ಯೆರೆಮೀಯ 18
18
ಕುಂಬಾರನ ಸಾಮ್ಯ
1ಯೆಹೋವನು ಯೆರೆಮೀಯನಿಗೆ - 2ನೀನೆದ್ದು ಕುಂಬಾರನ ಮನೆಗೆ ಇಳಿದುಹೋಗು; ಅಲ್ಲೇ ನನ್ನ ನುಡಿಯನ್ನು ನಿನಗೆ ಕೇಳಮಾಡುವೆನು ಎಂಬ ಮಾತನ್ನು ದಯಪಾಲಿಸಿದನು. 3ಆಗ ನಾನು ಕುಂಬಾರನ ಮನೆಗೆ ಇಳಿದುಹೋದೆನು; ಇಗೋ, ಅವನು ಚಕ್ರದ ಮೇಲೆ ತನ್ನ ಕೆಲಸವನ್ನು ನಡಿಸುತ್ತಿದ್ದನು. 4ಆ ಕುಂಬಾರನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಪಾತ್ರೆಯು ಅವನ ಕೈಯಲ್ಲಿ ಕೆಟ್ಟು ಹೋಗಲು ಪುನಃ ತನಗೆ ಸರಿತೋಚಿದ ಹಾಗೆ ಅದನ್ನು ಹೊಸಪಾತ್ರೆಯನ್ನಾಗಿ ಮಾಡಿದನು.
5ಆಗ ಯೆಹೋವನು ನನಗೆ ಈ ಮಾತನ್ನು ಅನುಗ್ರಹಿಸಿದನು - 6ಯೆಹೋವನು ಹೀಗನ್ನುತ್ತಾನೆ - ಇಸ್ರಾಯೇಲ್ ವಂಶದವರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೋ? ಇಸ್ರಾಯೇಲ್ ಮನೆತನದವರೇ, ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ ನೀವು ನನ್ನ ಕೈಯಲ್ಲಿದ್ದೀರಿ. 7ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ರಾಜ್ಯವನ್ನಾಗಲಿ ಕಿತ್ತು ಕೆಡವಿ ನಾಶಪಡಿಸಬೇಕೆಂದು ಅಪ್ಪಣೆಕೊಟ್ಟಾಗ 8ನಾನು ದಂಡನೆ ನಿರ್ಣಯಿಸಿದ ಆ ಜನಾಂಗದವರು ತಮ್ಮ ಕೆಟ್ಟತನದಿಂದ ತಿರುಗಿಕೊಂಡರೆ ನಾನು ಮಾಡಬೇಕೆಂದಿದ್ದ ಕೇಡನ್ನು ಮನಮರುಗಿ ಮಾಡದಿರುವೆನು. 9ನಾನು ಒಂದು ವೇಳೆ ಒಂದು ಜನಾಂಗವನ್ನಾಗಲಿ ರಾಜ್ಯವನ್ನಾಗಲಿ ನೆಟ್ಟು ಕಟ್ಟಬೇಕೆಂದು ಅಪ್ಪಣೆಕೊಟ್ಟಾಗ 10ಅದು ನನ್ನ ಮಾತನ್ನು ಕೇಳದೆ ನನ್ನ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದರೆ ನಾನು ಮನಸ್ಸನ್ನು ಬದಲಾಯಿಸಿಕೊಂಡು ಅದಕ್ಕೆ ಮಾಡಬೇಕೆಂದಿದ್ದ ಮೇಲನ್ನು ಮಾಡದೆ ಇರುವೆನು. 11ಈಗ ನೀನು ಯೆಹೂದ್ಯರಿಗೂ ಯೆರೂಸಲೇವಿುನವರಿಗೂ ಈ ಮಾತನ್ನು ಹೇಳು - ಯೆಹೋವನು ಹೀಗನ್ನುತ್ತಾನೆ - ಆಹಾ, ನಾನು ನಿಮಗೆ ವಿರುದ್ಧವಾಗಿ ಯೋಚಿಸಿ ಕೇಡನ್ನು ಕಲ್ಪಿಸುತ್ತಿದ್ದೇನೆ; ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ದುರ್ಮಾರ್ಗದಿಂದ ಹಿಂದಿರುಗಲಿ, ನಡತೆಯನ್ನೂ ಕೃತ್ಯಗಳನ್ನೂ ಸರಿಪಡಿಸಿಕೊಳ್ಳಲಿ. 12ಅವರೋ - ಏನೂ ನಿರೀಕ್ಷೆಯಿಲ್ಲ; ನಮ್ಮ ಆಲೋಚನೆಗಳಿಗೆ ತಕ್ಕಂತೆ ನಡೆಯುವೆವು, ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ನಮ್ಮ ದುಷ್ಟ ಹೃದಯದ ಹಾಗೆ ಮಾಡುವೆವು ಎಂದು ಹೇಳುತ್ತಾರೆ.
13ಹೀಗಿರಲು ಯೆಹೋವನು ಹೀಗನ್ನುತ್ತಾನೆ - ಜನಾಂಗಗಳಲ್ಲಿ ವಿಚಾರಿಸಿರಿ, ಇಂಥಾ ಸುದ್ದಿಯನ್ನು ಯಾರು ಕೇಳಿದ್ದಾರೆ? ಇಸ್ರಾಯೇಲೆಂಬ ಯುವತಿಯು ಕೇವಲ ಅಸಹ್ಯ ಕಾರ್ಯವನ್ನು ಮಾಡಿದ್ದಾಳೆ. 14ಲೆಬನೋನಿನ ಹಿಮವು ಅರಣ್ಯದ ಶಿಖರದಿಂದ ತಪ್ಪುವದೇ? ದೂರದಿಂದ#18.14 ಮೂಲ: ಹರಿಯುವ ಅನ್ಯವಾದ ತೊರೆತದ ನೀರು ಕೀಳಲ್ಪಡುವದೋ? ಈ ವಚನದ ಮೂಲವು ಕೇವಲ ಅಸ್ಪಷ್ಟ. ಇಳಿದು ಹರಿಯುವ ತೊರೆತದ ನೀರು ಬತ್ತುವದೇ? 15ನನ್ನ ಜನರೋ ನನ್ನನ್ನು ಮರೆತು ವ್ಯರ್ಥವಿಗ್ರಹಗಳಿಗೆ ಧೂಪಹಾಕಿದ್ದಾರಲ್ಲಾ; ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿ ಅವರು ಮುಗ್ಗರಿಸುವಂತೆಯೂ ಸರಿಯಲ್ಲದ ಸೀಳುದಾರಿಗಳಲ್ಲಿ ಅಲೆಯುವಂತೆಯೂ ಮಾಡಿವೆ. 16ಆದಕಾರಣ ಬೆರಗಿನ ಸಿಳ್ಳಿಗೆ ಅವರ ದೇಶವು ನಿತ್ಯವಾಗಿ ಗುರಿಯಾಗುವದು; ಹಾದುಹೋಗುವವರೆಲ್ಲರೂ ಬೆರಗಾಗಿ ತಲೆದೂಗುವರು. 17ಶತ್ರುಗಳು ಮೇಲೆ ಬಿದ್ದಾಗ ನನ್ನ ಜನರನ್ನು ಮೂಡಣ ಗಾಳಿಯಿಂದಲೋ ಎಂಬಂತೆ ದಿಕ್ಕಾಪಾಲುಮಾಡುವೆನು. ಅವರ ವಿಪತ್ತಿನ ದಿನದಲ್ಲಿ ಅವರ ಕಡೆಗೆ ಮುಖತಿರುಗಿಸದೆ ಬೆನ್ನು ಮಾಡುವೆನು.
ಜನರ ಒಳಸಂಚು, ಪ್ರವಾದಿಯ ಪ್ರಾರ್ಥನೆ
18ಆಗ ಅವರು - ಯೆರೆಮೀಯನಿಗೆ ವಿರುದ್ಧವಾಗಿ ಒಳಸಂಚು ಮಾಡೋಣ ಬನ್ನಿರಿ; ಧರ್ಮೋಪದೇಶವು ಯಾಜಕನಿಂದ, ಮಂತ್ರಾಲೋಚನೆಯು ಜ್ಞಾನಿಯಿಂದ, ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದಷ್ಟೆ. ಬನ್ನಿರಿ, ಅವನನ್ನು ಬಾಯಿಂದ ಬಡಿಯೋಣ, ಅವನ#18.18 ಪಾಠಾಂತರ: ಅವನ ಎಲ್ಲಾ ಮಾತುಗಳಿಗೂ ಕಾದಿರುವ. ಯಾವ ಮಾತಿಗೂ ಕಿವಿಗೊಡದಿರುವ ಎಂದುಕೊಂಡರು.
19ಯೆಹೋವನೇ, ನನ್ನ ಕಡೆಗೆ ಕಿವಿಗೊಡು, ನನ್ನೊಡನೆ ವ್ಯಾಜ್ಯವಾಡುವವರ ಮಾತನ್ನು ಕೇಳು. 20ಮೇಲಿಗೆ ಮುಯ್ಯಾಗಿ ಕೇಡು ಆಗ ತಕ್ಕದ್ದೋ? ನನ್ನ ಪ್ರಾಣವನ್ನು ಹಿಡಿಯಬೇಕೆಂದು ಗುಂಡಿಯನ್ನು ತೋಡಿದ್ದಾರಲ್ಲಾ. ಅವರ ಮೇಲಣ ನಿನ್ನ ರೋಷವನ್ನು ತಪ್ಪಿಸಲು ನಾನು ನಿನ್ನ ಮುಂದೆ ನಿಂತುಕೊಂಡು ಅವರ ಹಿತಕ್ಕಾಗಿ ವಿಜ್ಞಾಪಿಸಿಕೊಂಡದ್ದನ್ನು ಚಿತ್ತವಿಸು. 21ಆದಕಾರಣ ಅವರ ಮಕ್ಕಳನ್ನು ಕ್ಷಾಮಕ್ಕೆ ಗುರಿಮಾಡಿ ಕತ್ತಿಯ ಬಾಯಿಗೆ ಒಪ್ಪಿಸು; ಅವರ ಹೆಂಡಿರು ಮಕ್ಕಳನ್ನು ನೀಗಿಕೊಂಡು ವಿಧವೆಯರಾಗಲಿ; ಮೃತ್ಯುವು ಅವರ ಗಂಡಂದಿರನ್ನು ಸಂಹರಿಸಲಿ; 22ಯುದ್ಧದಲ್ಲಿ ಖಡ್ಗವು ಅವರ ಯುವಕರನ್ನು ವಧಿಸಲಿ. ಸುಲಿಗೆಯವರ ಗುಂಪನ್ನು ಫಕ್ಕನೆ ಅವರ ಮೇಲೆ ಬೀಳಮಾಡು, ಅವರ ಮನೆಗಳೊಳಗಿಂದ ಅರಚಾಟವು ಕೇಳಿಸಲಿ; ಅವರು ನನ್ನನ್ನು ಹಿಡಿಯಲಿಕ್ಕೆ ಗುಂಡಿಯನ್ನು ತೋಡಿ ನನ್ನ ಕಾಲುಗಳಿಗೆ ಪಾಶಗಳನ್ನು ಗುಪ್ತವಾಗಿ ಒಡ್ಡಿದ್ದಾರೆ. 23ಯೆಹೋವನೇ, ನನ್ನನ್ನು ಕೊಲ್ಲಬೇಕೆಂದು ಅವರು ಮಾಡಿಕೊಂಡಿರುವ ಆಲೋಚನೆಯನ್ನೆಲ್ಲಾ ನೀನೇ ಬಲ್ಲೆ; ಅವರ ಅಪರಾಧವನ್ನು ಕ್ಷವಿುಸಬೇಡ, ಅವರ ಪಾಪವನ್ನು ಅಳಿಸದಿರು, ಅದು ನಿನ್ನ ಕಣ್ಣೆದುರಿಗಿರಲಿ; ಅವರು ನಿನ್ನ ಮುಂದೆ ಕೆಡವಲ್ಪಡಲಿ; ನಿನ್ನ ಕೋಪವನ್ನು ವ್ಯಕ್ತಪಡಿಸುವಾಗ ಅವರಿಗೆ ತಕ್ಕದ್ದನ್ನು ಮಾಡು.
Currently Selected:
ಯೆರೆಮೀಯ 18: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.