ಫಿಲಿಪ್ಪಿಯವರಿಗೆ 2
2
1ಕ್ರಿಸ್ತನಿಂದ ಉತ್ತೇಜನ, ಪ್ರೀತಿಯ ಪ್ರೇರಣೆ, ಪವಿತ್ರಾತ್ಮನ ಅನ್ಯೋನ್ಯತೆ, ಕಾರುಣ್ಯದಯಾರಸಗಳು ಉಂಟಾಗುವವಾದರೆ 2ಐಕಮತ್ಯವುಳ್ಳವರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋನ್ಯಭಾವವುಳ್ಳವರೂ ಒಂದೇ ಗುರಿಯಿಟ್ಟುಕೊಂಡವರೂ ಆಗಿರ್ರಿ. 3ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. 4ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ. 5ಕ್ರಿಸ್ತ ಯೇಸುವಿನಲ್ಲಿದ್ದಂಥ ಮನಸ್ಸು ನಿಮ್ಮಲ್ಲಿಯೂ ಇರಲಿ. 6ಆತನು ದೇವಸ್ವರೂಪನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವದೆಂಬ ಅಮೂಲ್ಯ ಪದವಿಯನ್ನು ಬಿಡಲೊಲ್ಲೆನು ಎಂದೆಣಿಸದೆ 7ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡು ಮನುಷ್ಯರಿಗೆ ಸದೃಶನಾದನು. 8ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಿದ್ದಾಗ ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. 9ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. 10ಆದದರಿಂದ ಸ್ವರ್ಗ ಮರ್ತ್ಯಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು 11ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.
12ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ನನ್ನ ಮಾತನ್ನು ಯಾವಾಗಲೂ ಕೇಳಿದಂತೆ ಈಗಲೂ ಕೇಳಿರಿ. ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರುವಾಗಲೂ ಬಹು ಹೆಚ್ಚಾಗಿ ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ. 13ಯಾಕಂದರೆ ದೇವರೇ ತನ್ನ ಸುಚಿತ್ತವನ್ನು ನೆರವೇರಿಸಬೇಕೆಂದು ನಿಮ್ಮಲ್ಲಿ ಉದ್ದೇಶವನ್ನೂ ಪ್ರಯತ್ನವನ್ನೂ ಉಂಟುಮಾಡುವವನಾಗಿದ್ದಾನೆ. 14ಗುಣುಗುಟ್ಟದೆಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ. 15ಹೀಗೆ ನೀವು ನಿರ್ದೋಷಿಗಳೂ ಯಥಾರ್ಥಮನಸ್ಸುಳ್ಳವರೂ ಆಗಿದ್ದು ವಕ್ರಬುದ್ಧಿಯುಳ್ಳ ಮೂರ್ಖಜಾತಿಯ ಮಧ್ಯದಲ್ಲಿ ದೇವರ ನಿಷ್ಕಳಂಕರಾದ ಮಕ್ಕಳಾಗಿರುವಿರಿ. 16ಇವರೊಳಗೆ ನೀವು ಸರ್ವರಿಗೂ ಜೀವದಾಯಕ ವಾಕ್ಯವನ್ನು ತೋರಿಸಿಕೊಡುವವರಾಗಿದ್ದು ಲೋಕದೊಳಗೆ ಹೊಳೆಯುವ ಜೋತಿರ್ಮಂಡಲಗಳಂತೆ ಕಾಣಿಸುವವರಾಗಿದ್ದೀರಲ್ಲಾ. ನೀವು ಹೀಗೆ ನಡೆದರೆ ನಾನು ಕೆಲಸ ಸಾಧಿಸಿದ್ದೂ ವ್ಯರ್ಥವಲ್ಲ, ನಾನು ಪ್ರಯಾಸಪಟ್ಟದ್ದೂ ವ್ಯರ್ಥವಲ್ಲ ಎಂಬ ಉತ್ಸಾಹವು ಕ್ರಿಸ್ತನ ದಿನದಲ್ಲಿ ನನಗೆ ಉಂಟಾಗುವದು. 17ನಿಮ್ಮ ನಂಬಿಕೆಯೆಂಬ ಯಜ್ಞವನ್ನು ದೇವರಿಗರ್ಪಿಸುವ ಸೇವೆಯಲ್ಲಿ ನಾನೇ ಪಾನದ್ರವ್ಯವಾಗಿ ಅರ್ಪಿತವಾಗಬೇಕಾದರೂ ನನಗೆ ಸಂತೋಷ, ನಿಮ್ಮೆಲ್ಲರ ಕೂಡ ಸಂತೋಷ. 18ಹಾಗೆಯೇ ನೀವೂ ಸಂತೋಷಿಸಿರಿ, ನನ್ನೊಂದಿಗೆ ಸಂತೋಷಿಸಿರಿ.
ಪೌಲನು ಎಪಫ್ರೊದೀತನನ್ನು ಫಿಲಿಪ್ಪಿಯವರಿಗೆ ಕಳುಹಿಸಿ ತಿಮೊಥೆಯನನ್ನು ಮುಂದೆ ಕಳುಹಿಸುತ್ತೇನೆಂದು ಹೇಳಿದ್ದು
19ಆದರೆ ಕರ್ತನಾದ ಯೇಸುವಿನ ಚಿತ್ತವಾದರೆ ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸಬೇಕೆಂದು ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ಸಂಗತಿಗಳನ್ನು ತಿಳಿದು ನಾನೂ ಧೈರ್ಯತಂದುಕೊಂಡೇನು. 20ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಯಥಾರ್ಥವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ. 21ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡುತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ. 22ತಿಮೊಥೆಯನ ಗುಣವನ್ನು ನೀವು ನೋಡಿ ತಿಳಿದುಕೊಂಡಿದ್ದೀರಿ; ಮಗನು ತಂದೆಗೆ ಹೇಗೋ ಹಾಗೆಯೇ ಅವನು ನನ್ನ ಜೊತೆಯಲ್ಲಿ ಸುವಾರ್ತಾಪ್ರಚಾರಕ್ಕಾಗಿ ಕಷ್ಟಪಟ್ಟು ಕೆಲಸನಡಿಸಿದನೆಂಬದು ನಿಮಗೆ ಗೊತ್ತುಂಟು. 23ಆದದರಿಂದ ನನ್ನ ಸಂಗತಿಯು ಹೇಗಾಗುವದೋ ಅದನ್ನು ತಿಳಿದ ಕೂಡಲೆ ಅವನನ್ನೇ ಕಳುಹಿಸುವದಕ್ಕೆ ನಿರೀಕ್ಷಿಸುತ್ತೇನೆ. 24ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.
25ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ, ನನ್ನ ಸಹೋದರನೂ ಜೊತೆಕೆಲಸದವನೂ ಸಹಭಟನೂ ಆಗಿರುವಂಥ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನೆನಸಿದ್ದೇನೆ. 26ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು ಮತ್ತು ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ವ್ಯಸನಪಟ್ಟನು. 27ಅವನು ರೋಗದಲ್ಲಿ ಬಿದ್ದು ಸಾಯುವ ಹಾಗಿದ್ದನೆಂಬದು ನಿಜವೇ ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನೂ ಕರುಣಿಸಿದನು. 28ಆದದರಿಂದ ನೀವು ಅವನನ್ನು ನೋಡಿ ತಿರಿಗಿ ಸಂತೋಷಪಡಬೇಕೆಂತಲೂ ನನಗೆ ಕೂಡ ದುಃಖ ಕಡಿಮೆಯಾಗಬೇಕೆಂತಲೂ ನಾನು ಅವನನ್ನು ಹೆಚ್ಚಾದ ಅವಸರದಿಂದ ಕಳುಹಿಸಿದ್ದೇನೆ. 29-30ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯಮಾಡದೆ ಕ್ರಿಸ್ತನ ಕೆಲಸದ ನಿವಿುತ್ತ ಸಾಯುವ ಹಾಗಿದ್ದನೆಂದು ನೀವು ತಿಳಿದು ಅವನನ್ನು ಪೂರ್ಣ ಸಂತೋಷದಿಂದ ಕರ್ತನ ಹೆಸರಿನಲ್ಲಿ ಸೇರಿಸಿಕೊಳ್ಳಿರಿ. ಅಂಥವರನ್ನು ಮಾನ್ಯರೆಂದೆಣಿಸಿರಿ.
Currently Selected:
ಫಿಲಿಪ್ಪಿಯವರಿಗೆ 2: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.