YouVersion Logo
Search Icon

ಆದಿಕಾಂಡ 30

30
1ರಾಹೇಲಳು ತಾನು ಮಕ್ಕಳನ್ನು ಹೆರದೆ ಇರುವದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು ಯಾಕೋಬನಿಗೆ - ಮಕ್ಕಳನ್ನು ನನಗೆ ಕೊಡು; ಇಲ್ಲದಿದ್ದರೆ ಸಾಯುವೆನು ಎಂದು ಹೇಳಲು 2ಅವನು ಆಕೆಯ ಮೇಲೆ ಕೋಪಗೊಂಡು - ದೇವರು ನಿನಗೆ ಮಕ್ಕಳನ್ನು ಕೊಡದೆಹೋದ ಮೇಲೆ ಕೊಡಲಿಕ್ಕೆ ನನ್ನಿಂದಾದೀತೋ ಅಂದನು. 3ಅದಕ್ಕೆ ಆಕೆಯು - ನನ್ನ ದಾಸಿಯಾದ ಬಿಲ್ಹಾ ಇದ್ದಾಳಲ್ಲಾ; ಅವಳನ್ನು ಕೂಡು; ಅವಳು ಬಸುರಾದರೆ ನನ್ನ ತೊಡೆಯ ಮೇಲೆ ಹೆರಿಸುವೆನು; ಹಾಗೆ ನನಗೂ ಸಂತಾನವಾಗುವದು ಎಂದು ಹೇಳಿ 4ಅವನಿಗೆ ತನ್ನ ದಾಸಿಯಾದ ಬಿಲ್ಹಳನ್ನು ಹೆಂಡತಿಯಾಗುವದಕ್ಕೆ ಒಪ್ಪಿಸಿದಳು. 5ಅವನು ಅವಳನ್ನು ಕೂಡಲು ಬಿಲ್ಹಳು ಗರ್ಭಿಣಿಯಾಗಿ ಗಂಡುಮಗುವನ್ನು ಹೆರಲು 6ರಾಹೇಲಳು - ದೇವರು ನನ್ನ ಕಡೆಗೆ ನ್ಯಾಯ ತೀರಿಸಿದ್ದಾನೆ; ಆತನು ನನ್ನ ಮೊರೆಯನ್ನು ಕೇಳಿ ನನಗೆ ಮಗನನ್ನು ಅನುಗ್ರಹಿಸಿದ್ದಾನೆ ಎಂದು ಹೇಳಿ ಅದಕ್ಕೆ ದಾನ್#30.6 ದಾನ್ ಅಂದರೆ ನ್ಯಾಯತೀರ್ವಿಕೆ; ಆದಿ. 49.16 ನೋಡಿರಿ. ಎಂದು ಹೆಸರಿಟ್ಟಳು. 7ರಾಹೇಲಳ ದಾಸಿಯಾದ ಬಿಲ್ಹಳು ತಿರಿಗಿ ಬಸುರಾಗಿ ಯಾಕೋಬನಿಗೆ ಎರಡನೆಯ ಗಂಡು ಮಗುವನ್ನು ಹೆರಲು 8ರಾಹೇಲಳು - ನನ್ನ ಅಕ್ಕನ ಸಂಗಡ ಬಲವಾಗಿ ಹೋರಾಡಿ ಗೆದ್ದಿದ್ದೇನೆ ಎಂದು ಹೇಳಿ ಅದಕ್ಕೆ ನಫ್ತಾಲಿ#30.8 ಹೋರಾಟ ಎಂದರ್ಥವಿದ್ದಂತೆ. ಎಂದು ಹೆಸರಿಟ್ಟಳು.
9ಲೇಯಳು ತನಗೆ ಹೆರಿಗೆ ನಿಂತುಹೋಗಿರುವದನ್ನು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ಯಾಕೋಬನ ಹೆಂಡತಿಯಾಗುವದಕ್ಕೆ ಒಪ್ಪಿಸಿದಳು. 10ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಗಂಡು ಮಗುವನ್ನು ಹೆರಲು 11ಲೇಯಳು - ನನಗೆ ಶುಭವಾಯಿತೆಂದು ಹೇಳಿ ಅದಕ್ಕೆ ಗಾದ್#30.11 ಗಾದ್ ಅಂದರೆ ಒಳ್ಳೇ ಅದೃಷ್ಟ; ಯೆಶಾ. 65.11; ಆದಿ. 49.19 ನೋಡಿರಿ. ಎಂದು ಹೆಸರಿಟ್ಟಳು. 12ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಇನ್ನೊಂದು ಗಂಡುಮಗುವನ್ನು ಹೆರಲು 13ಲೇಯಳು - ನಾನು ಧನ್ಯಳಾದೆ; ಸ್ತ್ರೀಯರು ನನ್ನನ್ನು ಧನ್ಯಳೆಂದು ಹೊಗಳುವರು ಎಂದು ಹೇಳಿ ಅದಕ್ಕೆ ಆಶೇರೆಂದು#30.13 ಆಶೇರ್ ಅಂದರೆ ಧನ್ಯನು; ಲೂಕ. 1.48 ನೋಡಿರಿ. ಹೆಸರಿಟ್ಟಳು.
14ಗೋದೀ ಸುಗ್ಗಿಯ ಕಾಲದಲ್ಲಿ ರೂಬೇನನು ಅಡವಿಗೆ ಹೋಗಿದ್ದಾಗ ಕಾಮಜನಕ ಫಲಗಳನ್ನು ಕಂಡು ತನ್ನ ತಾಯಿಯಾದ ಲೇಯಳಿಗೆ ತಂದು ಕೊಡಲು ರಾಹೇಲಳು ಆಕೆಗೆ - ನಿನ್ನ ಮಗನು ತಂದಿರುವ ಕಾಮಜನಕ ಫಲಗಳಲ್ಲಿ ಕೆಲವನ್ನು ನನಗೆ ಕೊಡಮ್ಮಾ ಎಂದು ಕೇಳಿಕೊಂಡಳು. 15ಅದಕ್ಕೆ ಲೇಯಳು - ನೀನು ನನ್ನ ಗಂಡನನ್ನು ಅಪಹರಿಸಿದ್ದು ಸಾಲದೋ? ನನ್ನ ಮಗನು ತಂದ ಕಾಮಜನಕ ಫಲಗಳನ್ನೂ ತೆಗೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೀಯಾ ಎಂದು ಹೇಳಲು ರಾಹೇಲಳು - ಒಳ್ಳೇದು, ನೀನು ನಿನ್ನ ಮಗನ ಹಣ್ಣುಗಳನ್ನು ನನಗೆ ಕೊಟ್ಟರೆ ಗಂಡನು ಈ ಹೊತ್ತು ರಾತ್ರಿ ನಿನ್ನಲ್ಲೇ ಇರಲಿ ಅಂದಳು. 16ಸಾಯಂಕಾಲದಲ್ಲಿ ಯಾಕೋಬನು ಅಡವಿಯಿಂದ ಬರುವಾಗ ಲೇಯಳು ಅವನೆದುರಿಗೆ ಹೋಗಿ - ನೀನು ನನ್ನಲ್ಲಿ ಬರಬೇಕು; ನಾನು ನನ್ನ ಮಗನ ಕಾಮಜನಕ ಫಲಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ ಅಂದಳು. ಆ ಹೊತ್ತು ರಾತ್ರಿ ಅವನು ಆಕೆಯೊಂದಿಗೆ ಇದ್ದನು. 17ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದನು; ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಗಂಡುಮಗುವನ್ನು ಹೆತ್ತು - 18ನಾನು ನನ್ನ ದಾಸಿಯನ್ನು ನನ್ನ ಗಂಡನ ವಶಕ್ಕೆ ಒಪ್ಪಿಸಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾನೆಂದು ಹೇಳಿ ಅದಕ್ಕೆ ಇಸ್ಸಾಕಾರೆಂದು#30.18 ಪ್ರತಿಫಲವಾಗಿರುವವನು ಎಂದರ್ಥವಿದ್ದ ಹಾಗೆ. ಹೆಸರಿಟ್ಟಳು. 19ಲೇಯಳು ತಿರಿಗಿ ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಗಂಡುಮಗುವನ್ನು ಹೆತ್ತಳು. 20ಆಕೆಯು - ದೇವರು ನನಗೆ ಒಳ್ಳೇ ಬಳುವಳಿಯನ್ನು ಕೊಟ್ಟಿದ್ದಾನೆ; ನಾನು ನನ್ನ ಗಂಡನಿಗೆ ಆರು ಮಂದಿ ಗಂಡುಮಕ್ಕಳನ್ನು ಹೆತ್ತದ್ದರಿಂದ ಅವನು ನನ್ನೊಡನೆಯೇ ವಾಸಿಸುವನು ಎಂದು ಹೇಳಿ ಅದಕ್ಕೆ ಜೆಬುಲೂನ್#30.20 ಜೆಬುಲೂನ್ ಎಂಬದಕ್ಕೆ ವಾಸವೆಂತಲೂ ಬಳುವಳಿ ಎಂತಲೂ ಎರಡರ್ಥ ಉಂಟು. ಎಂದು ಹೆಸರಿಟ್ಟಳು. 21ತರುವಾಯ ಆಕೆಯು ಹೆಣ್ಣುಮಗುವನ್ನು ಹೆತ್ತು ಅದಕ್ಕೆ ದೀನಾ ಎಂದು ಹೆಸರಿಟ್ಟಳು.
22ಆಮೇಲೆ ದೇವರು ರಾಹೇಲಳನ್ನು ನೆನಸಿಕೊಂಡು ಆಕೆಯ ಮೊರೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಮಾಡಿದನು. 23ಆಕೆಯು ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನೆ ಅಂದಳು. 24ಇದಲ್ಲದೆ ಆಕೆಯು - ಯೆಹೋವನು ಇನ್ನೊಂದು ಗಂಡು ಮಗುವನ್ನು ನನಗೆ ದಯಪಾಲಿಸಬೇಕೆಂದು ಅದಕ್ಕೆ ಯೋಸೇಫನೆಂದು#30.24 ಯೋಸೇಫ ಎಂಬದಕ್ಕೆ ಪರಿಹಾರ ಎಂತಲೂ ಹೆಚ್ಚಾಗಿ ದಯಪಾಲಿಸಲಿ ಎಂತಲೂ ಎರಡರ್ಥ ಉಂಟು. ಆದಿ. 35.17. ಹೆಸರಿಟ್ಟಳು.
ಯಾಕೋಬನು ಇನ್ನೂ ಆರು ವರುಷ ಲಾಬಾನನ ಸೇವೆಮಾಡಿ ಆಡುಕುರಿ ಮುಂತಾದ ಸಂಪತ್ತನ್ನು ಸಂಪಾದಿಸಿಕೊಂಡದ್ದು
25ರಾಹೇಲಳು ಯೋಸೇಫನನ್ನು ಹೆತ್ತ ನಂತರ ಯಾಕೋಬನು ಲಾಬಾನನಿಗೆ - ನನಗೆ ಅಪ್ಪಣೆ ಕೊಡಬೇಕು; ನಾನು ನನ್ನ ದೇಶದಲ್ಲಿರುವ ಸ್ವಂತ ಊರಿಗೆ ಹೋಗಬೇಕು. 26ನಾನು ಸೇವೆ ಮಾಡಿ ಪಡಕೊಂಡ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನಗೆ ಒಪ್ಪಿಸು; ನಾನು ಹೋಗುತ್ತೇನೆ. ನಾನು ನಿನಗೆ ಮಾಡಿದ ಸೇವೆ ನಿನಗೆ ತಿಳಿದೇ ಅದೆ ಎಂದು ಹೇಳಲು 27ಲಾಬಾನನು ಅವನಿಗೆ - ನನ್ನ ಮೇಲೆ ದಯವಿಟ್ಟು ನನ್ನ ಬಳಿಯಲ್ಲೇ ಇರು; ಯೆಹೋವನು ನಿನ್ನ ನಿವಿುತ್ತ ನನ್ನನ್ನು ಅಭಿವೃದ್ಧಿಪಡಿಸಿದ್ದಾನೆಂದು ಚೆನ್ನಾಗಿ ತಿಳಿದಿದ್ದೇನೆ. 28ನಾನು ನಿನಗೆ ಏನು ಕೊಡಬೇಕು ಹೇಳು, ಕೊಡುತ್ತೇನೆ ಎಂದು ಹೇಳಿದನು. 29ಅದಕ್ಕೆ ಯಾಕೋಬನು - ನಾನು ನಿನಗೆ ಮಾಡಿದ ಸೇವೆಯನ್ನೂ ನನ್ನ ವಶದಲ್ಲಿದ್ದ ನಿನ್ನ ಪಶುಗಳು ಅಭಿವೃದ್ಧಿಯಾದದ್ದನ್ನೂ ನೀನು ಬಲ್ಲೆ. 30ನಾನು ಬರುವದಕ್ಕೆ ಮೊದಲು ನಿನಗಿದ್ದದ್ದು ಸ್ವಲ್ಪವೇ; ಈಗ ಬಹಳವಾಗಿ ಹೆಚ್ಚಾಯಿತು. ನಾನು ಕೈಹಾಕಿದ ಎಲ್ಲಾ ಕೆಲಸದಲ್ಲಿಯೂ ಯೆಹೋವನು ನಿನ್ನನ್ನು ಅಭಿವೃದ್ಧಿಪಡಿಸಿದ್ದಾನೆ. 31ನಾನು ಸ್ವಂತ ಮನೆಗೋಸ್ಕರ ಯಾವಾಗ ಸಂಪಾದನೆ ಮಾಡಿಕೊಳ್ಳಲಿ ಎಂದು ಹೇಳಿದನು. ಲಾಬಾನನು - ನಿನಗೆ ನಾನೇನು ಕೊಡಬೇಕು ಹೇಳು ಅನ್ನಲು ಯಾಕೋಬನು - ನನಗೆ ಏನೂ ಕೊಡಬೇಡ; ಒಂದು ಕೆಲಸ ಮಾತ್ರ ಮಾಡಿದರೆ ನಾನು ತಿರಿಗಿ ನಿನ್ನ ಹಿಂಡನ್ನು ಮೇಯಿಸಿ ಕಾಯುವೆನು. 32ಅದೇನಂದರೆ, ಈ ಹೊತ್ತು ನಾನು ನಿನ್ನ ಹಿಂಡಿನೊಳಗೆ ಹೋಗಿ ವಿಕಾರವರ್ಣವುಳ್ಳವುಗಳನ್ನೆಲ್ಲಾ ಅಂದರೆ ಕುರಿಗಳಲ್ಲಿ ಕಪ್ಪಾಗಿರುವವುಗಳನ್ನೂ ಆಡುಗಳಲ್ಲಿ ಚುಕ್ಕೆ ಅಥವಾ ಮಚ್ಚೆ ಉಳ್ಳವುಗಳನ್ನೂ ವಿಂಗಡಿಸುವೆನು; [ಮುಂದೆ ಅಂಥಾದ್ದು ಹುಟ್ಟಿದರೆ] ಅದೇ ನನ್ನ ಸಂಬಳವೆಂದು ನೀನು ಭಾವಿಸಬೇಕು. 33ನೀನು ಇನ್ನು ಮೇಲೆ ಬಂದು ನಾನು ಪಡೆದದ್ದನ್ನು ಪರೀಕ್ಷಿಸುವಾಗ ನಾನು ಪ್ರಾಮಾಣಿಕನೋ ಅಪ್ರಾಮಾಣಿಕನೋ ಎಂಬದು ಪ್ರತ್ಯಕ್ಷವಾಗುವದು. ಆಡುಗಳಲ್ಲಿ ಚುಕ್ಕೆ ಮಚ್ಚೆಯಿಲ್ಲದ್ದೂ ಕುರಿಗಳಲ್ಲಿ ಕಪ್ಪಲ್ಲದ್ದೂ ನನ್ನ ಬಳಿಯಲ್ಲಿ ಸಿಕ್ಕಿದರೆ ಅದನ್ನು ಕದ್ದದ್ದೆಂದು ಎಣಿಸಬಹುದು ಅಂದನು. 34ಅದಕ್ಕೆ ಲಾಬಾನನು - ಒಳ್ಳೇದು, ನೀನು ಹೇಳಿದಂತೆಯೇ ಆಗಲಿ ಅಂದನು. 35ಅದೇ ದಿನ ಲಾಬಾನನು ಹೋತಗಳಲ್ಲಿ ರೇಖೆ ಮಚ್ಚೆ ಇದ್ದವುಗಳನ್ನೂ ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಇದ್ದವುಗಳನ್ನೂ ಅಂದರೆ ಸ್ವಲ್ಪ ಬಿಳುಪಾದ ಬಣ್ಣವು ತೋರಿದ ಎಲ್ಲವುಗಳನ್ನೂ ಕುರಿಗಳಲ್ಲಿ ಕಪ್ಪಾಗಿದ್ದವುಗಳನ್ನೂ ವಿಂಗಡಿಸಿ ತನ್ನ ಮಕ್ಕಳ ವಶಕ್ಕೆ ಒಪ್ಪಿಸಿ 36ತನಗೂ ಯಾಕೋಬನಿಗೂ ಮೂರು ದಿನದ ಪ್ರಯಾಣದಷ್ಟು ದೂರ ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಹಿಂಡಿನಲ್ಲಿ ವಿುಕ್ಕಾದವುಗಳನ್ನು ಮೇಯಿಸಿದನು.
37ಹೀಗಿರುವಲ್ಲಿ ಯಾಕೋಬನು ಲಿಬ್ನೆ, ಲೂಜು, ಅರ್ಮೋನ್ ಎಂಬೀ ಮರಗಳಲ್ಲಿ ಹಸಿಕೋಲುಗಳನ್ನು ತೆಗೆದುಕೊಂಡು ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು ಅವುಗಳಲ್ಲಿರುವ ಬಿಳೀ ಬಣ್ಣವು ಕಾಣಿಸುವಂತೆ ಮಾಡಿ 38ಅವುಗಳನ್ನು ಆಡುಕುರಿಗಳ ಹಿಂಡು ನೀರುಕುಡಿಯುವ ದೋಣಿಗಳಲ್ಲಿ ಇಟ್ಟನು. ಆಡುಕುರಿಗಳು ಕುಡಿಯುವದಕ್ಕೆ ಬಂದ ಸಮಯವೇ ಅವುಗಳಿಗೆ ಸಂಗಮ ಕಾಲವಾಗಿತ್ತು. 39ಅವು ಕೋಲುಗಳನ್ನು ನೋಡುತ್ತಾ ಸಂಗಮಮಾಡಿದ್ದರಿಂದ ರೇಖೆ ಚುಕ್ಕೆ ಮಚ್ಚೆಗಳುಳ್ಳ ಮರಿಗಳನ್ನು ಈದವು. 40ಯಾಕೋಬನು ಆ ಮರಿಗಳನ್ನು ಲಾಬಾನನ ಹಿಂಡಿಗೆ ಸೇರಿಸದೆ ತನ್ನವೆಂದು ಪ್ರತ್ಯೇಕಿಸಿದನು; ಮತ್ತು ಲಾಬಾನನ ಆಡುಕುರಿಗಳ ಮುಖಗಳನ್ನು ರೇಖೆಯುಳ್ಳ ಆ ಆಡುಗಳ ಮತ್ತು ಕಪ್ಪಾದ ಕುರಿಗಳ ಕಡೆಗೆ ತಿರುಗಿಸಿದನು. 41ಇದಲ್ಲದೆ ಬಲಿಷ್ಠವಾದ ಆಡುಕುರಿಗಳು ಸಂಗಮಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ದೋಣಿಗಳಲ್ಲಿ ಕೋಲುಗಳನ್ನಿಟ್ಟನು; ಬಲಹೀನ ಆಡುಕುರಿಗಳ ಎದುರಾಗಿ ಇಡಲಿಲ್ಲ. 42ಹೀಗೆ ಬಲವಿಲ್ಲದವುಗಳು ಲಾಬಾನನ ಪಾಲಿಗೆ ಬಿದ್ದವು, ಬಲಿಷ್ಠವಾದವುಗಳು ಯಾಕೋಬನ ಪಾಲಿಗೆ ಬಿದ್ದವು.
43ಯಾಕೋಬನು ಬಹಳ ಸಂಪತ್ತುಳ್ಳವನಾದನು; ಅವನಿಗೆ ದೊಡ್ಡ ದೊಡ್ಡ ಹಿಂಡುಗಳೂ ದಾಸದಾಸಿಯರೂ ಒಂಟೆಕತ್ತೆಗಳೂ ಹೇರಳವಾಗಿದ್ದವು.

Highlight

Share

Copy

None

Want to have your highlights saved across all your devices? Sign up or sign in