ಲೂಕ 3
3
ಸ್ನಾನಿಕನಾದ ಯೋಹಾನನು ಉಪದೇಶ ಮಾಡಿದ್ದು
(ಮತ್ತಾ. 3.1-12; ಮಾರ್ಕ. 1.2-8)
1ಚಕ್ರವರ್ತಿಯಾದ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ, ಪೊಂತ್ಯಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾಯಕ್ಕೆ ಉಪರಾಜನೂ ಅವನ ತಮ್ಮನಾದ ಫಿಲಿಪ್ಪನು ಇತುರಾಯ ತ್ರಕೋನೀತಿ ಸೀಮೆಗಳಿಗೆ ಉಪರಾಜನೂ ಲುಸನ್ಯನು ಅಬಿಲೇನೆಗೆ ಉಪರಾಜನೂ ಆಗಿರುವಲ್ಲಿ 2ಅನ್ನನೂ ಕಾಯಫನೂ ಮಹಾಯಾಜಕರಾಗಿದ್ದ ಕಾಲದಲ್ಲಿ ಜಕರೀಯನ ಮಗನಾದ ಯೋಹಾನನಿಗೆ ಅಡವಿಯಲ್ಲಿ ದೇವರ ವಾಕ್ಯವುಂಟಾಯಿತು. 3ಅವನು ಯೊರ್ದನ್ ಹೊಳೆಯ ಸುತ್ತಲಿರುವ ಪ್ರಾಂತ್ಯದಲ್ಲೆಲ್ಲಾ ಸಂಚರಿಸಿ ಜನರಿಗೆ - ನೀವು ಪಾಪ ಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿ ಹೇಳುವವನಾದನು. 4-6ಇದು ಯೆಶಾಯನೆಂಬ ಪ್ರವಾದಿಯ ಗ್ರಂಥದಲ್ಲಿ ಬರೆದಿರುವ ಮಾತಿಗೆ ಅನುಸಾರವಾಗಿ ನಡೆಯಿತು. ಆ ಮಾತು ಏನಂದರೆ -
ಕರ್ತನ ದಾರಿಯನ್ನು ಸಿದ್ಧಮಾಡಿರಿ,
ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ.
ಎಲ್ಲಾ ಹಳ್ಳಕೊಳ್ಳಗಳು ಮುಚ್ಚಲ್ಪಡುವವು,
ಎಲ್ಲಾ ಬೆಟ್ಟಗುಡ್ಡಗಳು ತಗ್ಗಿಸಲ್ಪಡುವವು,
ಡೊಂಕಾಗಿರುವಂಥದು ನೀಟಾಗುವದು,
ಕೊರಕಲಾದ ದಾರಿಗಳು ಸಮವಾಗುವವು.
ಎಲ್ಲಾ ಮನುಷ್ಯರೂ ದೇವರಿಂದ ಸಿದ್ಧವಾಗುವ ರಕ್ಷಣೆಯನ್ನು ಕಾಣುವರು ಎಂಬದಾಗಿ
ಅಡವಿಯಲ್ಲಿ ಕೂಗುವವನ ಶಬ್ಧವದೆ ಎಂಬದೇ.
7ಹೀಗಿರಲಾಗಿ ಅವನು ತನ್ನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವದಕ್ಕಾಗಿ ಹೊರಟುಬಂದ ಜನರ ಗುಂಪುಗಳಿಗೆ - ಎಲೈ ಸರ್ಪಜಾತಿಯವರೇ, ಮುಂದೆ ಕಾಣಬರುವ ದೈವಕೋಪದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮಗೂ ಉಪದೇಶ ಮಾಡಿದವರಾರು? 8ಹಾಗಾದರೆ ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿತೆಂಬದನ್ನು ತಕ್ಕ ಫಲಗಳಿಂದ ತೋರಿಸಿರಿ. ಅಬ್ರಹಾಮನು ನಮಗೆ ಮೂಲಪುರುಷನಲ್ಲವೇ ಎಂದು ನಿಮ್ಮೊಳಗೆ ಅಂದುಕೊಳ್ಳುವವರಾಗಬೇಡಿರಿ. ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದಲೂ ಮಕ್ಕಳನ್ನು ಹುಟ್ಟಿಸಬಲ್ಲನೆಂದು ನಿಮಗೆ ಹೇಳುತ್ತೇನೆ. 9ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು ಎಂದು ಹೇಳಿದನು. 10ಆಗ ಆ ಗುಂಪಿನವರು - ಹಾಗಾದರೆ ನಾವೇನು ಮಾಡಬೇಕು ಎಂದು ಅವನನ್ನು ಕೇಳಿದ್ದಕ್ಕೆ ಅವನು - 11ಎರಡು ಅಂಗಿಗಳುಳ್ಳವನು ಇಲ್ಲದವನಿಗೆ ಒಂದು ಕೊಡಲಿ; ಆಹಾರವುಳ್ಳವನು ಇಲ್ಲದವನಿಗೆ ಕೊಡಲಿ ಎಂದು ಅವರಿಗೆ ಹೇಳಿದನು. 12ಸುಂಕದವರು ಸಹ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಬಂದು - ಗುರುವೇ, ನಾವೇನು ಮಾಡಬೇಕು ಎಂದು ಅವನನ್ನು ಕೇಳಲು ಅವನು - 13ನೇವಿುಸಿದ ಹಾಸಲಿಗಿಂತ ಹೆಚ್ಚಾಗಿ ಏನೂ ಎಳಕೊಳ್ಳಬೇಡಿರಿ ಎಂದು ಅವರಿಗೆ ಹೇಳಿದನು. 14ಸಿಪಾಯಿಗಳು ಸಹ ಬಂದು - ನಾವು ಏನು ಮಾಡಬೇಕು ಎಂದು ಅವನನ್ನು ಕೇಳಿದಾಗ ಅವನು ಅವರಿಗೆ - ಯಾರನ್ನಾದರೂ ಬೆದರಿಸಬೇಡಿರಿ; ಯಾರ ಮೇಲಾದರೂ ಸುಳ್ಳುದೂರು ತಂದು ದುಡ್ಡು ಕಸಕೊಳ್ಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರಿ ಎಂದು ಹೇಳಿದನು.
15ಹೀಗಿರುವಲ್ಲಿ ಇಸ್ರಾಯೇಲ್ ಜನರು ಬರಬೇಕಾದ ಕ್ರಿಸ್ತನನ್ನು ಎದುರುನೋಡುವವರಾಗಿದ್ದದರಿಂದ ಅವರೆಲ್ಲರು ಯೋಹಾನನ ವಿಷಯವಾಗಿ - ಇವನೇ ಆ ಕ್ರಿಸ್ತನಾಗಿರಬಹುದೋ ಏನೋ ಎಂದು ತಮ್ಮ ಮನಸ್ಸಿನಲ್ಲಿ ವಿಚಾರಮಾಡಿಕೊಳ್ಳುತ್ತಿರಲು 16ಯೋಹಾನನು ಅವರೆಲ್ಲರಿಗೆ - ನಾನಂತೂ ನಿಮಗೆ ನೀರಿನ ಸ್ನಾನ ಮಾಡಿಸುವವನು; ಆದರೆ ನನಗಿಂತ ಶಕ್ತನು ಬರುತ್ತಾನೆ. ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ. ಆತನು ಪವಿತ್ರಾತ್ಮದಲ್ಲಿಯೂ ಬೆಂಕಿಯಲ್ಲಿಯೂ ನಿಮಗೆ ಸ್ನಾನಮಾಡಿಸುವನು. 17ಆತನು ಮೊರವನ್ನು ಕೈಯಲ್ಲಿ ಹಿಡಿದಿದ್ದಾನೆ; ತನ್ನ ಕಣದಲ್ಲಿಯ ರಾಶಿಯನ್ನು ತೂರಿ ಹಸನುಮಾಡಿ ತನ್ನ ಗೋದಿಯನ್ನು ಕಣಜದಲ್ಲಿ ತುಂಬಿಕೊಳ್ಳುವದಕ್ಕಿದ್ದಾನೆ, ಹೊಟ್ಟನ್ನು ಆರದ ಬೆಂಕಿಯಲ್ಲಿ ಸುಟ್ಟುಬಿಡುವನು ಎಂದು ಉತ್ತರಕೊಟ್ಟನು.
18ಇನ್ನು ಬೇರೆ ಅನೇಕ ಮಾತುಗಳಿಂದ ಅವನು ಇಸ್ರಾಯೇಲ್ ಜನರಿಗೆ ಬುದ್ಧಿ ಹೇಳಿ ಸುವಾರ್ತೆಯನ್ನು ಸಾರುತ್ತಿದ್ದನು. 19ಆದರೆ ಉಪರಾಜನಾದ ಹೆರೋದನು ತನ್ನ ಅಣ್ಣನ ಹೆಂಡತಿಯಾದ ಹೆರೋದ್ಯಳ ನಿವಿುತ್ತವಾಗಿಯೂ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ನಿವಿುತ್ತವಾಗಿಯೂ 20ಯೋಹಾನನಿಂದ ಗದರಿಸಲ್ಪಟ್ಟವನಾಗಿ ಅವನನ್ನು ಸೆರೆಮನೆಯಲ್ಲಿ ಹಾಕಿಸಿ ತನ್ನ ದುಷ್ಕೃತ್ಯಗಳ ಲೆಕ್ಕವನ್ನು ಇನ್ನೂ ಹೆಚ್ಚಿಸಿದನು.
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡದ್ದು
(ಮತ್ತಾ. 3.13-17; ಮಾರ್ಕ. 1.9-11; ಯೋಹಾ. 1.32-34)
21ಜನರೆಲ್ಲಾ ದೀಕ್ಷಾಸ್ನಾನ ಮಾಡಿಸಿಕೊಂಡಾಗ ಯೇಸು ಸಹ ಸ್ನಾನ ಮಾಡಿಸಿಕೊಂಡು ಪ್ರಾರ್ಥನೆ ಮಾಡುತ್ತಿರುವಲ್ಲಿ ಆಕಾಶವು ತೆರೆಯಿತು; 22ಮತ್ತು ಪವಿತ್ರಾತ್ಮನು ದೇಹಾಕಾರವಾಗಿ ಪಾರಿವಾಳದ ಹಾಗೆ ಆತನ ಮೇಲೆ ಇಳಿದನು. ಆಗ - ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.
ಯೇಸು ಕ್ರಿಸ್ತನ ವಂಶಾವಳಿ
23ಯೇಸು ಉಪದೇಶಮಾಡುವದಕ್ಕೆ ಪ್ರಾರಂಭಿಸಿದಾಗ ಹೆಚ್ಚುಕಡಿಮೆ ಮೂವತ್ತು ವರುಷದವನಾಗಿದ್ದನು. ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು. 24ಯೋಸೇಫನು ಹೇಲೀಯ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಯನ್ನಾಯನ ಮಗನು; 25ಇವನು ಯೋಸೇಫನ ಮಗನು; ಇವನು ಮತ್ತಥೀಯನ ಮಗನು; ಇವನು ಆಮೋಸನ ಮಗನು; ಇವನು ನಹೂಮನ ಮಗನು; ಇವನು ಎಸ್ಲಿಯ ಮಗನು; ಇವನು ನಗ್ಗಾಯನ ಮಗನು; 26ಇವನು ಮಹಾಥನ ಮಗನು; ಇವನು ಮತ್ತಥೀಯನ ಮಗನು; ಇವನು ಶಿಮೀಯ ಮಗನು; ಇವನು ಯೊಸೇಖನ ಮಗನು; 27ಇವನು ಯೂದನ ಮಗನು; ಇವನು ಯೋಹಾನನ ಮಗನು; ಇವನು ರೇಸನ ಮಗನು; ಇವನು ಜೆರುಬಾಬೆಲನ ಮಗನು; ಇವನು ಸಲಥಿಯೇಲನ ಮಗನು; ಇವನು ನೇರಿಯ ಮಗನು; 28ಇವನು ಮೆಲ್ಖಿಯ ಮಗನು; ಇವನು ಅದ್ದಿಯ ಮಗನು; ಇವನು ಕೋಸಾಮನ ಮಗನು; ಇವನು ಎಲ್ಮದಾಮನ ಮಗನು; ಇವನು ಏರನ ಮಗನು; 29ಇವನು ಯೆಹೋಷುವನ ಮಗನು; ಇವನು ಎಲಿಯೇಜರನ ಮಗನು; ಇವನು ಯೋರೈಮನ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಸಿವಿುಯೋನನ ಮಗನು; 30ಇವನು ಯೂದನ ಮಗನು; ಇವನು ಯೋಸೇಫನ ಮಗನು; ಇವನು ಯೋನಾಮನ ಮಗನು; ಇವನು ಎಲಿಯಕೀಮನ ಮಗನು; 31ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು; 32ಇವನು ಇಶಾಯನ ಮಗನು; ಇವನು ಓಬೇದನ ಮಗನು; ಇವನು ಬೋವಜನ ಮಗನು; ಇವನು ಸಲ್ಮೋನನ ಮಗನು; ಇವನು ನಹಸ್ಸೋನನ ಮಗನು; 33ಇವನು ಅಮ್ಮಿನಾದಾಬನ ಮಗನು; ಇವನು ಆರ್ನೈಯನ ಮಗನು; ಇವನು ಎಸ್ರೋನನ ಮಗನು; ಇವನು ಪೆರೆಸನ ಮಗನು; ಇವನು ಯೂದನ ಮಗನು; 34ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು; 35ಇವನು ಸೆರೂಗನ ಮಗನು; ಇವನು ರೆಗೂವನ ಮಗನು; ಇವನು ಪೆಲೆಗನ ಮಗನು; ಇವನು ಹೇಬೆರನ ಮಗನು; ಇವನು ಸಾಲನ ಮಗನು; 36ಇವನು ಕಯಿನಾನನ ಮಗನು; ಇವನು ಅರ್ಫಕ್ಷಾದನ ಮಗನು; ಇವನು ಶೇಮನ ಮಗನು; ಇವನು ನೋಹನ ಮಗನು; ಇವನು ಲಾಮೆಕನ ಮಗನು; ಇವನು ಮತೂಷಲನ ಮಗನು; 37ಇವನು ಹನೋಕನ ಮಗನು; ಇವನು ಯೆರೆದನ ಮಗನು; ಇವನು ಮಹಲಲೇಲನ ಮಗನು; ಇವನು ಕಯಿನಾನನ ಮಗನು; ಇವನು ಎನೋಷನ ಮಗನು; 38ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು.
Currently Selected:
ಲೂಕ 3: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.