YouVersion Logo
Search Icon

ಆದಿಕಾಂಡ 31

31
ಯಾಕೋಬನು ಸ್ವದೇಶಕ್ಕೆ ಓಡಿಬಂದದ್ದು; ಲಾಬಾನನ ಸಂಗಡ ಒಡಂಬಡಿಕೆ ಮಾಡಿಕೊಂಡದ್ದು
1ನಮ್ಮ ತಂದೆಯ ಆಸ್ತಿಯೆಲ್ಲಾ ಯಾಕೋಬನ ಪಾಲಾಯಿತು; ನಮ್ಮ ತಂದೆಯ ಆಸ್ತಿಯಿಂದಲೇ ಅವನಿಗೆ ಇಷ್ಟು ಐಶ್ವರ್ಯವುಂಟಾಯಿತು ಎಂಬದಾಗಿ ಲಾಬಾನನ ಮಕ್ಕಳು ಹೇಳಿಕೊಳ್ಳುವ ಮಾತುಗಳು ಯಾಕೋಬನ ಕಿವಿಗೆ ಬಿದ್ದವು. 2ಇದಲ್ಲದೆ ಅವನು ಲಾಬಾನನ ಮುಖಭಾವವನ್ನು ನೋಡಿದಾಗ ಅದು ಮೊದಲಿದ್ದಂತೆ ತೋರಲಿಲ್ಲ. 3ಮತ್ತು ಯೆಹೋವನು ಅವನಿಗೆ - ನಿನ್ನ ತಂದೆತಾತಂದಿರ ದೇಶಕ್ಕೂ ನಿನ್ನ ಬಂಧುಗಳ ಬಳಿಗೂ ತಿರಿಗಿ ಹೋಗು; ನಾನು ನಿನ್ನೊಂದಿಗೆ ಇರುವೆನು ಎಂದು ಹೇಳಿದನು. 4ಹೀಗಿರುವದರಿಂದ ಯಾಕೋಬನು ರಾಹೇಲಳನ್ನೂ ಲೇಯಳನ್ನೂ ತಾನು ಆಡುಕುರಿಗಳನ್ನು ಮೇಯಿಸುತ್ತಿದ್ದ ಅಡವಿಗೆ ಕರಸಿಕೊಂಡು 5ಅವರಿಗೆ ಹೇಳಿದ್ದೇನಂದರೆ - ನಿಮ್ಮ ತಂದೆಯ ಮುಖಭಾವವು ನನ್ನ ವಿಷಯದಲ್ಲಿ ಮೊದಲಿದ್ದಂತೆ ಇಲ್ಲವೆಂದು ತೋರಬಂತು. ಆದರೂ ನನ್ನ ತಂದೆಯ ದೇವರು ನನ್ನೊಂದಿಗೆ ಇದ್ದಾನೆ. 6ನಾನು ನಿಮ್ಮ ತಂದೆಯ ಸೇವೆಯನ್ನು ಸಾಹಸದಿಂದ ಮಾಡಿದ್ದೇನೆ; ನೀವೂ ಅದನ್ನು ಬಲ್ಲಿರಿ. 7ಅವನು ಚಪಲಚಿತ್ತನಾಗಿ ಹತ್ತುಸಾರಿ ನನ್ನ ಸಂಬಳವನ್ನು ಬದಲಾಯಿಸಿ ವಂಚಿಸಿದರೂ ನನಗೆ ಕೇಡುಮಾಡುವದಕ್ಕೆ ದೇವರು ಅವನಿಗೆ ಅವಕಾಶಕೊಡಲಿಲ್ಲ. 8ಚುಕ್ಕೆಯುಳ್ಳವುಗಳನ್ನು ನಿನ್ನ ಸಂಬಳಕ್ಕೆ ತಕ್ಕೋ ಎಂದು ಅವನು ಹೇಳಿದಾಗ ಹಿಂಡಿನ ಆಡುಕುರಿಗಳೆಲ್ಲವೂ ಚುಕ್ಕೆಯುಳ್ಳ ಮರಿಗಳನ್ನೇ ಈದವು. ರೇಖೆಗಳಿರುವವುಗಳನ್ನು ಸಂಬಳಕ್ಕೆ ತಕ್ಕೋ ಎಂದು ಹೇಳಿದಾಗ ಆಡುಕುರಿಗಳೆಲ್ಲವೂ ರೇಖೆಯುಳ್ಳ ಮರಿಗಳನ್ನು ಈದವು. 9ಹೀಗೆ ದೇವರು ನಿಮ್ಮ ತಂದೆಯ ಆಡುಕುರಿಗಳನ್ನು ಅವನಿಂದ ತೆಗೆದು ನನಗೆ ಕೊಟ್ಟನು. 10ಕುರಿಗಳು ಸಂಗಮಮಾಡುವ ಕಾಲದಲ್ಲಿ ನಾನು ಕನಸಿನಲ್ಲಿ ಕಣ್ಣೆತ್ತಿ ನೋಡಿದಾಗ ಕುರಿಗಳ ಮೇಲೆ ಹಾರಿದ ಟಗರುಗಳೆಲ್ಲವೂ ರೇಖೆ ಚುಕ್ಕೆ ಮಚ್ಚೆಗಳುಳ್ಳವುಗಳಾಗಿ ಕಾಣಿಸಿದವು. 11ಆ ಕನಸಿನಲ್ಲಿ ದೇವದೂತನು - ಯಾಕೋಬನೇ ಎಂದು ಕರೆಯಲು ನಾನು - ಇದ್ದೇನೆ ಎಂದು ಹೇಳಿದಾಗ 12ಆತನು ನನಗೆ - ಲಾಬಾನನು ನಿನ್ನ ವಿಷಯದಲ್ಲಿ ನಡಕೊಂಡ ರೀತಿಯನ್ನು ನಾನು ನೋಡಿದ್ದೇನೆ; ಆದದರಿಂದ ನೀನು ಕಣ್ಣೆತ್ತಿ ನೋಡು; ಕುರಿಗಳ ಮೇಲೆ ಹಾರುವ ಟಗರುಗಳೆಲ್ಲವೂ ರೇಖೆ ಚುಕ್ಕೆ ಮಚ್ಚೆಗಳುಳ್ಳವುಗಳಾಗಿವೆ. 13ಬೇತೇಲಿನಲ್ಲಿ ನಿನಗೆ ಕಾಣಿಸಿದ ದೇವರು ನಾನೇ; ಅಲ್ಲಿ ಕಂಬದ ಮೇಲೆ ಎಣ್ಣೆಹೊಯಿದು ನನಗೆ ಹರಕೆ ಮಾಡಿಕೊಂಡಿಯಷ್ಟೆ. ಈಗ ನೀನೆದ್ದು ಈ ದೇಶವನ್ನು ಬಿಟ್ಟು ನೀನು ಹುಟ್ಟಿದ ದೇಶಕ್ಕೆ ತಿರಿಗಿಹೋಗು ಎಂದು ಹೇಳಿದನು.
14ಯಾಕೋಬನು ಈ ಮಾತುಗಳನ್ನಾಡಿದಾಗ ರಾಹೇಲಳು ಮತ್ತು ಲೇಯಳು - ನಮ್ಮ ತಂದೆಯ ಮನೆಯಲ್ಲಿ ನಮಗೆ ಪಾಲೂ ಬಾಧ್ಯತೆಯೂ ಇನ್ನೇನದೆ? 15ಅವನು ನಮ್ಮನ್ನು ಅನ್ಯರೆಂದು ಎಣಿಸುತ್ತಾನಲ್ಲಾ; ಅವನು ನಮ್ಮನ್ನು ಮಾರಿ ನಮ್ಮ ಮೂಲಕ ಸಿಕ್ಕಿದ ದ್ರವ್ಯವನ್ನು ತಾನೇ ನುಂಗಿಬಿಟ್ಟನು. 16ಆಗಲಿ; ದೇವರು ನಮ್ಮ ತಂದೆಯಿಂದ ತೆಗೆದ ಆಸ್ತಿಯೆಲ್ಲಾ ನಮಗೂ ನಮ್ಮ ಮಕ್ಕಳಿಗೂ ಬಂತಲ್ಲಾ. ಆದದರಿಂದ ದೇವರು ನಿನಗೆ ಹೇಳಿದಂತೆಯೇ ಮಾಡು ಎಂದು ಉತ್ತರ ಕೊಟ್ಟರು. 17ಆಗ ಯಾಕೋಬನು ತನ್ನ ಮಕ್ಕಳನ್ನೂ ಹೆಂಡತಿಯರನ್ನೂ ಒಂಟೆಗಳ ಮೇಲೆ ಹತ್ತಿಸಿ 18ತಾನು ಗಳಿಸಿಕೊಂಡಿದ್ದ ಎಲ್ಲಾ ಆಸ್ತಿಯನ್ನೂ ಪದ್ದನ್ಅರಾಮ್ ದೇಶದಲ್ಲಿ ಸಂಪಾದಿಸಿಕೊಂಡಿದ್ದ ಎಲ್ಲಾ ಪಶುಗಳನ್ನೂ ತೆಗೆದುಕೊಂಡು ಕಾನಾನ್ ದೇಶಕ್ಕೆ ತನ್ನ ತಂದೆಯಾದ ಇಸಾಕನ ಬಳಿಗೆ ಹೋಗುವದಕ್ಕಾಗಿ ಹೊರಟನು.
19ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುವದಕ್ಕೋಸ್ಕರ ಹೋಗಿದ್ದನು. ಹೀಗಿರುವಲ್ಲಿ ರಾಹೇಲಳು ತನ್ನ ತಂದೆಯ ಮನೆಯಲ್ಲಿದ್ದ ವಿಗ್ರಹಗಳನ್ನು ಕದ್ದುಕೊಂಡಳು. 20ಅದಲ್ಲದೆ ಯಾಕೋಬನು ತಾನು ಹೋಗುತ್ತೇನೆಂದು ಅರಾಮ್ಯನಾದ ಲಾಬಾನನಿಗೆ ತಿಳಿಸದೆ ಅವನನ್ನು ಮೋಸಗೊಳಿಸಿ ಓಡಿಹೋದನು. 21ಹೀಗೆ ಅವನು ತನ್ನ ಆಸ್ತಿಯನ್ನೆಲ್ಲಾ ತೆಗೆದುಕೊಂಡು ಓಡಿಹೋಗಿ ಯೂಫ್ರೇಟೀಸ್ ಮಹಾನದಿಯನ್ನು ದಾಟಿ ಗಿಲ್ಯಾದೆಂಬ ಬೆಟ್ಟದ ಸೀಮೆಯ ದಾರಿಯನ್ನು ಹಿಡಿದನು.
22ಯಾಕೋಬನು ಓಡಿಹೋದ ವರ್ತಮಾನವು ಮೂರನೆಯ ದಿನದಲ್ಲಿ ಲಾಬನನಿಗೆ ತಿಳಿದುಬರಲು 23ಅವನು ತನ್ನ ಬಂಧು ಜನರನ್ನು ಕೂಡಿಕೊಂಡು, ಏಳುದಿನ ಪ್ರಯಾಣಮಾಡಿ ಯಾಕೋಬನನ್ನು ಹಿಂದಟ್ಟಿ, ಗಿಲ್ಯಾದ್ ಬೆಟ್ಟದ ಸೀಮೆಯಲ್ಲಿ ಅವನನ್ನು ಸಂಧಿಸಿದನು. 24ಆದರೆ ರಾತ್ರಿಯಲ್ಲಿ ದೇವರು ಅರಾಮ್ಯನಾದ ಲಾಬಾನನ ಕನಸಿನಲ್ಲಿ ಬಂದು - ನೋಡಿಕೋ, ನೀನು ಯಾಕೋಬನಿಗೆ ಏನೂ#31.24 ಮೂಲ: ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ. ಅನ್ನಬೇಡ ಎಂದು ಹೇಳಿದನು. 25ಲಾಬಾನನು ಯಾಕೋಬನನ್ನು ಸಂಧಿಸಿದಾಗ ಯಾಕೋಬನು ಬೆಟ್ಟದಲ್ಲಿ ತನ್ನ ಗುಡಾರವನ್ನು ಹಾಕಿಸಿದನು. ಲಾಬಾನನೂ ತನ್ನವರೊಡನೆ ಅದೇ ಗಿಲ್ಯಾದ್ ಬೆಟ್ಟದಲ್ಲಿ ಗುಡಾರವನ್ನು ಹಾಕಿಸಿದ್ದನು.
26ಲಾಬಾನನು ಯಾಕೋಬನಿಗೆ - ಇದೇನು ನೀನು ಮಾಡಿದ್ದು? ನೀನು ನನ್ನ ಹೆಣ್ಣುಮಕ್ಕಳನ್ನು ಯುದ್ಧದಲ್ಲಿ ಸೆರೆಹಿಡಿದವರಂತೆ ತೆಗೆದುಕೊಂಡು ನನಗೆ ಏನೂ ಹೇಳದೆ ಓಡಿ ಬಂದಿಯಲ್ಲಾ. 27ಯಾಕೆ ನನ್ನನ್ನು ಮೋಸಗೊಳಿಸಿ ಕಳ್ಳತನದಿಂದ ಬಂದಿ? ನನಗೆ ತಿಳಿಸಿದ್ದರೆ ನಾನು ಸಂಗೀತಮಾಡಿಸಿ ಮದ್ದಳೆ, ವೀಣೆ ಮುಂತಾದ ವಾದ್ಯಗಳೊಡನೆ ಸಂತೋಷದಿಂದ ನಿನ್ನನ್ನು ಸಾಗಕಳುಹಿಸುತ್ತಿದ್ದೆನು. 28ನನ್ನ ಹೆಣ್ಣುಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಡುವದಕ್ಕಾದರೂ ಆಗದಂತೆ ಮಾಡಿದಿ. ನೀನು ಮಾಡಿದ್ದು ಹುಚ್ಚು ಕೆಲಸವೇ ಸರಿ. 29ನಿಮಗೆ ಕೇಡುಮಾಡುವದಕ್ಕೆ ನನ್ನಲ್ಲಿ ಸಾಮರ್ಥ್ಯವುಂಟು; ಆದರೆ ಹೋದ ರಾತ್ರಿಯಲ್ಲಿ ನಿಮ್ಮ ತಂದೆಯ ದೇವರು - ಯಾಕೋಬನಿಗೆ ಏನೂ ಅನ್ನಬೇಡ ನೋಡಿಕೋ ಎಂದು ನನಗೆ ಎಚ್ಚರಿಸಿದನು. 30ಆದರೆ ತಂದೆಯ ಮನೆಗೆ ಹೋಗುವದಕ್ಕೆ ನಿನಗೆ ಬಹಳ ಆಶೆಯಿರುವದರಿಂದ ಹೋಗಬೇಕಾಯಿತು. ಅದಿರಲಿ; ನನ್ನ ದೇವರುಗಳನ್ನು ಕದ್ದದ್ದು ಯಾಕೆ ಎಂದು ಹೇಳಿದನು. 31ಅದಕ್ಕೆ ಯಾಕೋಬನು - ನೀನು ನಿನ್ನ ಹೆಣ್ಣುಮಕ್ಕಳನ್ನು ಬಲಾತ್ಕಾರದಿಂದ ತೆಗೆದುಕೊಳ್ಳುವಿ ಎಂದು ಭಯಪಟ್ಟು [ಹೀಗೆ ಹೊರಟು ಬಂದೆನು]. 32ನಿನ್ನ ದೇವರುಗಳು ಯಾರ ಬಳಿಯಲ್ಲಿ ಸಿಕ್ಕುತ್ತವೆಯೋ ಅವನು ಸಾಯಲಿ. ನಮ್ಮ ಬಂಧುಗಳ ಎದುರಾಗಿ ನನ್ನ ಸೊತ್ತನ್ನು ಪರೀಕ್ಷಿಸಬಹುದು; ಅದರಲ್ಲಿ ನಿನ್ನದೇನಾದರೂ ಸಿಕ್ಕಿದರೆ ಅದನ್ನು ತೆಗೆದುಕೋ ಎಂದು ಹೇಳಿದನು. ರಾಹೇಲಳು ಆ ದೇವರುಗಳನ್ನು ಕದ್ದದ್ದು ಯಾಕೋಬನಿಗೆ ತಿಳಿದಿರಲಿಲ್ಲ. 33ಲಾಬಾನನು ಯಾಕೋಬನ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಆ ಇಬ್ಬರು ದಾಸಿಯರ ಗುಡಾರದಲ್ಲಿಯೂ ಹುಡುಕಿದನು. ಆದರೂ ಅವನಿಗೇನೂ ಸಿಕ್ಕಲಿಲ್ಲ. ಲೇಯಳ ಗುಡಾರವನ್ನು ಬಿಟ್ಟು ರಾಹೇಲಳ ಗುಡಾರಕ್ಕೆ ಬಂದನು. 34ರಾಹೇಲಳು ಆ ವಿಗ್ರಹಗಳನ್ನು ತೆಗೆದುಕೊಂಡು ಒಂಟೆಯ ಸಬರದೊಳಗಿಟ್ಟು ಅವುಗಳ ಮೇಲೆ ಕೂತಿದ್ದಳು. ಲಾಬಾನನು ಗುಡಾರದಲ್ಲಿದ್ದ ಸಾಮಾನನ್ನೆಲ್ಲಾ ಮುಟ್ಟಿಮುಟ್ಟಿ ನೋಡಿದರೂ ಅವುಗಳನ್ನು ಕಾಣಲಿಲ್ಲ. 35ರಾಹೇಲಳು ತನ್ನ ತಂದೆಗೆ - ಅಪ್ಪಾ, ನಾನು ನಿನ್ನ ಮುಂದೆ ಎದ್ದು ನಿಂತುಕೊಳ್ಳದೆ ಹೋದರೂ ಕೋಪಿಸಿಕೊಳ್ಳಬೇಡ; ನಾನು ಮುಟ್ಟಾಗಿದ್ದೇನೆ ಎಂದು ಹೇಳಿದ್ದರಿಂದ ಅವನು ಚೆನ್ನಾಗಿ ಹುಡುಕಿದರೂ ಆ ವಿಗ್ರಹಗಳನ್ನು ಕಂಡುಕೊಳ್ಳಲಿಲ್ಲ.
36ಆಗ ಯಾಕೋಬನು ಕೋಪಿಸಿಕೊಂಡು ಲಾಬಾನನನ್ನು ಗದರಿಸಿ - ನೀನು ಇಷ್ಟು ಆತುರಪಟ್ಟು ನನ್ನನ್ನು ಹಿಂದಟ್ಟಿ ಬರುವಂತೆ ನಾನೇನು ದ್ರೋಹಮಾಡಿದೆನು? 37ನನ್ನ ಸಾಮಾನನ್ನೆಲ್ಲಾ ಪರೀಕ್ಷಿಸಿ ನೋಡುವಂತೆ ನಾನೇನು ತಪ್ಪುಮಾಡಿದೆನು? ನಿನ್ನ ಸೊತ್ತು ಏನಾದರೂ ನನ್ನಲ್ಲಿ ಸಿಕ್ಕಿದೆಯೋ? ನನ್ನವರ ಮುಂದೆಯೂ ನಿನ್ನವರ ಮುಂದೆಯೂ ಅದನ್ನು ತಂದಿಡು ನೋಡೋಣ; ಇವರೇ ನಮ್ಮಿಬ್ಬರ ನ್ಯಾಯವನ್ನು ತೀರಿಸಲಿ. 38ನಾನು ಇಪ್ಪತ್ತು ವರುಷ ನಿನ್ನ ಬಳಿಯಲ್ಲಿದ್ದೆನಲ್ಲಾ. ನಿನ್ನ ಆಡುಕುರಿಗಳು ಕಂದು ಹಾಕಲಿಲ್ಲ; ನಿನ್ನ ಹಿಂಡಿನ ಟಗರುಗಳನ್ನು ನಾನೇನೂ ತಿಂದುಬಿಡಲಿಲ್ಲ; 39ಕಾಡುಮೃಗಗಳು ಕೊಂದ ಪಶುಗಳನ್ನು ನಿನ್ನ ಭಾಗಕ್ಕೆ ಹಾಕದೆ ನಾನೇ ಬದಲುಕೊಟ್ಟೆನು; ಹಗಲಾಗಲಿ ಇರುಳಾಗಲಿ ಕದ್ದುಹೋದದ್ದರ ಲೆಕ್ಕವನ್ನು ನನ್ನಿಂದಲೇ ತೆಗೆದುಕೊಂಡಿ; 40ಹಗಲಲ್ಲಿ ಬಿಸಿಲಿನಿಂದಲೂ ಇರುಳಲ್ಲಿ ಚಳಿಯಿಂದಲೂ ಬಾಧೆಪಟ್ಟೆನು; ನಿದ್ದೆ ಮಾಡುವದಕ್ಕಾದರೂ ಅವಕಾಶವಾಗಲಿಲ್ಲ; ನನ್ನ ಸ್ಥಿತಿ ಹೀಗಿತ್ತು. 41ಇಪ್ಪತ್ತು ವರುಷ ನಿನ್ನ ಮನೆಯಲ್ಲಿದ್ದೆನು; ನಿನ್ನಿಬ್ಬರ ಹೆಣ್ಣುಮಕ್ಕಳಿಗಾಗಿ ಹದಿನಾಲ್ಕು ವರುಷವೂ ನಿನ್ನ ಆಡುಕುರಿಗಳಿಗಾಗಿ ಆರು ವರುಷವೂ ಸೇವೆ ಮಾಡಿದೆನು. ನೀನು ಹತ್ತು ಸಾರಿ ನನ್ನ ಸಂಬಳವನ್ನು ಬದಲಾಯಿಸಿದಿ. 42ನನ್ನ ಹಿರಿಯರ ದೇವರು, ಅಂದರೆ ಅಬ್ರಹಾಮನ ದೇವರೂ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರೂ ಆಗಿರುವಾತನು, ನನ್ನ ಪಕ್ಷದಲ್ಲಿ ಇರದಿದ್ದರೆ ನಿಶ್ಚಯವಾಗಿ ನೀನು ನನ್ನನ್ನು ಬರಿಗೈಯಾಗಿ ಕಳುಹಿಸುತ್ತಿದ್ದಿ. ದೇವರು ನನ್ನ ಕಷ್ಟವನ್ನೂ ನಾನು ಪಟ್ಟ ಪ್ರಯಾಸವನ್ನೂ ನೋಡಿದ್ದರಿಂದಲೇ ನಿನ್ನೆಯ ರಾತ್ರಿ ನಿನ್ನನ್ನು ಗದರಿಸಿದನು ಅಂದನು.
43ಅದಕ್ಕೆ ಲಾಬಾನನು ಯಾಕೋಬನಿಗೆ - ಈ ಹೆಂಗಸರು ನನ್ನ ಕುಮಾರ್ತೆಗಳಲ್ಲವೇ, ಈ ಮಕ್ಕಳು ನನ್ನ ಮೊಮ್ಮಕ್ಕಳಲ್ಲವೇ, ಈ ಹಿಂಡುಗಳೂ ನನ್ನವೇ, ನಿನ್ನ ಕಣ್ಣಮುಂದೆ ಇರುವದೆಲ್ಲವೂ ನನ್ನದಲ್ಲವೇ. ಆದರೆ ಈ ನನ್ನ ಕುಮಾರ್ತೆಗಳಿಗೋಸ್ಕರವೂ ಇವರು ಹೆತ್ತ ಮಕ್ಕಳಿಗೋಸ್ಕರವೂ ಈಗ ನಾನೇನು ಮಾಡುವೆನು? 44ನಾವಿಬ್ಬರು ಸೇರಿ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳೋಣ ಬಾ; ಅದಕ್ಕೆ ಒಂದು ಸಾಕ್ಷಿಯಿರಲಿ ಎಂದು ಹೇಳಿದನು.
45ಆಗ ಯಾಕೋಬನು ಕಲ್ಲನ್ನು ತೆಗೆದುಕೊಂಡು ಕಂಬವಾಗಿ ನಿಲ್ಲಿಸಿದನು. 46ಯಾಕೋಬನು ತನ್ನ ಕಡೆಯವರಿಗೆ - ಕಲ್ಲುಗಳನ್ನು ಕೂಡಿಸಿರಿ ಎಂದು ಹೇಳಲು ಅವರು ಕಲ್ಲುಗಳನ್ನು ಕೂಡಿಸಿ ಕುಪ್ಪೆಯನ್ನು ಮಾಡಿದಾಗ ಅವರೆಲ್ಲರೂ ಆ ಕುಪ್ಪೆಯ ಬಳಿಯಲ್ಲಿ ಸಹ ಭೋಜನವನ್ನು ಮಾಡಿದರು. 47ಆ ಕುಪ್ಪೆಗೆ ಲಾಬಾನನು ಯಗರಸಾಹದೂತ#31.47 ಈ ಎರಡು ಹೆಸರುಗಳಿಗೂ - ಸಾಕ್ಷಿಗಾಗಿ ಹಾಕಿರುವ ಕುಪ್ಪೆ ಎಂಬದು ಅರ್ಥ. ಎಂದೂ ಯಾಕೋಬನು ಗಲೇದ್#31.47 ಈ ಎರಡು ಹೆಸರುಗಳಿಗೂ - ಸಾಕ್ಷಿಗಾಗಿ ಹಾಕಿರುವ ಕುಪ್ಪೆ ಎಂಬದು ಅರ್ಥ. ಎಂದೂ ಹೆಸರಿಟ್ಟರು. ಲಾಬಾನನು - 48ಈ ಹೊತ್ತು ನಿನಗೂ ನನಗೂ ಆದ ಒಡಂಬಡಿಕೆಗೆ ಈ ಕುಪ್ಪೆಯೇ ಸಾಕ್ಷಿ ಎಂದು ಹೇಳಿದ್ದರಿಂದ ಅದಕ್ಕೆ ಗಲೇದೆಂದು ಹೆಸರಾಯಿತು. 49ಅದಲ್ಲದೆ ಅವನು - ನಾವು ಒಬ್ಬರಿಗೊಬ್ಬರು ಅಗಲಿರುವಾಗ ಯೆಹೋವನೇ ನಮ್ಮುಭಯರನ್ನೂ ನೋಡಿಕೊಳ್ಳುತ್ತಾ ಇರುವನು ಎಂದು ಹೇಳಿದ್ದರಿಂದ ಅದಕ್ಕೆ ವಿುಚ್ಪಾ#31.49 ವಿುಚ್ಪಾ ಅಂದರೆ ಕಾವಲು ಸ್ಥಳ. ನ್ಯಾಯ. 11.29,34. ಎಂದು ಹೆಸರಾಯಿತು. 50ಮತ್ತು ಲಾಬಾನನು - ನೀನು ನನ್ನ ಹೆಣ್ಣುಮಕ್ಕಳನ್ನು ನೋಯಿಸಿದರೆ ಅಥವಾ ಬೇರೆ ಸ್ತ್ರೀಯರನ್ನು ಮದುವೆ ಮಾಡಿಕೊಂಡರೆ ವಿಚಾರಿಸುವವರು ಮನುಷ್ಯರೊಳಗೆ ಯಾರೂ ಇಲ್ಲದಿದ್ದರೂ ದೇವರೇ ನಮ್ಮ ಒಡಂಬಡಿಕೆಗೆ ಸಾಕ್ಷಿ ಅಂದನು. 51ಇದಲ್ಲದೆ ಲಾಬಾನನು ಯಾಕೋಬನಿಗೆ - ನಿನಗೂ ನನಗೂ ನಡುವೆ ನಾನು ನಿಲ್ಲಿಸಿರುವ ಈ ಕಂಬವನ್ನು ನೋಡು, ಈ ಕುಪ್ಪೆಯನ್ನೂ ನೋಡು. 52ಕೇಡುಮಾಡುವದಕ್ಕೋಸ್ಕರ ನಾನಂತೂ ಈ ಕುಪ್ಪೆಯನ್ನು ದಾಟಿ ನಿನ್ನ ಬಳಿಗೆ ಬರಕೂಡದು; ಹಾಗೆಯೇ ನೀನು ಈ ಕುಪ್ಪೆಯನ್ನೂ ಈ ಕಂಬವನ್ನೂ ದಾಟಿ ನನ್ನ ಬಳಿಗೆ ಬರಕೂಡದು; ಇದಕ್ಕೆ ಕುಪ್ಪೆಯೂ ಕಂಬವೂ ಈ ಎರಡೇ ಸಾಕ್ಷಿ. 53ಅಬ್ರಹಾಮ ನಾಹೋರರ ದೇವರು ಅಂದರೆ ಅವರ ತಂದೆಯ ದೇವರು ನಿನಗೂ ನನಗೂ ನ್ಯಾಯತೀರಿಸಲಿ ಅಂದನು. ಅದೇ ಮೇರೆಗೆ ಯಾಕೋಬನು ತನ್ನ ತಂದೆಯಾದ ಇಸಾಕನು ಭಯಭಕ್ತಿಯಿಂದ ಸೇವಿಸುವ ದೇವರ ಮೇಲೆ ಆಣೆಯಿಟ್ಟು ಪ್ರಮಾಣ ಮಾಡಿದನು. 54ಇದಲ್ಲದೆ ಯಾಕೋಬನು ಆ ಬೆಟ್ಟದ ಮೇಲೆ ಯಜ್ಞವನ್ನು ಮಾಡಿ ತನ್ನ ಬಂಧುಗಳನ್ನು ತನ್ನೊಡನೆ ಸಹಭೋಜನಕ್ಕೆ ಕರಸಿದನು. ಅವರು ಸಹಭೋಜನ ಮಾಡಿ ಆ ರಾತ್ರಿಯೆಲ್ಲಾ ಬೆಟ್ಟದ ಮೇಲೆ ಇದ್ದರು. 55ಬೆಳಿಗ್ಗೆ ಲಾಬಾನನು ಎದ್ದು ತನ್ನ ಹೆಣ್ಣುಮಕ್ಕಳಿಗೂ ಮೊಮ್ಮಕ್ಕಳಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿ ತನ್ನ ಊರಿಗೆ ಹೊರಟುಹೋದನು.

Highlight

Share

Copy

None

Want to have your highlights saved across all your devices? Sign up or sign in