ಜ್ಞಾನೋಕ್ತಿಗಳು 2
2
1ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ
ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ,
2ನಿನ್ನ ಕಿವಿಯನ್ನು ಜ್ಞಾನದ ಕಡೆಗೂ
ಹೃದಯವನ್ನು ವಿವೇಕದ ಕಡೆಗೂ ತಿರುಗಿಸು;
3ಬುದ್ಧಿಗಾಗಿ ಮೊರೆಯಿಟ್ಟು
ವಿವೇಕಕ್ಕಾಗಿ ಕೂಗಿಕೊಂಡು
4ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು;
5ಆಗ ನೀನು ಯೆಹೋವನ ಭಯವನ್ನು ಅರಿತು
ದೈವಜ್ಞಾನವನ್ನು ಪಡೆದುಕೊಳ್ಳುವಿ.
6ಯೆಹೋವನೇ ಜ್ಞಾನವನ್ನು ಕೊಡುವಾತನು,
ಆತನ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ.
7ಆತನು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವನು.
ದೋಷವಿಲ್ಲದೆ ನಡೆಯುವವರಿಗೆ ಗುರಾಣಿಯಾಗಿದ್ದು
8ನ್ಯಾಯಮಾರ್ಗವನ್ನು ರಕ್ಷಿಸುತ್ತಾ
ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.
9ಹೀಗಿರಲು ನೀನು ನೀತಿನ್ಯಾಯಗಳನ್ನೂ
ಧರ್ಮವನ್ನೂ ಅಂದರೆ ಸಕಲ ಸನ್ಮಾರ್ಗಗಳನ್ನು ತಿಳಿದುಕೊಳ್ಳುವಿ.
10ಜ್ಞಾನವು ನಿನ್ನ ಹೃದಯದೊಳಗೆ ಪ್ರವೇಶಿಸುವದು,
ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು.
11ಬುದ್ಧಿಯು ನಿನಗೆ ಕಾವಲಾಗಿರುವದು,
ವಿವೇಕವು ನಿನ್ನನ್ನು ಕಾಪಾಡುವದು;
12ಇದರಿಂದ ನೀನು ದುರ್ಮಾರ್ಗದಿಂದಲೂ
ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ.
13ಅವರಾದರೋ ಕತ್ತಲ ಹಾದಿಗಳನ್ನು ಹಿಡಿಯಬೇಕೆಂದು
ಧರ್ಮಮಾರ್ಗಗಳನ್ನು ತೊರೆದುಬಿಡುವರು;
14ಅವರು ಕೆಟ್ಟದ್ದನ್ನು ಮಾಡುವದರಲ್ಲಿ ಸಂತೋಷಿಸಿ
ಕೆಟ್ಟವರ ದುಷ್ಟತನಕ್ಕೆ ಒಲಿಯುವರು.
15ಅವರ ಮಾರ್ಗಗಳು ವಕ್ರವಾಗಿವೆ.
ಅವರ ನಡತೆಗಳು ದುರ್ನಡತೆಗಳೇ.
16ವಿವೇಕವು ನಿನ್ನನ್ನು ಜಾರಳಿಂದ ಎಂದರೆ
ಸವಿಮಾತನಾಡುವ ಪರಸ್ತ್ರೀಯಿಂದ, ತಪ್ಪಿಸುವದು.
17ಅವಳು ತನ್ನ ಯೌವನಕಾಲದ ಕಾಂತನನ್ನು ತ್ಯಜಿಸಿ
ತನ್ನ ದೇವರ ಮುಂದೆ ಮಾಡಿಕೊಂಡ ಒಡಂಬಡಿಕೆಯನ್ನು ಮರೆತುಬಿಟ್ಟಿದ್ದಾಳಷ್ಟೆ.
18ಅವಳ#2.18 ಅಥವಾ: ಅವಳು ತನ್ನ ಮನೆಯಾದ ಪಾತಾಳಕ್ಕೆ ಇಳಿಯುವಳು. ಮನೆಯೇ ಪಾತಾಳಕ್ಕೆ ಇಳಿಯುವ ದಾರಿ,
ಅವಳ ಮಾರ್ಗಗಳು ಪ್ರೇತಲೋಕಕ್ಕೆ ಹೋಗುತ್ತವೆ.
19ಅವಳ ಬಳಿಗೆ ಹೋಗುವವರು ಯಾರೂ ಹಿಂದಿರುಗುವದಿಲ್ಲ,
ಅವರಿಗೆ ಜೀವದ ಮಾರ್ಗವು ದೊರೆಯುವದೇ ಇಲ್ಲ.
20ಒಳ್ಳೆಯವರ ನಡತೆಯನ್ನು ಅನುಸರಿಸುವಂತೆ [ವಿವೇಕವು] ನಿನ್ನನ್ನು ಪ್ರೇರಿಸಿ
ನೀತಿವಂತರ ಹಾದಿಗಳನ್ನು ಹಿಡಿಯುವ ಹಾಗೆ [ಮಾಡುವದು].
21ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು,
ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು.
22ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು,
ದ್ರೋಹಿಗಳು ನಿರ್ಮೂಲರಾಗುವರು.
Currently Selected:
ಜ್ಞಾನೋಕ್ತಿಗಳು 2: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.