ಹಬಕ್ಕೂಕ 2
2
ದೇವರ ಉತ್ತರ
1ನನ್ನ ಕೋವರದಲ್ಲಿ ನಿಂತುಕೊಳ್ಳುವೆನು,
ಬುರುಜಿನ ಮೇಲೆ ನೆಲೆಯಾಗಿರುವೆನು,
ಯೆಹೋವನು ನನಗೆ ಏನು ಹೇಳುವನೋ,
ನನ್ನ ಆಕ್ಷೇಪಣೆಯನ್ನು ನಿವಾರಿಸಿಕೊಳ್ಳಲು
ಯಾವ ಉತ್ತರಕೊಡಬೇಕೋ ಎಂದು ಎದುರು ನೋಡುವೆನು [ಅಂದುಕೊಂಡೆನು].
2ಆಗ ಯೆಹೋವನು ನನಗೆ ಈ ಉತ್ತರವನ್ನು ದಯಪಾಲಿಸಿದನು -
ನಿನಗಾದ ದರ್ಶನವನ್ನು ಬರೆ;
ಓದುವವರು ಶೀಘ್ರವಾಗಿ ಓದುವಂತೆ
ಹಲಿಗೆಗಳ ಮೇಲೆ ಅದನ್ನು ಕೆತ್ತು.
3ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು,
ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು;
ತಡವಾದರೂ ಅದಕ್ಕೆ ಕಾದಿರು;
ಅದು ಬಂದೇ ಬರುವದು, ತಾಮಸವಾಗದು.
4ಇಗೋ, ಆ#2.4 ಮೂಲ: ಅವನ. ದುಷ್ಟನ ಅಂತರಾತ್ಮವು ಉಬ್ಬಿಕೊಂಡಿದೆ, ಯಥಾರ್ಥವಲ್ಲ;
ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು.
5ಅಲ್ಲದೆ ದ್ರಾಕ್ಷಾರಸವು ಮೋಸಕರವಾದ ಕಾರಣ
ದುಷ್ಟನು ಮದವೇರಿದ್ದಾನೆ, ಸ್ವಸ್ಥಳದಲ್ಲಿ ನಿಲ್ಲನು;
ಪಾತಾಳದ ಹಾಗೆ ಅತ್ಯಾಶೆಪಡುತ್ತಾನೆ,
ಮೃತ್ಯುವಿನಂತಿದ್ದಾನೆ, ತೃಪ್ತಿಯೇ ಇಲ್ಲ;
ಸಕಲ ಜನಗಳನ್ನು ಎಳೆದುಕೊಳ್ಳುತ್ತಾನೆ,
ಸಮಸ್ತ ಜನಾಂಗಗಳನ್ನು ರಾಶಿಮಾಡಿಕೊಳ್ಳುತ್ತಾನೆ.
ಕಸ್ದೀಯರ ಅಪರಾಧಗಳ ಖಂಡನೆ
6ಇವುಗಳೆಲ್ಲಾ ಅವನ ಪ್ರಸ್ತಾಪವೆತ್ತಿ
ಅವನ ವಿಷಯವಾಗಿ ಈ ಗೇಲಿಯ ಗೀತಗಳನ್ನು ಹಾಡುವವಲ್ಲವೆ -
ಅಯ್ಯೋ, ತನ್ನದಲ್ಲದ್ದನ್ನು ಹೆಚ್ಚೆಚ್ಚಾಗಿ ಕೂಡಿಸಿಕೊಂಡು
ಅಡವುಗಳನ್ನು ಹೊರೆಹೊರೆಯಾಗಿ ಇಟ್ಟುಕೊಳ್ಳುವವನ ಗತಿಯನ್ನು ಏನು ಹೇಳಲಿ!
ಅವನು ಎಷ್ಟು ಕಾಲ ಹೀಗೆ ಮಾಡಾನು!
7ನಿನ್ನನ್ನು ಕಚ್ಚುವವರು ಫಕ್ಕನೆ ತಲೆಯೆತ್ತುವರು,
ನಿನ್ನನ್ನು ಒದ್ದಾಡಿಸುವವರು ಎಚ್ಚರಗೊಳ್ಳುವರು;
ನೀನು ಅವರಿಗೆ ಸೂರೆಯಾಗುವಿಯಷ್ಟೆ.
8ನೀನು ಬಹು ಜನಾಂಗಗಳನ್ನು ಕೊಳ್ಳೆಹೊಡೆದು ಮನುಷ್ಯರ ರಕ್ತವನ್ನು ಸುರಿಸಿ
ದೇಶವನ್ನೂ ಪುರವನ್ನೂ ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿದ ಕಾರಣ
ಜನಾಂಗಗಳಲ್ಲಿ ಉಳಿದವರೆಲ್ಲರು ನಿನ್ನನ್ನು ಕೊಳ್ಳೆಹೊಡೆಯುವರು.
9ಅಯ್ಯೋ, ತನ್ನ ಗೂಡನ್ನು ಎತ್ತರದಲ್ಲಿ ಕಟ್ಟಿ
ಕೇಡಿನೊಳಗಿಂದ ತಪ್ಪಿಸಿಕೊಳ್ಳಬೇಕೆಂದು
ತನ್ನ ಕುಲಕ್ಕೆ ಆಸ್ತಿಯನ್ನು ಅನ್ಯಾಯವಾಗಿ ದೋಚಿಕೊಳ್ಳುವವನ ಗತಿಯನ್ನು ಏನು ಹೇಳಲಿ;
10ನೀನು ಬಹುಜನಾಂಗಗಳನ್ನು ನಿರ್ಮೂಲಮಾಡಿದ್ದು
ನಿನ್ನ ಕುಲಕ್ಕೆ ಅವಮಾನವನ್ನೇ ಆಲೋಚಿಸಿಕೊಂಡ ಹಾಗಾಯಿತು,
ನಿನಗೇ ಕೆಡುಕುಮಾಡಿಕೊಂಡಿದ್ದೀ.
11ಗೋಡೆಯೊಳಗಿಂದ ಕಲ್ಲು [ನಿನ್ನ ಮೇಲೆ ತಪ್ಪುಹೊರಿಸಿ] ಕೂಗುವದು;
[ಚಾವಣಿಯ] ಮರಗಳೊಳಗಿಂದ ತೊಲೆಯು ಹೌದೆನ್ನುವದು.
12ಅಯ್ಯೋ, ಪಟ್ಟಣವನ್ನು ನರಹತ್ಯದಿಂದ ಕಟ್ಟಿ
ಊರನ್ನು ಅನ್ಯಾಯದಿಂದ ಸ್ಥಾಪಿಸುವವನ ಗತಿಯನ್ನು ಏನು ಹೇಳಲಿ!
13ಜನಗಳು ದುಡಿದದ್ದು ಬೆಂಕಿಗೆ ತುತ್ತಾಗುವದು,
ಜನಾಂಗಗಳು ಪಟ್ಟ ಪರಿಶ್ರಮವು ವ್ಯರ್ಥವಾಗುವದು,
ಆಹಾ, ಇದೆಲ್ಲಾ ಸೇನಾಧೀಶ್ವರನಾದ ಯೆಹೋವನಿಂದಲೇ ಸಂಭವಿಸುವದಷ್ಟೆ.
14ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ
ಭೂವಿುಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವದು.
15ಅಯ್ಯೋ, ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ ನಿನ್ನ ನೆರೆಯವರಿಗೆ ಕುಡಿಸಿ
ಅವರ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ,
ನಿನ್ನ ಗತಿಯನ್ನು ಏನು ಹೇಳಲಿ!
16ನೀನು ಮಾನವನ್ನಲ್ಲ, ಅವಮಾನವನ್ನು ತುಂಬಾ ಅನುಭವಿಸುವಿ;
ನೀನೂ ಕುಡಿ, ನಿನ್ನ ಸುನ್ನತಿಹೀನತೆಯನ್ನು ಹೊರಪಡಿಸಿಕೋ;
ಯೆಹೋವನ ಬಲಗೈಯಲ್ಲಿನ ಪಾತ್ರೆಯು ನಿನ್ನ ಪಾಲಿಗೂ ಬರುವದು;
ಕೇವಲ ಅವಮಾನವು ನಿನ್ನ ಮಾನವನ್ನು ಮುತ್ತಿಬಿಡುವದು.
17ನೀನು ಮನುಷ್ಯರ ರಕ್ತವನ್ನು ಸುರಿಸಿ
ದೇಶವನ್ನೂ ಪುರವನ್ನೂ ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿದ ಕಾರಣ
ಲೆಬನೋನಿಗೆ ಆದಂಥ ಹಿಂಸೆಗೆ ನೀನೂ ಒಳಗಾಗುವಿ,
ಮೃಗಪಶುಗಳ ನಾಶನವು ನಿನ್ನನ್ನೂ ಹೆದರಿಸುವದು.
18ಕೆತ್ತಿದ ವಿಗ್ರಹವು ಏತಕ್ಕೆ? ರೂಪಿಸಿದವನು ಅದನ್ನೇಕೆ ಕೆತ್ತಬೇಕಾಗಿತ್ತು?
ಸುಳ್ಳುಕಣಿಗಾಗಿ ಇಟ್ಟುಕೊಂಡ ಎರಕದ ಬೊಂಬೆಯಿಂದ ಪ್ರಯೋಜನವೇನು?
ನಿರ್ಮಿಸಿದವನು ತನ್ನ ಕೈಕೆಲಸದ ಮೂಗಬೊಂಬೆಯಲ್ಲಿ ನಂಬಿಕೆಯಿಡುವದಕ್ಕೆ ಏನಾಧಾರ?
19ಮರಕ್ಕೆ ಎಚ್ಚತ್ತುಕೋ, ಜಡವಾದ ಕಲ್ಲಿಗೆ ಎದ್ದೇಳು ಎಂದು
ಅಪ್ಪಣೆಕೊಡುವವನ ಗತಿಯನ್ನು ಅಯ್ಯೋ, ಏನು ಹೇಳಲಿ!
ಇಂಥ ಬೊಂಬೆಯು ಬೋಧಿಸೀತೇ?
ಇಗೋ, ಅದಕ್ಕೆ ಬೆಳ್ಳಿಬಂಗಾರವು ಹೊದಗಿಸಿದೆ,
ಅದರೊಳಗೆ ಶ್ವಾಸವೇನೂ ಇಲ್ಲ.
20ಯೆಹೋವನೋ ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ;
ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ.
Currently Selected:
ಹಬಕ್ಕೂಕ 2: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.