ಜ್ಞಾನೋಕ್ತಿಗಳು 16
16
1ಹೃದಯದ ಸಂಕಲ್ಪವು ಮನುಷ್ಯನ ವಶವು;
ತಕ್ಕ ಉತ್ತರಕೊಡುವ ಶಕ್ತಿಯು ಯೆಹೋವನಿಂದಾಗುವದು.
2ಮನುಷ್ಯನ ನಡತೆಯೆಲ್ಲಾ ಸ್ವಂತ ದೃಷ್ಟಿಗೆ ಶುದ್ಧ;
ಯೆಹೋವನು ಅಂತರಂಗವನ್ನೇ ಪರೀಕ್ಷಿಸುವನು.
3ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ
ನಿನ್ನ ಉದ್ದೇಶಗಳು ಸಫಲವಾಗುವವು.
4ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ,
ಹೌದು, ಕೇಡಿನ ದಿನಕ್ಕಾಗಿ ಕೆಡುಕರನ್ನುಂಟುಮಾಡಿದ್ದಾನೆ.
5ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ;
ಅವರಿಗೆ ದಂಡನೆ ಖಂಡಿತ.
6ಕೃಪಾಸತ್ಯತೆಗಳಿಂದ ಪಾಪನಿವಾರಣೆ;
ಯೆಹೋವನ ಭಯಭಕ್ತಿಯಿಂದ ಹಾನಿ ನಿವಾರಣೆ.
7ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ
ಅವನ ಶತ್ರುಗಳನ್ನೂ ವಿುತ್ರರನ್ನಾಗಿ ಮಾಡುವನು.
8ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ
ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು.
9ಮನುಷ್ಯನು ತನ್ನ ಮನದಂತೆ ದಾರಿಯನ್ನಾರಿಸಿಕೊಂಡರೂ
ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.
10ರಾಜನ ತುಟಿಗಳಲ್ಲಿ ದೈವೋಕ್ತಿ;
ನ್ಯಾಯತೀರಿಸುವದರಲ್ಲಿ ಅವನ ಬಾಯಿ ತಪ್ಪಿಹೋಗದು.
11ನ್ಯಾಯದ ತ್ರಾಸುತಕ್ಕಡಿಗಳು ಯೆಹೋವನ ಏರ್ಪಾಡು;
ಕಟ್ಲೆಚೀಲದ ಕಲ್ಲುಗಳೆಲ್ಲಾ ಆತನ ಕೈಕೆಲಸವೇ.
12ರಾಜರು ಸಿಂಹಾಸನಕ್ಕೆ ಧರ್ಮವೇ ಆಧಾರವೆಂದು ತಿಳಿದು
ಅಧರ್ಮವನ್ನಾಚರಿಸಲು ಅಸಹ್ಯಪಡುವರು.
13ರಾಜರು ಸತ್ಯದ ತುಟಿಗಳನ್ನು ಮೆಚ್ಚುವರು;
ಯಥಾರ್ಥವಾದಿಯನ್ನು ಪ್ರೀತಿಸುವರು.
14ಭೂಪನ ಕೋಪ ಮೃತ್ಯುವಿನ ದೂತ;
ಜಾಣನು ಅದನ್ನು ಶಮನಪಡಿಸುವನು.
15ಪ್ರಭುವಿನ ಮುಖಪ್ರಸನ್ನತೆ ಜೀವ;
ಆತನ ದಯೆ ಮುಂಗಾರುಮುಗಿಲು.
16ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು;
ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವದು ಲೇಸು.
17ಸತ್ಯವಂತನ ರಾಜಮಾರ್ಗ ಹಾನಿಗೆ ದೂರ;
ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.
18ಗರ್ವದಿಂದ ಭಂಗ;
ಉಬ್ಬಿನಿಂದ ದೊಬ್ಬು.
19ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವದಕ್ಕಿಂತಲೂ
ದೀನರ ಸಂಗಡ ದೈನ್ಯದಿಂದಿರುವದು ವಾಸಿ.
20[ದೇವರ] ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು;
ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು.
21ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವದು;
ಸವಿತುಟಿಯಿಂದ ಉಪದೇಶಶಕ್ತಿಯು ಹೆಚ್ಚುವದು.
22ವಿವೇಕಿಗೆ ವಿವೇಕವೇ ಜೀವದ ಬುಗ್ಗೆ;
ಮೂರ್ಖನಿಗೆ ಮೂರ್ಖತನವೇ ದಂಡನೆ.
23ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ
ಅವನ ತುಟಿಗಳಿಗೆ ಉಪದೇಶ ಶಕ್ತಿಯನ್ನೂ ಹೆಚ್ಚಿಸುವದು.
24ಸವಿನುಡಿಯು ಜೇನುಕೊಡ;
ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.
25ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು;
ಕಟ್ಟಕಡೆಗೆ ಅದು ಮರಣಮಾರ್ಗವೇ.
26ದುಡಿಯುವವನಿಗೆ ಅವನ ಹೊಟ್ಟೆಯೇ ದುಡಿಯುವದು;
ಅವನನ್ನು [ದುಡಿಯಲಿಕ್ಕೆ], ಅವನ ಬಾಯೇ ಒತ್ತಾಯ ಮಾಡುವದು.
27ನೀಚನು ಕೇಡೆಂಬ ಕುಣಿಯನ್ನು ತೋಡುತ್ತಾನೆ;
ಅವನ ತುಟಿಗಳಲ್ಲಿ ಬೆಂಕಿಯುರಿಯುತ್ತದೆ.
28ತುಂಟನು ಜಗಳ ಬಿತ್ತುತ್ತಾನೆ;
ಚಾಡಿಕೋರನು ವಿುತ್ರರನ್ನು ಅಗಲಿಸುತ್ತಾನೆ.
29ಬಲಾತ್ಕಾರಿಯು ನೆರೆಯವನನ್ನು ಮರುಳುಗೊಳಿಸಿ
ದುರ್ಮಾರ್ಗಕ್ಕೆ ಎಳೆಯುವನು.
30ಕಣ್ಣನ್ನು ಮುಚ್ಚಿಕೊಳ್ಳುವವನು ಕುಯುಕ್ತಿಗಳನ್ನು ಕಲ್ಪಿಸುವನು;
ತುಟಿಯನ್ನು ಮಡಸಿಕೊಳ್ಳುವವನು ಕೇಡನ್ನು ಸಾಧಿಸುವನು.
31ನರೆಗೂದಲೇ ಸುಂದರ ಕಿರೀಟವು;
ಅದು ಧರ್ಮಮಾರ್ಗದಲ್ಲಿ ದೊರಕುವದು.
32ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ;
ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.
33ಉಡಿಯಲ್ಲಿ ಚೀಟು ಹಾಕಬಹುದು;
ಅದರ ತೀರ್ಪು ಯೆಹೋವನದೇ.
Currently Selected:
ಜ್ಞಾನೋಕ್ತಿಗಳು 16: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.