ಮತ್ತಾಯ 25
25
1ಆಗ ಪರಲೋಕರಾಜ್ಯವು ಆರತಿಗಳನ್ನು#25.1 ಅಥವಾ: ದೀವಟಿಗೆಗಳನ್ನು. ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು. 2ಅವರಲ್ಲಿ ಐದು ಮಂದಿ ಬುದ್ಧಿಯಿಲ್ಲದವರು, ಐದು ಮಂದಿ ಬುದ್ಧಿವಂತೆಯರು. 3ಬುದ್ಧಿಯಿಲ್ಲದವರು ತಮ್ಮ ಆರತಿಗಳನ್ನು ತಕ್ಕೊಂಡರು, ಆದರೆ ಎಣ್ಣೆ ತಕ್ಕೊಳ್ಳಲಿಲ್ಲ. 4ಬುದ್ಧಿವಂತೆಯರು ತಮ್ಮ ಆರತಿಗಳ ಕೂಡ ಪಾತ್ರೆಗಳಲ್ಲಿ ಎಣ್ಣೆ ತಕ್ಕೊಂಡರು. 5ಮದಲಿಂಗನು ಬರುವದಕ್ಕೆ ತಡಮಾಡಲು ಅವರೆಲ್ಲರು ತೂಕಡಿಸಿ ಮಲಗಿದರು. 6ಆದರೆ ಅರ್ಧರಾತ್ರಿಯಲ್ಲಿ - ಇಗೋ, ಮದಲಿಂಗನು! ಅವನನ್ನು ಎದುರುಗೊಳ್ಳುವದಕ್ಕೆ ಹೊರಡಿರಿ ಎಂಬ ಕೂಗಾಯಿತು. 7ಆಗ ಆ ಕನ್ಯೆಯರೆಲ್ಲರು ಎಚ್ಚತ್ತು ತಮ್ಮ ಆರತಿಗಳನ್ನು ನೆಟ್ಟಗೆಮಾಡಿದರು. 8ಆಗ್ಗೆ ಬುದ್ಧಿಯಿಲ್ಲದವರು ಬುದ್ಧಿವಂತೆಯರಿಗೆ - ನಿಮ್ಮ ಎಣ್ಣೆಯಲ್ಲಿ ನಮಗೆ ಸ್ವಲ್ಪ ಕೊಡಿರಿ. 9ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಆ ಬುದ್ಧಿವಂತೆಯರು - ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು. 10ಅವರು ಕೊಂಡುಕೊಳ್ಳಲಿಕ್ಕೆ ಹೋದಾಗ ಮದಲಿಂಗನು ಬಂದನು. ಸಿದ್ಧವಾಗಿದ್ದವರು ಅವನ ಸಂಗಡ ಮದುವೆಯ ಮನೆಯೊಳಕ್ಕೆ ಹೋದರು. ಬಾಗಿಲು ಮುಚ್ಚಲಾಯಿತು. 11ತರುವಾಯ ಉಳಿದ ಕನ್ಯೆಯರು ಸಹ ಬಂದು - ಸ್ವಾಮೀ, ಸ್ವಾಮೀ, ನಮಗೆ ತೆರೆಯಿರಿ ಅಂದರು. 12ಆತನು - ನಿಮ್ಮನ್ನು ನಾನರಿಯೆನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು. 13ಆದಕಾರಣ ಆ ದಿನವಾದರೂ ಗಳಿಗೆಯಾದರೂ ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ.
14ದೇಶಾಂತರಕ್ಕೆ ಹೋಗುವ ಒಬ್ಬ ಮನುಷ್ಯನು ತನ್ನ ಆಳುಗಳನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿಕೊಟ್ಟಂತಿರುವದು. 15ಅವನು ಒಬ್ಬನಿಗೆ ಐದು ತಲಾಂತು,#25.15 ತಲಾಂತು ಅಂದರೆ ಸುಮಾರು 3,000 ರೂಪಾಯಿ. ಒಬ್ಬನಿಗೆ ಎರಡು, ಒಬ್ಬನಿಗೆ ಒಂದು, ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಬೇರೊಂದು ದೇಶಕ್ಕೆ ಹೋದನು. 16ಐದು ತಲಾಂತು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ ಇನ್ನೂ ಐದು ತಲಾಂತು ಗಳಿಸಿಕೊಂಡನು. 17ಹಾಗೆಯೇ ಎರಡು ತಲಾಂತು ಹೊಂದಿದವನು ಇನ್ನೂ ಎರಡು ಸಂಪಾದಿಸಿಕೊಂಡನು. 18ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂವಿುಯನ್ನು ಅಗೆದು ತನ್ನ ದಣಿಯ ಹಣವನ್ನು ಬಚ್ಚಿಟ್ಟನು. 19ಬಹುಕಾಲದ ಮೇಲೆ ಆ ಆಳುಗಳ ಧಣಿಯು ಬಂದು ಅವರಿಂದ ಲೆಕ್ಕ ತೆಗೆದುಕೊಳ್ಳಲು 20ಐದು ತಲಾಂತು ಹೊಂದಿದವನು ಮುಂದೆಬಂದು ಇನ್ನೂ ಐದು ತಲಾಂತು ತಂದು - ಸ್ವಾಮೀ, ನೀನು ಐದು ತಲಾಂತನ್ನು ನನಗೆ ಕೊಟ್ಟಿದ್ದಿಯಲ್ಲಾ, ಇಗೋ, ಇನ್ನು ಐದು ತಲಾಂತು ಸಂಪಾದಿಸಿದ್ದೇನೆ ಅಂದನು. 21ಅವನ ಧಣಿಯು - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಅಂದನು. 22ಆಗ ಎರಡು ತಲಾಂತು ಹೊಂದಿದವನು ಮುಂದೆಬಂದು - ಸ್ವಾಮೀ, ಎರಡು ತಲಾಂತು ನನಗೆ ಒಪ್ಪಿಸಿದಿಯಲ್ಲಾ; ಇಗೋ, ಇನ್ನು ಎರಡು ತಲಾಂತು ಸಂಪಾದಿಸಿದ್ದೇನೆ ಅಂದನು. 23ಅವನ ಧಣಿಯು ಅವನಿಗೆ - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಎಂದು ಹೇಳಿದನು. 24ತರುವಾಯ ಒಂದೇ ತಲಾಂತು ಹೊಂದಿದವನು ಸಹ ಮುಂದೆಬಂದು - ಸ್ವಾಮೀ, ನೀನು ಕಠಿಣ ಮನುಷ್ಯನು, ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದು 25ಹೆದರಿಕೊಂಡು ಹೋಗಿ ನಿನ್ನ ತಲಾಂತನ್ನು ಭೂವಿುಯಲ್ಲಿ ಬಚ್ಚಿಟ್ಟೆನು; ಇಗೋ, ನಿನ್ನದು ನಿನಗೆ ಸಂದಿದೆ ಅಂದನು. 26ಆಗ ಅವನ ಧಣಿಯು ಅವನಿಗೆ - ಮೈಗಳ್ಳನಾದ ಕೆಟ್ಟ ಆಳು ನೀನು; ನಾನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿಯಾ? 27ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿಸಹಿತ ಪಡಕೊಳ್ಳುತ್ತಿದ್ದೆನು ಎಂದು ಹೇಳಿ 28ತನ್ನ ಸೇವಕರಿಗೆ - ಅವನಿಂದ ಆ ತಲಾಂತು ತೆಗೆದು ಹತ್ತು ತಲಾಂತು ಇದ್ದವನಿಗೆ ಕೊಡಿರಿ. 29ಇದ್ದವರಿಗೆಲ್ಲಾ ಕೊಡಲ್ಪಡುವದು, ಅವರಿಗೆ ಮತ್ತೂ ಹೆಚ್ಚಾಗುವದು; ಇಲ್ಲದವನ ಕಡೆಯಿಂದ ಇದ್ದದ್ದೂ ತೆಗೆಯಲ್ಪಡುವದು. 30ಮತ್ತು ಕೆಲಸಕ್ಕೆ ಬಾರದ ಈ ಆಳನ್ನು ಹೊರಗೆ ಕತ್ತಲೆಗೆ ಹಾಕಿಬಿಡಿರಿ ಎಂದು ಹೇಳಿದನು. ಅಲ್ಲಿ ಗೋಳಾಟವೂ ಕಟಕಟನೆ ಹಲ್ಲು ಕಡಿಯೋಣವೂ ಇರುವವು.
31ಇದಲ್ಲದೆ ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; 32ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡಿ 33ಕುರಿಗಳನ್ನು ತನ್ನ ಬಲಗಡೆಯಲ್ಲಿ ಆಡುಗಳನ್ನು ತನ್ನ ಎಡಗಡೆಯಲ್ಲಿ ನಿಲ್ಲಿಸುವನು. 34ಆಗ ಅರಸನು ತನ್ನ ಬಲಗಡೆಯಲ್ಲಿರುವವರಿಗೆ - ನನ್ನ ತಂದೆಯ ಆಶೀರ್ವಾದ ಹೊಂದಿದವರೇ ಬನ್ನಿರಿ, ಲೋಕಾದಿಯಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ತ್ಯವಾಗಿ ತೆಗೆದುಕೊಳ್ಳಿರಿ. 35ನಾನು ಹಸಿದಿದ್ದೆನು, ನನಗೆ ಊಟಕ್ಕೆ ಕೊಟ್ಟಿರಿ; ನಾನು ಬಾಯಾರಿದ್ದೆನು, ನನಗೆ ಕುಡಿಯುವದಕ್ಕೆ ಕೊಟ್ಟಿರಿ; ಪರದೇಶಿಯಾಗಿದ್ದೆನು, ನನ್ನನ್ನು ಸೇರಿಸಿಕೊಂಡಿರಿ; 36ಬಟ್ಟೆಯಿಲ್ಲದವನಾಗಿದ್ದೆನು, ನನಗೆ ಉಡುವದಕ್ಕೆ ಕೊಟ್ಟಿರಿ; ರೋಗದಲ್ಲಿ ಬಿದ್ದಿದ್ದೆನು, ನನ್ನನ್ನು ಆರೈಕೆ ಮಾಡುವದಕ್ಕೆ ಬಂದಿರಿ; ಸೆರೆಮನೆಯಲ್ಲಿದ್ದೆನು, ನನ್ನನ್ನು ನೋಡುವದಕ್ಕೆ ಬಂದಿರಿ ಎಂದು ಹೇಳುವನು. 37ಅದಕ್ಕೆ ನೀತಿವಂತರು - ಸ್ವಾಮೀ, ಯಾವಾಗ ನೀನು ಹಸಿದದ್ದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು? 38ಯಾವಾಗ ನೀನು ಪರದೇಶಿಯಾಗಿರುವದನ್ನು ಕಂಡು ಸೇರಿಸಿಕೊಂಡೆವು? ಇಲ್ಲವೆ ನಿನಗೆ ಬಟ್ಟೆಯಿಲ್ಲದ್ದನ್ನು ಕಂಡು ಉಡುವದಕ್ಕೆ ಕೊಟ್ಟೆವು? 39ಯಾವಾಗ ನೀನು ರೋಗದಲ್ಲಿ ಬಿದ್ದದ್ದನ್ನು ಅಥವಾ ಸೆರೆಮನೆಯಲ್ಲಿ ಇದ್ದದ್ದನ್ನು ಕಂಡು ನಿನ್ನನ್ನು ನೋಡುವದಕ್ಕೆ ಬಂದೆವು ಎಂದು ಉತ್ತರವಾಗಿ ಹೇಳುವರು. 40ಅದಕ್ಕೆ ಅರಸನು - ಈ ನನ್ನ ಸಹೋದರರಲ್ಲಿ ಕೇವಲ ಅಲ್ಪನಾದವನೊಬ್ಬನಿಗೆ ಏನೇನು ಮಾಡಿದಿರೋ ಅದನ್ನು ನನಗೂ ಮಾಡಿದ ಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು. 41ಆಮೇಲೆ ಆತನು ಎಡಗಡೆಯಲ್ಲಿರುವವರಿಗೆ - ಶಾಪಗ್ರಸ್ತರೇ, ನನ್ನನ್ನು ಬಿಟ್ಟು ಪಿಶಾಚನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ. 42ನಾನು ಹಸಿದಿದ್ದೆನು, ನೀವು ನನಗೆ ಊಟಕ್ಕೆ ಕೊಡಲಿಲ್ಲ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಡಲಿಲ್ಲ; 43ಪರದೇಶಿಯಾಗಿದ್ದೆನು, ನೀವು ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವದಕ್ಕೆ ಬರಲಿಲ್ಲವೆಂದು ಹೇಳುವನು. 44ಅದಕ್ಕೆ ಅವರು ಸಹ - ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ ನೀನು ಬಾಯಾರಿದ್ದನ್ನೂ ನೀನು ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು? ಅನ್ನುವರು. 45ಆಗ ಆತನು - ನೀವು ಈ ಕೇವಲ ಅಲ್ಪವಾದವರಲ್ಲಿ ಒಬ್ಬನಿಗೆ ಏನೇನು ಮಾಡದೆ ಹೋದಿರೋ ಅದನ್ನು ನನಗೂ ಮಾಡದೆ ಹೋದಹಾಗಾಯಿತು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅನ್ನುವನು. 46ಮತ್ತು ಇವರು ನಿತ್ಯಶಿಕ್ಷೆಗೂ ನೀತಿವಂತರು ನಿತ್ಯಜೀವಕ್ಕೂ ಹೋಗುವರು.
Currently Selected:
ಮತ್ತಾಯ 25: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.