ಕೀರ್ತನೆಗಳು 65
65
ಲೋಕಪರಿಪಾಲನೆಗಾಗಿಯೂ ಫಲಸಮೃದ್ಧಿಗಾಗಿಯೂ ದೇವರನ್ನು ಸ್ತುತಿಸುವ ಕೀರ್ತನೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ; ಹಾಡು
1ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಸಿದ್ಧವಾಗಿದೆ;
ಹರಕೆಗಳು ನಿನಗೆ ಸಲ್ಲುತ್ತವೆ.
2ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.
3ನನ್ನ ಪಾಪಗಳನ್ನು ನಿವಾರಿಸಲು ನನ್ನಿಂದಾಗುವದಿಲ್ಲ.
ಆದರೆ ನಮ್ಮ ದೋಷಪರಿಹಾರಕನು ನೀನೇ.
4ನಿನ್ನ ಅಂಗಳದಲ್ಲಿ ವಾಸಿಸುವವರಾಗಿ ನಿನ್ನ ಸನ್ನಿಧಿಯಲ್ಲಿ ಸೇವೆಮಾಡುವದಕ್ಕೋಸ್ಕರ
ಯಾರನ್ನು ಆರಿಸಿಕೊಳ್ಳುತ್ತೀಯೋ ಅವರೇ ಧನ್ಯರು.
ನೀನು ವಾಸಿಸುವ ಮಹಾಪವಿತ್ರಾಲಯದ ಸೌಭಾಗ್ಯದಿಂದ ನಮಗೆ ಸಂತೃಪ್ತಿಯಾಗಲಿ.
5ನಮ್ಮ ರಕ್ಷಕನಾದ ದೇವರೇ, ನೀನು ಭಯಂಕರ ಮಹತ್ಕಾರ್ಯಗಳನ್ನು ನಡಿಸಿ
ನಿನ್ನ ನೀತಿಗನುಸಾರವಾಗಿ ನಮಗೆ ಸದುತ್ತರವನ್ನು ದಯಪಾಲಿಸುವಿ.
ಭೂವಿುಯ ಎಲ್ಲಾ ಕಡೆಯವರ, ಬಹುದೂರ ಸಮುದ್ರದ ಆಚೆ ಎಲ್ಲಾ ನಿವಾಸಿಗಳ ನಂಬಿಕೆಗೆ ಆಧಾರನು ನೀನೇ.
6ನೀನು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡು
ಬಲದಿಂದ ಪರ್ವತಗಳನ್ನು ಸ್ಥಿರವಾಗಿ ನಿಲ್ಲಿಸಿದವನೂ
7ಸಮುದ್ರತರಂಗಗಳ ಘೋಷವನ್ನು ತಡೆಯುವವನೂ
ಜನಾಂಗಗಳ ದೊಂಬಿಯನ್ನು ಶಾಂತಿಪಡಿಸುವವನೂ ಆಗಿದ್ದೀ.
8ಭೂವಿುಯ ಕಟ್ಟಕಡೆಗಳಲ್ಲಿ ವಾಸಿಸುವವರೂ ನಿನ್ನ ಅದ್ಭುತಕೃತ್ಯಗಳಿಗಾಗಿ ಭಯಪಡುತ್ತಾರೆ;
ಮೂಡಣದಿಂದ ಪಡುವಣದವರೆಗೂ ಇರುವವರನ್ನು ಹರ್ಷಗೊಳಿಸುವಿ.
9ನೀನು ನಮ್ಮ ದೇಶವನ್ನು#65.9 ಅಥವಾ: ಭೂವಿುಯನ್ನು. ಕಟಾಕ್ಷಿಸಿ ಅದರ ಮೇಲೆ ಮಳೆಸುರಿಸಿ ಚೆನ್ನಾಗಿ ಹದಗೊಳಿಸುತ್ತೀ;
ದೇವರೇ, ನಿನ್ನ ಕಾಲುವೆಗಳಲ್ಲಿ ನೀರಿಗೆ ಕೊರತೆ ಇಲ್ಲ.
ಹೀಗೆ ಭೂವಿುಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.
10ನೇಗಿಲಗೆರೆಗಳನ್ನು ತ್ಯಾವಿಸಿ
ಮಳೆಯಿಂದ ಅದರ ಹೆಂಟೆಗಳನ್ನು ಕರಗಿಸಿ ಸಮಮಾಡುತ್ತೀ;
ಅದರ ಬೆಳೆಯನ್ನು ವೃದ್ಧಿಪಡಿಸುತ್ತೀ.
11ನಿನ್ನ ಕೃಪೆಯಿಂದ ಸಂವತ್ಸರಕ್ಕೆ ಸುಭಿಕ್ಷ ಕಿರೀಟವನ್ನು ಇಟ್ಟಿದ್ದೀ;
ನೀನು ಹಾದುಹೋಗುವ ಮಾರ್ಗದಲ್ಲೆಲ್ಲಾ ಸಮೃದ್ಧಿಕರವಾದ ವೃಷ್ಟಿಯು ಸುರಿಯುವದು.
12ಮೇವುಗಾಡುಗಳು ಹಚ್ಚಗೆ ಕಂಗೊಳಿಸುತ್ತವೆ;
ಗುಡ್ಡಗಳು ಹರ್ಷವೆಂಬ ನಡುಕಟ್ಟನ್ನು ಬಿಗಿದುಕೊಂಡಂತಿವೆ.
13ಹುಲ್ಲುಗಾವಲುಗಳು ಕುರಿಹಿಂಡುಗಳೆಂಬ ವಸ್ತ್ರವನ್ನು ಹೊದೆದುಕೊಂಡಿವೆ;
ತಗ್ಗುಗಳು ಬೆಳೆಯಿಂದ ಶೋಭಿಸುತ್ತವೆ;
ಅವು ಆನಂದಘೋಷಮಾಡಿ ಹಾಡುತ್ತವೋ ಎಂಬಂತಿವೆ.
Currently Selected:
ಕೀರ್ತನೆಗಳು 65: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.