ಜೆಕರ್ಯ 6
6
ನಾಲ್ಕು ರಥಗಳ ಕನಸು
1ಪುನಃ ನಾನು ಕಣ್ಣೆತ್ತಿನೋಡಲು ಇಗೋ, ಎರಡು ಬೆಟ್ಟಗಳ ನಡುವೆಯಿಂದ ಬರುತ್ತಿರುವ ನಾಲ್ಕು ರಥಗಳು ಕಾಣಿಸಿದವು, ಆ ಬೆಟ್ಟಗಳು ತಾಮ್ರದವುಗಳು. 2ಮೊದಲನೆಯ ರಥಕ್ಕೆ ಕೆಂಪು ಕುದುರೆಗಳು, ಎರಡನೆಯ ರಥಕ್ಕೆ ಕಪ್ಪು ಕುದುರೆಗಳು, 3ಮೂರನೆಯ ರಥಕ್ಕೆ ಬಿಳಿ ಕುದುರೆಗಳು, ನಾಲ್ಕನೆಯ ರಥಕ್ಕೆ ಮಚ್ಚೆ ಮಚ್ಚೆಯ ಬಲವಾದ ಕುದುರೆಗಳು ಕಟ್ಟಿದ್ದವು. 4ವಿವರಿಸುವ ದೇವದೂತನನ್ನು - ಸ್ವಾಮೀ, ಇವುಗಳು ಏನು ಎಂದು ನಾನು ಪ್ರಸ್ತಾಪವೆತ್ತಿ ಕೇಳಲು ಆ ದೇವದೂತನು ನನಗೆ - 5ಇವು ಆಕಾಶದ ನಾಲ್ಕು ಗಾಳಿಗಳು; ಭೂಲೋಕದೊಡೆಯನ ಸನ್ನಿಧಾನದಲ್ಲಿ ನಿಂತಿದ್ದು ಅಲ್ಲಿಂದ ಹೊರಟು ಬರುತ್ತಾ ಇವೆ ಎಂದುತ್ತರ ಕೊಟ್ಟನು. 6ಅನಂತರ ಕಪ್ಪು ಕುದುರೆಗಳು ಉತ್ತರದೇಶಕ್ಕೆ ಹೊರಟವು. ಬಿಳಿ ಕುದುರೆಗಳು ಅವುಗಳನ್ನು ಹಿಂಬಾಲಿಸಿದವು. ಮಚ್ಚೆ ಮಚ್ಚೆಯ ಕುದುರೆಗಳು ದಕ್ಷಿಣದೇಶಕ್ಕೆ ಹೋದವು. 7ಕೆಂಪು#6.7 ಪಾಠಾಂತರ: ಬಲವಾದ. ಕುದುರೆಗಳು ಬಂದು ಲೋಕದಲ್ಲಿ ಸಂಚರಿಸುವದಕ್ಕೆ ಹೊರಡಬೇಕೆಂದು ತ್ವರೆಪಟ್ಟವು; ಅವನು - ಹೊರಡಿರಿ, ಲೋಕದಲ್ಲಿ ಸಂಚರಿಸಿರಿ ಎಂದಪ್ಪಣೆಮಾಡಲು ಅವು ಲೋಕದಲ್ಲಿ ಸಂಚರಿಸಿದವು. 8ಆಮೇಲೆ ಅವನು ನನಗೆ - ಆಹಾ, ಉತ್ತರದೇಶಕ್ಕೆ ಹೋದವುಗಳು ಅಲ್ಲಿ ನನ್ನ ಕೋಪವನ್ನು ಶಾಂತಿಗೊಳಿಸಿವೆ ಎಂದು ಕೂಗಿ ಹೇಳಿದನು.
ಇಸ್ರಾಯೇಲಿನ ಮುಂದಿನ ರಾಜ್ಯಭಾರವನ್ನು ಸೂಚಿಸುವ ಕಾರ್ಯ
9ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - 10ಇನ್ನು ಸೆರೆಯಲ್ಲಿರುವವರೊಳಗೆ ಸೇರಿದವರಾದ ಹೆಲ್ದಾಯ, ತೋಬೀಯ, ಯೆದಾಯ ಎಂಬವರ ಕೈಯಿಂದ ಬೆಳ್ಳಿಬಂಗಾರಗಳನ್ನು ಈಸಿಕೋ; ಈ ದಿವಸವೇ ನೀನು ಹೋಗಿ ಬಾಬೆಲಿನಿಂದ ಬಂದ ಇವರು ಇಳಿದಿರುವ ಚೆಫನ್ಯನ ಮಗನಾದ ಯೋಷೀಯನ ಮನೆಯನ್ನು ಸೇರಿ 11ಇವರಿಂದ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡು ಕಿರೀಟವನ್ನು ರೂಪಿಸಿ ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನ ತಲೆಯ ಮೇಲೆ ಇಟ್ಟು 12ಅವನಿಗೆ ಹೀಗೆ ಹೇಳು - ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಇಗೋ, ಮೊಳಿಕೆಯೆಂಬ ಪುರುಷನು! ಅವನು ಇದ್ದಲ್ಲಿಯೇ ವೃದ್ಧಿಯಾಗಿ ಯೆಹೋವನ ಆಲಯವನ್ನು ಕಟ್ಟಿಸುವನು; 13ಹೌದು, ಅವನೇ ಯೆಹೋವನ ಆಲಯವನ್ನು ಕಟ್ಟಿಸಿ ರಾಜವೈಭವವನ್ನು ತಾಳಿ ತನ್ನ ಸಿಂಹಾಸನದಲ್ಲಿ ಆಸೀನನಾಗಿ ಆಳುವನು; ಮತ್ತು ಯಾಜಕನು ತನ್ನ#6.13 ಪಾಠಾಂತರ: ಅವನ ಬಲಗಡೆಯಲ್ಲಿ. ಸಿಂಹಾಸನದಲ್ಲಿ ಕೂಡ್ರುವನು; ಅವರಿಬ್ಬರೂ ಸಮ್ಮತಿಸಮಾಧಾನಗಳಿಂದಿರುವರು. 14ಆ ಕಿರೀಟವು ಹೇಲೆಮ್, ತೋಬೀಯ, ಯೆದಾಯ, ಚೆಫನ್ಯನ ಮಗನಾದ ಹೇನ್, ಇವರ ಜ್ಞಾಪಕಾರ್ಥವಾಗಿ ಯೆಹೋವನ ಆಲಯದಲ್ಲಿ ಇಟ್ಟಿರುವದು. 15ದೂರದಲ್ಲಿರುವವರು ಬಂದು ಯೆಹೋವನ ಆಲಯವನ್ನು ಕಟ್ಟುವದಕ್ಕೆ ಕೈಹಾಕುವರು; ಆಗ ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದಾತನು ಸೇನಾಧೀಶ್ವರ ಯೆಹೋವನೇ ಎಂದು ನಿಮಗೆ ದೃಢವಾಗುವದು. ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಮನಃಪೂರ್ವಕವಾಗಿ ಕೇಳಿದರೆ ಇದೆಲ್ಲಾ ನೆರವೇರುವದು.
Currently Selected:
ಜೆಕರ್ಯ 6: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.