಂದನ್ನು ತೋರಿಸುವನು. ಅಲ್ಲಿ ಸಿದ್ಧಮಾಡಿ,” ಎಂದರು. 13ಅಂತೆಯೇ ಶಿಷ್ಯರಿಬ್ಬರು ಹೋಗಿ ಯೇಸು ತಮಗೆ ಹೇಳಿದ ಪ್ರಕಾರ ಎಲ್ಲವೂ ವ್ಯವಸ್ಥಿತವಾಗಿರುವುದನ್ನು ಕಂಡು ಪಾಸ್ಕಭೋಜನವನ್ನು ತಯಾರಿಸಿದರು.
ಪ್ರಭುವಿನ ಭೋಜನ
(ಮತ್ತಾ. 26:26-30; ಮಾರ್ಕ. 14:22-26; ೧ ಕೊರಿಂಥ. 11:23-25)
14ನಿಶ್ಚಿತ ಸಮಯ ಬಂದಾಗ ಯೇಸುಸ್ವಾಮಿ ಶಿಷ್ಯರ ಸಮೇತ ಊಟಕ್ಕೆ ಕುಳಿತರು. 15ಆಗ ಅವರು ಶಿಷ್ಯರಿಗೆ, “ನಾನು ಯಾತನೆಯನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಡನೆ ಈ ಪಾಸ್ಕಭೋಜನವನ್ನು ಮಾಡಲು ಬಹಳ ಅಪೇಕ್ಷೆಯಿಂದ ಎದುರುನೋಡುತ್ತಿದ್ದೆನು. 16ದೇವರ ಸಾಮ್ರಾಜ್ಯದಲ್ಲಿ ಇದು ಪೂರ್ಣ ಅರ್ಥವನ್ನು ಪಡೆಯುವ ತನಕ ನಾನಿದನ್ನು ಇನ್ನು ಭುಜಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. 17ಅನಂತರ ಯೇಸು ಪಾನಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, “ಇದನ್ನು ತೆಗೆದುಕೊಂಡು ನಿಮ್ಮಲ್ಲಿ ಹಂಚಿಕೊಳ್ಳಿರಿ; 18ದೇವರ ಸಾಮ್ರಾಜ್ಯವು ಬರುವ ತನಕ ಇನ್ನು ನಾನು ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು. 19ಬಳಿಕ ರೊಟ್ಟಿಯನ್ನು ತೆಗೆದುಕೊಂಡು, ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದು ನಿಮಗಾಗಿ ಒಪ್ಪಿಸಲಾಗುವ ನನ್ನ ಶರೀರ, ನನ್ನ ಸ್ಮರಣೆಗಾಗಿ ಇದನ್ನು ಮಾಡಿರಿ,” ಎಂದರು. 20ಅಂತೆಯೇ, ಊಟವಾದ ಮೇಲೆ ಪಾನಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗಾಗಿ ಸುರಿಸಲಾಗುವ ನನ್ನ ರಕ್ತದಿಂದ ಮುದ್ರಿತವಾದ ಹೊಸ ಒಡಂಬಡಿಕೆ.”
21“ಆದರೆ ಇಗೋ, ನನಗೆ ದ್ರೋಹ ಬಗೆಯುವವನು ನನ್ನೊಂದಿಗೆ ಇದೇ ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದಾನೆ. 22ನರಪುತ್ರನೇನೋ ದೈವೇಚ್ಛೆಯ ಪ್ರಕಾರ ಹೊರಟು ಹೋಗುತ್ತಾನೆ; ಆದರೆ ಆತನಿಗೆ ದ್ರೋಹಬಗೆಯುವವನ ದುರ್ಗತಿಯನ್ನು ಏನೆಂದು ಹೇಳಲಿ!” ಎಂದರು. 23ಇದನ್ನು ಕೇಳಿದ ಶಿಷ್ಯರು ಇಂಥ ದುಷ್ಕೃತ್ಯಮಾಡುವವನು ತಮ್ಮಲ್ಲಿ ಯಾರಿರಬಹುದೆಂದು ಒಬ್ಬರನ್ನೊಬ್ಬರು ವಿಚಾರಿಸತೊಡಗಿದರು.
ನಾಯಕನು ಸೇವಕನಾಗಲಿ
24ತಮ್ಮಲ್ಲಿ ಅತಿ ಶ್ರೇಷ್ಠನು ಯಾರು ಎಂಬ ವಾದವಿವಾದವು ಶಿಷ್ಯರಲ್ಲಿ ಎದ್ದಿತು. 25ಆಗ ಯೇಸುಸ್ವಾಮಿ, “ಲೌಕಿಕ ರಾಜರು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆ; ಅಧಿಕಾರ ನಡೆಸುವವರು ಧರ್ಮಿಷ್ಠರೆನಿಸಿಕೊಳ್ಳುತ್ತಾರೆ. 26ಆದರೆ ನೀವು ಹಾಗಾಗಬಾರದು; ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು. 27ಈ ಇಬ್ಬರಲ್ಲಿ ದೊಡ್ಡವನು ಯಾರು - ಊಟ ಮಾಡುವವನೋ? ಊಟ ಬಡಿಸುವವನೋ? ಖಂಡಿತವಾಗಿ ಊಟ ಮಾಡುವವನು. ಆದರೂ ಊಟ ಬಡಿಸುವ ಊಳಿಗದವನಂತೆ ನಾನು ನಿಮ್ಮ ನಡುವೆ ಇದ್ದೇನೆ.
ಆಪ್ತಶಿಷ್ಯರಿಗೆ ಸೂಕ್ತ ಸಂಭಾವನೆ
28“ನನ್ನ ಶೋಧನೆ-ವೇದನೆಗಳಲ್ಲಿ ನನ್ನನ್ನು ಬಿಟ್ಟಗಲದೆ ಇದ್ದವರು ನೀವು. 29ನನ್ನ ಪಿತನು ನನಗೆ ರಾಜ್ಯಾಧಿಕಾರವನ್ನು ವಹಿಸಿರುವಂತೆ ನಾನೂ ನಿಮಗೆ ವಹಿಸುತ್ತೇನೆ. 30ನನ್ನ ಸಾಮ್ರಾಜ್ಯದಲ್ಲಿ ನನ್ನ ಸಂಗಡ ಊಟ ಮಾಡುವಿರಿ. ಪಾನ ಮಾಡುವಿರಿ, ಮಾತ್ರವಲ್ಲ ಇಸ್ರಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯಾಧಿಪತಿಗಳಾಗಿ ಸಿಂಹಾಸನಗಳ ಮೇಲೆ ಆಸೀನರಾಗುವಿರಿ.
ಪೇತ್ರನಿಗಾಗಿ ಪ್ರಾರ್ಥನೆ
(ಮತ್ತಾ. 26:31-35; ಮಾರ್ಕ. 14:27-31; ಯೊವಾ. 13:36-38)
31“ಸಿಮೋನನೇ, ಸಿಮೋನನೇ, ಕೇಳು: ಗೋದಿಯನ್ನು ತೂರುವಂತೆ ಸೈತಾನನು ನಿಮ್ಮೆಲ್ಲರನ್ನೂ ಶೋಧಿಸಲು ಅಪ್ಪಣೆ ಕೇಳಿಕೊಂಡಿದ್ದಾನೆ. 32ಆದರೆ, ನಾನು ನಿನ್ನ ವಿಶ್ವಾಸವು ಕುಂದದಂತೆ ನಿನಗಾಗಿ ಪ್ರಾರ್ಥನೆ ಮಾಡಿದ್ದೇನೆ. ನೀನು ಪರಿವರ್ತನೆ ಹೊಂದಿದ ನಂತರ ನಿನ್ನ ಸಹೋದರರನ್ನು ದೃಢಪಡಿಸು,” ಎಂದರು.
33ಅದಕ್ಕೆ ಪೇತ್ರನು, “ಗುರುದೇವಾ, ನಿಮ್ಮ ಸಂಗಡ ಸೆರೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಿದ್ದೇನೆ,” ಎಂದನು. 34ಆಗ ಯೇಸು, “ಪೇತ್ರನೇ, ಇಂದು ಕೋಳಿಕೂಗುವ ಮೊದಲೇ ನನ್ನನ್ನು ಅರಿಯೆನೆಂದು ನೀನು ಮೂರು ಬಾರಿ ಬೊಂಕುವೆ, ಇದು ಖಂಡಿತ,” ಎಂದರು.
ಪಾತಕರಲ್ಲಿ ಒಬ್ಬನಂತೆ ಪರಿಗಣಿತರಾದ ಯೇಸು
35ಬಳಿಕ ಯೇಸುಸ್ವಾಮಿ, “ನಾನು ನಿಮ್ಮನ್ನು ಬುತ್ತಿ, ಜೋಳಿಗೆ, ಜೋಡು ಒಂದೂ ಇಲ್ಲದೆ ಕಳಿಸಿದಾಗ ನಿಮಗೇನಾದರೂ ಕೊರತೆ ಆಯಿತೇ?” ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಅವರು, “ಇಲ್ಲ,” ಎಂದು ಉತ್ತರಕೊಟ್ಟರು. 36“ಆದರೆ ಈಗ ಬುತ್ತಿಯಿರುವವನು ಅದನ್ನು ತೆಗೆದುಕೊಳ್ಳಲಿ; ಜೋಳಿಗೆಯಿರುವವನು ಹಾಗೆಯೇ ಮಾಡಲಿ; ಮತ್ತು ಕತ್ತಿಯಿಲ್ಲದವನು ತನ್ನ ಹೊದಿಕೆಯನ್ನು ಮಾರಿ ಒಂದನ್ನು ಕೊಂಡುಕೊಳ್ಳಲಿ. 37ಏಕೆಂದರೆ, ‘ಪಾತಕರಲ್ಲಿ ಒಬ್ಬನಂತೆ ಪರಿಗಣಿತನಾದನು,’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯ ನನ್ನಲ್ಲಿ ನೆರವೇರಬೇಕಾದುದು ಅಗತ್ಯ; ನನಗೆ ಸಂಬಂಧಪಟ್ಟಿದ್ದೆಲ್ಲಾ ಸಮಾಪ್ತಿಗೊಳ್ಳಲಿದೆ,” ಎಂದರು. 38“ಗುರುವೇ, ಇಗೋ ಇಲ್ಲಿ ಎರಡು ಕತ್ತಿಗಳಿವೆ,” ಎಂದು ಶಿಷ್ಯರು ಹೇಳಲು ಯೇಸು, “ಅಷ್ಟು ಸಾಕು,” ಎಂದರು.
ಓಲಿವ್ ತೋಪಿನಲ್ಲಿ ಒಳಯಾತನೆ
(ಮತ್ತಾ. 26:36-46; ಮಾರ್ಕ. 14:32-42)
39ಯೇಸುಸ್ವಾಮಿ ಅಲ್ಲಿಂದ ಹೊರಟು ವಾಡಿಕೆಯ ಪ್ರಕಾರ ಓಲಿವ್ ತೋಪಿನ ಗುಡ್ಡಕ್ಕೆ ಹೋದರು. ಶಿಷ್ಯರು ಅವರ ಹಿಂದೆ ಹೋದರು. 40ಕ್ಲುಪ್ತಸ್ಥಳಕ್ಕೆ ಬಂದಾಗ ಯೇಸು ಅವರಿಗೆ, “ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆಮಾಡಿರಿ,” ಎಂದು ಹೇಳಿ, 41ಒಂದು ಕಲ್ಲೆಸೆತದಷ್ಟು ದೂರ ಹೋಗಿ, ಮೊಣಕಾಲೂರಿ ಪ್ರಾರ್ಥನೆಮಾಡುತ್ತಾ, 42“ಓ ಪಿತನೇ, ನಿಮಗೆ ಇಷ್ಟವಾದರೆ ಈ ಕಷ್ಟದ ಕೊಡವನ್ನು ನನ್ನಿಂದ ತೊಲಗಿಸಿರಿ. ಆದರೂ ನನ್ನ ಚಿತ್ತವಲ್ಲ, ನಿಮ್ಮ ಚಿತ್ತವೇ ನೆರವೇರಲಿ,” ಎಂದರು. 43ಆಗ ಸ್ವರ್ಗದಿಂದ ದೂತನೊಬ್ಬನು ಯೇಸುವಿಗೆ ಪ್ರತ್ಯಕ್ಷವಾಗಿ ಅವರನ್ನು ಸಶಕ್ತರನ್ನಾಗಿ ಮಾಡಿದನು. 44ಕಡುಯಾತನೆಯಲ್ಲಿದ್ದ ಅವರು ಇನ್ನೂ ಶ್ರದ್ಧೆಯಿಂದ ಪ್ರಾರ್ಥಿಸಿದರು. ಅವರ ಬೆವರು ರಕ್ತದ ಹನಿಯಂತೆ ತೊಟ್ಟುತೊಟ್ಟಾಗಿ ನೆಲದ ಮೇಲೆ ಬೀಳುತ್ತಿತ್ತು.
45ಯೇಸು ಪ್ರಾರ್ಥನೆಯಿಂದ ಎದ್ದು ಶಿಷ್ಯರ ಬಳಿಗೆ ಬಂದರು. ಶಿಷ್ಯರಾದರೋ ದುಃಖದಿಂದ ಬಳಲಿ ನಿದ್ರಿಸುತ್ತಿದ್ದರು. 46ಇದನ್ನು ಕಂಡು, “ನೀವು ನಿದ್ರಿಸುತ್ತೀರೇನು? ಎದ್ದು, ನೀವು ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆಮಾಡಿ,” ಎಂದರು.
ಯೇಸುವಿನ ಬಂಧನ
(ಮತ್ತಾ. 26:47-56; ಮಾರ್ಕ. 14:43-50; ಯೊವಾ. 18:3-11)
47ಯೇಸುಸ್ವಾಮಿ ಇನ್ನೂ ಮಾತನಾಡುತ್ತಿದ್ದ ಹಾಗೆ ಜನರ ಗುಂಪೊಂದು ಕಾಣಿಸಿಕೊಂಡಿತು. ಹನ್ನೆರಡು ಮಂದಿಯಲ್ಲಿ ಒಬ್ಬನಾದ ಯೂದನು ಅವರಿಗೆ ಮುಂದಾಳಾಗಿ ಬಂದಿದ್ದನು. ಅವನು ಯೇಸುವಿಗೆ ಮುದ್ದಿಡಲು ಹತ್ತಿರ ಬಂದಾಗ, 48ಯೇಸು, “ಯೂದಾ, ಮುದ್ದಿಟ್ಟು ನರಪುತ್ರನನ್ನು ತೋರಿಸಿಕೊಡುವೆಯಾ?” ಎಂದರು. 49ಸುತ್ತಲಿದ್ದ ಶಿಷ್ಯರು ಮುಂದೇನಾಗುವುದೆಂದು ಅರಿತುಕೊಂಡು, “ಗುರುವೇ, ಕತ್ತಿಯಿಂದ ಕಡಿಯೋಣವೇ,” ಎಂದರು. 50ತಕ್ಷಣವೇ ಅವರಲ್ಲಿ ಒಬ್ಬನು ಪ್ರಧಾನಯಾಜಕನ ಆಳನ್ನು ಹೊಡೆದು ಅವನ ಬಲಕಿವಿಯನ್ನು ಕತ್ತರಿಸಿಬಿಟ್ಟನು. 51ಆಗ ಯೇಸು, “ಸಾಕು ನಿಲ್ಲಿಸು,” ಎಂದು ಹೇಳಿ ಅವನ ಕಿವಿಯನ್ನು ಮುಟ್ಟಿ ಗುಣಪಡಿಸಿದರು.
52ಅನಂತರ ಯೇಸು ತಮ್ಮನ್ನು ಹಿಡಿಯುವುದಕ್ಕೆ ಬಂದಿದ್ದ ಮುಖ್ಯಯಾಜಕರನ್ನೂ ದೇವಾಲಯದ ಪಹರೆಯ ದಳಪತಿಗಳನ್ನೂ ಪ್ರಮುಖರನ್ನೂ ನೋಡಿ, “ದರೋಡೆಗಾರನನ್ನು ಹಿಡಿಯುವುದಕ್ಕೆ ಬಂದಂತೆ ಖಡ್ಗಗಳನ್ನು ಮತ್ತು ಲಾಠಿಗಳನ್ನು ತೆಗೆದುಕೊಂಡು ಬಂದಿರುವಿರೋ? 53ನಾನು ಪ್ರತಿದಿನವೂ ಮಹಾದೇವಾಲಯದಲ್ಲಿ ನಿಮ್ಮ ನಡುವೆಯೇ ಇದ್ದೆ. ಆಗ ನೀವು ನನ್ನ ಮೇಲೆ ಕೈಮಾಡಲಿಲ್ಲ; ಆದರೆ ಇದು ನಿಮ್ಮ ಕಾಲ; ಅಂಧಕಾರ ದೊರೆತನ ಮಾಡುವ ಕರಾಳಕಾಲ,” ಎಂದರು.
ಅವನಾರೋ ನಾನರಿಯೆ
(ಮತ್ತಾ. 26:57-58,69-75; ಮಾರ್ಕ. 14:53-54,60-72; ಯೊವಾ. 18:12-18,25-27)
54ಅನಂತರ ಅವರು ಯೇಸುಸ್ವಾಮಿಯನ್ನು ಬಂಧಿಸಿ ಪ್ರಧಾನಯಾಜಕನ ಭವನಕ್ಕೆ ಕರೆದುಕೊಂಡು ಹೋದರು. ದೂರದಿಂದ ಪೇತ್ರನು ಹಿಂದೆಹಿಂದೆಯೇ ಹೋದನು. 55ಭವನದ ಹೊರಾಂಗಣದ ನಡುವೆ ಬೆಂಕಿಮಾಡಿ ಅದರ ಸುತ್ತಲೂ ಅವರೆಲ್ಲರು ಕುಳಿತುಕೊಂಡಾಗ, ಪೇತ್ರನು ಅವರ ಸಂಗಡ ಸೇರಿ ಕುಳಿತುಕೊಂಡನು. 56ಬೆಂಕಿಯ ಬೆಳಕಿನಲ್ಲಿ ಕುಳಿತಿದ್ದ ಆತನನ್ನು ದಾಸಿಯೊಬ್ಬಳು ದೃಷ್ಟಿಸಿ ನೋಡಿ, “ಇವನು ಕೂಡ ಯೇಸುವಿನ ಸಂಗಡ ಇದ್ದವನು,” ಎಂದಳು. 57ಅದಕ್ಕೆ ಆತ, “ಅವನಾರೋ ನಾನರಿಯೆನಮ್ಮಾ,” ಎಂದು ನಿರಾಕರಿಸಿದನು. 58ಸ್ವಲ್ಪಹೊತ್ತಾದ ಮೇಲೆ ಇನ್ನೊಬ್ಬನು ಆತನನ್ನು ಕಂಡು, “ನೀನು ಕೂಡ ಅವರಲ್ಲಿ ಒಬ್ಬನು,” ಎನ್ನಲು ಪೇತ್ರನು, “ಇಲ್ಲಪ್ಪಾ, ನಾನಲ್ಲ,” ಎಂದುಬಿಟ್ಟನು. 59ಸುಮಾರು ಒಂದು ಗಂಟೆಕಾಲ ಕಳೆದ ಮೇಲೆ ಮತ್ತೊಬ್ಬನು, “ಖಂಡಿತವಾಗಿ ಇವನು ಕೂಡ ಯೇಸುವಿನ ಸಂಗಡ ಇದ್ದವನು. ಏಕೆಂದರೆ, ಇವನೂ ಗಲಿಲೇಯದವನೇ,” ಎಂದು ಒತ್ತಿ ಹೇಳಿದನು. 60ಅದಕ್ಕೆ ಪೇತ್ರನು, “ನೀನು ಏನು ಹೇಳುತ್ತೀಯೋ ನನಗೆ ಅರ್ಥವಾಗುವುದಿಲ್ಲ,” ಎಂದನು. ಆಕ್ಷಣವೇ, ಅವನು ಇನ್ನೂ ಮಾತನಾಡುತ್ತಿರುವಾಗಲೇ, ಕೋಳಿ ಕೂಗಿತು. 61ಆಗ ಪ್ರಭು ಯೇಸು ಹಿಂದಿರುಗಿ ಪೇತ್ರನನ್ನು ದಿಟ್ಟಿಸಿ ನೋಡಿದರು. “ಈ ದಿನ ಕೋಳಿ ಕೂಗುವ ಮೊದಲೇ, ‘ನಾನು ಆತನನ್ನು ಅರಿಯೆನು,’ ಎಂದು ನನ್ನನ್ನು ಮೂರು ಬಾರಿ ನಿರಾಕರಿಸುವೆ,” ಎಂದು ಯೇಸು ನುಡಿದಿದ್ದ ಮಾತುಗಳು ಪೇತ್ರನ ನೆನಪಿಗೆ ಬಂದುವು. 62ಅವನು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.
ಪೆಟ್ಟು ಹಾಗು ಪರಿಹಾಸ್ಯ
(ಮತ್ತಾ. 26:67-68; ಮಾರ್ಕ. 14:65)
63ಯೇಸುಸ್ವಾಮಿಯನ್ನು ಬಂಧಿಸಿ ಹಿಡಿದುಕೊಂಡಿದ್ದವರು ಅವರನ್ನು ಅಣಕಿಸಿದರು, ಹೊಡೆದರು. 64ಕಣ್ಣಿಗೆ ಬಟ್ಟೆ ಕಟ್ಟಿ, “ನಿನ್ನನ್ನು ಹೊಡೆದವರಾರು? ಪ್ರವಾದಿಸು,” ಎಂದು ಕೇಳುತ್ತಿದ್ದರು. 65ಹಲವಾರು ವಿಧದಲ್ಲಿ ಅವರನ್ನು ದೂಷಿಸಿ ನಿಂದಿಸುತ್ತಿದ್ದರು.
ಧಾರ್ಮಿಕ ನ್ಯಾಯಪೀಠದಿಂದ ವಿಚಾರಣೆ
(ಮತ್ತಾ. 26:59-66; ಮಾರ್ಕ. 14:55-64; ಯೊವಾ. 18:19-24)
66ಅಷ್ಟರಲ್ಲಿ ಬೆಳಗಾಯಿತು. ಪ್ರಜಾಪ್ರಮುಖರೂ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸಭೆ ಸೇರಿದರು. ಯೇಸುವನ್ನು ತಂದು ನ್ಯಾಯಸಭೆಯ ಮುಂದೆ ನಿಲ್ಲಿಸಿದರು. 67“ನೀನು ಅಭಿಷಿಕ್ತನಾದ ಲೋಕೋದ್ಧಾರಕನಾಗಿದ್ದರೆ ನಮಗೆ ಹೇಳು,” ಎಂದು ವಿಚಾರಿಸಿದರು. ಆಗ ಯೇಸು, “ನಾನು ಹೇಳಿದರೆ ನೀವು ನನ್ನನ್ನು ನಂಬುವುದಿಲ್ಲ. 68ನಾನೇ ಪ್ರಶ್ನೆಹಾಕಿದರೆ ನೀವು ನನಗೆ ಉತ್ತರಕೊಡುವುದೂ ಇಲ್ಲ. 69ಇನ್ನು ಮುಂದೆ ನರಪುತ್ರನು ಸರ್ವಶಕ್ತ ದೇವರ ಬಲಗಡೆ ಆಸೀನನಾಗಿರುವನು,” ಎಂದರು. 70ಅದಕ್ಕೆ ಅವರೆಲ್ಲರೂ, “ಹಾಗಾದರೆ, ನೀನು ದೇವರ ಪುತ್ರನೋ?’ ಎಂದು ಕೇಳಿದರು. “ನಾನು ಆತನೇ ಎಂದು ನೀವೇ ಹೇಳುತ್ತಿದ್ದೀರಿ,” ಎಂದು ಯೇಸು ಉತ್ತರಕೊಡಲು ಅವರು, 71“ಇನ್ನೇನು ಸಾಕ್ಷಿ ಬೇಕು? ನಾವೇ ಇವನ ಬಾಯಿಂದ ಕೇಳಿದೆವಲ್ಲಾ,” ಎಂದರು.

Currently Selected:

ಲೂಕ. 22: KANCLBSI

Highlight

Share

Copy

None

Want to have your highlights saved across all your devices? Sign up or sign in