ಯೆರೆಮೀಯ 43
43
ಈಜಿಪ್ಟಿಗೆ ಪಲಾಯನ
1ಯೆರೆಮೀಯನು ಜನರೆಲ್ಲರನ್ನು ಸಂಬೋಧಿಸಿ ದೇವರಾದ ಸರ್ವೇಶ್ವರ ತನ್ನ ಮುಖಾಂತರ ಅವರಿಗೆ ಹೇಳಿಕಳುಹಿಸಿದ ಮಾತುಗಳನ್ನೆಲ್ಲ ತಿಳಿಸಿದನು. 2ಅದಾದ ಮೇಲೆ ಹೋಷಾಯನ ಮಗ ಅಜರ್ಯನು, ಕಾರೇಹನ ಮಗ ಯೋಹಾನಾನನು, ಹಾಗು ಅಹಂಕಾರಿಗಳಾದ ಜನರೆಲ್ಲರು ಅವನಿಗೆ, “ನಿನ್ನ ಮಾತು ಸುಳ್ಳು, ಈಜಿಪ್ಟಿಗೆ ಹೋಗಿ ವಾಸಮಾಡಬಾರದು ಎಂದು ತಿಳಿಸುವಂತೆ ನಮ್ಮ ದೇವರಾದ ಸರ್ವೇಶ್ವರ ನಿನ್ನನ್ನು ಕಳಿಸಲಿಲ್ಲ. 3ಬದಲಿಗೆ ಬಾಬಿಲೋನಿಯರು ನಮ್ಮನ್ನು ಕೊಲ್ಲಲಿ ಅಥವಾ ಸೆರೆಗೊಯ್ಯಲಿ ಎಂದು ನಮ್ಮನ್ನು ಅವರ ಕೈಗೆ ಸಿಕ್ಕಿಸುವುದಕ್ಕಾಗಿ ನೇರೀಯನ ಮಗ ಬಾರೂಕನೇ ನಿನ್ನನ್ನು ನಮ್ಮ ಮೇಲೆ ದೊಬ್ಬಿದ್ದಾನೆ,” ಎಂದರು. 4ಹೀಗೆ ಜುದೇಯ ನಾಡಿನಲ್ಲೇ ವಾಸಮಾಡಿರೆಂಬ ಸರ್ವೇಶ್ವರನ ಮಾತನ್ನು ಕಾರೇಹನ ಮಗ ಯೋಹಾನಾನನು, ಸಮಸ್ತ ಸೇನಾಪತಿಗಳು, ಹಾಗು ಸಕಲ ಜನರು ಕೇಳದೆಹೋದರು. 5ಆಗ ರಕ್ಷಾದಳದ ನಾಯಕನಾದ ನೆಬೂಜರದಾನನನ್ನು, ಅಹೀಕಾಮನ ಮಗ ಹಾಗು ಶಾಫಾನನ ಮೊಮ್ಮಗ ಆದ ಗೆದಲ್ಯನ ವಶಕ್ಕೆ ಒಪ್ಪಿಸಿದ್ದ ಜನರನ್ನು, ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಜುದೇಯದಲ್ಲಿ ವಾಸಿಸುವುದಕ್ಕೆ ಹಿಂದಿರುಗಿ ಬಂದಿದ್ದ ಅಳಿದುಳಿದ ಯೆಹೂದಜನರನ್ನು, ಪ್ರವಾದಿ ಯೆರೆಮೀಯನನ್ನು, 6ನೇರೀಯನ ಮಗ ಬಾರೂಕನನ್ನು, ರಾಜಕುವರಿಯರನ್ನು, ಅಂತು ಗಂಡಸರು, ಹೆಂಗಸರು, ಮಕ್ಕಳು, 7ಇವರೆಲ್ಲರನ್ನು ಕಾರೇಹನ ಮಗ ಯೋಹಾನಾನನೂ ಸಕಲ ಸೇನಾಪತಿಗಳೂ ಕರೆದುಕೊಂಡು ಈಜಿಪ್ಟಿಗೆ ಹೋಗಿ ತಹಪನೇಸ್ ಎಂಬ ಊರಿಗೆ ಸೇರಿಸಿದರು. ಸರ್ವೇಶ್ವರನ ಮಾತನ್ನು ಅವರು ಕೇಳಲೇ ಇಲ್ಲ.
ನೆಬೂಕದ್ನೆಚ್ಚರನಿಂದ ಈಜಿಪ್ಟಿನ ಮೇಲೆ ಧಾಳಿ
8ಯೆರೆಮೀಯನು ತಹಪನೇಸಿನಲ್ಲಿರುವಾಗ ಸರ್ವೇಶ್ವರನ ಈ ವಾಣಿ ಕೇಳಿ ಬಂದಿತು: 9“ನೀನು ದೊಡ್ಡ ಕಲ್ಲುಗಳನ್ನು ಎತ್ತಿಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಮುಂದೆ, ಯೆಹೂದ್ಯರ ಕಣ್ಣೆದುರಿಗೆ, ನೆಲಗಟ್ಟಿನ ಕೆಳಗೆ ಇಟ್ಟು, ಗಾರೆಯಿಂದ ಮುಚ್ಚಿಬಿಟ್ಟು, ಆ ಜನರಿಗೆ ಹೀಗೆಂದು ಹೇಳು: 10‘ಇಸ್ರಯೇಲರ ದೇವರೂ ಸೇನಾಧೀಶ್ವರರೂ ಆದ ಸರ್ವೇಶ್ವರ ಹೇಳುವುದನ್ನು ಕೇಳಿ: ನಾನು ಬಾಬಿಲೋನಿನ ಅರಸನು ಹಾಗು ನನ್ನ ಸೇವಕನು ಆದ ನೆಬೂಕದ್ನೆಚ್ಚರನನ್ನು ನಾನು ಕರೆಯಿಸುವೆನು. ನಾನು ಮರೆಮಾಡಿಟ್ಟಿರುವ ಈ ಕಲ್ಲುಗಳ ಮೇಲೆಯೆ ಅವನು ತನ್ನ ಸಿಂಹಾಸನವನ್ನು ಹಾಕಿಸುವನು. ಈ ಕಲ್ಲುಗಳ ಮೇಲೆಯೆ ತನ್ನ ರತ್ನಗಂಬಳಿಯನ್ನು ಹಾಸಿಸುವನು. 11ಅವನು ಬಂದು ಈಜಿಪ್ಟ್ ದೇಶದ ಮೇಲೆ ಧಾಳಿಮಾಡುವನು. ಮರಣಕ್ಕೆ ಗೊತ್ತಾದವರು ಮರಣಕ್ಕೆ, ಸೆರೆಮನೆಗೆ ಗೊತ್ತಾದವರು ಸೆರೆಮನೆಗೆ, ಖಡ್ಗಕ್ಕೆ ಗೊತ್ತಾದವರು ಖಡ್ಗಕ್ಕೆ ಗುರಿಯಾಗುವರು. 12ಅವನು ಈಜಿಪ್ಟಿನ ದೇವತೆಗಳ ಆಲಯಗಳಿಗೆ ಬೆಂಕಿ ಹೊತ್ತಿಸುವನು. ಅವುಗಳನ್ನು ಸುಟ್ಟು ಆ ದೇವತೆಗಳನ್ನು ಸೆರೆಗೊಯ್ಯುವನು. ಕುರುಬನು ತನ್ನ ಕಂಬಳಿಯನ್ನು ಸೋಸುವಂತೆ ಅವನು ಈಜಿಪ್ಟನ್ನು ಸೋಸುವನು. 13ಬಳಿಕ ಹಾಯಾಗಿ ಅಲ್ಲಿಂದ ಹೊರಟುಹೋಗುವನು. ಅವನು ಈಜಿಪ್ಟ್ ದೇಶದಲ್ಲಿರುವ ಸೂರ್ಯ ದೇವಾಲಯದ ಸ್ತಂಭಗಳನ್ನು ಒಡೆದುಹಾಕುವನು, ಅಲ್ಲಿನ ದೇವತೆಗಳ ಆಲಯಗಳನ್ನು ಸುಟ್ಟುಹಾಕುವನು.”
Currently Selected:
ಯೆರೆಮೀಯ 43: KANCLBSI
Highlight
Share
Copy

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.