ಲೂಕ 5
5
ಯೇಸು ಆಶ್ಚರ್ಯರೀತಿಯಿಂದ ಮೀನುಗಳನ್ನು ದೊರಕಿಸಿಕೊಟ್ಟು ಪ್ರಥಮ ಶಿಷ್ಯರನ್ನು ಮಾಡಿಕೊಂಡದ್ದು
1ಒಂದಾನೊಂದು ದಿವಸ ಜನರು ಒತ್ತಾಗಿ ಬಂದು ಆತನ ಮೇಲೆ ಬಿದ್ದುಕೊಂಡು ದೇವರ ವಾಕ್ಯವನ್ನು ಕೇಳುತ್ತಿರಲು 2ಗೆನೇಜರೆತ್ ಕೆರೆಯ ಅಂಚಿನಲ್ಲಿ ನಿಂತಿದ್ದ ಆತನು ಆ ಕೆರೆಯ ದಡದಲ್ಲಿ ಎರಡು ದೋಣಿಗಳನ್ನು ಕಂಡನು. ಬೆಸ್ತರು ಅವುಗಳೊಳಗಿಂದ ಹೊರಗೆ ಬಂದು ತಮ್ಮ ಬಲೆಗಳನ್ನು ತೊಳೆಯುತ್ತಿದ್ದರು. 3ಆ ದೋಣಿಗಳಲ್ಲಿ ಸೀಮೋನನ ಒಂದು ದೋಣಿಯನ್ನು ಆತನು ಹತ್ತಿ ದಡದಿಂದ ಸ್ವಲ್ಪ ದೂರಕ್ಕೆ ನೂಕಬೇಕೆಂದು ಅವನನ್ನು ಕೇಳಿಕೊಂಡನು. ತರುವಾಯ ಆತನು ಕೂತುಕೊಂಡು ದೋಣಿಯೊಳಗಿಂದಲೇ ಆ ಜನರ ಗುಂಪಿಗೆ ಉಪದೇಶಮಾಡಿದನು. 4ಮಾತಾಡುವದನ್ನು ಮುಗಿಸಿದ ಮೇಲೆ ಸೀಮೋನನಿಗೆ - ಆಳವಾದ ಸ್ಥಳಕ್ಕೆ ದೋಣಿಯನ್ನು ನಡಿಸಿ ಮೀನುಬೇಟೆಗಾಗಿ ನಿಮ್ಮ ಬಲೆಗಳನ್ನು ಹಾಕಿರಿ ಎಂದು ಹೇಳಿದನು. 5ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು. 6ಹಾಕಿದ ಮೇಲೆ ಮೀನುಗಳು ರಾಶಿರಾಶಿಯಾಗಿ ಸಿಕ್ಕಿಕೊಂಡು ಅವರ ಬಲೆಗಳು ಹರಿದುಹೋಗುತ್ತಿದ್ದವು. 7ಆಗ ಅವರು ಮತ್ತೊಂದು ದೋಣಿಯಲ್ಲಿದ್ದ ತಮ್ಮ ಪಾಲುಗಾರರಿಗೆ - ನೀವು ಬಂದು ನಮಗೆ ನೆರವಾಗಬೇಕೆಂದು ಸನ್ನೆಮಾಡಿದರು. ಅವರು ಬಂದು ಆ ಎರಡು ದೋಣಿಗಳಲ್ಲಿ ಮೀನುಗಳನ್ನು ತುಂಬಿಸಲು ಅವು ಮುಳುಗುವ ಹಾಗಾದವು. 8ಸೀಮೋನ್ ಪೇತ್ರನು ಇದನ್ನು ಕಂಡು ಯೇಸುವಿನ ಮೊಣಕಾಲಿಗೆ ಬಿದ್ದು - ಸ್ವಾಮೀ, ನಾನು ಪಾಪಾತ್ಮನು; ನನ್ನನ್ನು ಬಿಟ್ಟುಹೋಗಬೇಕು ಅಂದನು. 9ಯಾಕಂದರೆ ಅವನಿಗೂ ಅವನ ಸಂಗಡ ಇದ್ದವರೆಲ್ಲರಿಗೂ ತಾವು ಹಿಡಿದ ಮೀನುಗಳ ನಿವಿುತ್ತ ವಿಸ್ಮಯ ಹಿಡಿದಿತ್ತು; 10ಸೀಮೋನನ ಪಾಲುಗಾರರಾಗಿದ್ದಂಥ ಜೆಬೆದಾಯನ ಮಕ್ಕಳಾದ ಯಾಕೋಬ ಯೋಹಾನರೂ ಹಾಗೆಯೇ ವಿಸ್ಮಯಪಟ್ಟರು. ಯೇಸು ಸೀಮೋನನಿಗೆ - ಅಂಜಬೇಡ, ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ ಎಂದು ಹೇಳಿದನು. 11ಅವರು ತಮ್ಮ ದೋಣಿಗಳನ್ನು ದಡಕ್ಕೆ ತಂದು ಎಲ್ಲವನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು.
ಯೇಸು ಕುಷ್ಠರೋಗಿಯನ್ನು ವಾಸಿಮಾಡಿದ್ದು
(ಮತ್ತಾ. 8.2-4; ಮಾರ್ಕ. 1.40-45)
12ಆತನು ಒಂದಾನೊಂದು ಊರಿನಲ್ಲಿದ್ದಾಗ ಮೈಯೆಲ್ಲಾ ಕುಷ್ಠರೋಗ ತುಂಬಿದ್ದ ಒಬ್ಬ ಮನುಷ್ಯನು ಯೇಸುವನ್ನು ಕಂಡು ಅಡ್ಡ ಬಿದ್ದು - ಸ್ವಾಮೀ, ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಬೇಡಿಕೊಂಡನು. 13ಆತನು ಕೈನೀಡಿ ಅವನನ್ನು ಮುಟ್ಟಿ - ನನಗೆ ಮನಸ್ಸುಂಟು; ಶುದ್ಧನಾಗು ಅಂದನು. ಕೂಡಲೆ ಅವನ ಕುಷ್ಠವು ಹೋಯಿತು. 14ಆಗ ಆತನು ಅವನಿಗೆ - ನೀನು ಯಾರಿಗೂ ಹೇಳಬೇಡ; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ನೇಮಕ ಮಾಡಿರುವದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ ಎಂದು ಅಪ್ಪಣೆಕೊಟ್ಟನು. 15ಆದರೂ ಆತನ ಸುದ್ದಿಯು ಮತ್ತಷ್ಟು ಹಬ್ಬಿತು; ಮತ್ತು ಜನರು ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮತಮ್ಮ ಜಾಡ್ಯಗಳನ್ನು ವಾಸಿ ಮಾಡಿಸಿಕೊಳ್ಳುವದಕ್ಕೂ ಗುಂಪುಗುಂಪಾಗಿ ನೆರೆದರು. 16ಆತನಾದರೋ ಅರಣ್ಯಪ್ರದೇಶಗಳಿಗೆ ಹೋಗಿ ದೇವರ ಪ್ರಾರ್ಥನೆಯನ್ನು ಮಾಡುತ್ತಿದ್ದನು.
ಯೇಸು ಪಾರ್ಶ್ವವಾಯುರೋಗಿಯ ಪಾಪವನ್ನು ಕ್ಷವಿುಸಿ ಅವನನ್ನು ಗುಣಮಾಡಿದ್ದು
(ಮತ್ತಾ. 9.2-8; ಮಾರ್ಕ. 2.1-12)
17ಒಂದಾನೊಂದು ದಿನದಲ್ಲಿ ಆತನು ಉಪದೇಶ ಮಾಡುತ್ತಿರಲು ಗಲಿಲಾಯ ಯೂದಾಯಗಳ ಎಲ್ಲಾ ಗ್ರಾಮಗಳಿಂದಲೂ ಯೆರೂಸಲೇವಿುನಿಂದಲೂ ಬಂದಿದ್ದ ಫರಿಸಾಯರೂ ನ್ಯಾಯಶಾಸ್ತ್ರಿಗಳೂ ಆತನ ಹತ್ತಿರ ಕೂತುಕೊಂಡಿದ್ದರು. ಗುಣಮಾಡುವದಕ್ಕೆ ಕರ್ತನ ಶಕ್ತಿಯು ಆತನಲ್ಲಿತ್ತು. 18ಹೀಗಿರುವಲ್ಲಿ ಕೆಲವು ಮಂದಿ ಗಂಡಸರು ಒಬ್ಬ ಪಾರ್ಶ್ವವಾಯು ರೋಗದವನನ್ನು ದೋಲಿಯಲ್ಲಿ ಹೊತ್ತುಕೊಂಡು ಬಂದರು; ಆದರೆ ಅವನನ್ನು ಒಳಗೆ ತೆಗೆದುಕೊಂಡುಹೋಗಿ ಆತನ ಮುಂದೆ ಇಡಬೇಕೆಂದು ಪ್ರಯತ್ನಿಸಿದರೂ 19ಜನರು ಗುಂಪಾಗಿದ್ದದರಿಂದ ಅವನನ್ನು ಒಳಗೆ ತೆಗೆದುಕೊಂಡುಹೋಗುವ ಮಾರ್ಗವನ್ನು ಕಾಣದೆ ಮನೆಯ ಮೇಲೆ ಹತ್ತಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯ ಸಹಿತ ನಡುವೆ ಯೇಸುವಿನ ಮುಂದೆ ಇಳಿಯಬಿಟ್ಟರು. 20ಆತನು ಅವರ ನಂಬಿಕೆಯನ್ನು ನೋಡಿ - ಅಪ್ಪಾ, ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಅಂದನು. 21ಅದಕ್ಕೆ ಆ ಶಾಸ್ತ್ರಿಗಳೂ ಫರಿಸಾಯರೂ - ದೇವದೂಷಣೆಯ ಮಾತನ್ನಾಡುವ ಇವನು ಎಷ್ಟರವನು? ಪಾಪಗಳನ್ನು ಕ್ಷವಿುಸಿಬಿಡುವದು ದೇವರೊಬ್ಬನಿಂದ ಹೊರತು ಮತ್ತಾರಿಂದಾದೀತು ಎಂದು ಅಂದುಕೊಳ್ಳುತ್ತಿದ್ದರು. 22ಆದರೆ ಅವರು ಹಾಗಂದುಕೊಳ್ಳುವದನ್ನು ಯೇಸು ತಿಳಿದುಕೊಂಡು ಅವರಿಗೆ - ನೀವು ನಿಮ್ಮ ಮನಸ್ಸಿನಲ್ಲಿ ಅಂದುಕೊಳ್ಳುವದೇನು? ಯಾವದು ಸುಲಭ? 23ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಅನ್ನುವದೋ? ಎದ್ದು ನಡೆ ಅನ್ನುವದೋ? 24ಆದರೆ ಪಾಪಗಳನ್ನು ಕ್ಷವಿುಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ಆ ಪಾರ್ಶ್ವವಾಯು ರೋಗದವನನ್ನು ನೋಡಿ - ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗೆಂದು ನಿನಗೆ ಹೇಳುತ್ತೇನೆ ಅಂದನು. 25ಅಂದ ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ಮನೆಗೆ ಹೋದನು. 26ನೋಡಿದವರೆಲ್ಲರು ಬೆರಗಾಗಿ ದೇವರನ್ನು ಕೊಂಡಾಡಿದರು; ಮತ್ತು ಅವರು ಭಯದಿಂದ ತುಂಬಿದವರಾಗಿ - ನಾವು ಈ ಹೊತ್ತು ಅಪೂರ್ವ ಸಂಗತಿಯನ್ನು ಕಂಡೆವು ಅಂದರು.
ಯೇಸು ಪಾಪಿಷ್ಠರ ಕೂಡ ತಾನು ಊಟ ಮಾಡಿದ್ದಕ್ಕೆ ಮತ್ತು ತನ್ನ ಶಿಷ್ಯರು ಉಪವಾಸ ಮಾಡದೆಹೋದದ್ದಕ್ಕೆ ಕಾರಣ ತೋರಿಸಿದ್ದು
(ಮತ್ತಾ. 9.9-17; ಮಾರ್ಕ. 2.13-22)
27ಇದಾದ ಮೇಲೆ ಆತನು ಹೊರಟು ಸುಂಕಕ್ಕೆ ಕೂತಿದ್ದ ಲೇವಿಯೆಂಬ ಒಬ್ಬ ಸುಂಕದವನನ್ನು ಕಂಡು - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು 28ಅವನು ಎಲ್ಲವನ್ನೂ ಬಿಟ್ಟು ಎದ್ದು ಆತನ ಹಿಂದೆ ಹೋದನು. 29ತರುವಾಯ ಲೇವಿಯು ತನ್ನ ಮನೆಯಲ್ಲಿ ಆತನಿಗೆ ಒಂದು ದೊಡ್ಡ ಔತಣವನ್ನು ಮಾಡಿಸಲು ಸುಂಕದವರೂ ಇತರರೂ ಗುಂಪಾಗಿ ಕೂಡಿ ಅವರ ಸಂಗಡ ಊಟಕ್ಕೆ ಕೂತುಕೊಂಡಿದ್ದರು. 30ಅದನ್ನು ಕಂಡು ಫರಿಸಾಯರೂ ಅವರಲ್ಲಿದ್ದ ಶಾಸ್ತ್ರಿಗಳೂ ಆತನ ಶಿಷ್ಯರ ಮೇಲೆ ಗುಣುಗುಟ್ಟುತ್ತಾ - ನೀವು ಸುಂಕದವರ ಮತ್ತು ಪಾಪಿಗಳ ಸಂಗಡ ಊಟ ಮಾಡುವದೇಕೆ ಎಂದು ಕೇಳಿದರು. 31ಅದಕ್ಕೆ ಯೇಸು - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು; 32ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
33ಅವರು ಆತನಿಗೆ - ಯೋಹಾನನ ಶಿಷ್ಯರು ಪದೇಪದೇ ಉಪವಾಸಗಳನ್ನೂ ವಿಜ್ಞಾಪನೆಗಳನ್ನೂ ಮಾಡುತ್ತಾ ಇದ್ದಾರೆ; ಅದರಂತೆ ಫರಿಸಾಯರ ಶಿಷ್ಯರೂ ಮಾಡುತ್ತಾರೆ; ಆದರೆ ನಿನ್ನ ಶಿಷ್ಯರು ಊಟಮಾಡುತ್ತಾರೆ, ಕುಡಿಯುತ್ತಾರೆ ಎಂದು ಹೇಳಲು 34ಯೇಸು ಅವರಿಗೆ - ಮದಲಿಂಗನು ಮದುವೇಜನರ ಸಂಗಡ ಇರುವಲ್ಲಿ ಅವರಿಗೆ ಉಪವಾಸಮಾಡಿಸುವದಕ್ಕೆ ನಿಮ್ಮಿಂದಾದೀತೇ? 35ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ಕಾಲ ಬರುತ್ತದೆ. ಆ ಕಾಲದಲ್ಲೇ ಉಪವಾಸ ಮಾಡುವರು ಎಂದು ಉತ್ತರಕೊಟ್ಟನು. 36ಅವರಿಗೆ ಒಂದು ಸಾಮ್ಯವನ್ನು ಸಹ ಹೇಳಿದನು, ಅದೇನಂದರೆ - ಯಾರೂ ಹೊಸ ವಸ್ತ್ರದಿಂದ ಒಂದು ತುಂಡನ್ನು ಹರಕೊಂಡು ಹಳೇ ವಸ್ತ್ರಕ್ಕೆ ತ್ಯಾಪೆ ಹಚ್ಚುವದಿಲ್ಲ; ಹಚ್ಚಿದರೆ ಆ ಹೊಸದನ್ನು ಹರಿದು ಕೆಡಿಸಿದ ಹಾಗಾಗುವದಲ್ಲದೆ ಹೊಸದರಿಂದ ಹರಿದು ಹಚ್ಚಿದ ತ್ಯಾಪೆಯು ಹಳೇದಕ್ಕೆ ಒಪ್ಪುವದೂ ಇಲ್ಲ. 37ಮತ್ತು ಹಳೇ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವದಿಲ್ಲ; ಇಟ್ಟರೆ ಆ ಹೊಸ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ತಾನೂ ಚೆಲ್ಲಿಹೋಗುವದಲ್ಲದೆ ಬುದ್ದಲಿಗಳೂ ಕೆಟ್ಟುಹೋಗುವವು. 38ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡತಕ್ಕದ್ದು. 39ಇದಲ್ಲದೆ ಹಳೇ ದ್ರಾಕ್ಷಾರಸವನ್ನು ಕುಡಿದವನು ಹೊಸದು ಬೇಕು ಅನ್ನುವದಿಲ್ಲ; ಹಳೇದೇ ಉತ್ತಮ ಅನ್ನುವನು.
Currently Selected:
ಲೂಕ 5: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.