ಇಬ್ರಿಯರಿಗೆ 4
4
1ಹೀಗಿರಲಾಗಿ ದೇವರ ವಿಶ್ರಾಂತಿಯಲ್ಲಿ ಸೇರಬಹುದೆಂಬ ವಾಗ್ದಾನವು ಇನ್ನೂ ಇರುವಲ್ಲಿ ನಿಮ್ಮೊಳಗೆ ಯಾವನಾದರೂ ಆ ವಾಗ್ದಾನದ ಫಲವನ್ನು ಹೊಂದದೆ ತಪ್ಪುವವನಾದಾನೋ ಎಂದು ನಾವು ಭಯಪಡೋಣ. 2ಅವರಿಗೆ ಶುಭವರ್ತಮಾನವು ಸಾರೋಣವಾದಂತೆಯೇ ನಮಗೂ ಸಾರೋಣವಾಯಿತು; ಆದರೆ ಆ ಕಾಲದಲ್ಲಿ ಕೇಳಿದವರು ನಂಬದೆಹೋದ ಕಾರಣ ಆ ವಾಕ್ಯದಿಂದ ಅವರಿಗೆ ಪ್ರಯೋಜನವಾಗಲಿಲ್ಲ. 3ದೇವರ ಕೆಲಸಗಳು ಲೋಕಾದಿಯಿಂದ ಮುಗಿದು ಹೋಗಿ [ಆತನ ವಿಶ್ರಾಂತಿಯು ಸಿದ್ಧವಾಗಿದ್ದರೂ] ಆತನು -
ನನ್ನ ವಿಶ್ರಾಂತಿಯಲ್ಲಿ ಇವರು ಸೇರುವದೇ ಇಲ್ಲವೆಂದು
ಕೋಪಗೊಂಡು ಪ್ರಮಾಣಮಾಡಿದೆನು
ಎಂಬದಾಗಿ ಹೇಳಿದೆನಷ್ಟೆ. ನಂಬಿರುವ ನಾವಾದರೋ ಆ ವಿಶ್ರಾಂತಿಯಲ್ಲಿ ಸೇರುತ್ತಲೇ ಇದ್ದೇವೆ. 4ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು - ದೇವರು ತನ್ನ ಸೃಷ್ಟಿ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರವಿುಸಿಕೊಂಡನೆಂದು ಬರೆದದೆ. 5ಆದರೆ ಈ ಸ್ಥಳದಲ್ಲಿ - ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ಹೇಳಿದ್ದಾನೆ. 6ಹೀಗಿರಲಾಗಿ ಆ ವಿಶ್ರಾಂತಿಯಲ್ಲಿ ಕೆಲವರು ಸೇರಬೇಕೆಂಬುವ ಮಾತು ಇನ್ನೂ ಇರುವದರಿಂದಲೂ ಮೊದಲು ಶುಭವರ್ತಮಾನವನ್ನು ಕೇಳಿದವರು ಅವಿಧೇಯರಾದ ಕಾರಣ ಅದರಲ್ಲಿ ಸೇರದೆಹೋದದ್ದರಿಂದಲೂ 7ಬಹುಕಾಲ ಹೋದನಂತರ ಆತನು ದಾವೀದನ ಬಾಯಿಂದ ಮಾತಾಡಿ ಈಹೊತ್ತೇ ಎಂದು ಒಂದಾನೊಂದು ದಿವಸವನ್ನು ಗೊತ್ತು ಮಾಡುತ್ತಾನೆ; ಹೇಗಂದರೆ -
ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ
ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ
ಎಂದು ಮೇಲ್ಕಂಡ ವಚನದಲ್ಲಿ ಹೇಳುತ್ತಾನಷ್ಟೆ. 8ಯೆಹೋಶುವನು ಅವರನ್ನು ಆ ವಿಶ್ರಾಂತಿಯಲ್ಲಿ ಸೇರಿಸಿದ್ದಾದರೆ ತರುವಾಯ ಮತ್ತೊಂದು ದಿವಸವನ್ನು ಕುರಿತು ಹೇಳೋಣವಾಗುತ್ತಿರಲಿಲ್ಲ. 9ಆದದರಿಂದ ದೇವರ ಜನರು ಅನುಭವಿಸುವದಕ್ಕಿರುವ ಸಬ್ಬತೆಂಬ ವಿಶ್ರಾಂತಿಯು ಇನ್ನೂ ಉಂಟು. 10ಹೇಗಂದರೆ ದೇವರು ತನ್ನ ಕೆಲಸಗಳನ್ನು ಮುಗಿಸಿ ಹೇಗೆ ವಿಶ್ರವಿುಸಿಕೊಂಡನೋ ಹಾಗೆಯೇ ಆತನ ವಿಶ್ರಾಂತಿಯಲ್ಲಿ ಸೇರಿರುವವನು ಸಹ ತನ್ನ ಕೆಲಸಗಳನ್ನು ಮುಗಿಸಿ ವಿಶ್ರವಿುಸಿಕೊಂಡಿದ್ದಾನೆ. 11ಆದದರಿಂದ ನಾವು ಆ ವಿಶ್ರಾಂತಿಯಲ್ಲಿ ಸೇರುವದಕ್ಕೆ ಪ್ರಯಾಸಪಡೋಣ; ನಮ್ಮಲ್ಲಿ ಒಬ್ಬರಾದರೂ ಅವರ ಅವಿಧೇಯತ್ವವನ್ನು ಅನುಸರಿಸುವವರಾಗಬಾರದು. 12ಯಾಕಂದರೆ ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ. 13ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.
ಶ್ರೇಷ್ಠ ಮಹಾಯಾಜಕನ ಸುಲಕ್ಷಣಗಳು ಯೇಸುವಿನಲ್ಲಿ ಉಂಟೆಂಬದು
14ಆಕಾಶಮಂಡಲಗಳನ್ನು ದಾಟಿಹೋದ ದೇವಕುಮಾರನಾದ ಯೇಸುವೆಂಬ ಶ್ರೇಷ್ಠ ಮಹಾಯಾಜಕನು ನಮಗಿರುವದರಿಂದ ನಾವು ಮಾಡಿರುವ ಪ್ರತಿಜ್ಞೆಯನ್ನು ಬಿಡದೆ ಹಿಡಿಯೋಣ. 15ಯಾಕಂದರೆ ನಮಗಿರುವ ಮಹಾಯಾಜಕನು ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪವಿಲ್ಲದವನಲ್ಲ; ಆತನು ಸರ್ವ ವಿಷಯಗಳಲ್ಲಿ ನಮ್ಮ ಹಾಗೆ ಶೋಧನೆಗೆ ಗುರಿಯಾದನು, ಪಾಪ ಮಾತ್ರ ಮಾಡಲಿಲ್ಲ. 16ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.
Currently Selected:
ಇಬ್ರಿಯರಿಗೆ 4: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.