YouVersion Logo
Search Icon

ಜ್ಞಾನೋಕ್ತಿಗಳು 30

30
1ದೈವೋಕ್ತಿ. ಯಾಕೆ ಎಂಬವನ ಮಗನಾದ ಆಗೂರನ ಮಾತುಗಳು.
2ಇವನು#30.2 ಪಾಠಾಂತರ: ಇವನು ಹೀಗೆ ಹೇಳಿದನು: ದೇವರೇ, ಬೇಸರಗೊಂಡಿದ್ದೇನೆ. ದೇವರೇ, ಬೇಸರಗೊಂಡಿದ್ದೇನೆ, ಸತ್ತಿದ್ದೇನೆ! ಇಥಿಯೇಲನಿಗೆ, ಇಥಿಯೇಲನಿಗೂ ಉಕ್ಕಾಲನಿಗೂ ಹೀಗೆ ಹೇಳಿದನು.
ಮನುಷ್ಯರಲ್ಲಿ ನನ್ನಂಥ ಪಶುಪ್ರಾಯನು ಇಲ್ಲವಷ್ಟೆ!
ಮಾನುಷವಿವೇಕವು ನನಗಿಲ್ಲ.
3ನಾನು ಜ್ಞಾನವನ್ನು ಪಡೆದುಕೊಂಡಿಲ್ಲ,
ಪರಿಶುದ್ಧನ ವಿಷಯವಾದ ತಿಳುವಳಿಕೆಯನ್ನು ಹೊಂದಿಲ್ಲ.
4ಆಕಾಶಕ್ಕೆ ಏರಿ ಇಳಿದಿರುವವನಾರು?
ಮುಷ್ಟಿಯಲ್ಲಿ ಗಾಳಿಯನ್ನು ಕೂಡಿಸಿರುವವರು ಯಾರು?
ತನ್ನ ಬಟ್ಟೆಯಲ್ಲಿ ನೀರನ್ನು ಮೂಟೆಕಟ್ಟಿರುವವರು ಯಾರು?
ಭೂವಿುಯ ಎಲ್ಲೆಗಳನ್ನೆಲ್ಲಾ ಸ್ಥಾಪಿಸಿರುವವರು ಯಾರು?
ಅವನ ಹೆಸರೇನು? ಅವನ ಮಗನ ಹೆಸರೇನು? ನೀನೇ ಬಲ್ಲವನು.
5ದೇವರ ಪ್ರತಿಯೊಂದು ಮಾತು ಶುದ್ಧವಾದದ್ದು;
ಆತನು ಶರಣಾಗತರಿಗೆ ಗುರಾಣಿಯಾಗಿದ್ದಾನೆ.
6ಆತನ ಮಾತುಗಳಿಗೆ ಯಾವದನ್ನೂ ಸೇರಿಸಬೇಡ;
ಆತನು ನಿನ್ನನ್ನು ಖಂಡಿಸುವಾಗ ನೀನು ಸುಳ್ಳುಗಾರನೆಂದು ತೋರಿಬಂದೀಯೆ.
7ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ;
ಅನುಗ್ರಹಿಸದಿರಬೇಡ, ನಾನು ಸಾಯುವದರೊಳಗಾಗಿ ಅವುಗಳನ್ನು ಕೈಗೂಡಿಸು.
8ನನ್ನಿಂದ ಕಪಟವನ್ನೂ ಸುಳ್ಳುಮಾತನ್ನೂ ತೊಲಗಿಸು,
ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ
ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು.
9ಹಾಗಾಗದೆ ಹೊಟ್ಟೆತುಂಬಿದವನಾದರೆ ಯೆಹೋವನು ಯಾರೋ ಎಂದು ನಿನ್ನನ್ನು ತಿರಸ್ಕರಿಸೇನು;
ಬಡವನಾದರೆ ಕಳ್ಳತನಮಾಡಿ ನನ್ನ ದೇವರಾದ ನಿನ್ನ ಹೆಸರನ್ನು ಅಯೋಗ್ಯವಾಗಿ ಎತ್ತೇನು.
10ಆಳಿನ ಮೇಲೆ ದಣಿಗೆ ದೂರನ್ನು ಹೇಳಬೇಡ;
ಅವನು ಶಪಿಸಾನು; ನಿನ್ನಲ್ಲೇ ದೋಷವು ಕಂಡುಬಂದೀತು.
11ತಾಯಿಗೆ ಶುಭವನ್ನು ಕೋರದೆ
ತಂದೆಯನ್ನು ಶಪಿಸುವ ಒಂದು ತರದವರುಂಟು.
12ತಮ್ಮ ಕೊಳೆಯನ್ನು ತೊಳಕೊಳ್ಳದೆ
ತಾವೇ ಶುದ್ಧರೆಂದು ಎಣಿಸಿಕೊಳ್ಳುವ ಬೇರೊಂದು ತರದವರುಂಟು.
13ಕಣ್ಣು ರೆಪ್ಪೆಗಳನ್ನೆತ್ತಿಕೊಂಡು
ಎಷ್ಟೋ ಮೇಲೆ ಮೇಲೆಯೇ ನೋಡುತ್ತಿರುವ ಇನ್ನೊಂದು ತರದವರುಂಟು.
14ಖಡ್ಗದಂತಿರುವ ಹಲ್ಲುಗಳೂ ಕತ್ತಿಯಂತಿರುವ ಕೋರೆಗಳೂ ಉಳ್ಳವರಾಗಿ
ಭೂವಿುಯೊಳಗಿಂದ ಬಡವರನ್ನೂ ಮನುಷ್ಯರ ಮಧ್ಯದೊಳಗಿಂದ ದಿಕ್ಕಿಲ್ಲದವರನ್ನೂ
ಅಗಿದು ನುಂಗಿಬಿಡುವ ಮತ್ತೊಂದು ತರದವರುಂಟು.
15ಕೊಡು, ಕೊಡು ಅನ್ನುವ ಎರಡು ಹೆಣ್ಣು ಮಕ್ಕಳು ಜಿಗಣೆಗೆ ಉಂಟು.
ತೃಪ್ತಿಪಡದವುಗಳು ಮೂರು ಉಂಟು;
ಹೌದು, ಸಾಕೆನ್ನದವುಗಳು ನಾಲ್ಕು ಉಂಟು.
16ಯಾವವಂದರೆ, ಪಾತಾಳ, ಹೆರದ ಗರ್ಭ,
ನೀರಿನಿಂದ ತೃಪ್ತಿಪಡದ ಭೂವಿು,
ಸಾಕಾಯಿತೆಂದು ಹೇಳದ ಬೆಂಕಿ, ಇವೇ.
17ತಂದೆಯನ್ನು ಹಾಸ್ಯಮಾಡಿ ತಾಯಿಯ ಅಪ್ಪಣೆಯನ್ನು ಧಿಕ್ಕರಿಸುವವನ ಕಣ್ಣನ್ನು
ಹಳ್ಳಕೊಳ್ಳದ ಕಾಗೆಗಳು ಕುಕ್ಕುವವು, ರಣಹದ್ದುಗಳು ತಿಂದುಬಿಡುವವು.
18ಮೂರು ವಿಷಯಗಳು ನನ್ನ ಬುದ್ಧಿಯನ್ನು ಮೀರಿವೆ,
ಹೌದು, ನಾಲ್ಕನ್ನು ಗ್ರಹಿಸಲಾರೆನು:
19ಯಾವವಂದರೆ, ಆಕಾಶದಲ್ಲಿ ಹದ್ದಿನ ಹಾದಿ,
ಬಂಡೆಯ ಮೇಲೆ ಸರ್ಪದ ಸರಣಿ,
ಸಾಗರದ ನಡುವೆ ಹಡಗಿನ ಮಾರ್ಗ,
ಸ್ತ್ರೀಯಲ್ಲಿ ಪುರುಷನ ಪದ್ದತಿ, ಇವೇ.
20ಜಾರಳ ನಡತೆಯು ಹೀಗೆಯೇ ಸರಿ;
ಅವಳು ತಿಂದು ಬಾಯಿ ಒರಿಸಿಕೊಂಡು
ನಾನು ತಪ್ಪುಮಾಡಲಿಲ್ಲವಲ್ಲವೆ, ಅಂದುಕೊಳ್ಳುವಳು.
21ಮೂರರ ಭಾರದಿಂದ ಭೂವಿುಯು ಕಂಪಿಸುತ್ತದೆ,
ಹೌದು, ನಾಲ್ಕರ ಹೊರೆಯನ್ನು ತಾಳಲಾರದು.
22ಯಾವವಂದರೆ, ಪಟ್ಟಕ್ಕೆ ಬಂದ ದಾಸನು,
ಹೊಟ್ಟೆತುಂಬಿದ ನೀಚನು,
23ಮದುವೆಯಾದ ಚಂಡಿಯು,
ಸವತಿಯಾದ#30.23 ಅಥವಾ: ಯಜಮಾನನಿಗೆ ಬಾಧ್ಯಸ್ತಳಾದ ತೊತ್ತು. ತೊತ್ತು, ಇವೇ:
24ಭೂವಿುಯ ಮೇಲೆ ಅಧಿಕ ಜ್ಞಾನವುಳ್ಳ ನಾಲ್ಕು ಸಣ್ಣ ಜಂತುಗಳುಂಟು.
25ಇರುವೆಗಳು ದುರ್ಬಲಜಾತಿಯಾದರೂ
ಸುಗ್ಗಿಯಲ್ಲಿ ತಮ್ಮ ಆಹಾರವನ್ನು ಅಣಿಮಾಡಿಕೊಳ್ಳುವವು.
26ಬೆಟ್ಟದ ಮೊಲಗಳು ದೊಡ್ಡ ಜಾತಿಯಲ್ಲದಿದ್ದರೂ
ಬಂಡೆಗಳಲ್ಲಿ ತಮ್ಮ ಮನೆಗಳನ್ನು ಮಾಡಿಕೊಳ್ಳುವವು.
27ವಿುಡತೆಗಳಿಗೆ ಅರಸನಿಲ್ಲ,
ಆದರೂ ಅವೆಲ್ಲಾ ದಂಡುದಂಡಾಗಿ ಹೊರಡುವವು.
28ಹಲ್ಲಿಯು#30.28 ಅಥವಾ: ಹಲ್ಲಿಯನ್ನು ಕೈಯೊಳಗೆ ಹಿಡಿದುಕೊಳ್ಳಬಹುದು, ಆದರೂ ಅದು. ಅಂಗೈಯ ಆಸರೆಯಿಂದ ಹಿಡಿದು
ಅರಮನೆಗಳಲ್ಲಿ ವಾಸಮಾಡುವದು.
29ಗಂಭೀರಗಮನದ ಮೂರು ಪ್ರಾಣಿಗಳುಂಟು,
ಹೌದು, ಗಂಭೀರಗತಿಯ ನಾಲ್ಕುಂಟು.
30ಯಾವದಕ್ಕೂ ಹೆದರಿ ಓರೆಯಾಗದ
ಮೃಗರಾಜನಾದ ಸಿಂಹ,
31ಬೇಟೆಯ#30.31 ಅಥವಾ: ಯುದ್ಧದ ಕುದುರೆ; ಅಥವಾ ಹುಂಜ; ಮೂಲ, ಬಿಗಿದ ನಡುವಿನ ಪ್ರಾಣಿ. ನಾಯಿ, ಹೋತವು ಸಹ,
ಸೈನ್ಯಸಮೇತನಾದ#30.31 ಅಥವಾ: ಯಾರೂ ಪ್ರತಿಭಟಿಸದ. ರಾಜ.
32ನೀನು ಉಬ್ಬಿಕೊಂಡು ಮೂರ್ಖನಾಗಿ ನಡೆದಿದ್ದರೆ
ಅಥವಾ ದುರಾಲೋಚನೆಮಾಡಿದ್ದರೆ ಬಾಯ ಮೇಲೆ ಕೈಯಿಟ್ಟುಕೋ.
33ಹಾಲು ಕಡೆಯುವದರಿಂದ ಬೆಣ್ಣೆ,
ಮೂಗು ಹಿಂಡುವದರಿಂದ ರಕ್ತ,
ಕೋಪಕಲಕುವದರಿಂದ ಜಗಳ.

Highlight

Share

Copy

None

Want to have your highlights saved across all your devices? Sign up or sign in

Videos for ಜ್ಞಾನೋಕ್ತಿಗಳು 30