YouVersion Logo
Search Icon

ಮಾರ್ಕ 13

13
ಯೇಸು ಯೆರೂಸಲೇವಿುನ ನಾಶನವನ್ನೂ ಯುಗದ ಸಮಾಪ್ತಿಯನ್ನೂ ಮುಂದಾಗಿ ತಿಳಿಸಿದ್ದು
(ಮತ್ತಾ. 24; ಲೂಕ. 21.5-36)
1ಯೇಸು ದೇವಾಲಯವನ್ನು ಬಿಟ್ಟು ಹೋಗುತ್ತಿರಲು ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ - ಗುರುವೇ, ನೋಡು, ಎಂಥಾ ಕಲ್ಲುಗಳು! ಎಂಥಾ ಕಟ್ಟಣಗಳು! ಎಂದು ಹೇಳಿದನು. 2ಯೇಸು - ಈ ದೊಡ್ಡ ಕಟ್ಟಣಗಳನ್ನು ನೋಡುತ್ತೀಯಾ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವದಿಲ್ಲ; ಎಲ್ಲಾ ಕೆಡವಲ್ಪಡುವದು ಅಂದನು.
3ಬಳಿಕ ಆತನು ಎಣ್ಣೇಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯ ಇವರು - 4ಅದು ಯಾವಾಗ ಆಗುವದು? ಅದೆಲ್ಲಾ ನೆರವೇರುವದಕ್ಕಿರುವಾಗ ಯಾವ ಸೂಚನೆ ತೋರುವದು? ನಮಗೆ ಹೇಳು ಎಂದು ಆತನನ್ನು ಪ್ರತ್ಯೇಕವಾಗಿ ಕೇಳಲು 5ಯೇಸು ಅವರಿಗೆ ಹೇಳಿದ್ದೇನಂದರೆ - ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ನೋಡಿಕೊಳ್ಳಿರಿ. 6ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು - ನಾನು ಕ್ರಿಸ್ತನು, ನಾನು ಕ್ರಿಸ್ತನು ಎಂದು ಹೇಳಿ ಎಷ್ಟೋ ಜನರನ್ನು ಮೋಸಗೊಳಿಸುವರು. 7ಇದಲ್ಲದೆ ಯುದ್ಧಗಳಾಗುವದನ್ನೂ ಯುದ್ಧವಾಗುವ ಹಾಗಿದೆ ಎಂಬ ಸುದ್ದಿಗಳನ್ನೂ ನೀವು ಕೇಳುವಾಗ ಕಳವಳಪಡಬೇಡಿರಿ. ಹಾಗಾಗುವದು ಅಗತ್ಯ; ಆದರೂ ಇದು ಇನ್ನೂ ಅಂತ್ಯಕಾಲವಲ್ಲ. 8ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಭೂಕಂಪಗಳು ಅಲ್ಲಲ್ಲಿ ಆಗುವವು; ಬರಗಳು ಬರುವವು; ಇವೆಲ್ಲಾ [ನೂತನ ಕಾಲವು ಹುಟ್ಟುವ] ಪ್ರಸವವೇದನೆಯ ಪ್ರಾರಂಭ.
9ಆದರೆ ನಿಮ್ಮ ವಿಷಯದಲ್ಲಿ ನೋಡಿಕೊಳ್ಳಿರಿ. ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡುಹೋಗುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ನನ್ನ ನಿವಿುತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು. ಹೀಗೆ ಅವರಿಗೆ ಸಾಕ್ಷಿಯಾಗುವದು. 10ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು. 11ನಿಮ್ಮನ್ನು ಹಿಡುಕೊಂಡುಹೋಗಿ ಒಪ್ಪಿಸುವಾಗ ಏನು ಹೇಳಬೇಕು ಎಂದು ಮುಂಚಿತವಾಗಿ ಚಿಂತೆಮಾಡಬೇಡಿರಿ; ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವಂಥ ಮಾತನ್ನೇ ಆಡಿರಿ; ಮಾತಾಡುವವರು ನೀವಲ್ಲ, ಪವಿತ್ರಾತ್ಮನೇ. 12ಇದಲ್ಲದೆ ಅಣ್ಣನು ತಮ್ಮನನ್ನು ತಂದೆಯು ಮಗನನ್ನು ಮರಣಕ್ಕೆ ಒಪ್ಪಿಸುವರು. ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. 13ಮತ್ತು ನನ್ನ ಹೆಸರಿನ ನಿವಿುತ್ತವಾಗಿ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇವರೆಗೂ ತಾಳುವವನು ರಕ್ಷಣೆ ಹೊಂದುವನು.
14ಇದಲ್ಲದೆ ಹಾಳುಮಾಡುವ ಅಸಹ್ಯ ವಸ್ತುವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ಕಾಣುವಾಗ (ಇದನ್ನು ಓದುವವನು ತಿಳುಕೊಳ್ಳಲಿ) ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ. 15ಮಾಳಿಗೆಯ ಮೇಲೆ ಇರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವದಕ್ಕೆ ಇಳಿಯದೆ ಒಳಕ್ಕೆ ಹೋಗದೆ 16ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರಿಗಿ ಬಾರದೆ ಓಡಿಹೋಗಲಿ. 17ಆದರೆ ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! 18-19ಆ ದಿವಸಗಳು ಸಂಕಟ ದಿವಸಗಳಾಗಿರುವದರಿಂದ ಇದೆಲ್ಲಾ ಚಳಿಗಾಲದಲ್ಲಿ ಆಗಬಾರದೆಂದು ಪ್ರಾರ್ಥನೆ ಮಾಡಿರಿ; ಅಂಥ ಸಂಕಟವು ದೇವರು ಮಾಡಿದ ಸೃಷ್ಟಿ ಮೊದಲುಗೊಂಡು ಇಂದಿನವರೆಗೂ ಆಗಲಿಲ್ಲ; ಇನ್ನು ಮೇಲೆಯೂ ಆಗುವದಿಲ್ಲ. 20ಕರ್ತನು ಆ ದಿನಗಳನ್ನು ಕಡಿಮೆಮಾಡದಿದ್ದರೆ ಒಂದು ನರಪ್ರಾಣಿಯಾದರೂ ಉಳಿಯದು; ಆದರೆ ತಾನು ಆದುಕೊಂಡವರಿಗೋಸ್ಕರ ಆ ದಿನಗಳನ್ನು ಕಡಿಮೆಮಾಡಿದ್ದಾನೆ. 21ಆಗ ಯಾರಾದರೂ ನಿಮಗೆ - ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ ಎಂದು ಹೇಳಿದರೆ ನಂಬಬೇಡಿರಿ; 22ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಮೋಸಗೊಳಿಸುವದಕ್ಕೋಸ್ಕರ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು. 23ನೀವಂತು ನೋಡಿಕೊಳ್ಳಿರಿ; ನಿಮಗೆ ಎಲ್ಲವನ್ನೂ ಮುಂದಾಗಿ ಹೇಳಿದ್ದೇನೆ.
24ಇದಲ್ಲದೆ ಆ ದಿನಗಳಲ್ಲಿ ಆ ಸಂಕಟ ತೀರಿದ ಮೇಲೆ ಸೂರ್ಯನು ಕತ್ತಲಾಗಿ ಹೋಗುವನು; 25ಚಂದ್ರನು ಬೆಳಕುಕೊಡದೆ ಇರುವನು; ನಕ್ಷತ್ರಗಳು ಆಕಾಶದಿಂದ ಉದುರುತ್ತಿರುವವು; ಆಕಾಶದಲ್ಲಿರುವ ಶಕ್ತಿಗಳು ಕದಲುವವು. 26ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘಗಳಲ್ಲಿ ಬರುವದನ್ನು ಕಾಣುವರು. 27ಮತ್ತು ಆತನು ತನ್ನ ದೂತರನ್ನು ಕಳುಹಿಸಿ ತಾನು ಆದುಕೊಂಡವರನ್ನು ಭೂವಿುಯ ಕಟ್ಟ ಕಡೆಯಿಂದ ಆಕಾಶದ ಕಟ್ಟ ಕಡೆಯವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವನು.
28ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿ ಕಲಿಯಿರಿ; ಅದರ ಕೊಂಬೆ ಇನ್ನೂ ಎಳೇದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. 29ಹಾಗೆಯೇ ನೀವು ಸಹ ಇದೆಲ್ಲಾ ಆಗುವದನ್ನು ನೋಡುವಾಗ ಹತ್ತಿರವದೆ, ಬಾಗಿಲಲ್ಲೇ ಅದೆ ಎಂದು ತಿಳುಕೊಳ್ಳಿರಿ. 30ಇದೆಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 31ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
32ಇದಲ್ಲದೆ ಆ ದಿನದ ವಿಷಯವಾಗಲಿ ಆ ಗಳಿಗೆಯ ವಿಷಯವಾಗಲಿ ನನ್ನ ತಂದೆಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು; ಮಗನಿಗೂ ತಿಳಿಯದು. 33ಆ ಕಾಲವು ಯಾವಾಗ ಬರುವದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಜಾಗರೂಕರಾಗಿರಿ.#13.33 ಕೆಲವು ಪ್ರತಿಗಳಲ್ಲಿ - ಜಾಗರೂಕರಾಗಿರಿ, ದೇವರನ್ನು ಪ್ರಾರ್ಥಿಸಿರಿ ಎಂದು ಬರೆದದೆ. 34ಒಬ್ಬ ಮನುಷ್ಯಸು ತನ್ನ ಮನೆಯನ್ನು ಬಿಟ್ಟು ಬೇರೊಂದು ದೇಶಕ್ಕೆ ಹೋಗುವಾಗ ತನ್ನ ಆಳುಗಳಿಗೆ ಮನೇ ಆಡಳಿತವನ್ನು ಒಪ್ಪಿಸಿಕೊಟ್ಟು ಒಬ್ಬೊಬ್ಬನಿಗೆ ಅವನವನ ಕೆಲಸವನ್ನು ನೇವಿುಸಿ ಬಾಗಿಲುಕಾಯುವವನನ್ನು ಕರೆದು - ನೀನು ಎಚ್ಚರವಾಗಿರಬೇಕೆಂದು ಅಪ್ಪಣೆ ಕೊಡುವ ಪ್ರಕಾರ [ನಾನು ನಿಮಗೆ ಅಪ್ಪಣೆ ಕೊಡುತ್ತೇನೆ]. 35ಮನೇಯಜಮಾನನು ಸಂಜೆಯಲ್ಲೋ ಸರುಹೊತ್ತಿನಲ್ಲೋ ಕೋಳಿ ಕೂಗುವಾಗಲೋ ಮುಂಜಾನೆಯಲ್ಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ; 36ಅವನು ಏಕಾಏಕಿ ಬಂದು ನೀವು ನಿದ್ದೆ ಮಾಡುವದನ್ನು ಕಂಡಾನು. 37ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ, ಎಚ್ಚರವಾಗಿರಿ ಅಂದನು.

Highlight

Share

Copy

None

Want to have your highlights saved across all your devices? Sign up or sign in