YouVersion Logo
Search Icon

ಮತ್ತಾಯ 18

18
ಯೇಸು ತನ್ನ ಶಿಷ್ಯರಿಗೆ ಶಿಶುಭಾವ ಇರಬೇಕೆಂತಲೂ ಸಹೋದರರ ಪಾಪಗಳನ್ನು ಕ್ಷವಿುಸಬೇಕೆಂತಲೂ ಬೋಧಿಸಿದ್ದು
(ಮಾರ್ಕ. 9.33-37; ಲೂಕ. 9.46-48)
1ಆ ವೇಳೆಯಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು - ಪರಲೋಕರಾಜ್ಯದಲ್ಲಿ ಯಾವನು ಹೆಚ್ಚಿನವನು ಎಂದು ಕೇಳಲು 2ಆತನು ಚಿಕ್ಕ ಮಗುವನ್ನು ಹತ್ತರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ 3ಅವರಿಗೆ - ನೀವು ತಿರುಗಿಕೊಂಡು ಚಿಕ್ಕ ಮಕ್ಕಳಂತೆ ಆಗದೆ ಹೋದರೆ ನೀವು ಪರಲೋಕರಾಜ್ಯದಲ್ಲಿ ಸೇರುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 4ಹೀಗಿರುವದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಗ್ಗಿಸಿಕೊಳ್ಳುತ್ತಾನೋ, ಅವನೇ ಪರಲೋಕರಾಜ್ಯದಲ್ಲಿ ಹೆಚ್ಚಿನವನು. 5ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು. 6ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅಂಥವನ ಕೊರಳಿಗೆ ಬೀಸುವ ಕಲ್ಲು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಣುಗಿಸಿಬಿಡುವದು ಅವನಿಗೆ ಹಿತವಾಗುವದು.
7ತೊಡಕುಗಳು ಬರುವದರಿಂದ ಲೋಕಕ್ಕೆ ಎಷ್ಟೋ ಕೇಡು! ತೊಡಕುಗಳು ಹೇಗಾದರೂ ಬರುವವು. ಆದಾಗ್ಯೂ ಯಾವ ಮನುಷ್ಯನಿಂದ ತೊಡಕು ಬರುತ್ತದೋ, ಅವನ ಗತಿಯನ್ನು ಏನು ಹೇಳಲಿ! 8ಹಾಗಾದರೆ ನಿನ್ನ ಕೈಯಾಗಲಿ ನಿನ್ನ ಕಾಲಾಗಲಿ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಡಿದು ಬಿಸಾಟುಬಿಡು; ಎರಡು ಕೈ ಎರಡು ಕಾಲು ಉಳ್ಳವನಾಗಿದ್ದು ನಿತ್ಯವಾಗಿರುವ ಬೆಂಕಿಯಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಕೈ ಕಾಲು ಕಳಕೊಂಡವನಾಗಿ ಜೀವದಲ್ಲಿ ಸೇರುವದು ನಿನಗೆ ಉತ್ತಮ. 9ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವದಾದರೆ ಅದನ್ನು ಕಿತ್ತು ಬಿಸಾಟುಬಿಡು; ಎರಡು ಕಣ್ಣುಳ್ಳವನಾಗಿದ್ದು ಅಗ್ನಿ ನರಕದಲ್ಲಿ ಹಾಕಿಸಿಕೊಳ್ಳುವದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ಜೀವದಲ್ಲಿ ಸೇರುವದು ನಿನಗೆ ಉತ್ತಮ.
10ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡಬಾರದು ನೋಡಿರಿ; ಪರಲೋಕದಲ್ಲಿ ಅವರ ದೂತರು ಪರಲೋಕದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಲಿದ್ದಾರೆ ಎಂದು ನಿಮಗೆ ಹೇಳುತ್ತೇನೆ.#18.10 11ನೆಯ ವಚನ ಮೂಲಗ್ರಂಥದಲ್ಲಿ ಇಲ್ಲ; ಲೂಕ. 19.10 ನೋಡಿರಿ. 12ನಿಮಗೆ ಹೇಗೆ ತೋರುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡರೆ ಅವನು ತೊಂಭತ್ತೊಂಭತ್ತು ಕುರಿಗಳನ್ನು ಬಿಟ್ಟು ಬೆಟ್ಟಕ್ಕೆ ಹೋಗಿ ತಪ್ಪಿಸಿಕೊಂಡದ್ದನ್ನು ಹುಡುಕುತ್ತಾನಲ್ಲವೇ. 13ಅದು ಸಿಕ್ಕಿದರೆ ತಪ್ಪಿಸಿಕೊಳ್ಳದೆ ಇರುವ ತೊಂಭತ್ತೊಂಭತ್ತು ಕುರಿಗಳಿಗಿಂತ ಆ ಒಂದಕ್ಕೋಸ್ಕರ ಹೆಚ್ಚಾಗಿ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 14ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ಕೆಟ್ಟುಹೋಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
15ಇದಲ್ಲದೆ ನಿನ್ನ ಸಹೋದರನು ತಪ್ಪುಮಾಡಿದರೆ#18.15 ಕೆಲವು ಪ್ರತಿಗಳಲ್ಲಿ - ನಿನಗೆ ತಪ್ಪುಮಾಡಿದರೆ ಎಂದು ಬರೆದದೆ. ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ. 16ಅವನು ಕೇಳದೆಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪನೆಯಾಗುವ ಹಾಗೆ ಇನ್ನೂ ಒಬ್ಬಿಬ್ಬರನ್ನು ನಿನ್ನ ಸಂಗಡ ಕರಕೊಂಡು ಹೋಗು. 17ಅವನು ಅವರ ಮಾತನ್ನು ಕೇಳದೆ ಹೋದರೆ ಸಭೆಗೆ ಹೇಳು; ಆದರೆ ಸಭೆಯ ಮಾತನ್ನೂ ಕೇಳದೆಹೋದರೆ ಅವನು ನಿನಗೆ ಅಜ್ಞಾನಿಯಂತೆಯೂ ಭ್ರಷ್ಟನಂತೆಯೂ#18.17 ಮೂಲ: ಸುಂಕದವನಂತೆಯೂ. ಇರಲಿ.
18ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಿರುವದು; ಮತ್ತು ಭೂಲೋಕದಲ್ಲಿ ನೀವು ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಿರುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 19ಇದಲ್ಲದೆ ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳತಕ್ಕ ಯಾವದಾದರೂ ಒಂದು ಕಾರ್ಯದ ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವದೆಂದು ನಿಮಗೆ ಹೇಳುತ್ತೇನೆ. 20ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ ಅಂದನು.
21ಆಗ ಪೇತ್ರನು ಆತನ ಬಳಿಗೆ ಬಂದು - ಸ್ವಾಮೀ, ನನ್ನ ಸಹೋದರನು ನನಗೆ ತಪ್ಪುಮಾಡುತ್ತಾ ಬಂದರೆ ನಾನು ಎಷ್ಟು ಸಾರಿ ಅವನಿಗೆ ಕ್ಷವಿುಸಬೇಕು? ಏಳು ಸಾರಿಯೋ ಎಂದು ಕೇಳಲು 22ಯೇಸು ಅವನಿಗೆ - ಏಳು ಸಾರಿ ಎಂದಲ್ಲ, ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ. 23ಆದದರಿಂದ ಪರಲೋಕರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. 24ಅವನು ಲೆಕ್ಕಾ ತೆಗೆದುಕೊಳ್ಳುವದಕ್ಕೆ ಪ್ರಾರಂಭಮಾಡಿದಾಗ ಕೋಟ್ಯಾಂತರ#18.24 ಮೂಲ ; 10,000 ತಲಾಂತು; ತಲಾಂತು ಅಂದರೆ ಸುಮಾರು 3,000 ರೂಪಾಯಿ. ಸಾಲಾ ಮಾಡಿದವನೊಬ್ಬನನ್ನು ಅವನ ಬಳಿಗೆ ಹಿಡತಂದರು. 25ಆ ಸಾಲಾ ತೀರಿಸುವದಕ್ಕೆ ಅವನಲ್ಲಿ ಏನೂ ಇಲ್ಲದ್ದರಿಂದ ಅವನ ಒಡೆಯನು ಅವನನ್ನೂ ಅವನ ಹೆಂಡತಿಮಕ್ಕಳನ್ನೂ ಅವನ ಬದುಕೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆ ಮಾಡಿದನು. 26ಆ ಸೇವಕನು ಅವನ ಕಾಲಿಗೆ ಬಿದ್ದು ಅವನಿಗೆ - ಒಡೆಯನೇ, ಸ್ವಲ್ಪ ತಾಳಿಕೋ, ನಿನ್ನದೆಲ್ಲಾ ನಾನು ಕೊಟ್ಟು ತೀರಿಸುತ್ತೇನೆಂದು ನಮಸ್ಕರಿಸಲಾಗಿ 27ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಬಿಟ್ಟುಬಿಟ್ಟನು. 28ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಹಣಾ ಕೊಡಬೇಕಾದ ಒಬ್ಬ ಜೊತೇಸೇವಕನನ್ನು ಕಂಡು ಅವನನ್ನು ಹಿಡಿದು - ಎಲಾ, ನನ್ನ ಸಾಲ ತೀರಿಸು ಎಂದು ಹೇಳಿ ಕುತ್ತಿಗೆ ಹಿಸಿಕಿದನು. 29ಆಗ ಅವನ ಜೊತೇಸೇವಕನು ಅವನ ಕಾಲಿಗೆ ಬಿದ್ದು - ಸ್ವಲ್ಪ ತಾಳಿಕೋ, ತೀರಿಸುತ್ತೇನೆ ಎಂದು ಬೇಡಿಕೊಂಡನು. 30ಆದರೆ ಅವನು ಒಪ್ಪದೆ ಹೊರಟು ಹೋಗಿ ಆ ಸಾಲಾ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು. 31ಅವನ ಜೊತೇ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು ಒಡೆಯನ ಬಳಿಗೆ ಬಂದು ನಡೆದದ್ದನ್ನೆಲ್ಲಾ ತಿಳಿಸಿದರು. 32ಆಗ ಅವನ ಒಡೆಯನು ಅವನನ್ನು ಕರಸಿ - ಎಲಾ ನೀಚನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ಆ ಸಾಲವನ್ನೆಲ್ಲಾ ನಾನು ಬಿಟ್ಟುಬಿಟ್ಟೆನಲ್ಲಾ; 33ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೇಸೇವಕನನ್ನು ಕರುಣಿಸಬಾರದಾಗಿತ್ತೇ ಎಂದು ಹೇಳಿ ಸಿಟ್ಟುಮಾಡಿ 34ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಪೀಡಿಸುವವರ ಕೈಗೆ ಒಪ್ಪಿಸಿದನು. 35ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ಸಹೋದರನಿಗೆ ಮನಃಪೂರ್ವಕವಾಗಿ ಕ್ಷವಿುಸದೆಹೋದರೆ ಪರಲೋಕದಲ್ಲಿರುವ ನನ್ನ ತಂದೆಯೂ ನಿಮಗೆ ಹಾಗೆಯೇ ಮಾಡುವನು ಅಂದನು.

Highlight

Share

Copy

None

Want to have your highlights saved across all your devices? Sign up or sign in