ನಹೂಮ 1
1
ಯೆಹೋವನು ಮುಯ್ಯಿತೀರಿಸುವ ದೇವರು
1ನಿನೆವೆಯ ವಿಷಯವಾದ ದೈವೋಕ್ತಿ.
ಎಲ್ಕೋಷ್ ಊರಿನ ನಹೂಮನಿಗೆ ಆದ ದೈವದರ್ಶನದ ಗ್ರಂಥ.
2ಯೆಹೋವನು ಸ್ವಗೌರವವನ್ನು ಕಾಪಾಡಿಕೊಳ್ಳುವ ದೇವರು, ಆತನು ಮುಯ್ಯಿತೀರಿಸುವವನು;
ಹೌದು, ಯೆಹೋವನು ಮುಯ್ಯಿತೀರಿಸುವವನು, ಕೋಪಭರಿತನು;
ಯೆಹೋವನು ತನ್ನ ವಿರೋಧಿಗಳಿಗೆ ಮುಯ್ಯಿತೀರಿಸುತ್ತಾನೆ,
ತನ್ನ ಶತ್ರುಗಳ ಮೇಲೆ ದೀರ್ಘರೋಷವಿಡುತ್ತಾನೆ.
3ಯೆಹೋವನು ದೀರ್ಘಶಾಂತನಾಗಿದ್ದರೂ ಆತನ ಶಕ್ತಿಯು ಅಪಾರ,
ಅಪರಾಧಿಗಳನ್ನು ಶಿಕ್ಷಿಸದೆ ಬಿಡನು;
ಯೆಹೋವನು ಬಿರುಗಾಳಿಯಲ್ಲಿಯೂ ತುಫಾನಿನಲ್ಲಿಯೂ ನಡೆಯುತ್ತಾನೆ;
ಮೋಡಗಳು ಆತನ ಹೆಜ್ಜೆಯಿಂದೇಳುವ ದೂಳು.
4ಆತನು ಸಮುದ್ರವನ್ನು ಗದರಿಸಿ ಒಣಗಿಸುತ್ತಾನೆ,
ಸಕಲನದಿಗಳನ್ನು ಬತ್ತಿಸುತ್ತಾನೆ;
ಬಾಷಾನೂ ಕರ್ಮೆಲೂ ಕಂದುತ್ತವೆ,
ಲೆಬನೋನಿನ ಚಿಗುರು ಬಾಡುತ್ತದೆ.
5ಆತನ ಮುಂದೆ ಬೆಟ್ಟಗಳು ಅದರುತ್ತವೆ, ಗುಡ್ಡಗಳು ಕರಗುತ್ತವೆ;
ಆತನ ದರ್ಶನಕ್ಕೆ ಭೂವಿುಯು ಕಂಪಿಸುತ್ತದೆ,
ಹೌದು, ಲೋಕವೂ ಲೋಕನಿವಾಸಿಗಳೆಲ್ಲವೂ ತಲ್ಲಣಿಸುತ್ತವೆ.
6ಆತನ ಸಿಟ್ಟಿಗೆ ಯಾರು ತಡೆದಾರು?
ಆತನ ರೋಷಾಗ್ನಿಗೆ ಯಾರು ನಿಂತಾರು?
ಆತನ ರೌದ್ರವು ಜ್ವಾಲಾಪ್ರವಾಹದಂತೆ ಹರಿಯುತ್ತದೆ,
ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
ಯೆಹೋವನು ತನ್ನ ಪ್ರಜೆಯ ಬಾಧಕರಿಗೆ ಮಾಡುವ ದಂಡನೆ
7ಯೆಹೋವನು ಒಳ್ಳೆಯವನು;
ಇಕ್ಕಟ್ಟಿನ ದಿನದಲ್ಲಿ ಆಶ್ರಯದುರ್ಗವಾಗಿದ್ದಾನೆ;
ತನ್ನ ಮರೆಹೊಕ್ಕವರನ್ನು ಬಲ್ಲನು.
8ಆದರೆ ತುಂಬಿತುಳುಕುವ ಜಲಪ್ರವಾಹದಿಂದಲೋ ಎಂಬಂತೆ
ನಿನೆವೆಯ ಸ್ಥಾನವನ್ನು ತೀರಾ ಹಾಳುಮಾಡಿ
ತನ್ನ ವಿರೋಧಿಗಳನ್ನು ಹಿಂದಟ್ಟಿ ಅಂಧಕಾರಕ್ಕೆ ತಳ್ಳುವನು.
9ನೀವು ಯೆಹೋವನಿಗೆ ವಿರುದ್ಧವಾಗಿ ಯಾವ ಕುಯುಕ್ತಿಯನ್ನು ಕಲ್ಪಿಸುತ್ತೀರಿ?
ಆತನು ಪೂರಾ ಹಾಳುಮಾಡುವನು;
ಅಪಾಯವು ಎರಡನೆಯ ಸಲ ಉಂಟಾಗಬೇಕಾಗಿಲ್ಲ.
10ಆತನ#1.10 ಮೂಲ: ಅವರು. ವೈರಿಗಳು ಮುಳ್ಳುಗಳಂತೆ ಹೆಣೆದುಕೊಂಡಿದ್ದರೂ
ತಮ್ಮ ಮದ್ಯದಲ್ಲಿ ಮುಳುಗಿದ್ದರೂ
ತುಂಬಾ ಒಣಗಿದ ಕೂಳೆಯಂತೆ ಬೆಂಕಿಗೆ ತುತ್ತಾಗುವರು.
11[ನಿನೆವೆಯೇ,] ಯೆಹೋವನಿಗೆ ವಿರುದ್ಧವಾಗಿ ದುರಾಲೋಚನೆಮಾಡಿ
ಕೇಡನ್ನು ಸಂಕಲ್ಪಿಸುವವನು ನಿನ್ನೊಳಗಿಂದ ಹೊರಟಿದ್ದಾನೆ.
12ಯೆಹೋವನು ಇಂತೆನ್ನುತ್ತಾನೆ -
ನಿನ್ನ#1.12 ಮೂಲ: ಅವರು. ಶತ್ರುಗಳು ಎಷ್ಟು ಪ್ರಬಲರಾಗಿದ್ದರೂ ಅವರ ಸಂಖ್ಯೆ ಎಷ್ಟು ಹೆಚ್ಚಿದ್ದರೂ
ಅವರು ಕಡಿಯಲ್ಪಡುವರು,
ಆ#1.12 ಮೂಲ: ಅವನು. ದುರಾಲೋಚಕನು ಇಲ್ಲವಾಗುವನು.
ನಿನ್ನನ್ನು ಬಾಧಿಸಿದ್ದೇನೆ, ಇನ್ನು ಬಾಧಿಸೆನು.
13ಅವನು ಹೇರಿದ ನೊಗವನ್ನು ಈಗ ನಿನ್ನ ಮೇಲಿನಿಂದ ಮುರಿದುಬಿಟ್ಟು
ಕಣ್ಣಿಗಳನ್ನು ಕಿತ್ತುಹಾಕುವೆನು.
14[ಅಶ್ಶೂರವೇ,] ನಿನ್ನ ಹೆಸರಿನ ಸಂತಾನ ಬೀಜವು ಇನ್ನು ಬಿತ್ತಲ್ಪಡಬಾರದೆಂದು
ಯೆಹೋವನಾದ ನಾನು ಆಜ್ಞಾಪಿಸಿದ್ದೇನೆ;
ನಿನ್ನ ದೇವರ ಮಂದಿರದೊಳಗಿಂದ ಕೆತ್ತಿದ ವಿಗ್ರಹವನ್ನೂ
ಎರಕದ ಬೊಂಬೆಯನ್ನೂ ಕಡಿದುಬಿಡುವೆನು;
ನಿನಗೆ ಗೋರಿಯನ್ನು ಸಿದ್ಧಮಾಡುವೆನು; ನೀನು ತುಚ್ಫ,
15ಆಹಾ, ಶುಭಸಮಾಚಾರವನ್ನು ತಂದು
ಸಮಾಧಾನವನ್ನು ಸಾರುವ ದೂತನ ಪಾದಗಳು
ಪರ್ವತಗಳ ಮೇಲೆ ತ್ವರೆಪಡುತ್ತವೆ!
ಯೆಹೂದವೇ, ನಿನ್ನ ಹಬ್ಬಗಳನ್ನು ಆಚರಿಸಿಕೋ,
ನಿನ್ನ ಹರಕೆಗಳನ್ನು ಸಲ್ಲಿಸು; ಆ ದುಷ್ಟನು ಇನ್ನು ಮುಂದೆ ನಿನ್ನನ್ನು ಹಾದುಹೋಗನು;
ತೀರಾ ನಾಶವಾಗಿದ್ದಾನೆ.
Currently Selected:
ನಹೂಮ 1: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.