YouVersion Logo
Search Icon

ಯೆರೆಮೀಯ 29

29
ಯೆರೆಮೀಯನು ಬಾಬೆಲಿನಲ್ಲಿ ಸೆರೆಯಾಗಿದ್ದವರಿಗೆ ಕಳುಹಿಸಿದ ಕಾಗದ
1ಅರಸನಾದ ಯೆಕೊನ್ಯನು, ರಾಜಮಾತೆಯು, ಕಂಚುಕಿಗಳು, ಯೆಹೂದದ ಮತ್ತು ಯೆರೂಸಲೇವಿುನ ಸರದಾರರು, ಶಿಲ್ಪಿಗಳು, ಕಮ್ಮಾರರು, ಇವರು ಯೆರೂಸಲೇವಿುನಿಂದ ತೊಲಗಿದ ಮೇಲೆ 2ಪ್ರವಾದಿಯಾದ ಯೆರೆಮೀಯನು ಸೆರೆಹೋಗಿದ್ದ ಹಿರಿಯರಲ್ಲಿ ಉಳಿದವರಿಗೂ ಯಾಜಕರಿಗೂ ಪ್ರವಾದಿಗಳಿಗೂ ಅಂತು ನೆಬೂಕದ್ನೆಚ್ಚರನು ಯೆರೂಸಲೇವಿುನಿಂದ ಬಾಬೆಲಿಗೆ ಸೆರೆ ಒಯ್ದಿದ್ದ ಸಕಲಜನರಿಗೂ 3ಯೆಹೂದದ ಅರಸನಾದ ಚಿದ್ಕೀಯನಿಂದ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ರಾಯಭಾರಿಗಳಾಗಿ ಬಾಬೆಲಿಗೆ ಕಳುಹಿಸಲ್ಪಟ್ಟ ಶಾಫಾನನ ಮಗನಾದ ಎಲ್ಲಾಸ, ಹಿಲ್ಕೀಯನ ಮಗನಾದ ಗೆಮರ್ಯ, ಇವರ ಕೈಯಲ್ಲಿ ಯೆರೂಸಲೇವಿುನಿಂದ ಬರೆದು ರವಾನಿಸಿದ ಕಾಗದದ ಮಾತೇನಂದರೆ - 4ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತಾನು ಯೆರೂಸಲೇವಿುನಿಂದ ಬಾಬೆಲಿಗೆ ಸಾಗಿಸಿದ ಸೆರೆಯವರೆಲ್ಲರಿಗೂ ಹೀಗೆ ಹೇಳುತ್ತಾನೆ - 5ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಅವುಗಳ ಫಲವನ್ನು ಅನುಭವಿಸಿರಿ; 6ಸಂಸಾರಿಗಳಾಗಿ ಗಂಡುಹೆಣ್ಣು ಮಕ್ಕಳನ್ನು ಪಡೆಯಿರಿ; ನಿಮ್ಮ ಗಂಡುಗಳಿಗೆ ಹೆಣ್ಣುಗಳನ್ನು ತೆಗೆದುಕೊಳ್ಳಿರಿ, ನಿಮ್ಮ ಹೆಣ್ಣುಗಳನ್ನು ಗಂಡುಗಳಿಗೆ ಕೊಡಿರಿ; ಅವರೂ ಗಂಡು ಹೆಣ್ಣು ಮಕ್ಕಳನ್ನು ಪಡೆಯಲಿ; ನೀವು ಇರುವಲ್ಲಿಯೇ ವೃದ್ಧಿಯಾಗಿರಿ, ಕಡಿಮೆಯಾಗದಿರಿ. 7ನಾನು ಯಾವ ಪಟ್ಟಣಕ್ಕೆ ನಿಮ್ಮನ್ನು ಸಾಗಿಸಿದೆನೋ ಅದರ ಕ್ಷೇಮವನ್ನು ಹಾರೈಸಿ ಅದಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ; ಅದರ ಕ್ಷೇಮವೇ ನಿಮ್ಮ ಕ್ಷೇಮ. 8ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನಿಮ್ಮ ಮಧ್ಯದಲ್ಲಿರುವ ನಿಮ್ಮ ಪ್ರವಾದಿಗಳಿಂದಲೂ ಶಕುನದವರಿಂದಲೂ ಮೋಸಹೋಗಬೇಡಿರಿ; ನಿಮಗಾಗಿ ಕನಸುಕಂಡು ಹೇಳುವವರಿಗೆ ಕಿವಿಗೊಡದಿರಿ; 9ಅವರು ನನ್ನ ಹೆಸರಿನಲ್ಲಿ ನಿಮಗೆ ಸುಳ್ಳನ್ನು ಸಾರುತ್ತಾರೆ; ನಾನು ಅವರನ್ನು ಕಳುಹಿಸಲಿಲ್ಲ. ಇದು ಯೆಹೋವನ ನುಡಿ.
10ಯೆಹೋವನು ಇಂತೆನ್ನುತ್ತಾನೆ - ಬಾಬೆಲ್ ರಾಜ್ಯವು ಎಪ್ಪತ್ತು ವರುಷ ಪ್ರಬಲಿಸಿದ ಮೇಲೆ ನಾನು ನಿಮ್ಮನ್ನು ಕಟಾಕ್ಷಿಸಿ ಈ ಸ್ಥಳಕ್ಕೆ ತಿರಿಗಿ ಬರಮಾಡುವೆನೆಂಬ ನನ್ನ ಶುಭವಾಕ್ಯವನ್ನು ನಿಮಗಾಗಿ ನೆರವೇರಿಸುವೆನು. 11ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ. 12ನೀವು ನನಗೆ ಮೊರೆಯಿಡುವಿರಿ, ನನ್ನನ್ನು ಪ್ರಾರ್ಥಿಸಲು ಹೋಗುವಿರಿ; ನಾನು ಕಿವಿಗೊಡುವೆನು. 13ನೀವು ನನ್ನನ್ನು ಹುಡುಕುವಿರಿ, ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14ನಾನು ನಿಮಗೆ ದೊರೆಯುವೆನು, ನಿಮ್ಮನ್ನು ನಿಮ್ಮ ದುರವಸ್ಥೆಯಿಂದ ತಪ್ಪಿಸಿ ನಾನು ನಿಮ್ಮನ್ನು ಅಟ್ಟಿಬಿಟ್ಟಿದ್ದ ಸಮಸ್ತದೇಶಗಳಿಂದಲೂ ಸಕಲಜನಾಂಗಗಳ ಮಧ್ಯದಿಂದಲೂ ಒಟ್ಟುಗೂಡಿಸಿ ನಿಮ್ಮನ್ನು ಯಾವ ಸ್ಥಳದಿಂದ ಸೆರೆಗೆ ಸಾಗಿಸಿದನೋ ಅಲ್ಲಿಗೆ ತಿರಿಗಿ ಬರಮಾಡುವೆನು. ಇದು ಯೆಹೋವನ ನುಡಿ. 15(ನೀವೋ - ಯೆಹೋವನು ನಮಗಾಗಿ ಬಾಬೆಲಿನಲ್ಲೇ ಪ್ರವಾದಿಗಳನ್ನು ಏರ್ಪಡಿಸಿದ್ದಾನಲ್ಲಾ ಅಂದುಕೊಂಡಿದ್ದೀರಿ.)
16ಸೇನಾಧೀಶ್ವರನಾದ ಯೆಹೋವನು ದಾವೀದನ ಸಿಂಹಾಸನಾರೂಢನಾದ ಅರಸನ ವಿಷಯವಾಗಿಯೂ ನಿಮ್ಮೊಂದಿಗೆ ಸೆರೆಹೋಗದ ನಿಮ್ಮ ಸಹೋದರರಾದ ಈ ಪಟ್ಟಣದ ಸಕಲನಿವಾಸಿಗಳ ವಿಷಯವಾಗಿಯೂ ಇಂತೆನ್ನುತ್ತಾನೆ - 17ಆಹಾ, ನಾನು ಅವರ ಮೇಲೆ ಖಡ್ಗಕ್ಷಾಮವ್ಯಾಧಿಗಳನ್ನು ಬರಮಾಡಿ ಯಾರೂ ತಿನ್ನದ ಹಾಗೆ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ಅವರನ್ನು ತರುವೆನು, 18ನಾನು ಖಡ್ಗಕ್ಷಾಮವ್ಯಾಧಿಗಳಿಂದ ಅವರನ್ನು ಹಿಂದಟ್ಟುತ್ತಾ ಲೋಕದ ಸಮಸ್ತರಾಜ್ಯಗಳಿಗೆ ಭಯಾಸ್ಪದವಾಗುವಂತೆಯೂ ನಾನು ಅವರನ್ನು ಅಟ್ಟಿಬಿಟ್ಟಿರುವ ಸಕಲ ಜನಾಂಗಗಳಲ್ಲಿ ಶಾಪ, ಬೆರಗಿನ ಸಿಳ್ಳು, ದೂಷಣೆ, ಇವುಗಳಿಗೆ ಗುರಿಯಾಗುವಂತೆಯೂ ಮಾಡುವೆನು. 19ಅವರು ನನ್ನ ಮಾತುಗಳನ್ನು ಕೇಳಲಿಲ್ಲವಲ್ಲಾ; ನಾನು ನನ್ನ ಸೇವಕರಾದ ಪ್ರವಾದಿಗಳನ್ನು ಅವರ ಬಳಿಗೆ ಸಾವಕಾಶಮಾಡದೆ ಕಳುಹಿಸಿ ಹೇಳಿಸುತ್ತಾ ಬಂದರೂ ಅವರು#29.19 ಮೂಲ: ನೀವು ಕೇಳಲೊಲ್ಲದೆ ಹೋದಿರಿ. ಕೇಳಲೊಲ್ಲದೆ ಹೋದರು. ಇದು ಯೆಹೋವನ ನುಡಿ.
20ನಾನು ಯೆರೂಸಲೇವಿುನಿಂದ ಬಾಬೆಲಿಗೆ ಸಾಗಿಸಿದ ಸೆರೆಯವರೇ, ನೀವೆಲ್ಲರೂ ಯೆಹೋವನ ವಾಕ್ಯವನ್ನು ಕೇಳಿರಿ- 21ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ತನ್ನ ಹೆಸರೆತ್ತಿ ಸುಳ್ಳನ್ನು ಸಾರುವ ಕೊಲಾಯನ ಮಗನಾದ ಅಹಾಬ, ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಇಂತೆನ್ನುತ್ತಾನೆ - ಇಗೋ, ನಾನು ಇವರನ್ನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಗೆ ಕೊಡುವೆನು; ಅವನು ನಿಮ್ಮ ಕಣ್ಣೆದುರಿಗೆ ಇವರನ್ನು ಕೊಲ್ಲಿಸುವನು; 22ಇವರ ಚರಿತ್ರೆಯನ್ನು ಬಾಬೆಲಿನಲ್ಲಿ ಸೆರೆಯಾಗಿರುವ ಯೆಹೂದ್ಯರೆಲ್ಲರು ಶಪಿಸುವ ಮಾತಾಗಿ ತೆಗೆದುಕೊಂಡು ಬಾಬೆಲಿನ ಅರಸನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ ಎಂದು ಶಪಿಸುವರು; 23ಇವರು ಇಸ್ರಾಯೇಲಿನಲ್ಲಿ ದುರಾಚಾರವನ್ನು ನಡಿಸಿ ನೆರೆಯವರ ಹೆಂಡಿರಲ್ಲಿ ವ್ಯಭಿಚಾರಮಾಡಿ ನಾನು ಆಜ್ಞಾಪಿಸಿದ ಮಾತುಗಳನ್ನು ನನ್ನ ಹೆಸರಿನ ಮೇಲೆ ಸುಳ್ಳಾಗಿ ಸಾರಿದರಲ್ಲಾ; ನಾನೇ ಬಲ್ಲೆ, ನಾನೇ ಸಾಕ್ಷಿ ಎಂದು ಯೆಹೋವನು ಅನ್ನುತ್ತಾನೆ ಎಂಬದೇ.
ಶೆಮಾಯನ ಆಕ್ಷೇಪಣೆ, ಯೆರೆಮೀಯನ ಉತ್ತರ
24[ಆಮೇಲೆ ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆಯನ್ನು ಕೊಟ್ಟನು] - ನೀನು ನೆಹೆಲಾಮ್ಯನಾದ ಶೆಮಾಯನಿಗೆ ಹೀಗೆ ತಿಳಿಸಬೇಕು - 25ಇಸ್ರಾಯೇಲ್ಯರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ - ನೀನು ಯೆರೂಸಲೇವಿುನಲ್ಲಿರುವ ಎಲ್ಲಾ ಜನರಿಗೂ ಯಾಜಕನಾದ ಮಾಸೇಯನ ಮಗನಾಗಿರುವ ಚೆಫನ್ಯನಿಗೂ ಸಮಸ್ತ ಯಾಜಕರಿಗೂ ನಿನ್ನ ಹೆಸರಿನ ಮೇಲೆ ಕಳುಹಿಸಿದ ಕಾಗದದಲ್ಲಿ - 26ಯೆಹೋವನು ನಿನ್ನನ್ನು ಯೆಹೋಯಾದನ ಸ್ಥಾನದಲ್ಲಿ ಯಾಜಕನನ್ನಾಗಿ ನೇವಿುಸಿ ಯಾವಯಾವನು ಮೈದುಂಬಿ ಪ್ರವಾದಿಯಾಗಿ ನಟಿಸುತ್ತಾನೋ ಅವನನ್ನು ಕೋಳಕ್ಕೆ ಹಾಕಿ ಕೊರಳಿಗೆ ಕವೆಯೊಡ್ಡುವ ಅಧಿಕಾರವನ್ನು ತನ್ನ ಆಲಯದಲ್ಲಿ ನಿನಗೆ#29.26 ಮೂಲ: ನಿಮಗೆ. ವಹಿಸಿದ್ದಾನಲ್ಲಾ. 27ಹೀಗಿರಲು ನಿಮ್ಮ ಮಧ್ಯದಲ್ಲಿ ಪ್ರವಾದಿಯಾಗಿ ನಟಿಸುವ ಅನಾತೋತಿನವನಾದ ಯೆರೆಮೀಯನನ್ನು ನೀನು ಏಕೆ ಖಂಡಿಸಲಿಲ್ಲ? 28ಇವನು - ಪರದೇಶ ವಾಸವು ನಿಮಗೆ ದೀರ್ಘವಾಗುವದು, ನೀವು ಮನೆಗಳನ್ನು ಕಟ್ಟಿಕೊಂಡು ಅವುಗಳಲ್ಲಿ ವಾಸಿಸಿರಿ, ತೋಟಗಳನ್ನು ಮಾಡಿಕೊಂಡು ಫಲವನ್ನು ಅನುಭವಿಸಿರಿ ಎಂದು ಬಾಬೆಲಿನಲ್ಲಿರುವ ನಮಗೆ ಹೇಳಿ ಕಳುಹಿಸಿದ್ದಾನೆ ನೋಡು ಎಂಬದಾಗಿ ಬರೆದ ಕಾರಣ [ನಾನು ನಿನ್ನನ್ನು ದಂಡಿಸುವದು ಖಂಡಿತ]. 29ಯಾಜಕನಾದ ಚೆಫನ್ಯನು ಈ ಕಾಗದವನ್ನು ಪ್ರವಾದಿಯಾದ ಯೆರೆಮೀಯನ ಮುಂದೆ ಓದಿದನಂತರ 30ಯೆಹೋವನು ಯೆರೆಮೀಯನಿಗೆ ಈ ಅಪ್ಪಣೆ ಮಾಡಿದನು - 31ಸೆರೆಯವರೆಲ್ಲರಿಗೆ ಹೀಗೆ ಹೇಳಿ ಕಳುಹಿಸು - ನೆಹೆಲಾಮ್ಯನಾದ ಶೆಮಾಯನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ - ನಾನು ಕಳುಹಿಸದೆ ಹೋದರೂ ಶೆಮಾಯನು ನಿಮಗೆ ಪ್ರವಾದನೆಮಾಡಿ ಸುಳ್ಳಿನಲ್ಲಿ ನಂಬಿಕೆಯನ್ನು ಹುಟ್ಟಿಸಿದ ಕಾರಣ 32ಇಗೋ, ನಾನು ನೆಹೆಲಾಮ್ಯನಾದ ಶೆಮಾಯನನ್ನೂ ಅವನ ಸಂತತಿಯವರನ್ನೂ ದಂಡಿಸುವೆನು; ಅವನು ಯೆಹೋವನಾದ ನನಗೆ ವಿರುದ್ಧವಾಗಿ ದ್ರೋಹದ ಮಾತನ್ನು ಆಡಿದ್ದರಿಂದ ಈ ಜನರ ಮಧ್ಯದಲ್ಲಿ ವಾಸಿಸಲು ಅವನಿಗೆ ಯಾವ ಸಂತಾನವೂ ಇರದು; ನಾನು ನನ್ನ ಜನರಿಗೆ ಉಂಟುಮಾಡಬೇಕೆಂದಿರುವ ಮೇಲನ್ನು ಅವನು ನೋಡದೆ ಹೋಗುವನು; ಇದು ಯೆಹೋವನ ನುಡಿ.

Highlight

Share

Copy

None

Want to have your highlights saved across all your devices? Sign up or sign in

Video for ಯೆರೆಮೀಯ 29