ಲೂಕ 15
15
ದೇವರ ಕಡೆಗೆ ತಿರುಗಿದ ಪಾಪಿಯ ವಿಷಯದಲ್ಲಿ ಪರಲೋಕದಲ್ಲಿ ಆಗುವ ಸಂತೋಷವನ್ನು ಸೂಚಿಸುವ ಮೂರು ದೃಷ್ಟಾಂತಗಳು
(ಮತ್ತಾ. 18.12-14)
1ಯೇಸುವಿನ ಉಪದೇಶವನ್ನು ಕೇಳಬೇಕೆಂದು ಎಲ್ಲಾ ಸುಂಕದವರೂ ಪಾಪಿಗಳೂ 2ಆತನ ಬಳಿಗೆ ಬರುತ್ತಾ ಇರಲು ಫರಿಸಾಯರೂ ಶಾಸ್ತ್ರಿಗಳೂ - ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ ಎಂದು ಹೇಳಿಕೊಂಡು ಗುಣುಗುಟ್ಟುತ್ತಿದ್ದರು.
3ಆಗ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು. 4ಅದೇನಂದರೆ - ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದು ಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿಕೊಂಡು ಹೋಗದೆ ಇದ್ದಾನೇ? 5ಸಿಕ್ಕಿದ ಮೇಲೆ ಅವನು ಸಂತೋಷಪಡುತ್ತಾ ಅದನ್ನು ತನ್ನ ಹೆಗಲಿನ ಮೇಲೆ ಇಟ್ಟುಕೊಂಡು 6ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ - ಕಳೆದುಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಅವರಿಗೆ ಹೇಳುವನಲ್ಲವೇ. 7ಅದರಂತೆ ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ.
8ಯಾವ ಹೆಂಗಸು ತನ್ನಲ್ಲಿ ಹತ್ತು ಪಾವಲಿಗಳಿರಲಾಗಿ ಒಂದು ಪಾವಲಿ ಕಳೆದುಹೋದರೆ ದೀಪಾಹಚ್ಚಿ ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳು? 9ಸಿಕ್ಕಿದ ಮೇಲೆ ಆಕೆಯು ತನ್ನ ಗೆಳತಿಯರನ್ನೂ ನೆರೆಹೊರೆಯವರನ್ನೂ ಕೂಡಿಸಿ - ಕಳೆದು ಹೋಗಿದ್ದ ಪಾವಲಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುವಳಲ್ಲವೇ. 10ಅದರಂತೆ ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ ಅಂದನು.
11ಇನ್ನೂ ಆತನು ಹೇಳಿದ್ದೇನಂದರೆ - ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. 12ಅವರಲ್ಲಿ ಕಿರಿಯವನು ತಂದೆಗೆ - ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇಳಿಕೊಳ್ಳಲು ತಂದೆಯು ಬದುಕನ್ನು ಅವರಿಗೆ ಹಂಚಿಕೊಟ್ಟನು. 13ಸ್ವಲ್ಪ ದಿವಸದ ಮೇಲೆ ಆ ಕಿರೀಮಗನು ಎಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟು ಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನು ಸೂರೆಮಾಡಿಬಿಟ್ಟನು. 14ಹೀಗೆ ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. 15ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸುವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. 16ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಶೆಪಟ್ಟನು; ಆದರೂ ಯಾರೂ ಅವನಿಗೆ ಕೊಡಲಿಲ್ಲ. 17ಆಗ ಅವನಿಗೆ ಬುದ್ಧಿ ಬಂದು ಅವನು - ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವದೆ; ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತೇನೆ. 18ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; 19ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ಹೇಳುವೆನು ಅಂದುಕೊಂಡು ಎದ್ದು ತನ್ನ ತಂದೆಯ ಕಡೆಗೆ ಬಂದನು. 20ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು. 21ಆದರೂ ಮಗನು ಅವನಿಗೆ - ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ ಎಂದು ಹೇಳಲು 22ತಂದೆಯು ತನ್ನ ಆಳುಗಳಿಗೆ - ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನು ಇಡಿರಿ; ಕಾಲಿಗೆ ಜೋಡು ಮೆಡಿಸಿರಿ; 23ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಉಲ್ಲಾಸ ಪಡೋಣ. 24ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು,#15.24 ಅಥವಾ, ಕೆಟ್ಟುಹೋಗಿದ್ದನು. ಸಿಕ್ಕಿದನು ಎಂದು ಹೇಳಿದನು. ಆಗ ಅವರು ಉಲ್ಲಾಸಪಡುವದಕ್ಕೆ ತೊಡಗಿದರು. 25ಆದರೆ ಅವನ ಹಿರೀಮಗನು ಹೊಲದಲ್ಲಿದ್ದನು. ಅವನು ಮನೆಯ ಹತ್ತಹತ್ತರಕ್ಕೆ ಬರುತ್ತಿರುವಾಗ ವಾದ್ಯನರ್ತನಗಳನ್ನು ಕೇಳಿ 26ಆಳುಗಳಲ್ಲಿ ಒಬ್ಬನನ್ನು ತನ್ನ ಬಳಿಗೆ ಕರೆದು - ಇದೇನು ಎಂದು ವಿಚಾರಿಸಿದನು. 27ಆಳು ಅವನಿಗೆ - ನಿನ್ನ ತಮ್ಮ ಬಂದಿದ್ದಾನೆ; ಇವನು ಸುರಕ್ಷಿತವಾಗಿ ಬಂದದ್ದರಿಂದ ನಿನ್ನ ತಂದೆಯು ಆ ಕೊಬ್ಬಿಸಿದ ಕರುವನ್ನು ಕೊಯ್ಸಿದ್ದಾನೆ ಎಂದು ಹೇಳಿದನು. 28ಇದನ್ನು ಕೇಳಿ ಅವನಿಗೆ ಸಿಟ್ಟುಬಂದು ಒಳಕ್ಕೆ ಹೋಗಲೊಲ್ಲದೆ ಇದ್ದನು. ಆಗ ಅವನ ತಂದೆಯು ಹೊರಗೆ ಬಂದು ಅವನನ್ನು ಬೇಡಿಕೊಂಡನು. 29ಆದರೆ ಅವನು ತನ್ನ ತಂದೆಗೆ - ನೋಡು, ಇಷ್ಟು ವರುಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಒಂದಪ್ಪಣೆಯನ್ನಾದರೂ ಎಂದೂ ಮೀರಲಿಲ್ಲ; ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. 30ಆದರೆ ಸೂಳೆಯರನ್ನು ಕಟ್ಟಿಕೊಂಡು ನಿನ್ನ ಬದುಕನ್ನು ನುಂಗಿಬಿಟ್ಟ ಈ ನಿನ್ನ ಮಗನು ಬಂದಾಗ ಕೊಬ್ಬಿಸಿದ ಕರುವನ್ನು ಅವನಿಗೆ ಕೊಯ್ಸಿದಿ ಎಂದು ಉತ್ತರಕೊಟ್ಟನು. 31ಅದಕ್ಕೆ ತಂದೆಯು - ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ, ಮತ್ತು ನನ್ನದೆಲ್ಲಾ ನಿನ್ನದೇ. 32ಆದರೆ ಉಲ್ಲಾಸಪಡುವದೂ ಸಂತೋಷಗೊಳ್ಳುವದೂ ನ್ಯಾಯವಾದದ್ದೇ; ಯಾಕಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು,#15.32 ಅಥವಾ, ಕೆಟ್ಟುಹೋಗಿದ್ದನು. ಸಿಕ್ಕಿದನು ಎಂದು ಹೇಳಿದನು.
Currently Selected:
ಲೂಕ 15: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.