YouVersion Logo
Search Icon

ಯೆಶಾಯ 13

13
ಬಾಬಿಲೋನಿನ ವಿನಾಶ
1ಬಾಬಿಲೋನಿನ ವಿಷಯವಾಗಿ ಆಮೋಚನ ಮಗ ಯೆಶಾಯನಿಗೆ ಕೇಳಿಬಂದ ದೇವವಾಣಿ :
2ಬೋಳುಬೆಟ್ಟದ ಮೇಲೆ ಧ್ವಜವನ್ನು ಏರಿಸಿರಿ. ಪ್ರಭುಗಳ ನಗರದ್ವಾರಗಳನ್ನು ಮುತ್ತುವಂತೆ ಸೈನಿಕರಿಗೆ ಸನ್ನೆಮಾಡಿ ಕೂಗಿ ಹೇಳಿರಿ.
3ಆಯ್ಕೆಯಾದವರಿಗೆ ಅಪ್ಪಣೆಮಾಡಿದ್ದೇನೆ: ಹೌದು, ಹೆಮ್ಮೆಯಿಂದ ಮೆರೆಯುವ ಶೂರರು ನನ್ನ ಕೋಪವನ್ನು ತೀರಿಸಲಿ ಎಂದು ಅವರಿಗೆ ಕರೆನೀಡಿದ್ದೇನೆ.
4ಇಗೋ, ಬೆಟ್ಟಗುಡ್ಡಗಳಿಂದ ಕೇಳಿಬರುತ್ತಿದೆ ಜನಜಂಗುಳಿಯಂಥ ಗದ್ದಲ; ಒಟ್ಟಿಗೆ ಕೂಡಿಕೊಂಡ ದೇಶವಿದೇಶಗಳ ಆರ್ಭಟ; ಸಜ್ಜಾಗಿ ನಿಂತಿದೆ ಸೇನಾಧೀಶ್ವರ ಸರ್ವೇಶ್ವರನ ಸೈನ್ಯ. 5ಅವರು ಬಂದಿರುವುದು ಭೂಮಿಯ ಕಟ್ಟಕಡೆಯ ನಾಡುಗಳಿಂದ; ಇಡೀ ರಾಷ್ಟ್ರವನ್ನು ಹಾಳುಮಾಡಲಿರುವರು ಸರ್ವೇಶ್ವರ ಕೋಪೋದ್ರೇಕದಿಂದ.
6ಪ್ರಲಾಪಿಸಿರಿ, ಸಮೀಪಿಸಿದೆ ಸರ್ವೇಶ್ವರನ ದಿನ; ಸನ್ನಿಹಿತವಾಗಿದೆ, ಸರ್ವನಾಶ ಮಾಡುವ ಸೇನಾಧೀಶ್ವರನ ದಿನ ! 7ಈ ಕಾರಣ ಜೋಲುಬೀಳುವುವು ಎಲ್ಲರ ಕೈಗಳು; ಕರಗಿ ನೀರಾಗುವುವು ಎಲ್ಲರ ಹೃದಯಗಳು. 8ಭಯಭ್ರಾಂತರಾಗುವರು ಅವರೆಲ್ಲರು; ಆಕ್ರಮಿಸುವುವು ಅವರನ್ನು ಯಾತನೆ ವೇದನೆಗಳು. ಸಂಕಟಪಡುವರವರು ಹೆರುವ ಹೆಂಗಸಿನಂತೆ; ಒಬ್ಬರನ್ನೊಬ್ಬರು ನೋಡುವರು ದಿಗ್ಭ್ರಾಂತರಾದವರಂತೆ; ಅವರ ಮುಖಗಳು ಕೆಂಪೇರುವುವು ಬೆಂಕಿಯಂತೆ. 9ಇಗೋ, ಸರ್ವೇಶ್ವರನ ದಿನ ಬರುತ್ತಿದೆ ! ಭೂಮಿಯನ್ನು ಹಾಳುಮಾಡಲು, ಪಾಪಿಗಳನ್ನು ನಿರ್ಮೂಲಮಾಡಲು; ಕೋಪೋದ್ರೇಕದಿಂದ, ರೋಷಾವೇಶದಿಂದ, ಕ್ರೂರವಾಗಿ ಬರುತ್ತಿದೆ ! 10ಆಕಾಶದ ತಾರೆಗಳು, ನಕ್ಷತ್ರಗಳು ಬೆಳಗವು, ಸೂರ್ಯನು ಅಂಧಕಾರಮಯನಾಗುವನು, ಚಂದ್ರನು ಕಾಂತಿಹೀನನಾಗುವನು.
11ಸರ್ವೇಶ್ವರ ಇಂತೆನ್ನುತ್ತಾರೆ : “ನಾನು ಲೋಕದವರಿಗೆ ಪಾಪದ ಫಲವನ್ನೂ ದುರುಳರಿಗೆ ದುಷ್ಕೃತ್ಯಗಳ ಫಸಲನ್ನೂ ತಿನ್ನಿಸುವೆನು. ಸೊಕ್ಕಿದವನ ಕೊಬ್ಬನ್ನು ಕರಗಿಸುವೆನು. ಬಲಾತ್ಕಾರ ಮಾಡುವವರ ಹೆಮ್ಮೆಯನ್ನು ಅಡಗಿಸುವೆನು. 12ಅಳಿದುಳಿದ ಜನರು ಅಪರಂಜಿಗಿಂತಲೂ ಓಫೀರಿನ ಬಂಗಾರಕ್ಕಿಂತಲೂ ವಿರಳವಾಗಿರುವಂತೆ ಮಾಡುವೆನು. 13ಸೇನಾಧೀಶ್ವರ ಸರ್ವೇಶ್ವರನು ಕೋಪೋದ್ರೇಕದಿಂದ ರೋಷಾವೇಶದಿಂದ ಕೆರಳುವ ದಿನದಂದು ಆಕಾಶಮಂಡಲ ನಡುಗುವುದು, ಭೂಮಂಡಲ ಸ್ಥಳಪಲ್ಲಟಗೊಳ್ಳುವುದು.
14“ಬೇಟೆಗಾರನಿಂದ ತಪ್ಪಿಸಿಕೊಂಡು ಓಡುತ್ತಿರುವ ಜಿಂಕೆಯಂತೆಯೂ ಒಟ್ಟುಗೂಡಿಸಲು ಯಾರೂ ಇಲ್ಲದಂಥ ಕುರಿಗಳಂತೆಯೂ ಪ್ರತಿಯೊಬ್ಬನು ಸ್ವಜನರ ಕಡೆಗೆ ತಿರುಗುವನು; ಸ್ವದೇಶದ ಕಡೆಗೆ ಓಡುವನು. 15ಸಿಕ್ಕಿಸಿಕ್ಕಿದವರೆಲ್ಲರು ಇರಿತಕ್ಕೆ ಗುರಿಯಾಗುವರು. ಅಟ್ಟಿಹಿಡಿಯಲಾದವರೆಲ್ಲರು ಕತ್ತಿಗೆ ತುತ್ತಾಗುವರು. 16ಅವರ ಮಕ್ಕಳನ್ನು ಬಂಡೆಗೆ ಅಪ್ಪಳಿಸಲಾಗುವುದು. ಅವರ ಮನೆಗಳನ್ನು ಸೂರೆಮಾಡಲಾಗುವುದು. ಅವರ ಹೆಂಗಳೆಯರು ಅತ್ಯಾಚಾರಕ್ಕೆ ಈಡಾಗುವರು.
17“ಇಗೋ, ಬಾಬಿಲೋನಿಯದ ಜನರಿಗೆ ವಿರುದ್ಧವಾಗಿ ಮೇದ್ಯರನ್ನು ಎತ್ತಿಕಟ್ಟುವೆನು. ಇವರು ಬೆಳ್ಳಿಬಂಗಾರಕ್ಕೆ ಮಾರುಹೋಗರು. 18ಇವರ ಬಿಲ್ಲುಗಳು ಯುವಜನರನ್ನು ಚೂರುಚೂರು ಮಾಡುವುವು; ಇವರು ಕರುಳ ಕುಡಿಗಳನ್ನೂ ಕನಿಕರಿಸರು; ಮಕ್ಕಳುಮರಿಗಳನ್ನೂ ಕರುಣಿಸದು ಇವರ ಕಣ್ಣು. 19ಬಾಬಿಲೋನ್ ರಾಜ್ಯಗಳಿಗೆ ಶಿರೋಮಣಿ, ಕಸ್ದೀಯರ ಭವ್ಯಭೂಷಣ. ಆದರೆ ದೇವರಾದ ನಾನು ಸೊದೋಮ್ ಮತ್ತು ಗೊಮೋರಾ ನಾಡುಗಳನ್ನು ನಾಶಮಾಡಿದಂತೆ ಇದನ್ನೂ ಕೆಡಿಸಿ ನಾಶಮಾಡುವೆನು. 20ಅದು ಎಂದಿಗೂ ನಿವಾಸಕ್ಕೆ ಯೋಗ್ಯವಾಗದು. ತಲತಲಾಂತರಕ್ಕೂ ಅಲ್ಲಿ ಜನರು ಒಕ್ಕಲು ಮಾಡರು. ಯಾವ ಅರಬ್ಬಿಯನೂ ಅಲ್ಲಿ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು. 21ಆ ನಾಡು ಕಾಡುಮೃಗಗಳಿಗೆ ಬೀಡಾಗುವುದು. ಅದರ ಮನೆಗಳು ಗೂಬೆಗಳ ಗೂಡಾಗುವುವು. ಉಷ್ಟ್ರಪಕ್ಷಿಗಳು ಅಲ್ಲಿ ವಾಸಮಾಡುವುವು. ಕಾಡುಮೇಕೆಗಳು#13:21 ಅಥವಾ : ದೆವ್ವಗಳು. ಕುಣಿದಾಡುವುವು. 22ಅದರ ಅರಮನೆಗಳಲ್ಲಿ ನರಿಗಳು, ಮೋಜಿನ ಮಹಲುಗಳಲ್ಲಿ ತೋಳಗಳು ಕೂಗಾಡುವುವು. ಬಾಬಿಲೋನಿಗೆ ಕಾಲ ಬಂದಿದೆ. ಅದರ ದಿನಗಳು ಮುಗಿಯುತ್ತಿವೆ.

Currently Selected:

ಯೆಶಾಯ 13: KANCLBSI

Highlight

Share

Copy

None

Want to have your highlights saved across all your devices? Sign up or sign in