YouVersion Logo
Search Icon

ಕೀರ್ತನೆಗಳು 91

91
ದೇವಾಶ್ರಿತನು ಸುರಕ್ಷಿತನಾಗಿರುವನು
(ವಿಮೋ. 23.20-26)
1ಪರಾತ್ಪರನ ಮರೆಹೊಕ್ಕಿರುವವನು ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
2ನಾನು ಯೆಹೋವನಿಗೆ - ನೀನೇ ನನ್ನ ಶರಣನು ನನ್ನ ದುರ್ಗವು
ನಾನು ಭರವಸವಿಟ್ಟಿರುವ ನನ್ನ ದೇವರು ಎಂದು ಹೇಳುವೆನು.
3ನಿನ್ನನ್ನು ಬೇಟೆಗಾರನ ಬಲೆಯಿಂದಲೂ
ಮರಣಕರವ್ಯಾಧಿಯಿಂದಲೂ ತಪ್ಪಿಸುವವನು ಆತನೇ.
4ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು;
ಆತನ ಪಕ್ಕಗಳ ಮರೆಯನ್ನು ಆಶ್ರಯಿಸಿಕೊಳ್ಳುವಿ.
ಆತನ ಸತ್ಯತೆಯೇ ನಿನಗೆ ಖೇಡ್ಯವೂ ಗುರಾಣಿಯೂ ಆಗಿದೆ.
5ಇರುಳಲ್ಲಿ ಭಯಹುಟ್ಟಿಸುವ ಯಾವದಕ್ಕೂ
ಹಗಲಲ್ಲಿ ಹಾರಿಬರುವ ಬಾಣಕ್ಕೂ
6ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ ಹಾನಿಕರವಾದ ಮಧ್ಯಾಹ್ನದ ಕೇಡಿಗೂ ಅಂಜ ಕಾರಣವಿಲ್ಲ.
7ನಿನ್ನ ಮಗ್ಗುಲಲ್ಲಿ ಸಾವಿರ ಜನರು,
ನಿನ್ನ ಬಲಗಡೆಯಲ್ಲಿ ಹತ್ತುಸಾವಿರ ಜನರು ಸತ್ತುಬಿದ್ದರೂ ನಿನಗೇನೂ ತಟ್ಟದು.
8ನೀನು ಅದನ್ನು ಕಣ್ಣಾರೆ ಕಂಡು
ದುಷ್ಟರಿಗೆ ಪ್ರತಿದಂಡನೆಯುಂಟೆಂಬದಕ್ಕೆ ಸಾಕ್ಷಿಯಾಗಿರುವಿಯಷ್ಟೆ.
9ಯೆಹೋವನೇ ನನ್ನ ಶರಣನು!
ಪರಾತ್ಪರನನ್ನು ನಿವಾಸಸ್ಥಾನ ಮಾಡಿಕೊಂಡಿದ್ದೀಯಲ್ಲಾ.
10ಯಾವ ಕೇಡೂ ನಿನಗೆ ಸಂಭವಿಸದು;
ಉಪದ್ರವವು ನಿನ್ನ ಗುಡಾರದ ಸಮೀಪಕ್ಕೂ ಬಾರದು.
11ನೀನು ಹೋಗುವಲ್ಲೆಲ್ಲಾ ನಿನ್ನನ್ನು ಕಾಯುವದಕ್ಕೆ
ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು.
12ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು.
13ಸಿಂಹಸರ್ಪಗಳ ಮೇಲೆ ನಡೆಯುವಿ;
ಪ್ರಾಯದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.
14ಅವನು ನನ್ನಲ್ಲಿ ಆಸಕ್ತನಾಗಿರುವದರಿಂದ ಅವನನ್ನು ರಕ್ಷಿಸುವೆನು;
ನನ್ನ ನಾಮವನ್ನು ಅರಿತವನಾಗಿರುವದರಿಂದ ಅವನನ್ನು ಉದ್ಧರಿಸುವೆನು.
15ಅವನು ನನಗೆ ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸುವೆನು;
ಇಕ್ಕಟ್ಟಿನಲ್ಲಿ ಹತ್ತಿರವಿದ್ದು ಅವನನ್ನು ತಪ್ಪಿಸಿ ಘನಪಡಿಸುವೆನು;
16ದೀರ್ಘಾಯುಷ್ಯವನ್ನು ಅನುಗ್ರಹಿಸಿ ಅವನನ್ನು ತೃಪ್ತಿಪಡಿಸುವೆನು;
ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸುವೆನು.

Highlight

Share

Copy

None

Want to have your highlights saved across all your devices? Sign up or sign in