YouVersion Logo
Search Icon

ಯೆರೆಮೀಯ 48

48
ಮೋವಾಬನ್ನು ಕುರಿತ ವಾಣಿ
1ಇಸ್ರಯೇಲಿನ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಮೋವಾಬನ್ನು ಕುರಿತು ಹೀಗೆನ್ನುತ್ತಾರೆ:
“ನೆಬೋ ಊರಿನ ಗತಿಯನ್ನು ಅಯ್ಯೋ,
ಏನೆಂದು ಹೇಳಲಿ, ಅದು ಹಾಳಾಯಿತು.
ಕಿರ್ಯತಯಿಮ್ ಮಾನಭಂಗ ಹೊಂದಿದೆ ಶತ್ರು ಕೈಗೆ ಸಿಕ್ಕಿ.
ಮಿಸ್ಗಾಬ್ ಅವಮಾನಕ್ಕೆ ಗುರಿಯಾಗಿದೆ ನೆಲಸಮವಾಗಿ.
2ಮೋವಾಬಿನ ಕೀರ್ತಿ ಮಾಯವಾಯಿತು
ಹೆಷ್ಬೋನ್ ಶತ್ರುಗಳ ಕೈವಶವಾಯಿತು.
‘ಮೋವಾಬ್ ಇನ್ನು ರಾಷ್ಟ್ರವೆನಿಸಿಕೊಳ್ಳದಷ್ಟು ಅದನ್ನು ಹಾಳುಮಾಡೋಣ ಬನ್ನಿ’
ಎಂದಿದ್ದಾರೆ ಆ ಶತ್ರುಗಳು.
ಮದ್ಮೆನೇ, ನೀನೂ ಸುಮ್ಮನಾಗುವೆ,
ಖಡ್ಗ ಬರುವುದು ನಿನ್ನನ್ನು ಬೆನ್ನಟ್ಟಿ.
3‘ಅಯ್ಯೋ, ಸೂರೆಹೋದೆವು, ತೀವ್ರ ನಾಶವಾದೆವು!’
ಎಂಬ ಕೂಗಾಟ ಕೇಳಿಬರುತ್ತಿದೆ ಹೊರೊನಯಿಮಿನಿಂದ.
4“ಮೋವಾಬ್ ನಾಶವಾಯಿತು.
ಅಲ್ಲಿ ದಿಕ್ಕೆಟ್ಟವರು ಮೊರೆಯಿಟ್ಟಿರುವರು.
5ಅಳುತ್ತಳುತ್ತಾ ಲೂಹೀತ್ ದಿಣ್ಣೆಯನ್ನು ಹತ್ತುತ್ತಿರುವರು
‘ನಾಶವಾದೆವಲ್ಲಾ!’ ಎಂಬ ಪ್ರಾಣಸಂಕಟದ ಪ್ರಲಾಪವು
ಹೊರೊನಯಿಮ್ ಇಳಿಜಾರಿನಲ್ಲಿ ಕೇಳಿಸುತ್ತಿರುವುದು.
6‘ಅಡವಿಯ ಕಾಡುಕತ್ತೆಯಂತೆ
ಓಡಿಹೋಗಿ ಪ್ರಾಣ ಉಳಿಸಿಕೊಳ್ಳಿ’ ಎನ್ನುತ್ತಿರುವರು.
7“ಮೋವಾಬೇ,
ನಿನ್ನ ಸಾಧನೆಗಳಲ್ಲೇ, ಧನರಾಶಿಗಳಲ್ಲೇ ಭರವಸೆಯಿಟ್ಟೆ.
ಆದುದರಿಂದ ನೀನು ಇದೀಗಲೆ ಶತ್ರುಗಳ ಕೈವಶವಾಗುವೆ.
ಕೆಮೋಷ್ ಎಂಬ ನಿನ್ನ ದೇವತೆಯೂ
ಅದರ ಭಕ್ತ ಯಾಜಕರೂ ಹಾಗೂ ರಾಜ್ಯಾಧಿಕಾರಿಗಳು
ಸೆರೆಗೆ ಹೋಗುವರು ಒಟ್ಟಿಗೆ.
8ಸೂರೆಗಾರನು ಪ್ರತಿಯೊಂದು ನಗರದ ಮೇಲೆ ಬೀಳುವನು.
ಯಾವ ಪಟ್ಟಣವೂ ಉಳಿಯದು.
ಸರ್ವೇಶ್ವರನ ನುಡಿಯಂತೆಯೆ
ಮೇಲ್ನಾಡು ನಾಶವಾಗುವುದು, ಬೈಲ್ನಾಡು ಹಾಳಾಗುವುದು.
9ಮೋವಾಬಿಗೆ ರೆಕ್ಕೆ ಕಟ್ಟಿರಿ, ಅದು ಹಾರಿಹೋಗಲಿ
ಅದರ ನಗರಗಳು ಹಾಳುಬಿದ್ದು ನಿರ್ಜನವಾಗುವುವು.
10ಸರ್ವೇಶ್ವರನು ನೇಮಿಸಿದ ಕೆಲಸವನ್ನು ನಿರ್ವಹಿಸುವುದರಲ್ಲಿ ಆಲಸ್ಯನಾಗಿರುವವನು ಶಾಪಗ್ರಸ್ತನು. ತನ್ನ ಕತ್ತಿ ರಕ್ತಸುರಿಸದಂತೆ ತಡೆಯುವವನಿಗೆ ಶಾಪ ತಗಲಲಿ!
ಮೋವಾಬು ನಗರಗಳ ಪರಿವಿನಾಶ
11ಮೋವಾಬು ಚಿಕ್ಕತನದಿಂದಲೂ ನೆಮ್ಮದಿಯಾಗಿದೆ. ಅದು ಮಡ್ಡಿಯ ಮೇಲೆ ನಿಂತಿರುವ ದ್ರಾಕ್ಷಾರಸದಂತಿದೆ. ಅದನ್ನು ಪಾತ್ರೆಯಿಂದ ಪಾತ್ರೆಗೆ ಯಾರೂ ಹೊಯ್ಯಲಿಲ್ಲ. ಅದು ಎಂದೂ ಸೆರೆಹೋಗಲಿಲ್ಲ. ಆದಕಾರಣ ಅದರ ರುಚಿ ಅದರಲ್ಲಿದೆ. ಅದರ ವಾಸನೆ ಮಾರ್ಪಡಲಿಲ್ಲ.
12ಹೀಗಿರಲು ಸರ್ವೇಶ್ವರ ಇಂತೆನ್ನುತ್ತಾರೆ: “ಇಗೋ, ದಿನಗಳು ಬರಲಿವೆ. ಆಗ ನಾನು ‘ಹೊಯ್ಯತಕ್ಕವರನ್ನು’ ಅವರ ಬಳಿಗೆ ಕಳುಹಿಸುವೆನು. ಅವರು ಅದನ್ನು ಹೊಯ್ದುಬಿಡುವರು. ಪಾತ್ರೆಗಳನ್ನು ಬರಿದುಮಾಡುವರು. ಗಡಿಗೆಗಳನ್ನು ಒಡೆದುಹಾಕುವರು. 13ಇಸ್ರಯೇಲ್ ವಂಶದವರು ನಂಬಿಕೆ ಇಟ್ಟಿದ್ದ ಬೇತೇಲ್ ಕ್ಷೇತ್ರವನ್ನು ಕುರಿತು ಆಶಾಭಂಗಪಟ್ಟಂತೆ ಆಗ ಮೋವಾಬ್ಯರು ತಮ್ಮ ಕೆಮೋಷ್ ದೇವತೆಯನ್ನು ಕುರಿತು ಆಶಾಭಂಗಪಡುವರು.
14‘ನಾವು ಶೂರರು, ಯುದ್ಧ ಪ್ರವೀಣರು,
ಪರಾಕ್ರಮಿಗಳು’ ಎಂದು ನೀವು ಹೇಳುವುದೆಂತು?
15ಮೋವಾಬು ಹಾಳಾಗಿದೆ
ಸುಟ್ಟುಹೋದ ಅದರ ನಗರಗಳಿಂದ ಹೊಗೆ ಎದ್ದಿದೆ.
ಅದರ ಸರ್ವಶ್ರೇಷ್ಟ ಯುವಕರು ಹೋಗಿದ್ದಾರೆ ಹತರಾಗುವುದಕ್ಕೆ,
ಸರ್ವಶಕ್ತ ಸರ್ವೇಶ್ವರನೆಂಬ ನಾಮವುಳ್ಳ ರಾಜಾಧಿರಾಜನ ನುಡಿಯಂತೆ.
16ಮೋವಾಬಿಗೆ ದುರ್ಗತಿ ಸಮೀಪಿಸಿದೆ
ಅದಕ್ಕೆ ವಿಪತ್ತು ಬೇಗ ಬರಲಿದೆ.
17ಮೋವಾಬಿನ ನೆರೆಹೊರೆಯವರೇ,
ಅದರ ಹೆಸರುವಾಸಿಯನ್ನು ಅರಿತವರೇ,
ನೀವೆಲ್ಲರು ಅದಕ್ಕಾಗಿ ಎದೆಬಡಿದುಕೊಳ್ಳಿ !
‘ಅಯ್ಯೋ, ಶಕ್ತಿಯುತ ಚೆಂಗೋಲು,
ಮಹಿಮೆಯ ದಂಡಕೋಲು ಮುರಿದುಹೋಯಿತಲ್ಲಾ!’
ಎಂದು ಪ್ರಲಾಪಿಸಿರಿ.
18ಯುವತಿಯೇ, ದೀಬೋನ್ ನಗರಿಯೇ,
ನಿನ್ನ ಮಹಿಮೆಯ ಪದವಿಯಿಂದ
ಕೆಳಕ್ಕಿಳಿದು ಕುಳಿತುಕೊ ಬಾಯಾರಿದವಳಂತೆ.
ಮೋವಾಬನ್ನು ಹಾಳುಮಾಡುವವನು
ನಿನಗೆ ವಿರುದ್ಧವಾಗಿ ಬಂದಿದ್ದಾನೆ.
ನಿನ್ನ ಕೋಟೆಕೊತ್ತಲುಗಳನ್ನು ಅವನು ಕೆಡವಿದ್ದಾನೆ.
19ಅರೋಯೇರಿನವರೇ, ದಾರಿ ಮಗ್ಗುಲಲ್ಲಿ ನಿಂತು ನೋಡಿ !
ಓಡಿಹೋಗುವವನನ್ನೂ ತಪ್ಪಿಸಿಕೊಳ್ಳುವವಳನ್ನೂ
ಏನಾಯಿತೆಂದು ವಿಚಾರಿಸಿರಿ.
20ಮೋವಾಬು ನಾಶವಾಗಿದೆ, ಅವಮಾನಕ್ಕೆ ಈಡಾಗಿದೆ.
ಗೋಳಾಡಿರಿ, ಅತ್ತು ಪ್ರಲಾಪಿಸಿರಿ !
ಮೋವಾಬು ಹಾಳಾಯಿತೆಂದು
ಅರ್ವೋನಿನ ತೀರದಲ್ಲೆಲ್ಲಾ ಘೋಷಿಸಿರಿ.
21ಮೇಲ್ನಾಡಿಗೆ ದಂಡನೆಯಾಗಿದೆ, ಹೋಲೇನ್, ಯಾಚಾ, ಮೇಫಾತ್, ದೀಬೋನ್, ನೆಬೋ, 22ಬೇತ್‍ದಿಬ್ಲಾತಯಿಮ್, 23ಕಿರ್ಯಾತಯಿಮ್, ಬೇತ್ ಗಾಮೂಲ್, ಬೇತ್‍ಮೆಯೋನ್, ಕೆರೀಯೋತ್, 24ಬೊಚ್ರ, ಹೀಗೆ ದೂರದ ಹತ್ತಿರದ ಮೋಬಾವಿನ ಎಲ್ಲ ನಗರಗಳಿಗೂ ದಂಡನೆಯಾಗಿದೆ. 25ಮೋವಾಬಿನ ಕೊಂಬು ಕಡಿದು ಬಿದ್ದಿದೆ. ಅದರ ತೋಳು ಮುರಿದುಹೋಗಿದೆ. ಇದು ಸರ್ವೇಶ್ವರನಾದ ನನ್ನ ನುಡಿ.”
ಮೋವಾಬ್ ತಲೆ ತಗ್ಗಿಸಬೇಕಾಗುವುದು
26“ಮೋವಾಬಿಗೆ ಅಮಲೇರುವಷ್ಟು ಕುಡಿಸಿರಿ. ಅದು ಸರ್ವೇಶ್ವರನನ್ನೆ ತಿರಸ್ಕರಿಸಿ ಉಬ್ಬಿಹೋಗಿದೆ. ತನ್ನ ವಾಂತಿಯಲ್ಲೆ ಬಿದ್ದು ಗೇಲಿ ಪರಿಹಾಸ್ಯಕ್ಕೆ ಗುರಿಯಾಗಲಿದೆ. 27ಮೋವಾಬೇ, ನೀನು ಇಸ್ರಯೇಲನ್ನು ಕುರಿತು ಗೇಲಿಮಾಡುತ್ತಿದ್ದೆಯಲ್ಲವೆ? ಕಳ್ಳರ ಗುಂಪಿಗೆ ಸೇರಿ ಅದು ಸಿಕ್ಕಿಕೊಂಡಂತೆ ನಿನಗೆ ಕಾಣುತ್ತಿತ್ತೇ? ಇಸ್ರಯೇಲಿನ ಪ್ರಸ್ತಾಪ ಎತ್ತಿದಾಗಲೆಲ್ಲ ನೀನು ತಲೆಯಾಡಿಸಿ ಹಿಯ್ಯಾಳಿಸುತ್ತಿಯಲ್ಲವೆ?
28“ಮೋವಾಬ್ಯರೇ, ನಗರಗಳನ್ನು ಬಿಟ್ಟು ಹೋಗಿ ಬಂಡೆಗಳ ಗುಹೆಯಲ್ಲಿ ವಾಸಮಾಡಿ. ಹಳ್ಳಕೊಳ್ಳಗಳ ಆಚೆಯ ಪಕ್ಕದಲ್ಲಿ ಗೂಡನ್ನು ಕಟ್ಟಿಕೊಳ್ಳುವ ಪಾರಿವಾಳದಂತೆ ಜೀವಿಸಿರಿ. 29ಮೋವಾಬ್ಯರಿಗೆ ಬಹಳ ಸೊಕ್ಕೇರಿದೆ! ಅವರ ಹೆಮ್ಮೆಯ ಸುದ್ದಿ, ಡಂಭಾಚಾರ, ಅಹಂಕಾರ, ಗರ್ವ, ಸ್ವಪ್ರತಿಷ್ಠೆ ಇವುಗಳ ಸಮಾಚಾರ ನಮ್ಮ ಕಿವಿಗೆ ಬಿದ್ದಿದೆ. - 30ಸರ್ವೇಶ್ವರನಾದ ನಾನು ಹೇಳುವುದೇನೆಂದರೆ: ಅವರ ಗರ್ವೋದ್ರೇಕ ನನಗೆ ಗೊತ್ತಿದೆ. ಅದು ಬರೀ ಬುರುಡೆ ಮಾತ್ರ. ಅವರು ಕೊಚ್ಚಿಕೊಳ್ಳುವುದೆಲ್ಲ ನಿರರ್ಥಕವೇ ಸರಿ. 31ಆದಕಾರಣ ನಾನು ಮೋವಾಬಿನ ಬಗ್ಗೆ ವಿಷಾದಿಸುತ್ತೇನೆ. ಹೌದು, ಇಡೀ ನಾಡಿನ ದುರ್ಗತಿಯನ್ನು ನೋಡಿ ಪ್ರಲಾಪಿಸುತ್ತೇನೆ. ಕೀರ್‍ಹೆರೆಸಿನವರ ವಿಷಯದಲ್ಲೂ ನನಗೆ ವ್ಯಥೆ ಇದೆ. 32‘ಸಿಬ್ಮ’ದ ದ್ರಾಕ್ಷಾಲತೆಯೇ, ಯಜ್ಜೇರಿನ ನಿಮಿತ್ತ ದುಃಖಿಸುವುದಕ್ಕಿಂತಲು ನಿನ್ನನ್ನು ಕಂಡು ಹೆಚ್ಚಾಗಿ ದುಃಖಿಸುತ್ತೇನೆ. ನಿನ್ನ ಶಾಖೆಗಳು ಸಮುದ್ರದಾಚೆಗೂ ಯಜ್ಜೇರಿನ ಸರೋವರದವರೆಗೂ ವ್ಯಾಪಿಸಿವೆ. ಈಗ ನಿನ್ನ ಹಣ್ಣುಹಂಪಲುಗಳ ಮೇಲೆ ಹಾಗು ದ್ರಾಕ್ಷೆಯ ಸುಗ್ಗಿಯ ಮೇಲೆ ಸೂರೆಗಾರ ಬಂದೆರಗಿದ್ದಾನೆ. 33ಹರ್ಷಾನಂದಗಳು ತೋಟಗಳಿಂದಲೂ ಮೋವಾಬಿನ ಇಡೀ ನಾಡಿನಿಂದಲೂ ತೊಲಗಿವೆ. ತೊಟ್ಟಿಗಳಲ್ಲಿ ದ್ರಾಕ್ಷಾರಸ ಇಲ್ಲದಂತಾಗಿದೆ. ಯಾರೂ ತೊಟ್ಟಿಯಲ್ಲಿ ತುಳಿಯುತ್ತಾ ಆನಂದ ಧ್ವನಿಗೈಯುತ್ತಿಲ್ಲ. ಕೇಳಿಸುವಾ ಧ್ವನಿ ಆನಂದ ಧ್ವನಿ ಅಲ್ಲ.
34ಹೆಷ್ಬೋನಿನ ಮತ್ತು ಎಲೆಯಾಲೆಯ ಜನರು ಅರಚಿಕೊಳ್ಳುತ್ತಿದ್ದಾರೆ. ಆ ಕೂಗು ಯಹಚಿನವರೆಗೆ ಕೇಳಿಸುತ್ತಿದೆ. ಚೋಯರಿನಿಂದ ಹೊರೊನಯಿಮಿನವರೆಗೆ ಮತ್ತು ಎಗ್ಲತ್ ಶೆಲೆಶೀಯದವರೆಗೆ ಆ ಕಿರಿಚಾಟ ಕೇಳಿಸುತ್ತಿದೆ. ನಿಮ್ರೀಮ್ ಹಳ್ಳವೂ ಹಾಳಾಗಿದೆ.
35“ಮೋವಾಬಿನ ಪೂಜಾಸ್ಥಾನಗಳಲ್ಲಿ ಬಲಿಯರ್ಪಿಸುವುದನ್ನೂ ತಮ್ಮ ದೇವರುಗಳಿಗೆ ಧೂಪಾರತಿಯೆತ್ತುವುದನ್ನೂ ನಿಲ್ಲಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ.
36“ಆದುದರಿಂದ ಮೋವಾಬಿನ ಮತ್ತು ಕೀರ್ ಹೆರೆಸಿನವರ ನಿಮಿತ್ತ ನನ್ನ ಹೃದಯ ಕೊಳಲಿನಂತೆ ಮೊರೆಯಿಡುತ್ತದೆ. ಮೋವಾಬ್ಯರು ಕೂಡಿಸಿಟ್ಟ ಹೇರಳವಾದ ಆಸ್ತಿ ಮಾಯವಾಯಿತು. 37ಎಲ್ಲರ ತಲೆಬೋಳು, ಎಲ್ಲರ ಗಡ್ಡ ವಿಕಾರ, ಎಲ್ಲರ ಕೈ ಗಾಯ. ಎಲ್ಲರ ನಡುವಿಗೆ ಗೋಣಿತಟ್ಟು. 38ಮೋವಾಬಿನ ಎಲ್ಲ ಮಾಳಿಗೆಗಳ ಮೇಲೆಯೂ ಚೌಕಗಳಲ್ಲಿಯೂ ಒಂದೇ ರೋದನ. ಏಕೆಂದರೆ ಯಾರಿಗೂ ಬೇಡದ ಮಡಕೆಯಂತೆ ಮೋವಾಬನ್ನು ಒಡೆದುಹಾಕಿದ್ದೇನೆ. ಇದು ಸರ್ವೇಶ್ವರನಾದ ನನ್ನ ನುಡಿ. 39ಅದು ಹೇಗೆ ನುಚ್ಚುನೂರಾಗಿದೆ ! ಆ ಜನರು ಕಿರಿಚಿಕೊಳ್ಳುತ್ತಿದ್ದಾರೆ ! ಇಗೋ, ಮೋವಾಬು ನಾಚಿಕೆಯಿಂದ ಬೆನ್ನು ತೋರಿಸಿದೆ. ನೆರೆಹೊರೆಯವರು ಅಣಕಿಸುವುದಕ್ಕೂ ಬೆಚ್ಚಿಬೀಳುವುದಕ್ಕೂ ಆಸ್ಪದ ಆಗಿದೆ.”
ಸರ್ವೇಶ್ವರ ಹೀಗೆನ್ನುತ್ತಾರೆ :
40“ಶತ್ರುವು ಮೋವಾಬಿನ ಮೇಲೆ ಎರಗಲು
ರಣಹದ್ದಿನಂತೆ ರೆಕ್ಕೆಗಳನ್ನು ಹರಡಿ ಹಾರುವನು.
41ನಗರಗಳನ್ನು ಹಿಡಿಯುವನು, ಕೋಟೆಗಳನ್ನು ಆಕ್ರಮಿಸುವನು.
ಆ ದಿನದಂದು, ಹೆರುವ ಹೆಂಗಸಿನ ಎದೆಯಂತೆ
ಅದರುವುದು ಮೋವಾಬಿನ ಶೂರರ ಎದೆ.
42ಉಬ್ಬಿಕೊಂಡು ಸರ್ವೇಶ್ವರನನ್ನೆ ತಿರಸ್ಕರಿಸಿದ ಕಾರಣ
ಹಾಳಾಗಿ ಇನ್ನು ರಾಷ್ಟ್ರವೆನಿಸಿಕೊಳ್ಳದು ಮೋವಾಬ್,
43ಮೋವಾಬಿನ ನಿವಾಸಿಯೇ, ಕೇಳು
ನಿನಗೆ ಕಾದಿದೆ ಭೀತಿ, ಗುಳಿ, ಉರುಳು!
ಇದು ಸರ್ವೇಶ್ವರನ ನುಡಿ.
44ಭಯಕ್ಕೆ ಓಡುವವನು ಗುಂಡಿಯಲ್ಲಿ ಬೀಳುವನು
ಗುಂಡಿಯಿಂದ ಹತ್ತಿ ಬರುವವನು ಬಲೆಗೆ ಸಿಕ್ಕುವನು.
ದಂಡನೆಯ ವರ್ಷವನ್ನು ಮೋವಾಬಿಗೆ ಖಂಡಿತ ಬರಮಾಡುವೆನು -
ಇದು ಸರ್ವೇಶ್ವರನ ನುಡಿ.
45ಪಲಾಯನವಾದವರು ಹೆಷ್ಬೋನಿನ ನೆರಳಲ್ಲಿ ನಿಂತಿದ್ದಾರೆ ಬಲಗುಂದಿದವರಾಗಿ.
ಆದರೆ ಸೀಹೋನನ ರಾಜ್ಯಕ್ಕೆ ಸೇರಿದ ಆ ಹೆಷ್ಬೋನಿನಿಂದಲೆ ಹೊರಟಿದೆ ಅಗ್ನಿ.
ಮೋವಾಬಿನ ಮೇರೆಯನ್ನೂ ಶಿಖರವನ್ನೂ ನುಂಗಿಬಿಟ್ಟಿದೆ ಆ ಬೆಂಕಿ.
46ಮೋವಾಬ್ಯರೇ, ನಿಮ್ಮ ಗತಿಯೇನೆಂದು ಹೇಳಲಿ!
ಕೆಮೋಷ್ ದೇವತೆಯ ಭಕ್ತರು ನಾಶವಾದರು.
ನಿಮ್ಮ ಗಂಡುಹೆಣ್ಣು ಮಕ್ಕಳು ಗಡೀಪಾರಾಗಿ ಸೆರೆಯಾದರು.
47ಆದರೂ ಬರಲಿರುವಾ ದಿನದಂದು
ತಪ್ಪಿಸುವೆನು ಮೋವಾಬಿನ ದುರವಸ್ಥೆಯನ್ನು
ಎನ್ನುತ್ತಾರೆ ಸರ್ವೇಶ್ವರ.
- ಇತಿ ಮೋವಾಬನ್ನು ಕುರಿತ ತೀರ್ಪು.

Highlight

Share

Copy

None

Want to have your highlights saved across all your devices? Sign up or sign in

Video for ಯೆರೆಮೀಯ 48