ಲೂಕ 21
21
ದೇವರಿಗೆ ಕಾಣಿಕೆಕೊಡುವವರ ತಾರತಮ್ಯವನ್ನು ಕುರಿತು ಮಾತಾಡಿದ್ದು
(ಮಾರ್ಕ. 12.41-44)
1ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಕಂಡನು. 2ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕಲು ಆತನು ಅದನ್ನು ನೋಡಿ - 3ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. 4ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು ಅಂದನು.
ಯೇಸು ಯೆರೂಸಲೇವಿುನ ನಾಶವನ್ನೂ ಯುಗದ ಸಮಾಪ್ತಿಯನ್ನೂ ಮುಂತಿಳಿಸಿದ್ದು
(ಮತ್ತಾ. 24.1-44; ಮಾರ್ಕ. 13.1-37)
5ಕೆಲವರು ದೇವಾಲಯದ ವಿಷಯದಲ್ಲಿ ಅದು ಅಂದವಾದ ಕಲ್ಲುಗಳಿಂದಲೂ ಹರಕೆಯ ಒಡವೆಗಳಿಂದಲೂ ಅಲಂಕಾರವಾಗಿದೆ ಎಂದು ಹೇಳುತ್ತಿರುವಾಗ 6ಆತನು - ನೀವು ಇವುಗಳನ್ನು ನೋಡುತ್ತೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿವಸಗಳು ಬರುವವು ಅಂದನು. 7ಅವರು - ಬೋಧಕನೇ, ಅದು ಯಾವಾಗ ಆಗುವದು? ಅದು ಸಂಭವಿಸುವದಕ್ಕಿರುವಾಗ ಯಾವ ಸೂಚನೆ ತೋರುವದು ಎಂದು ಆತನನ್ನು ಕೇಳಲು 8ಆತನು ಹೇಳಿದ್ದೇನಂದರೆ - ನೀವು ಮೋಸಹೋಗದಂತೆ ನೋಡಿಕೊಳ್ಳಿರಿ. ಯಾಕಂದರೆ ಅನೇಕರು ಬಂದು ನನ್ನ ಹೆಸರನ್ನು ಎತ್ತಿಕೊಂಡು ನಾನು ಕ್ರಿಸ್ತನು ನಾನು ಕ್ರಿಸ್ತನು ಎಂತಲೂ ಆ ಕಾಲ ಹತ್ತಿರವಾಯಿತು ಎಂತಲೂ ಹೇಳುವರು; ಅವರ ಹಿಂದೆ ಹೋಗಬೇಡಿರಿ. 9ಇದಲ್ಲದೆ ಯುದ್ಧಗಳೂ ಗಲಿಬಿಲಿಗಳೂ ಆಗುವದನ್ನು ನೀವು ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇದೆಲ್ಲಾ ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು.
10ಆಗ ಆತನು ಅವರಿಗೆ ಹೇಳಿದ್ದೇನಂದರೆ - ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; 11ಮತ್ತು ಮಹಾಭೂಕಂಪಗಳಾಗುವವು; ಅಲ್ಲಲ್ಲಿ ಬರಗಳೂ ಉಪದ್ರವಗಳೂ ಬರುವವು; ಉತ್ಪಾತಗಳೂ ಆಕಾಶದಲ್ಲಿ ಮಹಾ ಸೂಚನೆಗಳೂ ತೋರುವವು. 12ಆದರೆ ಇವೆಲ್ಲಾ ನಡೆಯುವದಕ್ಕಿಂತ ಮುಂಚೆ ಅವರು ನಿಮ್ಮನ್ನು ಹಿಡಿದು ಸಭಾಮಂದಿರಗಳ ಮತ್ತು ಸೆರೆಮನೆಗಳ ಅಧಿಕಾರಸ್ಥರ ವಶಕ್ಕೆ ಕೊಟ್ಟು ನನ್ನ ಹೆಸರಿನ ನಿವಿುತ್ತವಾಗಿ ಅರಸುಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ತೆಗೆದುಕೊಂಡುಹೋಗಿ ಹಿಂಸೆಪಡಿಸುವರು. 13ಇದು ಸಾಕ್ಷಿಹೇಳುವದಕ್ಕೆ ನಿಮಗೆ ಅನುಕೂಲವಾಗುವದು. 14ಆದದರಿಂದ ಏನು ಉತ್ತರ ಕೊಡಬೇಕೆಂಬ ವಿಷಯದಲ್ಲಿ ನಾವು ಮುಂದಾಗಿ ಯೋಚಿಸುವದಿಲ್ಲವೆಂದು ನಿಮ್ಮ ಮನಸ್ಸಿನಲ್ಲಿ ನಿಶ್ಚಯಮಾಡಿಕೊಳ್ಳಿರಿ. 15ಯಾಕಂದರೆ ನಿಮ್ಮ ವಿರೋಧಿಗಳೆಲ್ಲರೂ ಎದುರುನಿಲ್ಲುವದಕ್ಕೂ ಎದುರುಮಾತಾಡುವದಕ್ಕೂ ಆಗದಂಥ ಬಾಯನ್ನೂ ಬುದ್ಧಿಯನ್ನೂ ನಾನೇ ನಿಮಗೆ ಕೊಡುತ್ತೇನೆ. 16ಆದರೆ ತಂದೆತಾಯಿಗಳೂ ಅಣ್ಣತಮ್ಮಂದಿರೂ ಬಂಧುಬಾಂಧವರೂ ಸ್ನೇಹಿತರೂ ನಿಮ್ಮನ್ನು ಒಪ್ಪಿಸಿಕೊಡುವರು; ಮತ್ತು ನಿಮ್ಮಲ್ಲಿ ಕೆಲವರನ್ನು ಕೊಲ್ಲಿಸುವರು. 17ಇದಲ್ಲದೆ ನನ್ನ ಹೆಸರಿನ ನಿವಿುತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. 18ಆದರೂ ನಿಮ್ಮದೊಂದು ತಲೆಕೂದಲಾದರೂ ನಾಶವಾಗುವದಿಲ್ಲ. 19ನಿಮ್ಮ ಸೈರಣೆಯಿಂದ ನಿಮ್ಮ ಪ್ರಾಣಗಳನ್ನು ಪಡಕೊಳ್ಳುವಿರಿ. 20ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. 21ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ. 22ಯಾಕಂದರೆ ಬರೆದಿರುವದೆಲ್ಲಾ ನೆರವೇರುವದಕ್ಕಾಗಿ ಅವು ದಂಡನೆಯ ದಿವಸಗಳಾಗಿವೆ. 23ಆ ದಿನಗಳಲ್ಲಿ ಬಸುರಿಯರಿಗೂ ಮೊಲೆಕೂಸಿರುವ ಹೆಂಗಸರಿಗೂ ಆಗುವ ಕಷ್ಟವನ್ನು ಏನು ಹೇಳಲಿ! ಈ ಸೀಮೆಯ ಮೇಲೆ ಮಹಾವಿಪತ್ತೂ ಈ ಜನರಿಗೆ ಉಗ್ರದಂಡನೆಯೂ ಆಗುವವು. 24ಅವರು ಕತ್ತಿಯ ಬಾಯಿಗೆ ಬೀಳುವರು; ಅವರನ್ನು ಅನ್ಯದೇಶಗಳಿಗೆಲ್ಲಾ ಸೆರೆಹಿಡಿದುಕೊಂಡು ಹೋಗುವರು; ಅನ್ಯದೇಶದವರ ಸಮಯಗಳು ಪೂರೈಸುವ ತನಕ ಯೆರೂಸಲೇಮ್ ಪಟ್ಟಣವು ಅನ್ಯದೇಶದವರಿಂದ ತುಳಿದಾಡಲ್ಪಡುತ್ತಿರುವದು. 25ಇದಲ್ಲದೆ ಸೂರ್ಯ ಚಂದ್ರ ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು. ಭೂವಿುಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿವಿುತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟವು ಉಂಟಾಗುವದು. 26ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯ ಹಿಡಿದವರಾಗಿ ಲೋಕಕ್ಕೆ ಏನು ಬರುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು. 27ಆಗ ಮನುಷ್ಯಕುಮಾರನು ಬಲದಿಂದಲೂ ಬಹುಮಹಿಮೆಯಿಂದಲೂ ಮೇಘದಲ್ಲಿ ಬರುವದನ್ನು ಕಾಣುವರು. 28ಆದರೆ ಇವು ಸಂಭವಿಸುವದಕ್ಕೆ ತೊಡಗುವಾಗ ಮೇಲಕ್ಕೆ ನೋಡಿರಿ, ನಿಮ್ಮ ತಲೆ ಎತ್ತಿರಿ; ನಿಮ್ಮ ಬಿಡುಗಡೆಯು ಸಮೀಪವಾಗಿದೆ ಅಂದನು. 29ಆತನು ಅವರಿಗೆ ಒಂದು ಸಾಮ್ಯ ಕೊಟ್ಟು ಹೇಳಿದ್ದೇನಂದರೆ - ಅಂಜೂರ ಮುಂತಾದ ಮರಗಳನ್ನೂ ನೋಡಿರಿ. 30ಅವು ಚಿಗುರಿದ ಕೂಡಲೆ ನೀವು ಅದನ್ನು ಕಂಡು ಈಗ ಬೇಸಿಗೆಯು ಹತ್ತಿರವಾಯಿತೆಂದು ನೀವಾಗಿ ತಿಳುಕೊಳ್ಳುತ್ತೀರಲ್ಲಾ. 31ಹಾಗೆಯೇ ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ. 32ಎಲ್ಲಾ ಆಗುವ ತನಕ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ. 33ಭೂಮ್ಯಾಕಾಶಗಳು ಅಳಿದುಹೋಗುವವು, ಆದರೆ ನನ್ನ ಮಾತುಗಳು ಅಳಿದುಹೋಗುವದೇ ಇಲ್ಲ.
34ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. 35ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು. 36ಆದರೆ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ ಅಂದನು.
ಅಧಿಕಾರಿಗಳು ಯೇಸುವನ್ನು ಕೊಲ್ಲುವದಕ್ಕೆ ಉಪಾಯಮಾಡಿದ್ದು
(ಮತ್ತಾ. 26.1-5,14-16; ಮಾರ್ಕ. 14.1, 2, 10, 11)
37ಆತನು ಹಗಲು ದೇವಾಲಯದಲ್ಲಿ ಉಪದೇಶಮಾಡುತ್ತಾ ರಾತ್ರಿ ಪಟ್ಟಣದ ಹೊರಗೆ ಹೋಗಿ ಎಣ್ಣೇಮರಗಳ ತೋಪು ಎನಿಸಿಕೊಳ್ಳುವ ಗುಡ್ಡದಲ್ಲಿ ಇಳುಕೊಳ್ಳುತ್ತಾ ಇದ್ದನು. 38ಜನರೆಲ್ಲರು ಆತನ ಉಪದೇಶವನ್ನು ಕೇಳಬೇಕೆಂದು ಬೆಳಿಗ್ಗೆ ಎದ್ದು ದೇವಾಲಯಕ್ಕೆ ಆತನ ಬಳಿಗೆ ಬರುತ್ತಿದ್ದರು.
Currently Selected:
ಲೂಕ 21: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.