YouVersion Logo
Search Icon

ಮಾರ್ಕ 8

8
ಯೇಸು ನಾಲ್ಕುಸಾವಿರ ಜನರಿಗೆ ಊಟಮಾಡಿಸಿದ್ದು
(ಮತ್ತಾ. 15.32-39)
1ಆ ದಿವಸಗಳಲ್ಲಿ ಜನರು ತಿರಿಗಿ ಗುಂಪುಕೂಡಿ ಬಂದಾಗ ಅವರಿಗೆ ಊಟಕ್ಕೆ ಏನೂ ಇಲ್ಲದೆ ಇರಲು 2ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು - ಈ ಜನರನ್ನು ನೋಡಿ ಕನಿಕರಪಡುತ್ತೇನೆ; ಇವರು ನನ್ನ ಬಳಿಗೆ ಬಂದು ಮೂರು ದಿನವಾಯಿತು; ಇವರಿಗೆ ಊಟಕ್ಕೆ ಏನೂ ಇಲ್ಲ; 3ಇವರನ್ನು ಉಪವಾಸವಾಗಿ ಮನೆಗೆ ಕಳುಹಿಸಿಬಿಟ್ಟರೆ ದಾರಿಯಲ್ಲಿ ಬಳಲಿಹೋಗುವರು; ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ ಎಂದು ಅವರಿಗೆ ಹೇಳಿದ್ದಕ್ಕೆ 4ಶಿಷ್ಯರು - ಈ ಅಡವಿಯಲ್ಲಿ ಎಲ್ಲಿಂದ ರೊಟ್ಟಿಯನ್ನು ತಂದು ಈ ಜನರನ್ನು ತೃಪ್ತಿಪಡಿಸುವದಕ್ಕಾದೀತು? ಅಂದರು. 5ಆತನು - ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಅವರನ್ನು ಕೇಳಿದ್ದಕ್ಕೆ ಅವರು - ಏಳು ಅವೆ ಅಂದರು. 6ಆಗ ಆತನು ಜನರ ಗುಂಪಿಗೆ - ನೆಲದ ಮೇಲೆ ಕೂತುಕೊಳ್ಳಿರಿ ಎಂದು ಅಪ್ಪಣೆಕೊಟ್ಟು ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅವುಗಳನ್ನು ಮುರಿದು ಹಂಚುವದಕ್ಕೆ ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು. 7ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಅವುಗಳನ್ನು ಆತನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ - ಇವುಗಳನ್ನೂ ಹಂಚಿಕೊಡಿರಿ ಅಂದನು. 8ಅವರು ಊಟಮಾಡಿ ತೃಪ್ತರಾದರು. ವಿುಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಹೆಡಿಗೆ ಆದವು. 9ಊಟಮಾಡಿದವರು ಹೆಚ್ಚು ಕಡಿಮೆ ನಾಲ್ಕುಸಾವಿರ ಮಂದಿ. 10ಬಳಿಕ ಆತನು ಅವರನ್ನು ಕಳುಹಿಸಿಬಿಟ್ಟು ಕೂಡಲೆ ತನ್ನ ಶಿಷ್ಯರನ್ನು ಕರಕೊಂಡು ದೋಣಿಯನ್ನು ಹತ್ತಿ ದಲ್ಮನೂಥ ಸೀಮೆಗೆ ಬಂದನು.
ಯೇಸು ಯೆಹೂದ್ಯ ಮತಾಭಿಮಾನಿಗಳ ವಿಷಯವಾಗಿ ಎಚ್ಚರಿಕೆ ಕೊಟ್ಟದ್ದು
(ಮತ್ತಾ. 16.1-12; ಲೂಕ. 11.16, 12.1; ಯೋಹಾ. 6.30)
11ತರುವಾಯ ಫರಿಸಾಯರು ಹೊರಟು ಬಂದು ಆತನ ಕೂಡ ತರ್ಕಮಾಡುತ್ತಾ ಪರೀಕ್ಷಿಸುವದಕ್ಕಾಗಿ - ನೀನು ಆಕಾಶದಲ್ಲಿ ಒಂದು ಸೂಚಕಕಾರ್ಯವನ್ನು ತೋರಿಸಿಕೊಡಬೇಕೆಂದು ಕೇಳುತ್ತಿರಲು ಆತನು ತನ್ನ ಆತ್ಮದಲ್ಲಿ ನೊಂದು ನಿಟ್ಟುಸುರುಬಿಟ್ಟು - 12ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವದು ಯಾಕೆ? ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಸೂಚಕಕಾರ್ಯವು ಸಿಕ್ಕುವದೇ ಇಲ್ಲ ಎಂದು ಹೇಳಿ 13ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು.
14ಆದರೆ ಶಿಷ್ಯರು ರೊಟ್ಟೀಬುತ್ತಿ ಕಟ್ಟಿಕೊಳ್ಳುವದನ್ನು ಮರೆತರು. ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಇರಲಿಲ್ಲ. 15ಯೇಸು ಅವರಿಗೆ - ಎಚ್ಚರಿಕೆ, ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೋಡಿಕೊಳ್ಳಿರಿ ಎಂದು ಖಂಡಿತವಾಗಿ ಹೇಳಲು 16ಅವರು - ನಮ್ಮಲ್ಲಿ ರೊಟ್ಟಿಯಿಲ್ಲವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತಾಡಿಕೊಳ್ಳುತ್ತಿದ್ದರು. 17ಆತನು ಅದನ್ನು ತಿಳಿದು - ರೊಟ್ಟಿಯಿಲ್ಲವಲ್ಲಾ ಎಂದು ಮಾತಾಡಿಕೊಳ್ಳುವದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ತಿಳುವಳಿಕೆ ಬರಲಿಲ್ಲವೋ? 18ನಿಮ್ಮ ಮನಸ್ಸು ಕಲ್ಲಾಗಿದೆಯೋ? ಕಣ್ಣಿದ್ದೂ ಕಾಣುವದಿಲ್ಲವೋ? ಕಿವಿಯಿದ್ದೂ ಕೇಳುವದಿಲ್ಲವೋ? ನಿಮಗೆ ನೆನಪಿಲ್ಲವೋ? 19ನಾನು ಆ ಐದು ರೊಟ್ಟಿಗಳನ್ನು ಮುರಿದು ಐದುಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ ಎಂದು ಕೇಳಿದ್ದಕ್ಕೆ ಅವರು - ಹನ್ನೆರಡು ಪುಟ್ಟಿ ಅಂದರು. 20ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿಸಿದಾಗ ತುಂಡು ತುಂಬಿದ ಎಷ್ಟು ಹೆಡಿಗೆಗಳನ್ನು ತೆಗೆದುಕೊಂಡು ಹೋದಿರಿ ಎಂದು ಕೇಳಿದ್ದಕ್ಕೆ ಅವರು - ಏಳು ಹೆಡಿಗೆ ಅಂದರು. 21ಆಗ ಆತನು ಅವರಿಗೆ - ನಿಮಗೆ ಇನ್ನೂ ತಿಳುವಳಿಕೆ ಬರಲಿಲ್ಲವೇ? ಎಂದು ಹೇಳಿದನು.
ಯೇಸು ಕುರುಡನಿಗೆ ಕಣ್ಣುಕೊಟ್ಟದ್ದು
22ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರಕೊಂಡುಬಂದು - ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು. 23ಆತನು ಕುರುಡನ ಕೈ ಹಿಡುಕೊಂಡು ಊರ ಹೊರಕ್ಕೆ ಕರಕೊಂಡು ಹೋಗಿ ಅವನ ಕಣ್ಣುಗಳಲ್ಲಿ ಉಗುಳಿ ಅವನ ಮೇಲೆ ಕೈಯಿಟ್ಟು - ನಿನಗೇನಾದರೂ ಕಾಣುತ್ತದೋ? ಎಂದು ಅವನನ್ನು ಕೇಳಿದನು. 24ಅವನು ತಲೆಯೆತ್ತಿ ನೋಡಿ - ನನಗೆ ಜನರು ಕಾಣುತ್ತಾರೆ; ಅವರು ಮರಗಳಂತೆ ಕಾಣಿಸಿದರೂ ತಿರುಗಾಡುತ್ತಾ ಇದ್ದಾರೆ ಅಂದನು. 25ಆಗ ಆತನು ಅವನ ಕಣ್ಣುಗಳ ಮೇಲೆ ತಿರಿಗಿ ಕೈಯಿಟ್ಟನು; ಅವನು ಕಣ್ಣು ಬಿಟ್ಟು ನೋಡಲು ಅವನಿಗೆ ಗುಣವಾಗಿತ್ತು; ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು. 26ತರುವಾಯ ಆತನು - ನೀನು ಊರೊಳಕ್ಕೇನೂ ಹೋಗಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.
ಪೇತ್ರನು ಯೇಸುವನ್ನು ಕ್ರಿಸ್ತನೆಂದು ಒಪ್ಪಿಕೊಂಡ ಮೇಲೆ ಯೇಸು ತನ್ನ ಮರಣವನ್ನೂ ತನ್ನ ಶಿಷ್ಯರಿಗೆ ಬರುವ ಕಷ್ಟಗಳನ್ನೂ ಮುಂದಾಗಿ ತಿಳಿಸಿದ್ದು
(ಮತ್ತಾ. 16.13-28; ಲೂಕ. 9.18-27)
27ಯೇಸುವೂ ಆತನ ಶಿಷ್ಯರೂ ಫಿಲಿಪ್ಪನ ಕೈಸರೈಯ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಹೊರಟರು. ದಾರಿಯಲ್ಲಿ ಆತನು - ಜನರು ನನ್ನನ್ನು ಯಾರು ಅನ್ನುತ್ತಾರೆ ಎಂದು ತನ್ನ ಶಿಷ್ಯರನ್ನು ಕೇಳಿದ್ದಕ್ಕೆ ಅವರು - 28ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು. 29ಆತನು ಅವರನ್ನು - ಆದರೆ ನೀವು ನನ್ನನ್ನು ಯಾರನ್ನುತ್ತೀರಿ? ಎಂದು ಕೇಳಲಾಗಿ ಪೇತ್ರನು - ನೀನು ಬರಬೇಕಾಗಿರುವ ಕ್ರಿಸ್ತನು ಎಂದು ಉತ್ತರಕೊಟ್ಟನು. 30ಅದಕ್ಕೆ ಆತನು - ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ ಎಂದು ಅವರಿಗೆ ಖಂಡಿತವಾಗಿ ಹೇಳಿದನು. 31ಇದಲ್ಲದೆ ಆತನು - ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕೃತವಾಗಿ ಕೊಲ್ಲಲ್ಪಟ್ಟು ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಮಾಡುವದಕ್ಕೆ ಪ್ರಾರಂಭಮಾಡಿದನು. 32ಆತನು ಈ ಮಾತನ್ನು ಏನೂ ಗುಂಬವಿಲ್ಲದೆ ಹೇಳಿದನು. ಆಗ ಪೇತ್ರನು ಆತನ ಕೈ ಹಿಡಿದು ಆತನನ್ನು ಗದರಿಸುವದಕ್ಕೆ ಪ್ರಾರಂಭಿಸಲು 33ಆತನು ಹಿಂತಿರುಗಿಕೊಂಡು ತನ್ನ ಶಿಷ್ಯರನ್ನು ನೋಡಿ ಪೇತ್ರನಿಗೆ - ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ ಎಂದು ಗದರಿಸಿ ಹೇಳಿದನು.
34ಆಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. 35ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿವಿುತ್ತವಾಗಿಯೂ ಸುವಾರ್ತೆಯ ನಿವಿುತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು. 36ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? 37ಒಬ್ಬನು ತನ್ನ ಪ್ರಾಣಕ್ಕೆ ಏನು ಈಡು ಕೊಡಬಹುದು? 38ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ ನಾಚಿಕೊಳ್ಳುವನು ಅಂದನು.

Currently Selected:

ಮಾರ್ಕ 8: KANJV-BSI

Highlight

Share

Copy

None

Want to have your highlights saved across all your devices? Sign up or sign in