ವಿಮೋಚನಕಾಂಡ 3
3
1ಮೋಶೆ ತನ್ನ ಮಾವನಾಗಿರುವ ವಿುದ್ಯಾನ್ಯರ ಆಚಾರ್ಯನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರುವಾಗ ಆ ಮಂದೆಯನ್ನು ಕಾಡಿನ ಹಿಂಭಾಗಕ್ಕೆ#3.1 ಅಥವಾ ಪಶ್ಚಿಮಭಾಗಕ್ಕೆ. ನಡಿಸಿಕೊಂಡು ಹೋರೇಬ್ ಎಂಬ ದೇವರ ಬೆಟ್ಟಕ್ಕೆ ಬಂದನು. 2ಅಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಯೆಹೋವನ ದೂತನು ಅವನಿಗೆ ಕಾಣಿಸಿಕೊಂಡನು. ಹೇಗಂದರೆ ಅವನು ಒಂದು ಮುಳ್ಳಿನ ಪೊದೆಯನ್ನು ಕಂಡನು ಆ ಪೊದೆಯು ಬೆಂಕಿಯಿಂದ ಉರಿಯುತ್ತಿದ್ದರೂ ಅದು ಸುಟ್ಟುಹೋಗದೆ ಇತ್ತು. 3ಆಗ ಮೋಶೆ - ನಾನು ದಾರಿ ಬಿಟ್ಟು ಈ ಆಶ್ಚರ್ಯವನ್ನು ನೋಡಿ ಪೊದೆಯು ಸುಟ್ಟು ಹೋಗದೆ ಇರುವದಕ್ಕೆ ಕಾರಣವನ್ನು ತಿಳುಕೊಳ್ಳುವೆನು ಅಂದುಕೊಂಡನು. 4ನೋಡುವದಕ್ಕೆ ಅವನು ದಾರಿ ಬಿಟ್ಟದ್ದನ್ನು ಯೆಹೋವನು ಕಂಡನು. ದೇವರು ಆ ಪೊದೆಯೊಳಗಿಂದ - ಮೋಶೆಯೇ, ಮೋಶೆಯೇ ಎಂದು ಕರೆದನು. ಅದಕ್ಕವನು - ಇಗೋ, ಇದ್ದೇನೆ ಅಂದನು. 5ದೇವರು ಅವನಿಗೆ - ನೀನು ಹತ್ತಿರ ಬರಬೇಡ; ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂವಿು ಎಂದು ಹೇಳಿದನು. 6ಅದಲ್ಲದೆ ಆತನು - ನಾನು ನಿನ್ನ ತಂದೆಯ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಅಂದಾಗ ಮೋಶೆ ದೇವರನ್ನು ನೋಡುವದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡನು.
7ಆಗ ಯೆಹೋವನು - ಐಗುಪ್ತ ದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು. 8ಆದಕಾರಣ ಅವರನ್ನು ಐಗುಪ್ತ್ಯರ ಕೈಯೊಳಗಿಂದ ತಪ್ಪಿಸುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ವಾಸವಾಗಿರುವ ದೇಶಕ್ಕೆ ನಡಿಸಿಕೊಂಡು ಹೋಗುವದಕ್ಕೂ ಇಳಿದುಬಂದಿದ್ದೇನೆ. 9ಈಗ ಕೇಳು, ಇಸ್ರಾಯೇಲ್ಯರ ಕೂಗು ನನಗೆ ಮುಟ್ಟಿತು; ಐಗುಪ್ತ್ಯರು ಅವರಿಗೆ ಕೊಡುವ ಉಪದ್ರವವನ್ನು ನಾನು ನೋಡಿದ್ದೇನೆ. 10ಆದದರಿಂದ ನನ್ನ ಜನರಾಗಿರುವ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಹೊರಗೆ ಬರ ಮಾಡುವದಕ್ಕೆ ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ ಬಾ ಅಂದನು.
11ಮೋಶೆ ದೇವರಿಗೆ - ಫರೋಹನ ಸನ್ನಿಧಾನಕ್ಕೆ ಹೋಗುವದಕ್ಕೂ ಇಸ್ರಾಯೇಲ್ಯರನ್ನು ಐಗುಪ್ತದೇಶದಿಂದ ಕರೆದುಕೊಂಡುಬರುವದಕ್ಕೂ ನಾನು ಎಷ್ಟರವನು ಎಂದು ಹೇಳಿದನು. 12ಅದಕ್ಕೆ ದೇವರು - ನಾನೇ ನಿನ್ನ ಸಂಗಡ ಇರುವೆನು; ಮತ್ತು ನೀನು ನನ್ನ ಜನರನ್ನು ಐಗುಪ್ತದೇಶದಿಂದ ಹೊರಗೆ ತಂದಾಗ ನೀವು ಈ ಬೆಟ್ಟದಲ್ಲೇ ದೇವರನ್ನು ಆರಾಧಿಸುವಿರಿ; ನಿನ್ನನ್ನು ಕಳುಹಿಸಿದವನು ನಾನೇ ಎಂಬದಕ್ಕೆ ಇದೇ ನಿನಗೆ ಗುರುತಾಗಿರುವದು ಅಂದನು.
13ಮೋಶೆ ದೇವರಿಗೆ - ನಾನು ಇಸ್ರಾಯೇಲ್ಯರ ಬಳಿಗೆ ಬಂದು ನಿಮ್ಮ ಪಿತೃಗಳ ದೇವರು ನನ್ನನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳಿದಾಗ ಒಂದು ವೇಳೆ ಅವರು - ಆತನ ಹೆಸರೇನೆಂದು ನನ್ನನ್ನು ಕೇಳಿದರೆ ನಾನೇನು ಉತ್ತರಕೊಡಬೇಕು ಎನ್ನಲು 14ದೇವರು ಅವನಿಗೆ - ಇರುವಾತನೇ#3.14 ಅಥವಾ: ಎಂಥವನಾಗಿರುವೆನೋ ಅಂಥವನಾಗಿರುವೆನು. ಆಗಿದ್ದೇನೆ. ನೀನು ಇಸ್ರಾಯೇಲ್ಯರಿಗೆ - ಇರುವಾತನೆಂಬವನು#3.14 ಅಥವಾ: ಅಂಥವನಾಗಿರುವೆನು ಎಂಬಾತನು. ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದನು ಎಂದು ಹೇಳಬೇಕು.
15ದೇವರು ಮೋಶೆಗೆ ಮತ್ತೂ ಹೇಳಿದ್ದೇನಂದರೆ - ನೀನು ಇಸ್ರಾಯೇಲ್ಯರಿಗೆ ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು; ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ. 16ನೀನು ಹೋಗಿ ಇಸ್ರಾಯೇಲ್ಯರ ಹಿರಿಯರನ್ನು ಕೂಡಿಸಿ ಅವರಿಗೆ - ನಿಮ್ಮ ಪಿತೃಗಳ ದೇವರು ಅಂದರೆ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಯೆಹೋವನು ನನಗೆ ದರ್ಶನಕೊಟ್ಟು ನಿಮ್ಮ ವಿಷಯದಲ್ಲಿ - ನಾನು ನಿಮ್ಮಲ್ಲಿ ಲಕ್ಷ್ಯವಿಟ್ಟು ಐಗುಪ್ತದೇಶದಲ್ಲಿ ನಿಮಗೆ ಸಂಭವಿಸಿದ್ದನ್ನೆಲ್ಲಾ ತಿಳುಕೊಂಡಿದ್ದೇನೆ; 17ಐಗುಪ್ತದೇಶದಲ್ಲಿ ನಿಮಗುಂಟಾಗಿರುವ ದುರವಸ್ಥೆಯಿಂದ ನಿಮ್ಮನ್ನು ತಪ್ಪಿಸಿ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರೂ ಹಿತ್ತಿಯರೂ ಅಮೋರಿಯರೂ ಪೆರಿಜೀಯರೂ ಹಿವ್ವಿಯರೂ ಯೆಬೂಸಿಯರೂ ವಾಸವಾಗಿರುವ ದೇಶಕ್ಕೆ ಬರಮಾಡುವೆನೆಂದು ನಿರ್ಣಯಿಸಿದ್ದೇನೆ ಎಂಬದಾಗಿ ನನಗೆ ಹೇಳಿದನೆಂದು ತಿಳಿಸು. 18ಅವರು ನಿನ್ನ ಮಾತಿಗೆ ಕಿವಿಗೊಡುವರು. ನೀನೂ ಇಸ್ರಾಯೇಲ್ಯರ ಹಿರಿಯರೂ ಐಗುಪ್ತದೇಶದ ಅರಸನ ಬಳಿಗೆ ಹೋಗಿ ಅವನಿಗೆ - ಇಬ್ರಿಯರ ದೇವರಾಗಿರುವ ಯೆಹೋವನು ನಮಗೆ ಪ್ರತ್ಯಕ್ಷನಾದನು; ಆದದರಿಂದ ನಾವು ಅರಣ್ಯದಲ್ಲಿ ಮೂರು ದಿನದ ಪ್ರಯಾಣದಷ್ಟು ದೂರ ಹೋಗಿ ನಮ್ಮ ದೇವರಾದ ಯೆಹೋವನಿಗೋಸ್ಕರ ಯಜ್ಞಮಾಡಬೇಕಾಗಿದೆ, ಅಪ್ಪಣೆಯಾಗಬೇಕೆಂದು ಕೇಳಿಕೊಳ್ಳಿರಿ. 19ಐಗುಪ್ತದ ಅರಸನೋ, ಎಷ್ಟು ಬಲಾತ್ಕಾರಮಾಡಿದರೂ ನಿಮ್ಮನ್ನು ಬಿಡುವದಿಲ್ಲವೆಂದು ತಿಳಿದಿದ್ದೇನೆ. 20ಆದಕಾರಣ ನಾನು ಕೈಚಾಚಿ ಐಗುಪ್ತದೇಶದ ಮಧ್ಯದಲ್ಲಿ ಮಹತ್ಕಾರ್ಯಗಳನ್ನು ಮಾಡಿ ಅದನ್ನು ನಾನಾ ವಿಧವಾಗಿ ಬಾಧಿಸುವೆನು; ಆಮೇಲೆ ಅರಸನು ನಿಮ್ಮನ್ನು ಬಿಡುವನು. 21ಅದಲ್ಲದೆ ಈ ನನ್ನ ಜನರಿಗೆ ಐಗುಪ್ತ್ಯರ ದಯೆ ದೊರಕುವಂತೆ ಮಾಡುವೆನು; ಆದದರಿಂದ ನೀವು ಹೊರಡುವಾಗ ಬರಿಗೈಲಿ ಹೋಗುವದಿಲ್ಲ. 22ನಿಮ್ಮಲ್ಲಿ ಪ್ರತಿ ಸ್ತ್ರೀಯು ನೆರೇ ಹೆಂಗಸರಿಂದಲೂ ನಿಮ್ಮ ಮನೆಯಲ್ಲಿ ಇಳುಕೊಂಡ ಹೆಂಗಸರಿಂದಲೂ ಬೆಳ್ಳಿ ಬಂಗಾರದ ಒಡವೆಗಳನ್ನೂ ಬಟ್ಟೆಗಳನ್ನೂ ಕೇಳಿಕೊಳ್ಳಲಿ. ನೀವು ಅವುಗಳನ್ನು ನಿಮ್ಮ ಗಂಡು ಹೆಣ್ಣು ಮಕ್ಕಳಿಗೆ ಇಡಿರಿ; ಇದರಿಂದ ಐಗುಪ್ತ್ಯರನ್ನು ಸೂರೆ ಮಾಡುವಿರಿ ಅಂದನು.
Currently Selected:
ವಿಮೋಚನಕಾಂಡ 3: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.