YouVersion Logo
Search Icon

ಮಾರ್ಕ 12

12
1ಆಗ ಯೇಸು ಅವರ ಕೂಡ ಸಾಮ್ಯರೂಪವಾಗಿ ಮಾತಾಡುವದಕ್ಕೆ ತೊಡಗಿ - ಒಬ್ಬ ಮನುಷ್ಯನು ಒಂದು ದ್ರಾಕ್ಷೆಯ ತೋಟವನ್ನು ಮಾಡಿ ಸುತ್ತಲು ಬೇಲಿಹಾಕಿಸಿ ದ್ರಾಕ್ಷೆಯ ಆಲೆಗಾಗಿ ಒಂದು ಗುಂಡಿಯನ್ನು ತೆಗಿಸಿ ಹೂಡೆಯನ್ನು ಕಟ್ಟಿಸಿ ಒಕ್ಕಲಿಗರಿಗೆ ವಾರಕ್ಕೆ#12.1 ಅಥವಾ: ಕೋರಿಗೆ. ಕೊಟ್ಟು ಬೇರೊಂದು ದೇಶಕ್ಕೆ ಹೋದನು. 2ಫಲಕಾಲ ಬಂದಾಗ ದ್ರಾಕ್ಷೆಯ ತೋಟದ ಹಣ್ಣಿನ ಪಾಲನ್ನು ಆ ಒಕ್ಕಲಿಗರಿಂದ ತೆಗೆದುಕೊಂಡು ಬರುವದಕ್ಕಾಗಿ ಒಬ್ಬ ಆಳನ್ನು ಅವರ ಬಳಿಗೆ ಕಳುಹಿಸಿದನು. 3ಅವರು ಅವನನ್ನು ಹಿಡುಕೊಂಡು ಹೊಡೆದು ಬರಿಗೈಲಿ ಕಳುಹಿಸಿಬಿಟ್ಟರು. 4ಆ ಧಣಿಯು ತಿರಿಗಿ ಮತ್ತೊಬ್ಬ ಆಳನ್ನು ಅವರ ಬಳಿಗೆ ಕಳುಹಿಸಲು ಅವನನ್ನು ಅವರು ತಲೆತಲೆಯ ಮೇಲೆ ಹೊಡೆದು ಅಪಮಾನ ಪಡಿಸಿದರು. 5ಆಮೇಲೆ ಇನ್ನೊಬ್ಬನನ್ನು ಕಳುಹಿಸಲು ಅವನನ್ನು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಿದನು. ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು. 6ಅವನಿಗೆ ಇನ್ನೂ ಒಬ್ಬನಿದ್ದನು; ಯಾರಂದರೆ ಅವನ ಮುದ್ದು ಮಗನೇ. ನನ್ನ ಮಗನಿಗಾದರೂ ಮರ್ಯಾದೆ ತೋರಿಸಿಯಾರೆಂದು ಧಣಿಯು ಕಡೆಯಲ್ಲಿ ಅವನನ್ನು ಅವರ ಬಳಿಗೆ ಕಳುಹಿಸಿದನು. 7ಆದರೆ ಆ ಒಕ್ಕಲಿಗರು - ಇವನೇ ಬಾಧ್ಯಸ್ಥನು; ಬನ್ನಿ, ಇವನನ್ನು ಕೊಂದುಹಾಕೋಣ; ಆಗ ಸ್ವಾಸ್ತ್ಯ ನಮ್ಮದಾಗುವದು ಎಂದು ಒಬ್ಬರ ಸಂಗಡಲೊಬ್ಬರು ಮಾತಾಡಿಕೊಂಡು 8ಅವನನ್ನು ಹಿಡಿದು ಕೊಂದುಹಾಕಿ ದ್ರಾಕ್ಷೆಯ ತೋಟದಿಂದ ಹೊರಕ್ಕೆ ಬಿಸಾಟುಬಿಟ್ಟರು. 9ಹಾಗಾದರೆ ದ್ರಾಕ್ಷೆಯ ತೋಟದ ಧಣಿಯು ಏನು ಮಾಡುವನು? ಅವನು ಬಂದು ಆ ಒಕ್ಕಲಿಗರನ್ನು ಸಂಹರಿಸಿ ತನ್ನ ತೋಟವನ್ನು ಬೇರೆ ಜನರಿಗೆ ಮಾಡುವದಕ್ಕೆ ಕೊಡುವನು.
10,11ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ
ಮುಖ್ಯವಾದ ಮೂಲೆಗಲ್ಲಾಯಿತು.
ಇದು ಕರ್ತನಿಂದಲೇ ಆಯಿತು;
ನಮಗೆ ಆಶ್ಚರ್ಯವಾಗಿ ತೋರುತ್ತದೆ
ಎಂಬುವ ಶಾಸ್ತ್ರವಚನವನ್ನು ನೀವು ಓದಿಲ್ಲವೇ ಅಂದನು. 12ಇವನು ತಮ್ಮನ್ನೇ ಕುರಿತು ಈ ಸಾಮ್ಯವನ್ನು ಹೇಳಿದನು ಎಂದು ಅವರು ತಿಳುಕೊಂಡು ಆತನನ್ನು ಹಿಡಿಯುವದಕ್ಕೆ ಸಂದರ್ಭನೋಡುತ್ತಿದ್ದರು. ಆದರೆ ಜನರಿಗೆ ಭಯಪಟ್ಟು ಆತನನ್ನು ಬಿಟ್ಟುಹೋದರು.
ಬೇರೆ ಬೇರೆ ಪಕ್ಷದವರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸುವದಕ್ಕೆ ಪ್ರಯತ್ನಮಾಡಿ ಸೋತುಹೋದದ್ದು
(ಮತ್ತಾ. 22.15-46; ಲೂಕ. 20.20-44)
13ಆಮೇಲೆ ಅವರು ಆತನನ್ನು ಮಾತಿನಲ್ಲಿ ಹಿಡಿಯುವದಕ್ಕೆ ಫರಿಸಾಯರಲ್ಲಿಯೂ ಹೆರೋದ್ಯರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು. 14ಇವರು ಬಂದು - ಬೋಧಕನೇ, ನೀನು ಸತ್ಯವಂತನು, ಯಾರಿಗೂ ಹೆದರದವನು; ನೀನು ಜನರ ಮುಖದಿಚ್ಫೆಗೆ ಮಾತಾಡದೆ ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನಾಗಿದ್ದೀ ಎಂದು ಬಲ್ಲೆವು. ಕೈಸರನಿಗೆ#12.14 ಅಂದರೆ, ರೋಮ್ ಸಾಮ್ರಾಜ್ಯದ ಚಕ್ರವರ್ತಿಗೆ. ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ, 15ಕೊಡಬೇಕೋ ಬೇಡವೋ ಎಂದು ಆತನನ್ನು ಕೇಳಿದರು. ಆತನು ಅವರ ಕಪಟವನ್ನು ತಿಳಿದು - ನನ್ನನ್ನು ಯಾಕೆ ಪರೀಕ್ಷೆ ಮಾಡುತ್ತೀರಿ? ನನಗೆ ಒಂದು ಹಣವನ್ನು ತಂದು ತೋರಿಸಿರಿ ಅನ್ನಲು ಅವರು ತಂದರು. 16ಆಗ ಆತನು - ಈ ತಲೆಯೂ ಮುದ್ರೆಯೂ ಯಾರದು ಎಂದು ಕೇಳಿದ್ದಕ್ಕೆ ಅವರು - ಕೈಸರನದು ಅಂದರು. 17ಯೇಸು - ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು. ಅವರು ಆತನ ವಿಷಯದಲ್ಲಿ ಬಹು ಆಶ್ಚರ್ಯಪಟ್ಟರು.
18ತರುವಾಯ ಸದ್ದುಕಾಯರು ಆತನ ಬಳಿಗೆ ಬಂದರು. ಇವರು ಪುನರುತ್ಥಾನವಿಲ್ಲ ಅನ್ನುವವರು. 19ಇವರು ಆತನಿಗೆ ಪ್ರಶ್ನೆಮಾಡಿದ್ದೇನಂದರೆ - ಬೋಧಕನೇ, ಅಣ್ಣನಾದವನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಆಕೆಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದಿಟ್ಟನಷ್ಟೆ. 20ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಹೆಂಡತಿಯನ್ನು ಮಾಡಿಕೊಂಡು ಸಂತಾನವಿಲ್ಲದೆ ಸತ್ತನು. 21ಎರಡನೆಯವನೂ ಆಕೆಯನ್ನು ಮದುವೆಮಾಡಿಕೊಂಡು ಸಂತಾನವಿಲ್ಲದೆ ಸತ್ತನು. ಅದರಂತೆ ಮೂರನೆಯವನು. 22ಇದೇ ಪ್ರಕಾರ ಏಳು ಮಂದಿಯೂ ಸಂತಾನವಿಲ್ಲದೆ ಹೋದರು. ಕಡೆಯಲ್ಲಿ ಆ ಸ್ತ್ರೀಯೂ ಸತ್ತಳು. 23ಪುನರುತ್ಥಾನದಲ್ಲಿ ಆಕೆ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಏಳುಮಂದಿಯೂ ಮದುವೆ ಮಾಡಿಕೊಂಡಿದ್ದರಲ್ಲಾ ಅಂದರು. 24ಯೇಸು ಅವರಿಗೆ - ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದಿರುವದರಿಂದಲೇ ತಪ್ಪುವವರಾಗಿದ್ದೀರಲ್ಲವೆ. 25ಸತ್ತವರು ಬದುಕಿ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. 26ಆದರೆ ಸತ್ತವರು ಬದುಕಿ ಏಳುತ್ತಾರೆಂಬ ವಿಷಯದಲ್ಲಿ ಹೇಳಬೇಕಾದರೆ - ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ಮೋಶೆಗೆ ನುಡಿದದ್ದನ್ನು ನೀವು ಮೋಶೆಯ ಗ್ರಂಥದಲ್ಲಿ ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಓದಲಿಲ್ಲವೇ? 27ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ; ನೀವು ಹಿಡಿದ ಅಭಿಪ್ರಾಯವು ಬಹು ತಪ್ಪಾಗಿದೆ ಎಂದು ಹೇಳಿದನು.
28ಶಾಸ್ತ್ರಿಗಳಲ್ಲಿ ಒಬ್ಬನು ಅವರ ತರ್ಕವನ್ನು ಕೇಳಿ ಯೇಸು ಅವರಿಗೆ ಒಳ್ಳೆಯ ಉತ್ತರ ಕೊಟ್ಟನೆಂದು ತಿಳಿದು ಹತ್ತಿರಕ್ಕೆ ಬಂದು - ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವದು ಎಂದು ಆತನನ್ನು ಕೇಳಿದ್ದಕ್ಕೆ ಯೇಸು - 29ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು ಒಬ್ಬನೇ#12.29 ಅಥವಾ: ಅದ್ವಿತೀಯನು. ಮೂಲ: ಒಬ್ಬನೇ ಕರ್ತನು. ದೇವರು; 30ನಿನ್ನ ದೇವರಾದ ಕರ್ತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; 31ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ; ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ ಎಂದು ಉತ್ತರಕೊಟ್ಟನು. 32ಆಗ ಆ ಶಾಸ್ತ್ರಿಯು - ಬೋಧಕನೇ, ಚೆನ್ನಾಗಿ ಹೇಳಿದೆ; ಒಬ್ಬನೇ ಇದ್ದಾನೆ, ಆತನ ಹೊರತು ಮತ್ತೊಬ್ಬ ದೇವರಿಲ್ಲ ಎಂದು ನೀನು ಹೇಳಿದ್ದು ಸತ್ಯ. 33ಆತನನ್ನು ಪೂರ್ಣಮನಸ್ಸಿನಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸುವದು ಮತ್ತು ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಹೆಚ್ಚಿನವು ಅಂದನು. 34ಅವನು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸು ಕಂಡು - ನೀನು ದೇವರ ರಾಜ್ಯಕ್ಕೆ ದೂರವಾದವನಲ್ಲ ಅಂದನು. ಅಂದಿನಿಂದ ಆತನನ್ನು ಪ್ರಶ್ನೆಮಾಡುವದಕ್ಕೆ ಯಾರಿಗೂ ಧೈರ್ಯವಿರಲಿಲ್ಲ.
35ಯೇಸು ದೇವಾಲಯದಲ್ಲಿ ಉಪದೇಶ ಮಾಡುತ್ತಿರಲಾಗಿ ಪ್ರಶ್ನೆಮಾಡಿ - ಶಾಸ್ತ್ರಿಗಳು ಬರಬೇಕಾದ ಕ್ರಿಸ್ತನನ್ನು ದಾವೀದನ ಮಗನೆಂದು ಹೇಳುತ್ತಾರಲ್ಲಾ, ಅದು ಹೇಗಾದೀತು?
36ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದಗಳ ಕೆಳಗೆ ಹಾಕುವ ತನಕ
ನನ್ನ ಬಲಗಡೆಯಲ್ಲಿ ಕೂತುಕೊಂಡಿರು ಎಂದು
ಕರ್ತನು ನನ್ನ ಒಡೆಯನಿಗೆ ನುಡಿದನು
ಎಂಬದಾಗಿ ದಾವೀದನೇ ಪವಿತ್ರಾತ್ಮನ ಪ್ರೇರಣೆಯಿಂದ ಹೇಳಿದನು. 37ದಾವೀದನೇ ಆತನನ್ನು ಒಡೆಯನೆಂದು ಹೇಳಿರುವಲ್ಲಿ ಆತನು ಅವನಿಗೆ ಮಗನಾಗುವದು ಹೇಗೆ? ಎಂದು ಕೇಳಿದನು.
ಯೇಸು ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆ ಹೇಳಿದ್ದು
(ಮತ್ತಾ. 23; ಲೂಕ. 20.45-47)
38ಸಾಧಾರಣ ಜನರು ಆತನ ಮಾತನ್ನು ಸಂತೋಷದಿಂದ ಕೇಳುತ್ತಿದ್ದರು. ಆತನು ಉಪದೇಶಮಾಡಿ ಹೇಳಿದ್ದೇನಂದರೆ - ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದು, ಅಂಗಡಿಬೀದಿಗಳಲ್ಲಿ ನಮಸ್ಕಾರಗಳು, 39ಸಭಾಮಂದಿರಗಳಲ್ಲಿ ಮುಖ್ಯಪೀಠಗಳು, ಔತಣಪ್ರಸ್ತಗಳಲ್ಲಿ ಪ್ರಥಮಸ್ಥಾನಗಳು, ಇವುಗಳಲ್ಲಿಯೇ ಅವರು ಮನಸ್ಸುಳ್ಳವರಾಗಿದ್ದಾರೆ. 40ವಿಧವೆಯರ ಮನೆಗಳನ್ನು ನುಂಗಿ ನಟನೆಗಾಗಿ ದೇವರಿಗೆ ಉದ್ದವಾದ ಪ್ರಾರ್ಥನೆಗಳನ್ನು ಮಾಡುವವರಾದ ಇವರು ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
ದೇವರಿಗೆ ಕಾಣಿಕೆ ಕೊಡುವವರ ತಾರತಮ್ಯವನ್ನು ಕುರಿತು ಮಾತಾಡಿದ್ದು
(ಲೂಕ. 21.1-4)
41ಯೇಸು ಬೊಕ್ಕಸದ ಮನೆಗೆ ಎದುರಾಗಿ ಕೂತುಕೊಂಡು ಜನರು ಬೊಕ್ಕಸದಲ್ಲಿ ಹಣ ಹಾಕುವದನ್ನು ನೋಡುತ್ತಿದ್ದನು. ಅನೇಕ ಮಂದಿ ಐಶ್ವರ್ಯವಂತರು ಬಹಳ ಬಹಳ ಹಾಕುತ್ತಿರಲು 42ಒಬ್ಬ ಬಡ ವಿಧವೆಯು ಬಂದು ಎರಡು ಕಾಸು ಅಂದರೆ ಒಂದು ದುಗ್ಗಾಣಿ ಹಾಕಿದಳು. 43ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು - ನಿಮಗೆ ನಿಜವಾಗಿ ಹೇಳುತ್ತೇನೆ, ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಈ ಬಡ ವಿಧವೆ ಹೆಚ್ಚು ಹಾಕಿದ್ದಾಳೆ. 44ಹೇಗೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಹಾಕಿದಳು, ತನ್ನ ಜೀವನವನ್ನೇ ಕೊಟ್ಟುಬಿಟ್ಟಳು ಅಂದನು.

Highlight

Share

Copy

None

Want to have your highlights saved across all your devices? Sign up or sign in