YouVersion Logo
Search Icon

ಮಾರ್ಕ 6

6
ಯೇಸುವಿನ ಸ್ವಂತ ಊರಿನವರು ಆತನನ್ನು ತಾತ್ಸಾರಮಾಡಿದ್ದು
(ಮತ್ತಾ. 13.54-58; ಲೂಕ. 4.15-30)
1ಆತನು ಅಲ್ಲಿಂದ ಹೊರಟು ತನ್ನ ಊರಿಗೆ ಬಂದನು; ಶಿಷ್ಯರು ಆತನ ಹಿಂದೆಯೇ ಬಂದರು. 2ಸಬ್ಬತ್ ದಿನ ಬಂದಾಗ ಆತನು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡುವದಕ್ಕೆ ಪ್ರಾರಂಭಿಸಿದನು. ಎಲ್ಲರು ಕೇಳಿ ಅತ್ಯಾಶ್ಚರ್ಯಪಟ್ಟು - ಇವನಿಗೆ ಈ ಮಾತುಗಳು ಎಲ್ಲಿಂದ ಬಂದಿದ್ದಾವು? ಇವನು ಪಡೆದಿರುವ ಈ ಜ್ಞಾನವೇನು? ಇವನ ಕೈಯಿಂದ ಇಂಥ ಮಹತ್ಕಾರ್ಯಗಳಾಗುವದೇನು? 3ಇವನು ಆ ಬಡಗಿಯಲ್ಲವೇ. ಇವನು ಮರಿಯಳ ಮಗನಲ್ಲವೇ. ಯಾಕೋಬ ಯೋಸೆ ಯೂದ ಸೀಮೋನ ಇವರ ಅಣ್ಣನಲ್ಲವೇ. ಇವನ ತಂಗಿಯರು ಇಲ್ಲಿ ನಮ್ಮಲ್ಲಿ ಇದ್ದಾರಲ್ಲವೇ ಎಂದು ಮಾತಾಡಿಕೊಂಡು ಆತನ ವಿಷಯವಾಗಿ ಬೇಸರಗೊಂಡರು. 4ಯೇಸು ಅವರಿಗೆ - ಪ್ರವಾದಿಯು ಬೇರೆ ಎಲ್ಲಿದ್ದರೂ ಅವನಿಗೆ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಮಾತ್ರ ಮರ್ಯಾದೆಯಿಲ್ಲ ಎಂದು ಹೇಳಿದನು. 5ಆತನು ಅಲ್ಲಿ ಕೆಲವು ಮಂದಿ ರೋಗಿಗಳ ಮೇಲೆ ಕೈಯಿಟ್ಟು ಸ್ವಸ್ಥಮಾಡಿದ್ದೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ. 6ಅವರು ತನ್ನನ್ನು ನಂಬದೆ ಹೋದದ್ದಕ್ಕೆ ಆತನು ಆಶ್ಚರ್ಯಪಟ್ಟನು.
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಸುವಾರ್ತೆಸಾರುವದಕ್ಕೆ ಕಳುಹಿಸಿದ್ದು
(ಮತ್ತಾ. 9.35—10.14; ಲೂಕ. 9.1-6)
7ಆತನು ಹಳ್ಳಿಪಳ್ಳಿಗಳನ್ನು ಸುತ್ತಿಕೊಂಡು ಉಪದೇಶ ಮಾಡುತ್ತಾ ಬಂದನು. ಮತ್ತು ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರನ್ನು ಇಬ್ಬರಿಬ್ಬರಾಗಿ ಕಳುಹಿಸಲಾರಂಭಿಸಿದನು. ಕಳುಹಿಸುವಾಗ ಅವರಿಗೆ ದೆವ್ವಗಳ ಮೇಲೆ ಅಧಿಕಾರಕೊಟ್ಟು - 8ಕೋಲು ಹೊರತು ದಾರಿಗೆ ಏನೂ ತಕ್ಕೊಂಡು ಹೋಗಬೇಡಿರಿ; ಬುತ್ತಿ, ಹಸಿಬೆ, ಹಮ್ಮೀಣಿಯಲ್ಲಿ ದುಡ್ಡು ಬೇಡ, 9ಕೆರಗಳನ್ನು ಮೆಟ್ಟಿಕೊಳ್ಳಬಹುದು. ಎರಡು ಅಂಗಿಗಳನ್ನು ತೊಟ್ಟುಕೊಳ್ಳಬೇಡಿರಿ ಎಂದು ಅಪ್ಪಣೆಕೊಟ್ಟನು. 10ಇದಲ್ಲದೆ ಆತನು ಅವರಿಗೆ - ನೀವು ಎಲ್ಲಿಯಾದರೂ ಒಂದು ಮನೆಯಲ್ಲಿ ಇಳುಕೊಂಡಾಗ ಆ ಸ್ಥಳದಿಂದ ಹೊರಡುವ ತನಕ ಅಲ್ಲೇ ಇರಿ. 11ಮತ್ತು ಯಾವ ಸ್ಥಳದವರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನೀವು ಹೇಳುವದನ್ನು ಕೇಳದೆಯೂ ಹೋದರೆ ಆ ಸ್ಥಳದಿಂದ ಹೊರಟುಹೋಗುವಾಗ ನಿಮ್ಮ ಕಾಲಿಗೆ ಹತ್ತಿದ ದೂಳನ್ನು ಝಾಡಿಸಿಬಿಡಿರಿ; ಅದು ಅವರಿಗೆ ಸಾಕ್ಷಿಯಾಗಿರಲಿ ಎಂದು ಹೇಳಿದನು. 12ಅವರು ಹೊರಟುಹೋಗಿ ಜನರಿಗೆ - ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ಸಾರಿ 13ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆಹಚ್ಚಿ ವಾಸಿಮಾಡಿದರು.
ಅರಸನು ಸ್ನಾನಿಕನಾದ ಯೋಹಾನನನ್ನು ಕೊಲ್ಲಿಸಿದ ಮೇಲೆ ಯೇಸುವಿನ ಸುದ್ದಿಯನ್ನು ಕೇಳಿ ದಿಗಿಲುಬಿದ್ದದ್ದು
(ಮತ್ತಾ. 14.1-12; ಲೂಕ. 9.7-9, 3.19, 20)
14ಮತ್ತು ಅರಸನಾದ ಹೆರೋದನು [ಯೇಸುವಿನ ಸುದ್ದಿಯನ್ನು] ಕೇಳಿದನು. ಯಾಕಂದರೆ ಆತನ ಹೆಸರು ಪ್ರಸಿದ್ಧವಾಯಿತು, ಮತ್ತು ಜನರು ಆತನ ವಿಷಯದಲ್ಲಿ - ಸ್ನಾನಿಕನಾದ ಯೋಹಾನನೇ ತಿರಿಗಿ ಬದುಕಿಬಂದಿದ್ದಾನೆ; ಆದದರಿಂದ ಮಹತ್ಕಾರ್ಯಗಳನ್ನು ನಡಿಸುವ ಶಕ್ತಿಗಳು ಅವನಲ್ಲಿ ಅವೆ ಎಂದು ಹೇಳುತ್ತಿದ್ದರು. 15ಕೆಲವರು - ಇವನು ಎಲೀಯನೆಂತಲೂ ಕೆಲವರು - ಇವನು ಹಿಂದಿನ ಪ್ರವಾದಿಗಳಂತಿರುವ ಒಬ್ಬ ಪ್ರವಾದಿಯೆಂತಲೂ ಹೇಳಿದರು. 16ಆದರೆ ಹೆರೋದನು ಆತನ ಸುದ್ದಿಯನ್ನು ಕೇಳಿ - ನಾನು ತಲೆಹೊಯಿಸಿದ ಯೋಹಾನನೇ ತಿರಿಗಿ ಬದುಕಿ ಬಂದಿದ್ದಾನೆ ಅಂದನು. 17ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದ್ಯಳ ನಿವಿುತ್ತ ಯೋಹಾನನನ್ನು ಹಿಡಿತರಿಸಿ ಸೆರೆಯಲ್ಲಿ ಕಟ್ಟಿ ಹಾಕಿಸಿದ್ದನು. ಆ ಹೆರೋದ್ಯಳು ಹೆರೋದನ ಅಣ್ಣನಾದ ಫಿಲಿಪ್ಪನ ಹೆಂಡತಿ. 18ಯೋಹಾನನು ಹೆರೋದನಿಗೆ - ನಿನ್ನ ಅಣ್ಣನ ಹೆಂಡತಿಯನ್ನು ಇಟ್ಟುಕೊಂಡಿರುವದು ಧರ್ಮವಲ್ಲವೆಂದು ಹೇಳುತ್ತಿದ್ದನು. 19ಇದಕ್ಕೆ ಹೆರೋದ್ಯಳು ಅವನ ಮೇಲೆ ದ್ವೇಷವಿಟ್ಟುಕೊಂಡು ಅವನನ್ನು ಕೊಲ್ಲಿಸಬೇಕೆಂದಿದ್ದರೂ ಆಗದೆ ಹೋಯಿತು. 20ಹೆರೋದನು ಯೋಹಾನನನ್ನು ನೀತಿವಂತನೆಂದೂ ದೇವಭಕ್ತನೆಂದೂ ತಿಳಿದು ಅಂಜಿಕೊಂಡು ಅವನಿಗೆ ಯಾವ ಅಪಾಯವೂ ಬಾರದಂತೆ ಇಟ್ಟಿದ್ದನು. ಇದಲ್ಲದೆ ಯೋಹಾನನು ಹೇಳಿದ್ದನ್ನು ಅವನು ಕೇಳಿದಾಗ ಮನಸ್ಸಿನಲ್ಲಿ ಬಹು ಗಲಿಬಿಲಿ ಹುಟ್ಟಿದರೂ ಅವನ ಮಾತನ್ನು ಸಂತೋಷದಿಂದ ಕೇಳುತ್ತಿದ್ದನು. 21ಹೀಗಿರಲಾಗಿ ಅವಳಿಗೆ ಅನುಕೂಲವಾದ ದಿವಸ ಬಂತು; ಹೇಗಂದರೆ ಹೆರೋದನು ತಾನು ಹುಟ್ಟಿದ ದಿವಸದಲ್ಲಿ ಪ್ರಭುಗಳಿಗೂ ಸಹಸ್ರಾಧಿಪತಿಗಳಿಗೂ ಗಲಿಲಾಯ ಸೀಮೆಯ ಮುಖ್ಯಸ್ಥರಿಗೂ ಔತಣವನ್ನು ಮಾಡಿಸಿದಾಗ 22ಹೆರೋದ್ಯಳ ಮಗಳು ಒಳಕ್ಕೆ ಬಂದು ನಾಟ್ಯವಾಡಿ ಹೆರೋದನನ್ನೂ ಅವನ ಸಂಗಡ ಪಂಙ್ತಿಯಲ್ಲಿ ಊಟಕ್ಕೆ ಕೂತಿದ್ದವರನ್ನೂ ಮೆಚ್ಚಿಸಿದಳು. ಅರಸನು ಆ ಹುಡುಗಿಗೆ - ಬೇಕಾದದ್ದನ್ನು ಕೇಳಿಕೋ, ಕೊಡುತ್ತೇನೆ. 23ನೀನು ನನ್ನನ್ನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧ ರಾಜ್ಯವನ್ನು ಕೇಳಿದರೂ, ನಿನಗೆ ಕೊಡುತ್ತೇನೆ ಎಂದು ಆಣೆಯಿಟ್ಟುಕೊಂಡು ಹೇಳಿದನು. 24ಆಗ ಅವಳು ಹೊರಕ್ಕೆ ಹೋಗಿ - ನಾನು ಏನು ಕೇಳಿಕೊಳ್ಳಲಿ? ಎಂದು ತನ್ನ ತಾಯಿಯನ್ನು ಕೇಳಲಾಗಿ ಅವಳು - ಸ್ನಾನಿಕನಾದ ಯೋಹಾನನ ತಲೆಯನ್ನು ಕೇಳಿಕೋ ಅಂದಳು. 25ಕೂಡಲೆ ಅವಳು ಅರಸನ ಬಳಿಗೆ ಅವಸರದಿಂದ ಬಂದು - ಈ ಕ್ಷಣದಲ್ಲೇ ಸ್ನಾನಿಕನಾದ ಯೋಹಾನನ ತಲೆಯನ್ನು ಪರಾತಿನಲ್ಲಿ ನನಗೆ ತರಿಸಿಕೊಡಬೇಕೆಂದೇ ನನ್ನ ಕೋರಿಕೆ ಎಂದು ಅರಿಕೆ ಮಾಡಿಕೊಂಡಳು. 26ಅದಕ್ಕೆ ಅರಸನು ಬಹು ದುಃಖಪಟ್ಟರೂ ತಾನು ಇಟ್ಟುಕೊಂಡ ಆಣೆಗಳ ನಿವಿುತ್ತವಾಗಿಯೂ ತನ್ನ ಪಂಙ್ತಿಯಲ್ಲಿ ಕೂತಿದ್ದವರ ನಿವಿುತ್ತವಾಗಿಯೂ ಅವಳನ್ನು ಅಸಡ್ಡೆ ಮಾಡುವದಕ್ಕೆ ಮನಸ್ಸಿಲ್ಲದೆ 27ಕೂಡಲೆ ತನ್ನ ಮೈಗಾವಲಿನ ಸಿಪಾಯಿಗಳಲ್ಲಿ ಒಬ್ಬನಿಗೆ - ನೀನು ಹೋಗಿ ಯೋಹಾನನ ತಲೆಯನ್ನು ತಂದುಕೊಡು ಎಂದು ಅಪ್ಪಣೆಕೊಟ್ಟು ಕಳುಹಿಸಿದನು; 28ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯಿದು ಪರಾತಿನಲ್ಲಿ ತಂದು ಆ ಹುಡುಗಿಗೆ ಕೊಟ್ಟನು. ಆ ಹುಡುಗಿ ಅದನ್ನು ತನ್ನ ತಾಯಿಗೆ ಕೊಟ್ಟಳು. 29ಯೋಹಾನನ ಶಿಷ್ಯರು ಈ ಸಂಗತಿಗಳನ್ನು ಕೇಳಿದಾಗ ಅವರು ಬಂದು ಅವನ ಶವವನ್ನು ಹೊತ್ತುಕೊಂಡು ಹೋಗಿ ಸಮಾಧಿಯಲ್ಲಿ ಇಟ್ಟರು.
ಯೇಸು ಐದುಸಾವಿರ ಜನರಿಗೆ ಊಟಮಾಡಿಸಿದ್ದು; ಸಮುದ್ರದ ಮೇಲೆ ನಡೆದದ್ದು; ರೋಗಿಗಳನ್ನು ಸ್ವಸ್ಥಮಾಡಿದ್ದು
(ಮತ್ತಾ. 14.13-36; ಲೂಕ. 9.10-17; ಯೋಹಾ. 6.1-21)
30ಇತ್ತಲಾಗಿ ಅಪೊಸ್ತಲರು ಆತನ ಬಳಿಗೆ ಕೂಡಿ ಬಂದು ತಾವು ಮಾಡಿದ್ದನ್ನೂ ಉಪದೇಶಿಸಿದ್ದನ್ನೂ ಎಲ್ಲಾ ಆತನಿಗೆ ತಿಳಿಸಲು ಆತನು ಅವರಿಗೆ - 31ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ ಎಂದು ಹೇಳಿದನು. ಯಾಕಂದರೆ ಬಹಳ ಮಂದಿ ಬರುತ್ತಾ ಹೋಗುತ್ತಾ ಇದ್ದದರಿಂದ ಅವರಿಗೆ ಊಟಮಾಡುವದಕ್ಕೂ ಅವಕಾಶ ಸಿಕ್ಕಲಿಲ್ಲ. 32ಆಗ ಅವರು ದೋಣಿಯಲ್ಲಿ ಹೊರಟು ವಿಂಗಡವಾಗಿ ಅಡವಿಗೆ ಹೋದರು. 33ಅವರು ಹೋಗುವದನ್ನು ಬಹು ಜನರು ಕಂಡು ಅವರ ಗುರುತನ್ನು ಹಿಡಿದು ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮುಂಚೆ ಅಲ್ಲಿ ಸೇರಿದರು. 34ಆತನು ಹೊರಗೆ ಬಂದು ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶ ಮಾಡುತ್ತಿದ್ದನು. 35ಅಷ್ಟರಲ್ಲಿ ಬಹಳ ಹೊತ್ತಾದ್ದರಿಂದ ಆತನ ಶಿಷ್ಯರು ಆತನ ಬಳಿಗೆ ಬಂದು - 36ಇದು ಅಡವಿ, ಈಗ ಹೊತ್ತು ಬಹಳವಾಯಿತು; ಈ ಜನರಿಗೆ ಅಪ್ಪಣೆಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ ಅಂದದ್ದಕ್ಕೆ ಯೇಸು - 37ನೀವೇ ಅವರಿಗೆ ಊಟಕ್ಕೆ ಕೊಡಿರಿ ಎಂದು ಉತ್ತರಕೊಟ್ಟನು. ಅದಕ್ಕವರು - ನಾವು ಹೋಗಿ ಇನ್ನೂರು ಹಣಕ್ಕೆ ರೊಟ್ಟಿಯನ್ನು ಕೊಂಡುಕೊಂಡು ಅವರಿಗೆ ಊಟಕ್ಕೆ ಕೊಡಬೇಕೋ? ಎಂದು ಕೇಳಲು ಆತನು - 38ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿಕೊಂಡು ಬನ್ನಿ ಅಂದನು. ಅವರು ತಿಳುಕೊಂಡು ಬಂದು - ಐದು ರೊಟ್ಟಿ ಎರಡು ಮೀನು ಅಂದರು. 39ಆಗ ಆತನು ಅವರಿಗೆ - ಎಲ್ಲರೂ ಹಸುರುಹುಲ್ಲಿನ ಮೇಲೆ ಪಂಙ್ತಿಪಂಙ್ತಿಯಾಗಿ ಕೂತುಕೊಳ್ಳಲಿ ಎಂದು ಅಪ್ಪಣೆಕೊಟ್ಟಾಗ 40ಜನರು ಪಂಙ್ತಿಗೆ ನೂರರಂತೆ ಐವತ್ತರಂತೆ ಸಾಲುಸಾಲಾಗಿ ಕೂತುಕೊಂಡರು. 41ಆಮೇಲೆ ಆತನು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ದೇವರ ಸ್ತೋತ್ರಮಾಡಿ ಆ ರೊಟ್ಟಿಗಳನ್ನು ಮುರಿದು - ನೀವು ಜನರಿಗೆ ಹಂಚಿರಿ ಎಂದು ಶಿಷ್ಯರ ಕೈಗೆ ಕೊಟ್ಟು ಆ ಎರಡು ಮೀನುಗಳನ್ನೂ ಎಲ್ಲರಿಗೆ ಹಂಚಿಸಿದನು. 42ಅವರೆಲ್ಲರೂ ಊಟಮಾಡಿ ತೃಪ್ತರಾದರು. 43ರೊಟ್ಟಿತುಂಡುಗಳನ್ನೂ ಮೀನಿನ ತುಂಡುಗಳನ್ನೂ ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು. 44ಊಟಮಾಡಿದವರು ಐದುಸಾವಿರ ಮಂದಿ ಗಂಡಸರು.
45ಇದಾದ ಕೂಡಲೆ ಆತನು ತನ್ನ ಶಿಷ್ಯರಿಗೆ - ನಾನು ಈ ಜನರ ಗುಂಪನ್ನು ಕಳುಹಿಸಿ ಬಿಡುವಷ್ಟರೊಳಗೆ ನೀವು ದೋಣಿಯನ್ನು ಹತ್ತಿ ಮುಂದಾಗಿ ಆಚೇದಡಕ್ಕೆ ಬೇತ್ಸಾಯಿದಕ್ಕೆ ಹೋಗಿರಿ ಎಂದು ಬಲವಂತ ಮಾಡಿದನು. 46ಆತನು ಜನರಿಗೆ ಅಪ್ಪಣೆಕೊಟ್ಟನಂತರ ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋದನು. 47ಹೊತ್ತು ಮುಳುಗಿದ ಮೇಲೆ ದೋಣಿಯು ಸಮುದ್ರದ ನಡುವೆ ಇತ್ತು; ಯೇಸು ಒಬ್ಬನೇ ದಡದಲ್ಲಿದ್ದನು. 48ಎದುರು ಗಾಳಿ ಬೀಸುತ್ತಿದ್ದದರಿಂದ ಶಿಷ್ಯರು ಹುಟ್ಟು ಹಾಕಿ ಹಾಕಿ ಒದ್ದಾಡುವದನ್ನು ಆತನು ಕಂಡು ಹೆಚ್ಚುಕಡಿಮೆ ರಾತ್ರಿಯ ನಾಲ್ಕನೆಯ ಜಾವದಲ್ಲಿ ಸಮುದ್ರದ ಮೇಲೆ ನಡೆದು ಅವರ ಕಡೆಗೆ ಬಂದು ಅವರನ್ನು ದಾಟಿ ಮುಂದಕ್ಕೆ ಹೋಗಬೇಕೆಂದಿದ್ದನು. 49ಸಮುದ್ರದ ಮೇಲೆ ನಡೆಯುವ ಆತನನ್ನು ಅವರು ಕಂಡು ಭೂತವೆಂದು ಭಾವಿಸಿ ಅಬ್ಬರಿಸಿ ಕೂಗಿದರು; ಅವರೆಲ್ಲರೂ ಆತನನ್ನು ನೋಡಿ ತತ್ತರಿಸಿದರು. 50ಆತನು ಕೂಡಲೆ ಅವರನ್ನು ಮಾತಾಡಿಸಿ ಅವರಿಗೆ - ಧೈರ್ಯವಾಗಿರಿ; ನಾನು; ಅಂಜಬೇಡಿರಿ ಎಂದು ಹೇಳಿದನು. 51ತರುವಾಯ ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬಂದ ಮೇಲೆ ಗಾಳಿ ನಿಂತುಹೋಯಿತು. ಆಗ ಅವರು ತಮ್ಮೊಳಗೆ ಬಹಳವಾಗಿ ಬೆರಗಾದರು. 52ಯಾಕಂದರೆ ಅವರು ರೊಟ್ಟಿಯ ವಿಷಯವಾದ ಮಹತ್ಕಾರ್ಯವನ್ನು ಗ್ರಹಿಸಲಿಲ್ಲ; ಅವರ ಮನಸ್ಸು ಕಲ್ಲಾಗಿತ್ತು.
53ಅವರು ಸಮುದ್ರವನ್ನು ದಾಟಿ ಗೆನೆಜರೇತ್ ದೇಶದ ದಡಕ್ಕೆ ಮುಟ್ಟಿ ದೋಣಿಯನ್ನು ಕಟ್ಟಿದರು. 54ಅವರು ದೋಣಿಯಿಂದ ಇಳಿದ ಕೂಡಲೆ ಜನರು ಆತನ ಗುರುತನ್ನು ಹಿಡಿದು 55ಆ ಸೀಮೆಯಲ್ಲೆಲ್ಲಾ ಓಡಾಡುತ್ತಾ ಮೈಯಲ್ಲಿ ನೆಟ್ಟಗಿಲ್ಲದವರನ್ನು ದೋಲಿಯ ಮೇಲೆ ಹಾಕಿಕೊಂಡು ಆತನು ಎಲ್ಲೆಲ್ಲಿ ಇದ್ದಾನೆಂದು ಕೇಳಿದರೋ ಅಲ್ಲಲ್ಲಿಗೆ ತೆಗೆದುಕೊಂಡು ಹೋದರು. 56ಆತನು ಯಾವ ಗ್ರಾಮಗಳಿಗೂ ಯಾವ ಊರು ಹಳ್ಳಿಗಳಿಗೂ ಹೋದನೋ ಅಲ್ಲಿಯವರು ರೋಗಿಗಳನ್ನು ಪೇಟೆಗಳಲ್ಲಿ ಇಟ್ಟು - ನಿನ್ನ ಉಡುಪಿನ ಗೊಂಡೆಯನ್ನಾದರೂ ಮುಟ್ಟಗೊಡಿಸಬೇಕೆಂದು ಆತನನ್ನು ಬೇಡಿಕೊಂಡರು; ಆತನನ್ನು ಮುಟ್ಟಿದವರೆಲ್ಲರೂ ಸ್ವಸ್ಥರಾದರು.

Currently Selected:

ಮಾರ್ಕ 6: KANJV-BSI

Highlight

Share

Copy

None

Want to have your highlights saved across all your devices? Sign up or sign in