YouVersion Logo
Search Icon

ಮತ್ತಾಯ 17

17
ಯೇಸು ಪ್ರಕಾಶರೂಪವನ್ನು ಧರಿಸಿದ್ದು
(ಮಾರ್ಕ. 9.2-13; ಲೂಕ. 9.28-36)
1ಆರು ದಿವಸಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಇವನ ತಮ್ಮನಾದ ಯೋಹಾನನನ್ನೂ ಮಾತ್ರ ವಿಂಗಡವಾಗಿ ಕರಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. 2ಅಲ್ಲಿ ಅವರ ಕಣ್ಣ ಮುಂದೆ ಆತನ ರೂಪ ಬೇರೆಯಾಯಿತು; ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು; ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು. 3ಇದಲ್ಲದೆ ಮೋಶೆಯೂ ಎಲೀಯನೂ ಆತನ ಸಂಗಡ ಮಾತಾಡುತ್ತಾ ಅವರಿಗೆ ಕಾಣಿಸಿಕೊಂಡರು. 4ಆಗ ಪೇತ್ರನು ಯೇಸುವಿಗೆ - ಸ್ವಾಮೀ, ನಾವು ಇಲ್ಲೇ ಇರುವದು ಒಳ್ಳೇದು. ಅಪ್ಪಣೆಯಾದರೆ ಇಲ್ಲಿ ಮೂರು ಪರ್ಣಶಾಲೆಗಳನ್ನು ಕಟ್ಟುವೆನು; ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು ಎಂದು ಹೇಳಿದನು. 5ಹೀಗೆ ಮಾತಾಡುತ್ತಿರುವಾಗಲೇ ಕಾಂತಿಯುಳ್ಳ ಮೋಡವು ಅವರ ಮೇಲೆ ಕವಿಯಿತು. ಇದಲ್ಲದೆ ಆ ಮೋಡದೊಳಗಿಂದ - ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ ಎಂಬ ಆಕಾಶವಾಣಿ ಆಯಿತು. 6ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲಬಿದ್ದರು. 7ಆದರೆ ಯೇಸು ಹತ್ತರಕ್ಕೆ ಬಂದು ಅವರನ್ನು ಮುಟ್ಟಿ - ಏಳಿರಿ, ಹೆದರಬೇಡಿರಿ ಅಂದನು. 8ಅವರು ಕಣ್ಣೆತ್ತಿ ನೋಡಿದಾಗ ಯೇಸುವನ್ನೇ ಹೊರತು ಮತ್ತಾರನ್ನೂ ಕಾಣಲಿಲ್ಲ.
9ಅವರು ಆ ಬೆಟ್ಟದಿಂದ ಇಳಿದುಬರುತ್ತಿರುವಾಗ ಯೇಸು ಅವರಿಗೆ - ನೀವು ಈಗ ಕಂಡ ದರ್ಶನವನ್ನು ಮನುಷ್ಯಕುಮಾರನು ಸತ್ತು ಜೀವಿತನಾಗಿ ಎಬ್ಬಿಸಲ್ಪಡುವ ತನಕ ಯಾರಿಗೂ ಹೇಳಬೇಡಿರೆಂದು ಖಂಡಿತವಾಗಿ ಹೇಳಿದನು. 10ಆಗ ಆತನ ಶಿಷ್ಯರು - ಎಲೀಯನು ಮೊದಲು ಬರುವದು ಅಗತ್ಯವೆಂಬದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ, ಇದು ಹೇಗೆ ಎಂದು ಆತನನ್ನು ಕೇಳಿದ್ದಕ್ಕೆ ಆತನು - 11ಎಲೀಯನು ಬರುವದು ನಿಜ; ಬಂದು ಎಲ್ಲವನ್ನು ತಿರಿಗಿ ಸರಿಮಾಡುವನು; 12ಆದರೆ ನಾನು ನಿಮಗೆ ಹೇಳುವದೇನಂದರೆ, ಎಲೀಯನು ಬಂದು ಹೋದನು; ಜನರು ಅವನ ಗುರುತು ಅರಿಯದೆ ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು. ಅವನಿಗಾದಂತೆ ಮನುಷ್ಯಕುಮಾರನಿಗೆ ಸಹ ಅವರ ಕಡೆಯಿಂದ ಹಿಂಸೆಯಾಗುವದು ಎಂದು ಉತ್ತರಕೊಟ್ಟನು. 13ಆಗ ಸ್ನಾನಿಕನಾದ ಯೋಹಾನನ ವಿಷಯವಾಗಿ ತಮಗೆ ಈ ಮಾತನ್ನು ಹೇಳಿದನೆಂದು ಶಿಷ್ಯರು ತಿಳುಕೊಂಡರು.
ಮೂರ್ಛಾರೋಗಿಯನ್ನು ಸ್ವಸ್ಥಮಾಡಿದ್ದು
(ಮಾರ್ಕ. 9.14-29; ಲೂಕ. 9.37-42)
14ಅವರು ಜನರ ಗುಂಪಿನ ಬಳಿಗೆ ಬಂದಾಗ ಒಬ್ಬನು ಆತನ ಹತ್ತರಕ್ಕೆ ಬಂದು ಆತನ ಮುಂದೆ ಮೊಣಕಾಲೂರಿ ವಂದಿಸಿ - 15ಸ್ವಾಮೀ, ನನ್ನ ಮಗನನ್ನು ಕರುಣಿಸು; ಅವನು ಮೂರ್ಛಾರೋಗದಿಂದ ಬಹಳ ಕಷ್ಟಪಡುತ್ತಾನೆ; ಆಗಾಗ್ಗೆ ಬೆಂಕಿಯಲ್ಲಿಯೂ ಆಗಾಗ್ಗೆ ನೀರಿನಲ್ಲಿಯೂ ಬೀಳುತ್ತಿರುವನು. 16ಅವನನ್ನು ನಿನ್ನ ಶಿಷ್ಯರ ಬಳಿಗೆ ಕರಕೊಂಡು ಬಂದಿದ್ದೆನು; ಆದರೆ ಅವನಿಗೆ ವಾಸಿಮಾಡುವದಕ್ಕೆ ಅವರಿಂದ ಆಗದೆಹೋಯಿತು ಅಂದನು. 17ಅದಕ್ಕೆ ಯೇಸು - ಎಲಾ, ನಂಬಿಕೆಯಿಲ್ಲದಂಥ ಮೂರ್ಖ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ? ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಅವನನ್ನು ಇಲ್ಲಿ ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಅಂದನು. 18ಯೇಸು ಅವನನ್ನು ಗದರಿಸಲು ದೆವ್ವ ಅವನನ್ನು ಬಿಟ್ಟುಹೋಯಿತು; ಆ ಕ್ಷಣವೇ ಆ ಹುಡುಗನಿಗೆ ಸ್ವಸ್ಥವಾಯಿತು. 19ತರುವಾಯ ಶಿಷ್ಯರು ಏಕಾಂತವಾಗಿ ಯೇಸುವಿನ ಬಳಿಗೆ ಬಂದು - ಅದನ್ನು ಬಿಡಿಸಲಿಕ್ಕೆ ನವ್ಮಿುಂದ ಯಾಕೆ ಆಗಲಿಲ್ಲವೆಂದು ಕೇಳಲು ಆತನು ಅವರಿಗೆ - 20ನಿಮ್ಮ ನಂಬಿಕೆ ಕಡಿಮೆಯಾಗಿರುವದರಿಂದಲೇ ಆಗಲಿಲ್ಲ; ನಿಮಗೆ ಸತ್ಯವಾಗಿ ಹೇಳುತ್ತೇನೆ, ಸಾಸಿವೇಕಾಳಷ್ಟು ನಂಬಿಕೆ ನಿಮಗೆ ಇರುವದಾದರೆ ನೀವು ಈ ಬೆಟ್ಟಕ್ಕೆ - 21ಇಲ್ಲಿಂದ ಅಲ್ಲಿಗೆ ಹೋಗು ಎಂದು ಹೇಳಿದರೂ ಅದು ಹೋಗುವದು; ಮತ್ತು ನಿಮ್ಮ ಕೈಯಿಂದಾಗದಂಥದು ಒಂದೂ ಇರುವದಿಲ್ಲ ಅಂದನು.#17.21 21ನೆಯ ವಚನ ಮೂಲ ಗ್ರಂಥದಲ್ಲಿ ಇಲ್ಲ; ಮಾರ್ಕ. 9.29 ನೋಡಿರಿ.
ಯೇಸು ತನ್ನ ಮರಣ ಪುನರುತ್ಥಾನಗಳನ್ನು ಎರಡನೆಯ ಸಾರಿ ಮುಂತಿಳಿಸಿದ್ದು
(ಮಾರ್ಕ. 9.30-32; ಲೂಕ. 9.43-45)
22ಅವರು ಗಲಿಲಾಯದಲ್ಲಿ#17.22 ಲೂಕ. 2.44 ನೋಡಿರಿ; ಕೆಲವು ಪ್ರತಿಗಳಲ್ಲಿ - ಗಲಿಲಾಯದಲ್ಲಿರುವಾಗ ಎಂದು ಬರೆದದೆ. ಗುಂಪುಗುಂಪಾಗಿ ಕೂಡುತ್ತಿರುವಾಗ ಯೇಸು ಅವರಿಗೆ - ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಿಕೊಡಲ್ಪಡುವನು. 23ಅವರು ಆತನನ್ನು ಕೊಲ್ಲುವರು; ಸತ್ತ ಮೂರನೆಯ ದಿನದಲ್ಲಿ ಆತನು ಜೀವಿತನಾಗಿ ಎಬ್ಬಿಸಲ್ಪಡುವನು ಎಂದು ಹೇಳಿದನು. ಅದನ್ನು ಕೇಳಿ ಅವರು ಬಹಳ ದುಃಖಪಟ್ಟರು.
ಯೇಸು ಮಂಡೇತೆರಿಗೆಯನ್ನು ಕೊಟ್ಟ ರೀತಿಯಿಂದ ತಾನು ದೇವಕುಮಾರನೆಂದು ತೋರಿಸಿದ್ದು
24ಅವರು ಕಪೆರ್ನೌವಿುಗೆ ಬಂದಾಗ ದೇವಾಲಯಕ್ಕಾಗಿ ತೆರಿಗೆಯನ್ನು#17.24 ಮೂಲ: ದಿದ್ರಾಖ್ಮ, ಅಂದರೆ ತೆರತಕ್ಕ ಅರ್ಧ ರೂಪಾಯಿ; ವಿಮೋ. 30.13; 38.26. ಎತ್ತುವವರು ಪೇತ್ರನ ಬಳಿಗೆ ಬಂದು - ನಿಮ್ಮ ಬೋಧಕನು ದೇವಾಲಯದ ತೆರಿಗೆಯನ್ನು ಸಲ್ಲಿಸುವದಿಲ್ಲವೇ ಎಂದು ಕೇಳಲು - ಹೌದು, ಸಲ್ಲಿಸುವನು ಅಂದನು. 25ಪೇತ್ರನು ಮನೆಯೊಳಕ್ಕೆ ಬಂದಾಗ ಯೇಸು ಅವನಿಗಿಂತ ಮೊದಲೇ - ಸೀಮೋನಾ, ನಿನಗೆ ಹೇಗೆ ತೋರುತ್ತದೆ? ಭೂಲೋಕದ ಅರಸರು ಸುಂಕವನ್ನಾಗಲಿ ಮಂಡೇತೆರಿಗೆಯನ್ನಾಗಲಿ ಯಾರಿಂದ ತೆಗೆದುಕೊಳ್ಳುತ್ತಾರೆ? ತಮ್ಮ ಮಕ್ಕಳಿಂದಲೋ? ಬೇರೆಯವರಿಂದಲೋ ಎಂದು ಕೇಳಿದನು. 26ಅವನು - ಬೇರೆಯವರಿಂದ ಎಂದು ಉತ್ತರಕೊಡಲು ಯೇಸು ಅವನಿಗೆ - ಹಾಗಾದರೆ ಮಕ್ಕಳು ಅದಕ್ಕೆ ಒಳಗಾದವರಲ್ಲವಲ್ಲಾ. 27ಆದರೂ ನಮ್ಮ ವಿಷಯವಾಗಿ ಅವರು ಬೇಸರಗೊಳ್ಳಬಾರದು; ನೀನು ಸಮುದ್ರಕ್ಕೆ ಹೋಗಿ ಗಾಳಾ ಹಾಕಿ ಮೊದಲು ಸಿಕ್ಕುವ ಮೀನನ್ನು ಎತ್ತು; ಅದರ ಬಾಯಿ ತೆರೆದು ನೋಡಿದರೆ ಅದರಲ್ಲಿ ಒಂದು ರೂಪಾಯಿ ಸಿಕ್ಕುವದು; ಅದನ್ನು ತೆಗೆದುಕೊಂಡು ನಮ್ಮಿಬ್ಬರದಂತ ಹೇಳಿ ಅವರಿಗೆ ಕೊಡು ಎಂದು ಹೇಳಿದನು.

Highlight

Share

Copy

None

Want to have your highlights saved across all your devices? Sign up or sign in