YouVersion Logo
Search Icon

ಪ್ರಲಾಪಗಳು 2

2
ಎರಡನೆಯ ಶೋಕಗೀತೆ
ಜೆರುಸಲೇಮಿಗೆ ಸರ್ವೇಶ್ವರನೇ ಕೊಟ್ಟ ಶಿಕ್ಷೆ
1ಅಯ್ಯಯ್ಯೋ, ಸ್ವಾಮಿಯೆ ಸಿಟ್ಟುಗೊಂಡಿರುವನಲ್ಲಾ !
ಸಿಯೋನ್ ಕುವರಿಗೆ ಕಾರ್ಮೋಡ ಕವಿದಂತೆ ಮಾಡಿರುವನಲ್ಲಾ !
ಇಸ್ರಯೇಲಿನ ವೈಭವವನ್ನು ಆಗಸದಿಂದ ನೆಲಕ್ಕೆಸೆದುಬಿಟ್ಟಿರುವನಲ್ಲಾ !
ಆ ಸಿಟ್ಟಿನ ದಿನದಂದು ತನ್ನ
ಪಾದಪೀಠವಾದ ದೇವಾಲಯವನ್ನೂ ನೆನೆಯದೆಹೋದನಲ್ಲಾ !
2ಸ್ವಾಮಿ ಯಕೋಬಿನ ನಿವಾಸಿಗಳನ್ನು ನಾಶಪಡಿಸಿಹನು,
ರೌದ್ರದಿಂದ ಯೆಹೂದ ಕೋಟೆಗಳನ್ನು ನೆಲಸಮವಾಗಿಸಿಹನು,
ರಾಜ್ಯವನ್ನೂ ಅದರ ಪಾಲಕರನ್ನೂ ನೀಚಸ್ಥಿತಿಗೆ ಇಳಿಸಿಹನು.
3ಶತ್ರು ಬಂದೆರಗಿದಾಗ ಸ್ವಾಮಿ ತನ್ನ ಶಕ್ತಿಯುತ ಕೈಯನ್ನು ಹಿಂದೆಗೆದುಬಿಟ್ಟ,
ಇಸ್ರಯೇಲಿನ ಕೋಡನ್ನು ಕಡಿದು ಪುಡಿಪುಡಿ ಮಾಡಿಬಿಟ್ಟ,
ಸುತ್ತುಗಟ್ಟಿ ನುಂಗುವ ಅಗ್ನಿಜ್ವಾಲೆಯಂತೆ ಯಕೋಬನನ್ನು ದಹಿಸಿಬಿಟ್ಟ.
4ಬಿಲ್ಲುಹಿಡಿದು ಬಂದ ಆತ ವೈರಿಯಂತೆ
ಬಲಗೈಯೆತ್ತಿ ನಿಂತ ವಿರೋಧಿಯಂತೆ,
ಸಂಹರಿಸಿಬಿಟ್ಟ ಸುಂದರ ಪ್ರಜೆಯೆಲ್ಲರನ್ನು
ರೋಷಾಗ್ನಿ ಸುರಿಸಿ ಭಸ್ಮಮಾಡಿದ ಸಿಯೋನ್ ಗುಡಾರವನ್ನು.
5ಸ್ವಾಮಿಯೇ ಶತ್ರುವಾಗಿ ಕಬಳಿಸಿದ ಇಸ್ರಯೇಲನ್ನು
ನಾಶಮಾಡಿದ ಅದರ ಅರಮನೆಗಳೆಲ್ಲವನ್ನು
ನೆಲಸಮಗೊಳಿಸಿದ ಅದರ ಕೋಟೆಕೊತ್ತಲಗಳನ್ನು
ಯಥೇಚ್ಛವಾಗಿಸಿದ ಯೆಹೂದ ನಾಡಿನ ಗೋಳಾಟವನ್ನು.
6ತನ್ನ ಗರ್ಭಗುಡಿಯನ್ನೂ ಉತ್ಸವಸ್ಥಾನವನ್ನೂ ಹಾಳುಮಾಡಿದ
ತೋಟದ ಗುಡಿಸಲನ್ನೋ ಎಂಬಂತೆ.
ಮಹೋತ್ಸವಗಳನ್ನೂ ಸಬ್ಬತ್‍ದಿನಗಳನ್ನೂ ಅಳಿಸಿಬಿಟ್ಟ
ನೆನಪಿಗೂ ಬಾರದಂತೆ.
ರಾಜರನ್ನೂ ಯಾಜಕರನ್ನೂ ಸರ್ವೇಶ್ವರ ಧಿಕ್ಕರಿಸಿದ
ಅತಿ ರೋಷಾವೇಷಗೊಂಡವನಂತೆ.
7ಸ್ವಾಮಿ ತಿರಸ್ಕರಿಸಿಬಿಟ್ಟಿದ್ದಾನೆ ತನ್ನ ಬಲಿಪೀಠವನ್ನೇ
ಅಸಹ್ಯಗೊಂಡು ತೊರೆದುಬಿಟ್ಟಿದ್ದಾನೆ ತನ್ನ ಪವಿತ್ರಸ್ಥಾನವನ್ನೇ
ಸಿಯೋನ್ ಅರಮನೆಯ ಗೋಡೆಗಳನ್ನು ಕೆಡವಲು ಬಿಟ್ಟಿದ್ದಾನೆ ಹಗೆಗಳನ್ನೇ.
ಹಬ್ಬಹರಿದಿನಗಳ ಜಯಘೋಷವೋ ಎಂಬಂತೆ
ಘೋಷಣೆ ಹಾಕುತ್ತಿದ್ದಾರಲ್ಲಾ ಶತ್ರುಗಳು ಸರ್ವೇಶ್ವರನ ಮಂದಿರದಲ್ಲೆ !
8ಸಿಯೋನ್ ನಗರಿಯ ಕೋಟೆಯನ್ನು ನಾಶಪಡಿಸಲೆಂದು
ಎಳೆದಿರುವನಲ್ಲಾ ಸರ್ವೇಶ್ವರ ಅಳತೆನೂಲನ್ನು !
ಹಾಳುಮಾಡುವ ತನ್ನ ಕೈಯನ್ನು ಹಿಂದೆಗೆಯದೆ
ಬಿರುಕುಗೊಳಿಸಿದ್ದಾನೆ ಪೌಳಿಗೋಡೆಯನ್ನೇ, ಕೋಟೆಯನ್ನೇ,
ಅವುಗಳೆರಡೂ, ಕುಸಿದು ಬಿದ್ದುಹೋಗಿವೆ.
9ಹೂತುಹೋಗಿವೆ ಸಿಯೋನ್ ಹೆಬ್ಬಾಗಿಲುಗಳು
ಚೂರುಚೂರಾಗಿ ಬಿದ್ದಿವೆ ಅದರ ಅಗುಳಿಗಳು.
ಅರಸರೂ ಪಾಲಕರೂ ಸೇರಿಹೋದರು ಅನ್ಯಜನಾಂಗಗಳೊಳು.
ನಿಂತುಹೋಗಿವೆ ಧರ್ಮಶಾಸ್ತ್ರ ಬೋಧನೆಗಳು.
ಸರ್ವೇಶ್ವರನಿಂದ ಪ್ರವಾದಿಗಳಿಗೆ ಆಗುತ್ತಿದ್ದ ದಿವ್ಯದರ್ಶನಗಳು.
10ತಲೆಯ ಮೇಲೆ ಧೂಳನ್ನು ತೂರಿಕೊಂಡು
ಗೋಣಿತಟ್ಟನ್ನು ಸೊಂಟಕ್ಕೆ ಸುತ್ತಿಕೊಂಡು
ಕುಕ್ಕರಿಸಿಹರು ಸಿಯೋನ್ ನಗರಿಯ ಪ್ರಮುಖರು
ತಲೆ ತಗ್ಗಿಸಿಹರು ಜೆರುಸಲೇಮಿನ ಯುವತಿಯರು.
11ಕಂಬನಿಗರೆದು ಇಂಗಿಹೋಗಿದೆ ಕಣ್ಣು
ಕುದಿಯುತ್ತಿದೆ ನನ್ನೊಳಗೆ ಕರುಳು !
ನನ್ನ ಜನತೆಯೆಂಬ ಯುವತಿ ಹಾಳಾಗಿ
ಮಕ್ಕಳು ಹಾದಿಬೀದಿಗಳಲ್ಲಿ ಮೂರ್ಛೆಹೋಗಿ
ನನ್ನ ಕರುಳು ಕರಗಿಹೋಗಿದೆ ನೀರಾಗಿ.
12‘ಅಮ್ಮಾ ತಿನ್ನಲಿಕ್ಕಿಲ್ಲವೆ? ಕುಡಿಯಲಿಕ್ಕಿಲ್ಲವೆ?
ಎನ್ನುತ ಮಕ್ಕಳು ಮೂರ್ಛೆಗೊಂಡಿವೆ.
ಗಾಯಗೊಂಡವರಂತೆ ನಗರದ ಚೌಕಗಳೊಳು
ಪ್ರಾಣಬಿಡುತ್ತಿವೆಯಲ್ಲಾ ತಾಯಿಯ ಎದೆಯ ಮೇಲೆ ಆ ಹಸುಳೆಗಳು.
13ಎಲೌ ಜೆರುಸಲೇಮ್ ಯುವತಿಯೇ, ನಿನಗೆ ಏನು ಹೇಳಲಿ?
ನಿನ್ನನ್ನು ಯಾವುದಕ್ಕೆ ಹೋಲಿಸಲಿ?
ಸಿಯೋನ್ ಕನ್ಯೆಯೇ, ನಿನ್ನನ್ನು ಹೇಗೆ ಸಂತೈಸಲಿ?
ಸಂತೈಸುವ ಸಾಮತಿಯನ್ನು ಎಲ್ಲಿಂದ ತರಲಿ?
ನಿನಗೊದಗಿರುವ ನಾಶ ಸಾಗರದಂತೆ ಅಪಾರ
ನಿನ್ನನ್ನು ಸ್ವಸ್ಥಗೊಳಿಸಲು ಯಾರಿಂದ ತಾನೆ ಸಾಧ್ಯ?
14ನಿನ್ನ ಪ್ರವಾದಿಗಳು ಕಂಡ ದರ್ಶನದಲ್ಲಿ ಸಾರವಿಲ್ಲ, ಅರ್ಥವಿಲ್ಲ.
ನಿನ್ನ ದೋಷಗಳನ್ನು ಬೈಲಿಗೆಳೆಯಲು ಅವರಿಂದಾಗಲಿಲ್ಲ.
ಈ ಕಾರಣ, ನಿನ್ನ ದುರವಸ್ಥೆಯನ್ನು ತಡೆಗಟ್ಟಲಾಗಲಿಲ್ಲ.
ನಿನ್ನ ಬಗ್ಗೆ ಅವರು ನುಡಿದ ದೈವೋಕ್ತಿಗಳು ವ್ಯರ್ಥವಾದುವು,
ನೀನು ಗಡಿಪಾರಾಗಿ ಹೋಗಲು ಅವು ಆಸ್ಪದವಾದುವು.
15ಹಾದುಹೋಗುವವರೆಲ್ಲ ಕೈ ತಟ್ಟುತ್ತಾರಲ್ಲಾ ನಿನ್ನನ್ನು ನೋಡಿ
ಜೆರುಸಲೇಮ್ ನಗರಿಯಾದ ನಿನ್ನನ್ನು ಗುರುತಿಸಿ !
“ಆಹಾ, ನೀನೇನೋ ಸರ್ವಾಂಗ ಸುಂದರಿ, ವಿಶ್ವಾನಂದದಾಯಕಿ !”
ಎಂದು ಮೂದಲಿಸುತ್ತಾರಲ್ಲಾ ತಲೆಯಾಡಿಸಿ, ಸಿಳ್ಳುಹಾಕಿ !
16ನಿನ್ನನ್ನು ನೋಡಿ ಶತ್ರುಗಳೆಲ್ಲರು
ಕಟಕಟನೆ ಹಲ್ಲು ಕಡಿಯುತ್ತಾರಲ್ಲಾ ಬಾಯಿ ಕಿಸಿದು !
“ಹಾ, ಆಕೆಯನ್ನು ಕಬಳಿಸಿಬಿಟ್ಟೆವು
ಈ ದಿನಕ್ಕಾಗಿಯೆ ನಾವು ಕಾದಿದ್ದೆವು
ಈಗ ಅದನ್ನು ಕಣ್ಣಾರೆ ಕಂಡೆವು” ಎಂದು ಕೊಚ್ಚಿಕೊಳ್ಳುತ್ತಾರಲ್ಲಾ !
17ಸರ್ವೇಶ್ವರ ಸಿದ್ಧಿಗೆ ತಂದಿದ್ದಾನೆ ತನ್ನ ಸಂಕಲ್ಪವನ್ನು
ಈಡೇರಿಸಿದ್ದಾನೆ ಪುರಾತನ ಕಾಲದಲ್ಲಿ ತಾನು ನುಡಿದುದನ್ನು.
ನಿನ್ನನ್ನು ಧ್ವಂಸಮಾಡಿದ್ದಾನೆ ದಯೆದಾಕ್ಷಿಣ್ಯವಿಲ್ಲದೆ.
ಆನಂದ ತಂದಿದ್ದಾನೆ ವೈರಿಗಳಿಗೆ
ಕೋಡುಮೂಡಿಸಿದ್ದಾನೆ ವಿರೋಧಿಗಳಿಗೆ !
18ನಿನ್ನ ಜನರು ಮೊರೆಯಿಡಲಿ ಮನಃಪೂರ್ವಕವಾಗಿ
ಸಿಯೋನ್ ನಗರದ ಕೋಟೆಗೆ ಕೋಟೆಯೇ ಕಣ್ಣೀರಿಡಲಿ.
ಹಗಲಿರುಳು ಕಂಬನಿ ಹರಿಯಲಿ ತೊರೆಯಂತೆ
ನಿಮ್ಮ ನೇತ್ರಗಳಿಂದ ಸುರಿಯಲಿ ಒಂದೇ ಸಮನೆ.
19ರಾತ್ರಿಯ ಒಂದೊಂದು ಜಾವದಲ್ಲೂ ಎದ್ದು ಗೋಳಾಡಿರಿ.
ನಿಮ್ಮ ಹೃದಯ ಕರಗಿ, ನೀರಾಗಿ ಸ್ವಾಮಿಯ ಮುಂದೆ ಹರಿಯಲಿ.
ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈ ಮುಗಿದು ಪ್ರಾರ್ಥನೆಮಾಡಿ.
ಹಸಿವಿನಿಂದ ಅವು ಮೂರ್ಛೆಹೋಗಿವೆ, ಬೀದಿಯ ಮೂಲೆಮೂಲೆಗಳಲ್ಲಿ.
20ಹೇ, ಸರ್ವೇಶ್ವರಾ ಕಟಾಕ್ಷಿಸು !
ಇಷ್ಟೆಲ್ಲಾ ನೀ ಮಾಡಿದ್ದು ಯಾರಿಗೆಂದು ಯೋಚಿಸು !
ತಾಯಂದಿರು ತಿನ್ನಬೇಕೆ ತಾವು ಆರೈಕೆ ಮಾಡಿದ ತಮ್ಮ ಕರುಳ ಕುಡಿಯನ್ನೇ?
ಹತರಾಗಬೇಕೆ ಯಾಜಕರೂ ಪ್ರವಾದಿಗಳೂ ಸ್ವಾಮಿಯ ಪವಿತ್ರಾಲಯದಲ್ಲೆ?
21ವಯಸ್ಕರೂ ವೃದ್ಧರೂ ಬಿದ್ದಿದ್ದಾರೆ ಬೀದಿಗಳಲ್ಲೆ
ತರುಣತರುಣಿಯರು ತುತ್ತಾಗಿದ್ದಾರೆ ಖಡ್ಗಗಳಿಗೆ.
ನಿನ್ನ ಪ್ರಕೋಪದ ದಿನದಂದು ಹತಮಾಡಿದೆಯಲ್ಲಾ ಅವರನ್ನು ಕನಿಕರಿಸದೆ !
22ಸುತ್ತಮುತ್ತಲೂ ದಿಗಿಲು ಹುಟ್ಟಿಸುವ ನನ್ನ ಹಗೆಗಳನ್ನೆ
ಕರೆಸಿದೆಯಲ್ಲಾ ಹಬ್ಬಕ್ಕೋ ಎಂಬಂತೆ !
ಸರ್ವೇಶ್ವರನ ಪ್ರಕೋಪದ ದಿನದಂದು
ತಪ್ಪಿಸಿಕೊಳ್ಳಲಿಲ್ಲ ಯಾರೂ; ಉಳಿಯಲಿಲ್ಲ ಯಾರೂ.
ಶತ್ರು ಸಂಹರಿಸಿಬಿಟ್ಟನಲ್ಲಾ ನಾನು ಸಾಕಿ ಆರೈಕೆ ಮಾಡಿದವರನ್ನೂ !

Highlight

Share

Copy

None

Want to have your highlights saved across all your devices? Sign up or sign in

Video for ಪ್ರಲಾಪಗಳು 2