YouVersion Logo
Search Icon

ಯೆಶಾಯ 5

5
ದ್ರಾಕ್ಷಾವನದ ಗಾನ
1ಹಾಡುವೆ ನಾನೆನ್ನ
ಪ್ರಿಯನಿಗೆ ಗೀತೆಯೊಂದನು
ಅವನ ದ್ರಾಕ್ಷಾವನದ ಕುರಿತು ಪ್ರೇಮಗೀತೆಯನು :
ಪ್ರಿಯತಮನಿಗೆ ಇತ್ತೊಂದು ದ್ರಾಕ್ಷಿಯ ತೋಟ
ಫಲವತ್ತಾಗಿಹ ಗುಡ್ಡದ ಮೇಲಿನ ತೋಟ.
ಆರಿಸಿ ಎಸೆದನು ಕಲ್ಲುಮುಳ್ಳುಗಳನು
ಅಗೆದು ಹದಮಾಡಿದನಾತ ಗುಡ್ಡವನು.
2ನೆಟ್ಟನು ಒಳ್ಳೊಳ್ಳೆ ದ್ರಾಕ್ಷಿಯ ಸಸಿಗಳನು
ಕಟ್ಟಿದನು ಕಾವಲಿಗಾಗಿ ಅಟ್ಟಣೆಯೊಂದನು
ಕಟ್ಟಿದನು ಅದರೊಳಗೆ ಆಲೆಯೊಂದನು.
ನಿರೀಕ್ಷಿಸುತ್ತಿರೆ ಆತ ಸಿಹಿದ್ರಾಕ್ಷಿ ಹಣ್ಣನು,
ಬಿಟ್ಟಿತದೋ ಅವನಿಗೆ ಹುಳಿ ಹಣ್ಣನು !
3ಆದುದರಿಂದ ನನ್ನ ಪ್ರಿಯನು ಹೀಗೆಂದು ಕೇಳುತ್ತಾನೆ : “ಜೆರುಸಲೇಮಿನ ನಿವಾಸಿಗಳೇ, ಜುದೇಯದ ಜನರೇ, ನನಗೂ ನನ್ನ ತೋಟಕ್ಕೂ ಮಧ್ಯೆ ಇರುವ ವ್ಯಾಜ್ಯವನ್ನು ತೀರಿಸಿರಿ. 4ನನ್ನ ತೋಟಕ್ಕಾಗಿ ನಾನು ಮಾಡಿದ್ದಕ್ಕಿಂತಲೂ ಇನ್ನೇನು ಮಾಡಬೇಕಾಗಿತ್ತು? ಅದು ಸಿಹಿದ್ರಾಕ್ಷಿಯನ್ನು ಕೊಡುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿತೇಕೆ? ನನ್ನ ಈ ತೋಟಕ್ಕೆ ಏನು ಮಾಡುವೆನೆಂದು ಹೇಳುತ್ತೇನೆ, ಕೇಳಿ:
5ಕಿತ್ತೆಸೆಯುವೆನು ಅದರ ಬೇಲಿಯನು; ತುತ್ತಾಗುವುದದು ದನಕರುಗಳಿಗೆ. ಕೆಡವಿಹಾಕುವೆನು ಅದರ ಗೋಡೆಯನು; ಈಡಾಗುವುದದು ಪರರ ತುಳಿದಾಟಕ್ಕೆ. 6ಬಂಜರು ಭೂಮಿಯಾಗಿಸುವೆನು ಅದನ್ನು; ಕುಡಿಕತ್ತರಿಸುವರಾರೂ ಇರರು ಅದಕ್ಕೆ. ಮುಳ್ಳುಕಳೆ ಬೆಳೆಯುವುದು ಅದರೊಳಗೆ. ನೀಡುವೆನು ಆಣತಿಯೊಂದನು ಮೋಡಗಳಿಗೆ; ಸುರಿಸವು ತುಂತುರು ಮಳೆಯನ್ನೂ ಅದಕ್ಕೆ.
7ಇಸ್ರಯೇಲ್ ಮನೆತನವೇ ಸೇನಾಧೀಶ್ವರ ಸರ್ವೇಶ್ವರ ನೆಟ್ಟ ಆ ದ್ರಾಕ್ಷಿಯ ತೋಟ.
ಜುದೇಯದ ಜನರೇ ಆತ ನಾಟಿಮಾಡಿದಾ ಸುಂದರ ಸಸಿತೋಟ.
ನ್ಯಾಯನೀತಿಯನು ನಿರೀಕ್ಷಿಸಿದನಾತ
ಆದರೆ ಸಿಕ್ಕಿತವನಿಗೆ ರಕ್ತಪಾತ !
ಸತ್ಸಂಬಂಧವನು ಎದುರುನೋಡಿದನಾತ
ಇಗೋ, ದಕ್ಕಿತವನಿಗೆ ದುಃಖಿತರ ಆರ್ತನಾದ !
ಧಿಕ್ಕಾರಗಳ ಸುರಿಮಳೆ
8ಮನೆಯ ಮೇಲೆ ಮನೆಯನ್ನು, ಹೊಲದ ಮೇಲೆ ಹೊಲವನ್ನು ಕೂಡಿಹಾಕಿಸುತ್ತಾ ಇರುವವರಿಗೆ ಧಿಕ್ಕಾರ ! ಇತರರಿಗೆ ಕಿಂಚಿತ್ತನ್ನೂ ಬಿಡದೆ ನಾಡಿನ ನಡುವೆ ತಾವೇ ಗೌಡರಾಗಿ ವಾಸಿಸುವ ಇವರಿಗೆ ಧಿಕ್ಕಾರ ! 9ಸೇನಾಧೀಶ್ವರಸ್ವಾಮಿಯಿಂದ ನಾನು ಕಿವಿಯಾರೆ ಕೇಳಿದಂತೆ ಹಲವಾರು ಮಂದಿರಗಳು ಬರಿದಾಗುವುವು. ಸುಂದರ ಹಾಗೂ ಸವಿಸ್ತಾರವಾದ ಭವನಗಳು ನಿವಾಸಿಗಳಿಲ್ಲದೆ ಪಾಳುಬೀಳುವುವು. 10ಹತ್ತು ಎಕರೆ ದ್ರಾಕ್ಷಿತೋಟ ಕೇವಲ ಎಂಟು ಲೀಟರ್ ದ್ರಾಕ್ಷಾರಸವನ್ನು ಕೊಡುವುದು. ನೂರೆಂಬತ್ತು ಲೀಟರ್ ಬೀಜಬಿತ್ತಿದರೆ, ಕೇವಲ ಹದಿನೆಂಟು ಲೀಟರ್ ಧಾನ್ಯ ಮಾತ್ರ ಸಿಗುವುದು.
11ಮದ್ಯದ ಗೀಳಿನಿಂದ ಮುಂಜಾನೆ ಏಳುವವರಿಗೆ ಧಿಕ್ಕಾರ ! ಅಮಲೇರಿ ಉನ್ಮತ್ತರಾಗುವಂತೆ ರಾತ್ರಿಯಲ್ಲಿ ಹೊತ್ತುಮೀರಿ ಕುಡಿಯುತ್ತಾ ಕಾಲಹರಣ ಮಾಡುವವರಿಗೆ ಧಿಕ್ಕಾರ ! 12ಕಿನ್ನರಿ, ವೀಣೆ, ತಬಲ, ಕೊಳಲು, ಮದ್ಯಪಾನ ಇವೇ ಅವರ ದುಂದೌತಣದ ಸೊಬಗು. ಸ್ವಾಮಿಯ ಕಾರ್ಯಗಳನ್ನು ಅವರು ಲಕ್ಷಿಸರು. ಸ್ವಾಮಿಯ ಕೃತಿಗಳನ್ನವರು ಧ್ಯಾನಿಸರು. 13ಈ ಕಾರಣ, ನನ್ನ ಜನರು ಬುದ್ಧಿಹೀನರಂತೆ ಸೆರೆಹೋಗುವುದು ನಿಶ್ಚಯ. ಅವರ ಮುಖಂಡರು ಹಸಿವಿನಿಂದ ಸಾಯುವರು. ಅವರಲ್ಲಿ ಜನಸಾಮಾನ್ಯರು ಬಾಯಾರಿ ಸೊರಗಿಹೋಗುವರು. 14ಪಾತಾಳವು ಹಸಿದು ಹಂಬಲಿಸುತ್ತಿದೆ. ಅಗಾಧವಾಗಿ, ಬಾಯಿ ತೆರೆದು ನಿಂತಿದೆ. ಜೆರುಸಲೇಮಿನ ಶ್ರೀಮಂತರು, ಸದ್ದುಗದ್ದಲ ಮಾಡುವ, ಹೆಮ್ಮೆಯಿಂದ ಹಿಗ್ಗುವ ಜನಸಾಮಾನ್ಯರು ಆ ಪಾತಾಳದೊಳಕ್ಕೆ ಬಿದ್ದುಹೋಗುವರು.
15ನರಮಾನವರು ತಗ್ಗಿಹೋಗುವರು. ಕುಲೀನರು ಕುಗ್ಗಿಹೋಗುವರು. ಗರ್ವಿಷ್ಠರ ಸೊಕ್ಕು ಅಡಗಿಹೋಗುವುದು. 16ಸೇನಾಧೀಶ್ವರ ಸ್ವಾಮಿಯಾದರೋ ನ್ಯಾಯತೀರಿಸುವುದರಲ್ಲಿ ಸರ್ವಶ್ರೇಷ್ಠರು. ಧರ್ಮಪಾಲನೆಯಲ್ಲಿ ಪರಮಪರಿಶುದ್ಧರು ಎಂದು ಕಾಣಿಸಿಕೊಳ್ಳುತ್ತಾರೆ. 17ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. ಕುರಿಮರಿಗಳು ಅಲ್ಲಿ ಮೇಯುವುವು.
18ಅಕ್ರಮವೆಂಬ ಹಗ್ಗಗಳಿಂದ ಅಪರಾಧ ಎಂಬ ತೇರನ್ನು ಎಳೆಯುವವರಿಗೆ ಧಿಕ್ಕಾರ ! 19“ಸ್ವಾಮಿ ತ್ವರೆಮಾಡಲಿ, ತನ್ನ ಕಾರ್ಯವನ್ನು ತುರ್ತಾಗಿ ನಡೆಸಲಿ, ನೋಡೋಣ; ಇಸ್ರಯೇಲಿನ ಪರಮ ಪಾವನ ಸ್ವಾಮಿಯ ಯೋಜನೆ ಶೀಘ್ರವಾಗಿ ಕೈಗೂಡಲಿ, ಆಗ ಪರಿಗ್ರಹಿಸೋಣ” ಎಂದು ಹೇಳುವ ಜನರಿಗೆ ಧಿಕ್ಕಾರ !
20ಕೆಟ್ಟದ್ದನ್ನು ಒಳ್ಳೆಯದೆಂದೂ ಒಳ್ಳೆಯದನ್ನು ಕೆಟ್ಟದ್ದೆಂದೂ ಬೋಧನೆ ಮಾಡುವವರಿಗೆ ಧಿಕ್ಕಾರ ! ಕತ್ತಲನ್ನು ಬೆಳಕೆಂದೂ ಬೆಳಕನ್ನು ಕತ್ತಲೆಂದೂ ಸಾಧಿಸುವಂಥವರಿಗೆ ಧಿಕ್ಕಾರ ! ಕಹಿಯನ್ನು ಸಿಹಿಯೆಂದೂ ಸಿಹಿಯನ್ನು ಕಹಿಯೆಂದೂ ವಾದಿಸುವಂಥವರಿಗೆ ಧಿಕ್ಕಾರ ! 21ತಮ್ಮ ದೃಷ್ಟಿಯಲ್ಲಿ ತಾವೇ ಜ್ಞಾನಿಗಳೆಂದು ತಮ್ಮ ಗಣನೆಯಲ್ಲಿ ತಾವೇ ವಿವೇಕಿಗಳೆಂದು ಭಾವಿಸುವವರಿಗೆ ಧಿಕ್ಕಾರ !
22ಸುರಾಪಾನದಲ್ಲಿ ಶೂರರಾಗಿ, ಮದ್ಯಮಿಶ್ರಣದಲ್ಲಿ ಸಾಹಸಿಗಳಾಗಿ ಇರುವವರಿಗೆ ಧಿಕ್ಕಾರ ! 23ಲಂಚಕ್ಕೋಸ್ಕರ ನಿರ್ದೋಷಿಗಳನ್ನು ಅಪರಾಧಿಗಳೆಂದು ತೀರ್ಮಾನಿಸಿ ವಂಚಿಸುವವರಿಗೆ ಧಿಕ್ಕಾರ ! 24ಹೀಗಿರಲು, ಒಣಗಿದ ಕಳೆಯನ್ನು ಅಗ್ನಿಜ್ವಾಲೆ ಕಬಳಿಸುವಂತೆ, ಒಣಹುಲ್ಲು ಬೆಂಕಿಯಲ್ಲಿ ಬೂದಿಯಾಗುವಂತೆ, ಅವರ ಬೇರು ಕೊಳೆತುಹೋಗುವುದು. ಅವರ ಹೂ ಧೂಳಿನಂತೆ ತೂರಿಹೋಗುವುದು. ಏಕೆಂದರೆ, ಅವರು ಸೇನಾಧೀಶ್ವರಸ್ವಾಮಿಯ ಉಪದೇಶವನ್ನು ನಿರಾಕರಿಸಿದ್ದಾರೆ. ಇಸ್ರಯೇಲಿನ ಪರಮಪಾವನ ಸ್ವಾಮಿಯ ವಾಕ್ಯವನ್ನು ಅಸಡ್ಡೆಮಾಡಿದ್ದಾರೆ. 25ಎಂದೇ ತಮ್ಮ ಜನರ ವಿರುದ್ಧ ಸ್ವಾಮಿಯ ಕೋಪ ಭುಗಿಲೆದ್ದಿದೆ. ಹೊಡೆಯುವುದಕ್ಕೆ ಅವರ ಕೈ ಮೇಲಕ್ಕೆತ್ತಿದೆ. ಬೆಟ್ಟಗುಡ್ಡಗಳು ನಡುಗುವುವು. ಸತ್ತ ಹೆಣಗಳು ಕಸದಂತೆ ಬೀದಿಯಲ್ಲಿ ಬಿದ್ದಿರುವುವು. ಇಷ್ಟೆಲ್ಲ ನಡೆದರೂ ಸ್ವಾಮಿಯ ಕೋಪ ತಣಿಯದು, ಎತ್ತಿದ ಕೈ ಇಳಿಯದು.
26ದೂರದ ಜನಾಂಗಕ್ಕೆ ಸ್ವಾಮಿ
ಧ್ವಜಾರೋಹಣ ಮಾಡುವರು ಗುರುತಾಗಿ,
ಕರೆಯುವರವರನು ಜಗದ ಕಟ್ಟಕಡೆಯಿಂದ
ಸೀಟಿಹಾಕಿ; ಬರುವರಾಗ ಆ ಜನರು
ತ್ವರೆಮಾಡಿ, ವೇಗವಾಗಿ.
27ಬಳಲಿ ಹೋಗರು ಅವರಲ್ಲಿ ಯಾರೂ ಮುಗ್ಗರಿಸಿ,
ನಿದ್ರಿಸರು ಯಾರೂ ತೂಕಡಿಸಿ,
ಸಡಿಲವಾಗದವರ ನಡುಕಟ್ಟು,
ಕಿತ್ತುಹೋಗದವರ ಕೆರದ ಕಟ್ಟು.
28ಚೂಪಾಗಿವೆ ಅವರ ಬಾಣಗಳು; ಬಿಗಿದಿವೆ ಬಿಲ್ಲುಗಳು,
ಬೆಣಚುಕಲ್ಲಿನಂತಿವೆ ಕುದುರೆಗಳ ಗೊರಸುಗಳು,
ಸುತ್ತುತ್ತಿವೆ ಸುಂಟರಗಾಳಿಯಂತವರ ಚಕ್ರಗಳು.
29ಗರ್ಜಿಸುತಿಹರು ಸೈನಿಕರು ಸಿಂಹದಂತೆ,
ಆರ್ಭಟಿಸುತಿಹರವರು ಪ್ರಾಯದ ಸಿಂಹಗಳಂತೆ,
ಗುರುಗುಟ್ಟುತಿಹರು ಬೇಟೆ ಹಿಡಿದ ಕೇಸರಿಯಂತೆ.
ಅದನ್ನೆತ್ತಿಕೊಂಡು ಓಡುತಿಹರು, ಬಿಡಿಸುವರಾರೂ ಇಲ್ಲದಂತೆ.
30ಗುರುಗುಟ್ಟುತಿಹರು ಯೆಹೂದ್ಯರ ಮೇಲೆ
ಭೋರ್ಗರೆಯುವ ಸಮುದ್ರದಂತೆ;
ನಾಡಿನೆಲ್ಲೆಡೆ ಕವಿದಿಹುದು ಗಾಡಾಂಧಕಾರ;
ತಾಂಡವವಾಡುತಿಹುದು ನೋಡಿದೆಡೆ ದುಃಖದುಗುಡ;
ಮೋಡ ಕವಿದು ಇರುಳಾಗಿಹುದು ಹಗಲೊಳು ಕೂಡ !

Currently Selected:

ಯೆಶಾಯ 5: KANCLBSI

Highlight

Share

Copy

None

Want to have your highlights saved across all your devices? Sign up or sign in