ಮತ್ತಾಯ 20
20
1ಅದು ಹೇಗಂದರೆ - ಪರಲೋಕರಾಜ್ಯವು ಒಬ್ಬ ಮನೆಯ ಯಜಮಾನನಿಗೆ ಹೋಲಿಕೆಯಾಗಿದೆ. ಅವನು ತನ್ನ ದ್ರಾಕ್ಷೇತೋಟಕ್ಕೆ ಕೂಲೀ ಆಳುಗಳನ್ನು ಕರೆಯುವದಕ್ಕೆ ಬೆಳಿಗ್ಗೆ ಹೊರಟನು. 2ಆಳಿಗೆ ದಿನಕ್ಕೆ ಒಂದು ಪಾವಲಿಯಂತೆ ಕೂಲಿ ಗೊತ್ತುಮಾಡಿ ಅವರನ್ನು ದ್ರಾಕ್ಷೇತೋಟಕ್ಕೆ ಕಳುಹಿಸಿದನು. 3ತರುವಾಯ ಹೆಚ್ಚುಕಡಿಮೆ ಒಂಭತ್ತು#20.3 ಮೂಲ: ಮೂರು ತಾಸಿಗೆ. ಗಂಟೆಗೆ ಹೋಗಿ ಪೇಟೆಯಲ್ಲಿ ಸುಮ್ಮನೆ ನಿಂತಿದ್ದ ಇನ್ನು ಕೆಲವರನ್ನು ಕಂಡು - 4ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ; ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ ಅನ್ನಲು ಅವರು ತೋಟಕ್ಕೆ ಹೋದರು. 5ಅವನು ತಿರಿಗಿ ಹೆಚ್ಚುಕಡಿಮೆ ಹನ್ನೆರಡು ಗಂಟೆಗೆ ಮತ್ತು ಮೂರು#20.5 ಮೂಲ: ಆರು ತಾಸಿಗೆ ಮತ್ತು ಒಂಭತ್ತು ತಾಸಿಗೆ. ಗಂಟೆಗೆ ಹೋಗಿ ಅದೇ ಪ್ರಕಾರ ಮಾಡಿದನು. 6ತಿರಿಗಿ ಹೆಚ್ಚುಕಡಿಮೆ ಸಾಯಂಕಾಲ#20.6 ಮೂಲ: ಹನ್ನೊಂದು ತಾಸಿಗೆ. ಐದು ಗಂಟೆಗೆ ಹೋಗಿ ಬೇರೆ ಕೆಲವರು ನಿಂತಿರುವದನ್ನು ಕಂಡು ಅವರನ್ನು - ದಿನವೆಲ್ಲಾ ಇಲ್ಲಿ ಯಾಕೆ ಸುಮ್ಮನೆ ನಿಂತಿದ್ದೀರಿ ಎಂದು ಕೇಳಲು 7ಅವರು - ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ ಅಂದಾಗ ಅವನು - ನೀವು ಸಹ ನನ್ನ ದ್ರಾಕ್ಷೇತೋಟಕ್ಕೆ ಹೋಗಿರಿ ಅಂದನು. 8ಸಂಜೇಹೊತ್ತಿಗೆ ದ್ರಾಕ್ಷೇತೋಟದ ಯಜಮಾನನು ತನ್ನ ಪಾರುಪತ್ಯಗಾರನಿಗೆ - ಆ ಆಳುಗಳನ್ನು ಕರೆದು ಕಡೆಗೆ ಬಂದವರನ್ನು ಮೊದಲು ಮಾಡಿಕೊಂಡು ಮೊದಲು ಬಂದವರ ತನಕ ಅವರಿಗೆ ಕೂಲಿಕೊಡು ಎಂದು ಹೇಳಿದನು. 9ಆಗ ಸಾಯಂಕಾಲ ಐದು ಗಂಟೆಗೆ ಬಂದವರಿಗೆ ಒಂದೊಂದು ಪಾವಲಿ ಸಿಕ್ಕಿತು. 10ತರುವಾಯ ಮೊದಲಿನವರು ಬಂದು ತಮಗೆ ಹೆಚ್ಚು ದೊರೆಯುವದೆಂದು ನೆನಸಿದರು; ಆದರೆ ಇವರಿಗೆ ಸಹ ಒಂದೊಂದು ಪಾವಲಿಯೇ ಸಿಕ್ಕಿತು. 11ಅದನ್ನು ತೆಗೆದುಕೊಂಡು ಮನೆಯ ಯಜಮಾನನ ಮೇಲೆ ಗುಣುಗುಟ್ಟಿ - 12ಕಡೆಗೆ ಬಂದ ಇವರು ಒಂದು ತಾಸು ಹೊತ್ತು ಮಾತ್ರ ಕೆಲಸ ಮಾಡಿದ್ದಾರೆ; ನಾವು ದಿನವೆಲ್ಲಾ ಬಿಸಲಿನಲ್ಲಿ ಕೆಲಸ ಮಾಡಿ ಕಷ್ಟಪಟ್ಟಿದ್ದೇವೆ; ಇವರನ್ನು ನಮಗೆ ಸಮಮಾಡಿದ್ದೀಯೆ ಅಂದರು. 13ಅದಕ್ಕೆ ಅವನು ಅವರಲ್ಲಿ ಒಬ್ಬನಿಗೆ - ಏನಪ್ಪಾ, ನಾನು ನಿನಗೆ ಅನ್ಯಾಯ ಮಾಡಲಿಲ್ಲ; ನೀನು ನನ್ನ ಸಂಗಡ ಒಂದು ಪಾವಲಿಗೆ ಒಡಂಬಟ್ಟಿಯಲ್ಲಾ; 14ನಿನ್ನ ಕೂಲಿ ತಕ್ಕೊಂಡು ಹೋಗು; ನಿನಗೆ ಕೊಟ್ಟಂತೆ ಕಡೆಗೆ ಬಂದ ಇವನಿಗೂ ಕೊಡುವದಕ್ಕೆ ನನಗೆ ಮನಸ್ಸುಂಟು. 15ನನ್ನ ಬದುಕನ್ನು ನಾನು ಬೇಕಾದ ಹಾಗೆ ಮಾಡಬಹುದಲ್ಲವೋ? ನಾನು ಒಳ್ಳೆಯವನಾಗಿರುವದು ನಿನ್ನ ಕಣ್ಣನ್ನು ಒತ್ತುತ್ತದೋ ಎಂದು ಹೇಳಿದನು. 16ಈ ಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು ಎಂದು ಹೇಳಿದನು.
ಯೇಸು ತನ್ನ ಕಷ್ಟ ಮರಣ ಪುನರುತ್ಥಾನಗಳನ್ನು ಮೂರನೆಯ ಸಾರಿ ಮುಂತಿಳಿಸಿದ್ದು
(ಮಾರ್ಕ. 10.32-34; ಲೂಕ. 18.31-33)
17ಯೇಸು ಯೆರೂಸಲೇವಿುಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ಒತ್ತಟ್ಟಿಗೆ ಕರೆದುಕೊಂಡು ದಾರಿಯಲ್ಲಿ ಅವರಿಗೆ - 18ನೋಡಿರಿ, ನಾವು ಯೆರೂಸಲೇವಿುಗೆ ಹೋಗುತ್ತಾ ಇದ್ದೇವೆ; ಮತ್ತು ಮನುಷ್ಯಕುಮಾರನನ್ನು ಮಹಾಯಾಜಕರ ಮತ್ತು ಶಾಸ್ತ್ರಿಗಳ ಕೈಗೆ ಹಿಡುಕೊಡುವರು. 19ಅವರು ಅವನಿಗೆ ಮರಣದಂಡನೆಯನ್ನು ವಿಧಿಸಿ ಅವನನ್ನು ಅಪಹಾಸ್ಯ ಮಾಡುವದಕ್ಕೂ ಕೊರಡೆಗಳಿಂದ ಹೊಡೆಯುವದಕ್ಕೂ ಶಿಲುಬೆಗೆ ಹಾಕುವದಕ್ಕೂ ಅನ್ಯರ ಕೈಗೆ ಒಪ್ಪಿಸುವರು; ಅವನು ಸತ್ತ ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡುವನು ಎಂದು ಹೇಳಿದನು.
ಇಬ್ಬರು ಶಿಷ್ಯರು ತಮಗೆ ಹೆಚ್ಚಿನ ಪದವಿಯನ್ನು ಕೊಡಬೇಕೆಂದು ಬೇಡಿಕೊಳ್ಳಲು ಯೇಸು ದೀನತೆಯನ್ನು ಕುರಿತು ಬೋಧಿಸಿದ್ದು
(ಮಾರ್ಕ. 10.35-45)
20ಆಗ ಜೆಬೆದಾಯನ ಮಕ್ಕಳ ತಾಯಿ ಆತನಿಂದ ಏನೋ ಒಂದು ಬೇಡಿಕೊಳ್ಳಬೇಕೆಂದು ತನ್ನ ಮಕ್ಕಳನ್ನು ಕರಕೊಂಡು ಬಂದು ಆತನಿಗೆ ಅಡ್ಡಬಿದ್ದಳು. 21ಆತನು ಆಕೆಯನ್ನು - ನಿನಗೇನು ಬೇಕಮ್ಮಾ ಎಂದು ಕೇಳಲು ಆಕೆ - ನಿನ್ನ ರಾಜ್ಯದಲ್ಲಿ ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕೂತುಕೊಳ್ಳುವದಕ್ಕೆ ಅಪ್ಪಣೆಯಾಗಬೇಕು ಅಂದಳು. 22ಅದಕ್ಕೆ ಯೇಸು - ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಬೇಕಾಗಿರುವ ಪಾತ್ರೆಯಲ್ಲಿ ನೀವು ಕುಡಿಯುವದು ನಿವ್ಮಿುಂದಾದೀತೇ ಎಂದು ಕೇಳಲು ಅವರು - ಆಗುವದು ಅಂದರು. 23ಆಗ ಆತನು ಅವರಿಗೆ - ನನ್ನ ಪಾತ್ರೆಯಲ್ಲಿ ನೀವು ಕುಡಿಯುವಿರಿ ಸರಿ; ಆದರೆ ನನ್ನ ಎಡಬಲಗಡೆಗಳಲ್ಲಿ ಕೂತುಕೊಳ್ಳುವಂತೆ ಅನುಗ್ರಹ ಮಾಡುವದು ನನ್ನದಲ್ಲ; ನನ್ನ ತಂದೆಯಿಂದ ಅದು ಯಾರಿಗೆಂದು ಸಿದ್ಧಪಡಿಸಿದೆಯೋ ಅವರಿಗೇ ಸಿಕ್ಕುವದು ಎಂದು ಹೇಳಿದನು.
24ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿ ಆ ಇಬ್ಬರು ಅಣ್ಣತಮ್ಮಂದಿರ ಮೇಲೆ ಸಿಟ್ಟುಗೊಂಡರು. 25ಆದರೆ ಯೇಸು ಅವರನ್ನು ಹತ್ತಿರಕ್ಕೆ ಕರೆದು ಅವರಿಗೆ - ಜನಗಳನ್ನಾಳುವವರು ಅವರ ಮೇಲೆ ಅಹಂಕಾರದಿಂದ ದೊರೆತನಮಾಡುತ್ತಾರೆ, ಮತ್ತು ದೊಡ್ಡವರು ಬಲಾತ್ಕಾರದಿಂದ ಅಧಿಕಾರ ನಡಿಸುತ್ತಾರೆ ಎಂದು ನೀವು ಬಲ್ಲಿರಷ್ಟೆ. 26ನಿಮ್ಮಲ್ಲಿ ಹಾಗಿರಬಾರದು; ಆದರೆ ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು; 27ನಿಮ್ಮಲ್ಲಿ ಮೊದಲನೆಯವನಾಗಬೇಕೆಂದಿರುವವನು ನಿಮ್ಮ ಆಳಾಗಿರಬೇಕು. 28ಹಾಗೆಯೇ ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕೂ ಬಂದನು ಎಂದು ಹೇಳಿದನು.
ಯೇಸು ಇಬ್ಬರು ಕುರುಡರಿಗೆ ದೃಷ್ಟಿ ಕೊಟ್ಟದ್ದು
(ಮಾರ್ಕ. 10.46-52; ಲೂಕ. 18.35-43)
29ಅವರು ಯೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಜನರ ದೊಡ್ಡ ಗುಂಪು ಆತನ ಹಿಂದೆ ಹೋಯಿತು. 30ಆಗ ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು, ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ಕೇಳಿ - ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಕೂಗಿಕೊಂಡರು. 31ಆ ಗುಂಪಿನವರು - ಸುಮ್ಮನಿರಿ ಎಂದು ಅವರನ್ನು ಗದರಿಸಲು ಅವರು - ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಹೆಚ್ಚಾಗಿ ಕೂಗಿಕೊಂಡರು. 32ಆಗ ಯೇಸು ನಿಂತು ಅವರನ್ನು ಕರೆದು - ನಾನು ನಿಮಗೆ ಏನು ಮಾಡಬೇಕೆಂದು ಕೋರುತ್ತೀರಿ ಎಂದು ಕೇಳಲು 33ಅವರು - ನಮ್ಮ ಕಣ್ಣುಗಳು ತೆರೆಯಲ್ಪಡಬೇಕು, ಸ್ವಾಮೀ ಅಂದರು. 34ಆಗ ಯೇಸು ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೆ ಅವರಿಗೆ ಕಣ್ಣು ಬಂದವು, ಅವರು ಆತನ ಹಿಂದೆ ಹೋದರು.
Currently Selected:
ಮತ್ತಾಯ 20: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.