ಮತ್ತಾಯ 3
3
ಸ್ನಾನಿಕನಾದ ಯೋಹಾನನ ಉಪದೇಶ
(ಮಾರ್ಕ. 1.2-8; ಲೂಕ. 3.1-18; ಯೋಹಾ. 1.6-8,19-34)
1ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು - 2ಪರಲೋಕರಾಜ್ಯವು ಸಮೀಪವಾಯಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಯೂದಾಯದ ಅಡವಿಯಲ್ಲಿ ಸಾರಿ ಹೇಳುತ್ತಾ ಬಂದನು.
3ಕರ್ತನ ದಾರಿಯನ್ನು ಸಿದ್ಧಮಾಡಿರಿ;
ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು
ಅಡವಿಯಲ್ಲಿ ಕೂಗುವವನ ಶಬ್ದವದೆ
ಎಂಬದಾಗಿ ಪ್ರವಾದಿಯಾದ ಯೆಶಾಯನಿಂದ ಸೂಚಿತನಾದವನು ಇವನೇ. 4ಈ ಯೋಹಾನನಿಗೆ ಒಂಟೇ ಕೂದಲಿನ ಹೊದಿಕೆಯೂ ಸೊಂಟದಲ್ಲಿ ತೊಗಲಿನ ನಡುಕಟ್ಟೂ ಇದ್ದವು. ಅವನಿಗೆ ವಿುಡಿತೆ ಮತ್ತು ಕಾಡಜೇನು ಆಹಾರವಾಗಿದ್ದವು.
5ಆಗ ಯೆರೂಸಲೇಮೂ ಎಲ್ಲಾ ಯೂದಾಯವೂ ಯೊರ್ದನ್‍ಹೊಳೆಯ ಸುತ್ತಲಿರುವ ಎಲ್ಲಾ ಸೀಮೆಯೂ 6ಅವನ ಬಳಿಗೆ ಹೊರಟುಹೋಗಿ, ಅವರು ತಮ್ಮತಮ್ಮ ಪಾಪಗಳನ್ನು ಹೇಳಿಕೊಂಡು ಯೊರ್ದನ್‍ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
7ಆದರೆ ಅವನು ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಸ್ನಾನಮಾಡಿಸಿಕೊಳ್ಳುವದಕ್ಕೆ ಬರುವದನ್ನು ಕಂಡು ಅವರಿಗೆ - ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೆ ಉಪದೇಶ ಮಾಡಿದವರಾರು? 8ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲದಿಂದ ತೋರಿಸಿರಿ. 9ಅಬ್ರಹಾಮನು ನಮಗೆ ಮೂಲಪುರುಷನಲ್ಲವೇ ಎಂಬುವ ಆಲೋಚನೆಯನ್ನು ಬಿಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ. 10ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು. 11ನಾನಂತೂ ನಿಮ್ಮ ಮನಸ್ಸು ತಿರುಗಿಕೊಳ್ಳಬೇಕೆಂಬದಕ್ಕೆ ನಿಮಗೆ ನೀರಿನಲ್ಲಿ ಸ್ನಾನಮಾಡಿಸುತ್ತೇನೆ. ಆದರೆ ನನ್ನ ಹಿಂದೆ ಬರುವವನು ನನಗಿಂತ ಶಕ್ತನು; ಆತನ ಕೆರಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ಸ್ನಾನಮಾಡಿಸುವನು. 12ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಂಡು ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು ಎಂದು ಹೇಳಿದನು.
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡದ್ದು
(ಮಾರ್ಕ. 1.9-11; ಲೂಕ. 3.21, 22)
13ಆ ಕಾಲದಲ್ಲಿ ಯೇಸು ಯೋಹಾನನಿಂದ ಸ್ನಾನಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದನ್‍ಹೊಳೆಗೆ ಬಂದನು. 14ಆಗ ಯೋಹಾನನು - ನಾನು ನಿನ್ನಿಂದ ಸ್ನಾನ ಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿ ಆತನನ್ನು ತಡೆಯುತ್ತಾ ಇದ್ದನು. 15ಆದರೆ ಯೇಸು ಅವನಿಗೆ - ಸದ್ಯಕ್ಕೆ ಒಪ್ಪಿಕೋ; ಹೀಗೆ ನಾವು ಎಲ್ಲಾ ಧರ್ಮವನ್ನು ನೆರವೇರಿಸತಕ್ಕದ್ದಾಗಿದೆ ಎಂದು ಹೇಳಿದಾಗ ಅವನು ಒಪ್ಪಿಕೊಂಡನು.
16ಯೇಸು ಸ್ನಾನಮಾಡಿಸಿಕೊಂಡ ಕೂಡಲೆ ನೀರಿನಿಂದ ಮೇಲಕ್ಕೆ ಬರಲು ಇಗೋ, ಆತನಿಗೆ ಆಕಾಶವು ತೆರೆಯಿತು; ಮತ್ತು ದೇವರ ಆತ್ಮ ಪಾರಿವಾಳದ ಹಾಗೆ ಇಳಿದು ತನ್ನ ಮೇಲೆ ಬರುವದನ್ನು ಕಂಡನು. 17ಆಗ - ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.
Currently Selected:
ಮತ್ತಾಯ 3: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.