ಯಕೋಬನು 1
1
ಪೀಠಿಕೆ
1ಜಗದಾದ್ಯಂತ ಚದರಿರುವ ಇಸ್ರಯೇಲಿನ ಹನ್ನೆರಡು ಕುಲದವರಿಗೆ - ದೇವರ ಹಾಗೂ ಪ್ರಭು ಯೇಸುಕ್ರಿಸ್ತರ ದಾಸನಾದ ಯಕೋಬನ ಶುಭಾಶಯಗಳು.
ಜ್ಞಾನಕ್ಕಿಂತ ವಿಶ್ವಾಸವೇ ಶ್ರೇಷ್ಠ
2ನನ್ನ ಪ್ರಿಯ ಸಹೋದರರೇ, ನಿಮಗೆ ವಿವಿಧ ಸಂಕಟ ಶೋಧನೆಗಳು ಬಂದೊದಗಿದಾಗ ಅವುಗಳನ್ನು ಸಂತೋಷದಿಂದ ಸಹಿಸಿಕೊಳ್ಳಿ. 3ಇವು ನಿಮ್ಮ ವಿಶ್ವಾಸವನ್ನು ಒರೆಗೆ ಹಚ್ಚಿ ನಿಮ್ಮನ್ನು ದೃಢಪಡಿಸುತ್ತವೆ; ನಿಮ್ಮನ್ನು ಸಹನಶೀಲರನ್ನಾಗಿ ಮಾಡುತ್ತವೆ. 4ಈ ಸಹನೆ ಸಿದ್ಧಿಗೆ ಬಂದಾಗ ನೀವು ಯಾವ ಕುಂದುಕೊರತೆ ಇಲ್ಲದೆ, ಪರಿಪೂರ್ಣರೂ ಸರ್ವಗುಣ ಸಂಪನ್ನರೂ ಆಗುತ್ತೀರಿ. 5ನಿಮ್ಮಲ್ಲಿ ಯಾರಿಗಾದರೂ ಜ್ಞಾನದ ಕೊರತೆಯಿದ್ದರೆ ಅಂಥವನು ದೇವರಲ್ಲಿ ಬೇಡಿಕೊಳ್ಳಲಿ. ಯಾರನ್ನೂ ತಿರಸ್ಕರಿಸದೆ ಎಲ್ಲರಿಗೂ ಯಥೇಚ್ಛವಾಗಿ ನೀಡುವ ದೇವರು, ಅವನಿಗೆ ಜ್ಞಾನವನ್ನು ದಯಪಾಲಿಸುತ್ತಾರೆ. 6ಆದರೆ ಬೇಡುವವನು ವಿಶ್ವಾಸದಿಂದ ಬೇಡಲಿ. ಸಂಶಯಕ್ಕೆ ಎಡೆಕೊಡದಿರಲಿ. ಸಂಶಯಕ್ಕೀಡಾಗುವವನ ಪರಿಸ್ಥಿತಿಯಾದರೋ ಬಿರುಗಾಳಿಯ ಬಡಿತಕ್ಕೆ ಸಿಕ್ಕಿದ ಸಮುದ್ರದ ಅಲೆಯಂತೆ ತುಯ್ದಾಡುತ್ತಿರುತ್ತದೆ. 7-8ಅಂಥವನು ಚಂಚಲಚಿತ್ತನು. ಆಚಾರವಿಚಾರಗಳಲ್ಲಿ ಅಸ್ಥಿರ ಮನಸ್ಸುಳ್ಳವನು. ಆದ್ದರಿಂದ ಅವನು ಪ್ರಭುವಿನಿಂದ ಏನನ್ನಾದರೂ ಪಡೆಯುತ್ತೇನೆಂದು ಭಾವಿಸದಿರಲಿ.
ಬಡತನವೇ ಭಾಗ್ಯ
9ದೀನದಲಿತನಾದ ಸಹೋದರನು, ದೇವರು ತನ್ನನ್ನು ಉನ್ನತ ಸ್ಥಿತಿಗೆ ಏರಿಸಿದಾಗ ಆನಂದಿಸಲಿ. 10ಅಂತೆಯೇ ಧನಿಕನಾದ ಸಹೋದರನು, ದೇವರು ತನ್ನನ್ನು ದೀನಸ್ಥಿತಿಗೆ ಇಳಿಸಿದಾಗ ಆನಂದಿಸಲಿ. 11ಏಕೆಂದರೆ, ಧನಿಕರು ಹುಲ್ಲಿನ ಹೂವಿನಂತೆ ಗತಿಸಿಹೋಗುತ್ತಾರೆ. ಸೂರ್ಯನ ಸುಡುಬಿಸಿಲಿಗೆ ಹುಲ್ಲು ಒಣಗಿಹೋಗುತ್ತದೆ. ಅದರ ಹೂವು ಉದುರಿಹೋಗುವುದು, ಅದರ ಅಂದಚೆಂದವೂ ಹಾಳಾಗಿ ಹೋಗುತ್ತದೆ. ಅಂತೆಯೇ ಧನಿಕನು ತನ್ನ ವ್ಯವಹಾರಗಳಲ್ಲಿಯೇ ಕುಂದಿಹೋಗುತ್ತಾನೆ.
ತಾಳಿದವನು ಬಾಳಿಯಾನು
12ಸಂಕಟ ಶೋಧನೆಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನೇ ಧನ್ಯನು. ಅವನು ಪರಿಶೋಧನೆಯಲ್ಲಿ ಯಶಸ್ವಿಯಾದ ಮೇಲೆ ಸಜ್ಜೀವವೆಂಬ ಜಯಮಾಲೆಯನ್ನು ಪಡೆಯುತ್ತಾನೆ. ದೇವರು ತಮ್ಮನ್ನು ಪ್ರೀತಿಸುವವರಿಗೆ ಇದನ್ನು ಕಾದಿರಿಸಿರುತ್ತಾರೆ. 13ಪಾಪಪ್ರಲೋಭನೆಗೆ ಒಳಗಾದಾಗ, “ಈ ಪ್ರಲೋಭನೆಗಳು ದೇವರಿಂದಲೇ ಬಂದವು,” ಎಂದು ಯಾರೂ ಹೇಳದಿರಲಿ. ಏಕೆಂದರೆ, ದೇವರು ಸ್ವತಃ ಪಾಪಪ್ರಲೋಭನೆಗೆ ಗುರಿಯಾಗುವುದಿಲ್ಲ ಮತ್ತು ಯಾರನ್ನೂ ಅಂಥ ಪ್ರಲೋಭನೆಗೆ ಗುರಿಪಡಿಸುವುದಿಲ್ಲ. 14ಮಾನವನು ಪ್ರಲೋಭನೆಗೆ ಒಳಗಾಗುವುದು ತನ್ನ ದುರಿಚ್ಛೆಯಿಂದಲೇ ಅದು ಅವನನ್ನು ಆಕರ್ಷಿಸಿ ಮರುಳುಗೊಳಿಸುತ್ತದೆ. 15ದುರಿಚ್ಛೆ ಗರ್ಭಧರಿಸಿ ಪಾಪಕ್ಕೆ ಜನ್ಮವೀಯುತ್ತದೆ; ಪಾಪವು ಪೂರ್ತಿಯಾಗಿ ಬೆಳೆದು ಮರಣವನ್ನು ಹಡೆಯುತ್ತದೆ.
16ಪ್ರಿಯ ಸಹೋದರರೇ, ಮೋಸಹೋಗಬೇಡಿ. 17ಎಲ್ಲಾ ಯೋಗ್ಯ ವರಗಳೂ ಉತ್ತಮ ಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನ್ನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬು ಮುಸುಕಿನ ಛಾಯೆಯೂ ಇಲ್ಲ. 18ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು.
ಆಲಿಸಲೂ ಬೇಕು, ಪಾಲಿಸಲೂ ಬೇಕು
19ಸಹೋದರರೇ, ಇದನ್ನು ನೆನಪಿನಲ್ಲಿಡಿ; ನಿಮ್ಮಲ್ಲಿ ಪ್ರತಿಯೊಬ್ಬನು ಆಲಿಸುವುದರಲ್ಲಿ ಚುರುಕಾಗಿ, ಮಾತನಾಡುವುದರಲ್ಲಿ ದುಡುಕದೆ, ಸಿಟ್ಟುಗೊಳ್ಳುವುದರಲ್ಲಿ ಸಾವಧಾನವಾಗಿ ಇರಲಿ. 20-21ಮಾನವನ ಕೋಪ ದೇವನೀತಿಗೆ ಧಕ್ಕೆ! ಆದುದರಿಂದ ನಿಮ್ಮಲ್ಲಿರುವ ಎಲ್ಲ ನೀಚತನವನ್ನು ಮತ್ತು ಬೆಳೆಯುತ್ತಿರುವ ದುಷ್ಟತನವನ್ನು ಕಿತ್ತೊಗೆಯಿರಿ. ನಿಮ್ಮ ಹೃದಯದಲ್ಲಿ ದೇವರು ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರಮಾಡಬಲ್ಲದು.
22ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ. 23ದೇವರ ವಾಕ್ಯವನ್ನು ಕೇಳಿ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಸಹಜ ಮುಖವನ್ನು ನೋಡಿ, 24ಮರುಕ್ಷಣವೇ ತಾನು ಹೇಗಿದ್ದೇನೆಂದು ಮರೆತುಬಿಡುವವನಿಗೆ ಸಮಾನನು. 25ಆದರೆ ನಮಗೆ ವಿಮೋಚನೆಯನ್ನು ತರುವ ಸರ್ವೋತ್ತಮ ಧರ್ಮಶಾಸ್ತ್ರವನ್ನು ಲಕ್ಷ್ಯವಿಟ್ಟು ನೋಡಿ ಅದರಲ್ಲೇ ಧ್ಯಾನಾಸಕ್ತನಾಗಿರುವವನು ಅದನ್ನು ಮರೆಯುವುದಿಲ್ಲ. ಅವನು ಕೇಳುವವನು ಮಾತ್ರ ಆಗಿರದೆ, ವಾಕ್ಯದ ಪ್ರಕಾರ ನಡೆಯುವವನೂ ಆಗಿರುತ್ತಾನೆ. ಇಂಥವನು ಭಾಗ್ಯವಂತನು!
26ತಾನು ಸದ್ಭಕ್ತನೆಂದು ಭಾವಿಸಿಕೊಳ್ಳುವ ಯಾವನಾದರೂ ತನ್ನ ನಾಲಿಗೆಗೆ ಕಡಿವಾಣ ಹಾಕದಿದ್ದರೆ, ಅಂಥವನ ಭಕ್ತಿ ವ್ಯರ್ಥ. ಅವನು ತನ್ನನ್ನೇ ವಂಚಿಸಿಕೊಳ್ಳುತ್ತಾನಷ್ಟೆ. 27ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು - ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.
Currently Selected:
ಯಕೋಬನು 1: KANCLBSI
Highlight
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.