ಆದಿಕಾಂಡ 41
41
ಯೋಸೇಫನು ಅರಸನಿಗೆ ಬಿದ್ದ ಕನಸಿನ ಅರ್ಥವನ್ನು ಹೇಳಿ ಅವನಿಗೆ ಮಂತ್ರಿಯಾದದ್ದು
1ಎರಡು ವರುಷಗಳಾದ ಮೇಲೆ ಫರೋಹನಿಗೆ ಕನಸುಬಿತ್ತು. ಆ ಕನಸು ಏನಂದರೆ - ಅವನು ನೈಲ್‍ನದೀತೀರದಲ್ಲಿ ನಿಂತಿದ್ದನು. 2ಅಷ್ಟರಲ್ಲಿ ಲಕ್ಷಣವಾದ ಏಳು ಕೊಬ್ಬಿದ ಆಕಳುಗಳು ಆ ನದಿಯೊಳಗಿಂದ ಬಂದು ಆಪುಹುಲ್ಲಿನಲ್ಲಿ ಮೇಯುತ್ತಿದ್ದವು. 3ಅವುಗಳ ಹಿಂದೆ ಮೈಯೊಣಗಿ ಬಡವಾದ ಏಳು ಆಕಳುಗಳು ನದಿಯೊಳಗಣಿಂದ ಬಂದು ಮೊದಲು ಕಾಣಿಸಿದ ಆಕಳುಗಳ ಹತ್ತರ ನದೀತೀರದಲ್ಲಿ ನಿಂತವು. 4ಮೈಯೊಣಗಿದ ಈ ಬಡ ಆಕಳುಗಳು ಲಕ್ಷಣವಾದ ಆ ಕೊಬ್ಬಿದ ಆಕಳುಗಳನ್ನು ತಿಂದುಬಿಟ್ಟವು. ಹೀಗೆ ಕಾಣಿಸುವಷ್ಟರಲ್ಲಿ ಫರೋಹನಿಗೆ ಎಚ್ಚರವಾಯಿತು.
5ಅವನು ತಿರಿಗಿ ನಿದ್ರೆಮಾಡಿದಾಗ ಮತ್ತೊಂದು ಕನಸುಬಿತ್ತು. ಅದೇನಂದರೆ - ಒಳ್ಳೇ ಪುಷ್ಟಿಯುಳ್ಳ ಏಳು ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿದವು. 6ಅವುಗಳ ಹಿಂದೆ ಮೂಡಣ ಗಾಳಿಯಿಂದ ಕೆಟ್ಟು ಬತ್ತಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತು ಬಂದವು; 7ಬತ್ತಿಹೋಗಿದ್ದ ಈ ತೆನೆಗಳು ಆ ಏಳು ಒಳ್ಳೇ ಪುಷ್ಟಿಯುಳ್ಳ ತೆನೆಗಳನ್ನು ನುಂಗಿಬಿಟ್ಟವು. ಹೀಗೆ ಕಾಣಿಸುವಷ್ಟರಲ್ಲಿ ಫರೋಹನು ಎಚ್ಚತ್ತು ಅದನ್ನು ಕನಸೆಂದು ತಿಳುಕೊಂಡನು.
8ಬೆಳಿಗ್ಗೆ ಅವನು ಮನದಲ್ಲಿ ಕಳವಳಗೊಂಡು ಐಗುಪ್ತದೇಶದಲ್ಲಿದ್ದ ಎಲ್ಲಾ ಜೋಯಿಸರನ್ನೂ ವಿದ್ವಾಂಸರನ್ನೂ ಕರಸಿ ಅವರಿಗೆ ತನ್ನ ಕನಸನ್ನು ತಿಳಿಸಲಾಗಿ ಅದರ ಅರ್ಥವನ್ನು ಅವನಿಗೆ ಹೇಳಬಲ್ಲವರು ಅವರಲ್ಲಿ ಒಬ್ಬರೂ ಸಿಕ್ಕಲಿಲ್ಲ. 9ಹೀಗಿರುವಾಗ ಪಾನದಾಯಕರಲ್ಲಿ ಮುಖ್ಯಸ್ಥನು ಫರೋಹನಿಗೆ - [ಅರಸನೇ,] ಈ ಹೊತ್ತು ನನ್ನ ತಪ್ಪುಗಳನ್ನು ನೆನಸಿ ಸನ್ನಿಧಿಯಲ್ಲಿ ಅರಿಕೆ ಮಾಡುತ್ತೇನೆ. 10ತಾವು ತಮ್ಮ ಸೇವಕರ ಮೇಲೆ ಸಿಟ್ಟುಗೊಂಡು ನನ್ನನ್ನೂ ಭಕ್ಷ್ಯಕಾರರಲ್ಲಿ ಮುಖ್ಯಸ್ಥನನ್ನೂ ದಳವಾಯಿಯ ಮನೆಯೊಳಗೆ ಕಾವಲಲ್ಲಿರಿಸಿದಾಗ ನಮ್ಮಿಬ್ಬರಿಗೂ ಒಂದೇ ರಾತ್ರಿಯಲ್ಲಿ ಕನಸುಬಿತ್ತು; 11ಒಬ್ಬೊಬ್ಬನ ಕನಸಿಗೆ ಬೇರೆ ಬೇರೆ ಅರ್ಥವಿತ್ತು. 12ಅಲ್ಲಿ ನಮ್ಮ ಸಂಗಡ ಇಬ್ರಿಯನಾದ ಒಬ್ಬ ಪ್ರಾಯಸ್ಥನಿದ್ದನು; ಅವನು ದಳವಾಯಿಯ ದಾಸನು. ನಾವು ಅವನಿಗೆ ನಮ್ಮ ಕನಸುಗಳನ್ನು ತಿಳಿಸಿದಾಗ ಅವನು ಅವುಗಳ ಅರ್ಥವನ್ನು ನಮಗೆ ಹೇಳಿದನು; ನಮ್ಮ ನಮ್ಮ ಕನಸಿನ ಪ್ರಕಾರ ಅರ್ಥವನ್ನು ಹೇಳಿದನು. 13ಮಾತ್ರವಲ್ಲದೆ ಅವನು ನಮಗೆ ಹೇಳಿದ ಅರ್ಥಕ್ಕೆ ಸರಿಯಾಗಿ ಕಾರ್ಯವು ನಡೆಯಿತು; ಅವನು ಹೇಳಿದಂತೆಯೇ ನನ್ನ ಉದ್ಯೋಗವು ತಿರಿಗಿ ನನಗೆ ದೊರಕಿತು; ಭಕ್ಷ್ಯಕಾರರಲ್ಲಿ ಮುಖ್ಯಸ್ಥನೋ ಗಲ್ಲಿಗೆ ಹಾಕಲ್ಪಟ್ಟನು ಅಂದನು. 14ಫರೋಹನು ಇದನ್ನು ಕೇಳಿ ಯೋಸೇಫನನ್ನು ಕರೇ ಕಳುಹಿಸಿದನು. ಯೋಸೇಫನು ಬೇಗನೆ ಸೆರೆಮನೆಯಿಂದ ಬಿಡಿಸಲ್ಪಟ್ಟವನಾಗಿ ಕ್ಷೌರಮಾಡಿಸಿಕೊಂಡು ಬೇರೆ ವಸ್ತ್ರಗಳನ್ನು ಹಾಕಿಕೊಂಡು ಫರೋಹನ ಸನ್ನಿಧಿಗೆ ಬಂದನು.
15ಆಗ ಫರೋಹನು ಯೋಸೇಫನಿಗೆ - ನಾನು ಒಂದು ಕನಸು ಕಂಡಿದ್ದೇನೆ; ಅದರ ಅರ್ಥವನ್ನು ಹೇಳಬಲ್ಲವರು ಯಾರೂ ಇಲ್ಲ. ಆದರೆ ನೀನು ಕನಸನ್ನು ಕೇಳುತ್ತಲೇ ಅದರ ಅರ್ಥವನ್ನು ಹೇಳಬಲ್ಲವನೆಂದು ವರ್ತಮಾನ ಕೇಳಿದ್ದೇನೆ ಎಂದು ಹೇಳಲು 16ಯೋಸೇಫನು - ನನ್ನಲ್ಲಿ ಅಂಥ ಸಾಮರ್ಥ್ಯವೇನೂ ಇಲ್ಲ; ಆದರೆ ದೇವರು ಫರೋಹನಿಗೆ ಶುಭಕರವಾದ ಉತ್ತರವನ್ನು ಕೊಡಬಲ್ಲನೆಂದು ಹೇಳಿದನು.
17ಆಗ ಫರೋಹನು ಯೋಸೇಫನಿಗೆ - ನನ್ನ ಕನಸಿನೊಳಗೆ ನಾನು ನೈಲ್‍ನದೀತೀರದಲ್ಲಿ ನಿಂತಿದ್ದೆನು. 18ನದಿಯೊಳಗಿಂದ ಲಕ್ಷಣವಾದ ಏಳು ಕೊಬ್ಬಿದ ಆಕಳುಗಳು ಬಂದು ಆಪುಹುಲ್ಲಿನಲ್ಲಿ ಮೇಯುತ್ತಿದ್ದವು. 19ಅವುಗಳ ಹಿಂದೆ ಅವಲಕ್ಷಣವಾದ ಕೊಬ್ಬಿಲ್ಲದ ಬಡವಾದ ಬೇರೆ ಏಳು ಆಕಳುಗಳು ಬಂದವು; ಅಂಥ ಬಡವಾದ ಆಕಳುಗಳನ್ನು ನಾನು ಐಗುಪ್ತದೇಶದಲ್ಲಿ ಎಲ್ಲಿಯೂ ನೋಡಿದ್ದಿಲ್ಲ. 20ಅದಲ್ಲದೆ ಕೃಶವಾಗಿದ್ದ ಆ ಬಡ ಆಕಳುಗಳು ಮೊದಲು ಕಾಣಿಸಿದ ಆ ಏಳು ಕೊಬ್ಬಿದ ಆಕಳುಗಳನ್ನು ತಿಂದುಬಿಟ್ಟವು; 21ತಿಂದಾಗ್ಯೂ ತಿಂದವೆಂಬದು ತೋರಲಿಲ್ಲ; ಅವು ಮೊದಲಿದ್ದಂತೆ ಬಡವಾಗಿಯೇ ಇದ್ದವು. ಅಲ್ಲಿಗೆ ಎಚ್ಚರವಾಯಿತು. 22ನನಗೆ ಬಿದ್ದ ಇನ್ನೊಂದು ಕನಸಿನೊಳಗೆ ಏಳು ಒಳ್ಳೇ ಪುಷ್ಟಿಯುಳ್ಳ ತೆನೆಗಳು ಒಂದೇ ದಂಟಿನಲ್ಲಿ ಹುಟ್ಟಿಬಂದವು. 23ಅವುಗಳ ಹಿಂದೆ ಮೂಡಣ ಗಾಳಿಯಿಂದ ಕೆಟ್ಟು ಬತ್ತಿ ಒಣಗಿಹೋಗಿದ್ದ ಬೇರೆ ಏಳು ತೆನೆಗಳು ಮೊಳೆತುಬಂದವು. 24ಬತ್ತಿಹೋಗಿದ್ದ ತೆನೆಗಳು ಆ ಏಳು ಒಳ್ಳೇ ತೆನೆಗಳನ್ನು ನುಂಗಿಬಿಟ್ಟವು. ಈ ಕನಸುಗಳನ್ನು ಜೋಯಿಸರಿಗೆ ತಿಳಿಸಿದೆನು. ಆದರೆ ಅವುಗಳ ಅರ್ಥವನ್ನು ಬಿಚ್ಚಿಹೇಳುವದಕ್ಕೆ ಅವರಲ್ಲಿ ಯಾರಿಂದಲೂ ಆಗಲಿಲ್ಲ.
25ಯೋಸೇಫನು ಫರೋಹನಿಗೆ - ತಾವು ಕಂಡ ಎರಡು ಕನಸುಗಳೂ ಒಂದೇ ವಿಷಯವಾದವುಗಳು. ದೇವರು ತಾನು ಮಾಡಬೇಕೆಂದಿರುವದನ್ನು ಇವುಗಳ ಮೂಲಕ ತಮಗೆ ತಿಳಿಸಿದ್ದಾನೆ. 26ಆ ಏಳು ಒಳ್ಳೆಯ ಆಕಳುಗಳೇ ಆ ಏಳು ವರುಷಗಳು; ಏಳು ಒಳ್ಳೆಯ ತೆನೆಗಳೂ ಏಳು ವರುಷಗಳು; ಎರಡು ಕನಸುಗಳ ಅರ್ಥವೊಂದೇ. 27ಒಳ್ಳೇ ಆಕಳುಗಳ ಹಿಂದೆ ಬಂದ ಅವಲಕ್ಷಣವಾದ ಆ ಬಡ ಆಕಳುಗಳೂ ಮೂಡಣ ಗಾಳಿಯಿಂದ ಕೆಟ್ಟುಹೋಗಿದ್ದ ಆ ಏಳು ಕಾಳಿಲ್ಲದ ತೆನೆಗಳೂ ಬರವುಂಟಾಗುವ ಏಳು ವರುಷಗಳನ್ನು ಸೂಚಿಸುತ್ತವೆ. 28ದೇವರು ತಾನು ಮಾಡಬೇಕೆಂದಿರುವದನ್ನು ತಮಗೆ ತಿಳಿಸಿದ್ದಾನೆಂಬದಾಗಿ ನಾನು ಅರಿಕೆ ಮಾಡಿದೆನಷ್ಟೆ. 29ಕೇಳಯ್ಯಾ, ಐಗುಪ್ತದೇಶದಲ್ಲೆಲ್ಲಾ ಬಹುವಿಶೇಷವಾದ 30ಏಳು ಸುಭಿಕ್ಷ ವರುಷಗಳೂ ಅವುಗಳ ತರುವಾಯ ಏಳು ದುರ್ಭಿಕ್ಷವರುಷಗಳೂ ಬರುವವು. ಆಗ ಐಗುಪ್ತದೇಶದವರು ಮೊದಲಿದ್ದ ಸುಭಿಕ್ಷವನ್ನು ಮರೆತುಬಿಡುವರು; ಆ ಬರದಿಂದ ದೇಶವು ಹಾಳಾಗಿ ಹೋಗುವದು. 31ಮುಂದೆ ಬರುವ ಕ್ಷಾಮವು ಅತ್ಯಂತ ಘೋರವಾಗಿರುವದರಿಂದ ಮೊದಲಿದ್ದ ಸಮೃದ್ಧಿಯ ಗುರುತೇ ಕಾಣಿಸದೆ ಹೋಗುವದು. 32ಫರೋಹನಿಗೆ ಕನಸು ಎರಡು ವಿಧವಾಗಿ ಬಿದ್ದದ್ದರಿಂದ ದೇವರು ಈ ಕಾರ್ಯವನ್ನು ನಿಶ್ಚಯಿಸಿ ಇದನ್ನು ಬೇಗ ಮಾಡುವನೆಂಬದಾಗಿ ತಿಳುಕೊಳ್ಳಬೇಕು. 33ಆದದರಿಂದ ತಾವು ವಿವೇಕಿಯೂ ಬುದ್ಧಿವಂತನೂ ಆಗಿರುವ ಪುರುಷನನ್ನು ಆರಿಸಿಕೊಂಡು ಅವನನ್ನು ಐಗುಪ್ತದೇಶದ ಮೇಲೆ ಅಧಿಕಾರಿಯಾಗಿ ನೇವಿುಸಬೇಕು. 34ಮತ್ತು ತಾವು ಒಂದು ಕೆಲಸ ಮಾಡಬೇಕು; ದೇಶದ ಎಲ್ಲಾ ಭಾಗಗಳಲ್ಲಿಯೂ ಕರಣೀಕರನ್ನು ನೇವಿುಸಿ ಅವರ ಕೈಯಿಂದ ಸುಭಿಕ್ಷವಾದ ಏಳು ವರುಷಗಳಲ್ಲಿ ದೇಶದ ಬೆಳೆಯೊಳಗೆ ಐದನೆಯ ಪಾಲನ್ನು ಕಂದಾಯವಾಗಿ ಎತ್ತಿಸಬೇಕು. 35ಅವರು ಮುಂದಣ ಒಳ್ಳೇ ವರುಷಗಳಲ್ಲಿ ಆಹಾರಪದಾರ್ಥಗಳನ್ನೂ ದವಸಧಾನ್ಯಗಳನ್ನೂ ಕೂಡಿಸಿ ಫರೋಹನ ವಶದೊಳಗೆ ಪಟ್ಟಣಗಳಲ್ಲಿಟ್ಟು ಜೋಪಾನ ಮಾಡಲಿ. 36ಆ ಆಹಾರಪದಾರ್ಥಗಳನ್ನು ಇಟ್ಟು ಕೂಡಿಸಿಕೊಳ್ಳುವದರಿಂದ ಐಗುಪ್ತದೇಶದಲ್ಲಿ ದುರ್ಭಿಕ್ಷವುಂಟಾಗುವ ಏಳು ವರುಷಗಳಲ್ಲಿ ಜನರು ಕ್ಷಾಮದಿಂದ ಸಾಯುವದಿಲ್ಲ ಎಂದು ಹೇಳಿದನು.
37ಆ ಮಾತು ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೇದಾಗಿ ತೋಚಿದ್ದರಿಂದ 38ಫರೋಹನು ತನ್ನ ಪರಿವಾರದವರಿಗೆ - ಈತನಲ್ಲಿ ದೇವರ ಆತ್ಮ ಉಂಟಲ್ಲಾ; 39ಈತನಿಗಿಂತ ಯೋಗ್ಯನಾದ ಪುರುಷನು ನಮಗೆ ಸಿಕ್ಕಾನೇ ಎಂದು ಹೇಳಿ ಯೋಸೇಫನಿಗೆ - ದೇವರು ಇದನ್ನೆಲ್ಲಾ ನಿನಗೇ ತಿಳಿಸಿರುವದರಿಂದ ನಿನಗೆ ಸಮಾನನಾದ ಬುದ್ಧಿ ವಿವೇಕಗಳುಳ್ಳ ಪುರುಷನು ಯಾವನೂ ಇಲ್ಲ; 40ನೀನೇ ಅರಮನೆಯಲ್ಲಿ ಸರ್ವಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರೂ ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು ಎಂದು ಹೇಳಿದನು. 41ಫರೋಹನು ಯೋಸೇಫನಿಗೆ - ನೋಡು ಐಗುಪ್ತದೇಶದ ಮೇಲೆಲ್ಲಾ ನಿನ್ನನ್ನು ಅಧಿಕಾರಿಯನ್ನಾಗಿ ಇಟ್ಟಿದ್ದೇನೆ ಎಂದು ಹೇಳಿ 42ತನ್ನ ಕೈಯಿಂದ ಮುದ್ರಿಕೆಯನ್ನು ತೆಗೆದು ಯೋಸೇಫನ ಕೈಗೆ ಇಟ್ಟು ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರಪಣಿಯನ್ನು ಹಾಕಿಸಿ 43ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ ಅಡ್ಡಬೀಳಿರಿ#41.43 ಮೂಲ: ಅಬ್ರೇಕ್. ಎಂದು ಪ್ರಕಟಣೆಮಾಡಿಸಿ ಅವನನ್ನು ಐಗುಪ್ತದೇಶಕ್ಕೆ ಸರ್ವಾಧಿಕಾರಿಯನ್ನಾಗಿ ಇಟ್ಟನು. 44ಇನ್ನೂ ಫರೋಹನು ಅವನಿಗೆ - ನಾನು ಫರೋಹನು; ನಿನ್ನ ಅಪ್ಪಣೆಯಿಲ್ಲದೆ ಐಗುಪ್ತದೇಶದಲ್ಲೆಲ್ಲಾ ಒಬ್ಬನೂ ಕೈಯನ್ನಾಗಲಿ ಕಾಲನ್ನಾಗಲಿ ಕದಲಿಸಕೂಡದು ಎಂದು ಹೇಳಿದನು. 45ಮತ್ತು ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟು ಓನ್ ಎಂಬ ಗುರುಪೀಠದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯನ್ನು ಅವನಿಗೆ ಮದುವೆ ಮಾಡಿಸಿದನು. ಯೋಸೇಫನು ಐಗುಪ್ತದೇಶದ ಮೇಲೆ ಅಧಿಕಾರಿಯಾಗಿ ಹೊರಟನು.
ಏಳು ವರುಷದ ಸುಭಿಕ್ಷವು ಕಳೆದ ಮೇಲೆ ದೊಡ್ಡ ಬರ ಉಂಟಾದದ್ದು
46ಯೋಸೇಫನು ಐಗುಪ್ತದೇಶದ ಅರಸನಾದ ಫರೋಹನ ಸನ್ನಿಧಿಯಲ್ಲಿ ನಿಂತಾಗ ಮೂವತ್ತು ವರುಷದವನಾಗಿದ್ದನು. ಅವನು ಫರೋಹನ ಸನ್ನಿಧಿಯಿಂದ ಹೊರಟು ಐಗುಪ್ತದೇಶವನ್ನೆಲ್ಲಾ ಸಂಚಾರ ಮಾಡಿದನು. 47ಸುಭಿಕ್ಷವಾದ ಏಳು ವರುಷಗಳಲ್ಲಿ ಭೂವಿುಯು ಹೇರಳವಾಗಿ ಫಲಕೊಟ್ಟಿತು. 48ಐಗುಪ್ತದೇಶದಲ್ಲಿ ಸುಭಿಕ್ಷವಾದ ಆ ಏಳು ವರುಷಗಳ ಬೆಳೆಯನ್ನು ಯೋಸೇಫನು ಕೂಡಿಸಿ ಪಟ್ಟಣಗಳಲ್ಲಿ ಇರಿಸಿದನು; ಒಂದೊಂದು ಪಟ್ಟಣದ ಸುತ್ತಲಿದ್ದ ಹೊಲಗಳ ಬೆಳೆಯನ್ನು ಆಯಾ ಪಟ್ಟಣದಲ್ಲಿಯೇ ಕೂಡಿಸಿಟ್ಟನು. 49ಅವನು ದವಸಧಾನ್ಯವನ್ನು ಸಮುದ್ರದ ಉಸಬಿನಷ್ಟು ರಾಶಿರಾಶಿಯಾಗಿ ಕೂಡಿಸಿ ಲೆಕ್ಕಮಾಡುವದನ್ನು ಬಿಟ್ಟು ಬಿಟ್ಟನು; ಅದನ್ನು ಲೆಕ್ಕ ಮಾಡುವದಕ್ಕೆ ಆಗದೆಹೋಯಿತು.
50ಬರಗಾಲ ಬರುವದಕ್ಕಿಂತ ಮುಂಚೆ ಯೋಸೇಫನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು. ಇವರು ಓನ್ ಪಟ್ಟಣದ ಆಚಾರ್ಯನಾಗಿದ್ದ ಪೋಟೀಫೆರನ ಮಗಳಾದ ಆಸನತೆಂಬಾಕೆಯಲ್ಲಿ ಅವನಿಗೆ ಹುಟ್ಟಿದರು. 51ಚೊಚ್ಚಲುಮಗನು ಹುಟ್ಟಿದಾಗ ಯೋಸೇಫನು - ನಾನು ನನ್ನ ಎಲ್ಲಾ ಕಷ್ಟವನ್ನೂ ತಂದೆಯ ಮನೆಯವರನ್ನೂ ಮರೆತುಬಿಡುವಂತೆ ದೇವರು ಮಾಡಿದ್ದಾನಲ್ಲಾ ಎಂದು ಹೇಳಿ ಅವನಿಗೆ ಮನಸ್ಸೆ#41.51 ಮನಸ್ಸೆ ಅಂದರೆ, ಮರಸುವವನು. ಎಂದು ಹೆಸರಿಟ್ಟನು. 52ಎರಡನೆಯ ಮಗನು ಹುಟ್ಟಿದಾಗ ಅವನು - ನನಗೆ ಸಂಕಟ ಬಂದ ದೇಶದಲ್ಲೇ ದೇವರು ಅಭಿವೃದ್ಧಿಯನ್ನು ದಯಪಾಲಿಸಿದ್ದಾನೆಂದು ಹೇಳಿ ಆ ಮಗನಿಗೆ ಎಫ್ರಾಯೀಮ್#41.52 ಎಫ್ರಾಯೀಮ್ ಅಂದರೆ, ಅಭಿವೃದ್ಧಿ. ಆದಿ. 49.22; ಹೋಶೇ. 13.15 ನೋಡಿರಿ. ಎಂದು ಹೆಸರಿಟ್ಟನು.
53ಐಗುಪ್ತದೇಶದಲ್ಲಿ ಸುಭಿಕ್ಷದ ಏಳು ವರುಷಗಳು ಮುಗಿದ ಮೇಲೆ 54ಯೋಸೇಫನು ಹೇಳಿದ್ದ ಪ್ರಕಾರ ಕ್ಷಾಮದ ಏಳು ವರುಷಗಳಿಗೆ ಪ್ರಾರಂಭವಾಯಿತು. ಬರವು ಸುತ್ತಲಿದ್ದ ಎಲ್ಲಾ ದೇಶಗಳಲ್ಲಿಯೂ ಹಬ್ಬಿತು; ಐಗುಪ್ತದೇಶದಲ್ಲಿ ಮಾತ್ರ ಆಹಾರ ದೊರಕುವದು. 55ಐಗುಪ್ತದೇಶಕ್ಕೆಲ್ಲಾ ಬರಬಂದಾಗ ಪ್ರಜೆಗಳು ಆಹಾರಬೇಕೆಂದು ಫರೋಹನಿಗೆ ಮೊರೆಯಿಟ್ಟುಕೊಂಡರು. ಅವನು ಅವರಿಗೆ - ಯೋಸೇಫನ ಬಳಿಗೆ ಹೋಗಿರಿ, ಅವನ ಮಾತಿನ ಮೇರೆಗೆ ಮಾಡಿರಿ ಎಂದು ಹೇಳಿದನು. 56ಬರವು ಲೋಕದಲ್ಲೆಲ್ಲಾ ಹರಡಿಕೊಂಡಿರುವಾಗ ಯೋಸೇಫನು ಕಣಜಗಳನ್ನೆಲ್ಲಾ ತೆಗಿಸಿ ಐಗುಪ್ತ್ಯರಿಗೆ ಧಾನ್ಯವನ್ನು ಮಾರಿಸಿದನು. ಐಗುಪ್ತದೇಶದಲ್ಲಿ ಬರವು ಬಹು ಘೋರವಾಗಿತ್ತು. 57ಇದಲ್ಲದೆ ಭೂಲೋಕದಲ್ಲೆಲ್ಲಾ ಬರವು ಭಯಂಕರವಾಗಿದ್ದದರಿಂದ ಎಲ್ಲಾ ದೇಶದವರೂ ಧಾನ್ಯವನ್ನು ಕೊಂಡುಕೊಳ್ಳುವದಕ್ಕಾಗಿ ಐಗುಪ್ತಕ್ಕೆ ಯೋಸೇಫನ ಬಳಿಗೆ ಬಂದರು.
Currently Selected:
ಆದಿಕಾಂಡ 41: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.