YouVersion Logo
Search Icon

2 ಸಮುವೇಲನು 23

23
ದಾವೀದನ ಕಡೇ ಮಾತುಗಳು
1ದಾವೀದನ ಕಡೇ ಮಾತುಗಳು.
ಇಷಯನ ಮಗನಾದ ದಾವೀದನ ನುಡಿಗಳು -
ಉನ್ನತಸ್ಥಾನಕ್ಕೆ ಏರಿಸಲ್ಪಟ್ಟವನೂ
ಯಾಕೋಬನ ದೇವರಿಂದ ಅಭೀಷೇಕಿಸಲ್ಪಟ್ಟವನೂ
ಇಸ್ರಾಯೇಲ್ಯರ ವರಕವಿಯೂ ಆಗಿರುವವನು ಹೇಳಿದ್ದು -
2ಯೆಹೋವನ ಆತ್ಮವು ನನ್ನಲ್ಲಿ ಉಸುರಿತು;
ಆತನ ವಾಕ್ಯವು ನನ್ನ ಬಾಯಲ್ಲಿತ್ತು.
3ಇಸ್ರಾಯೇಲ್ಯರ ಶರಣನೂ ದೇವರೂ ಆಗಿರುವಾತನು ಹೇಳಿದ್ದೇನಂದರೆ -
ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಜನರನ್ನು ನೀತಿಯಿಂದ ಆಳುವವನು
4ಮೋಡಗಳಿಲ್ಲದ ಪ್ರಾತಃಕಾಲದಲ್ಲಿ ತೇಜೋಮಯನಾಗಿ ಉದಯಿಸಿ
ಮೋಡಗಳನ್ನು ಚದರಿಸಿಬಿಟ್ಟು
ಮಳೆಬಿದ್ದ ಭೂವಿುಯಿಂದ ಹುಲ್ಲನ್ನು ಮೊಳಿಸುವ ಸೂರ್ಯನಿಗೆ ಸಮಾನನಾಗಿದ್ದಾನೆ.
5ನನ್ನ ಮನೆಯು ಯೆಹೋವನ ಸನ್ನಿಧಿಯಲ್ಲಿ ಸ್ಥಿರವಾಗಿರುತ್ತದಲ್ಲವೋ?
ಆತನು ನನ್ನೊಡನೆ ಒಡಂಬಡಿಕೆಮಾಡಿಕೊಂಡಿದ್ದಾನೆ;
ಅದು ಎಂದಿಗೂ ಬಿದ್ದು ಹೋಗುವದಿಲ್ಲ, ಎಲ್ಲಾ ವಿಷಯಗಳಲ್ಲಿ ಖಂಡಿತವಾಗಿದೆ.
ನನ್ನ ರಕ್ಷಣೆಯ ಮೂಲವೂ ನನ್ನ ಅಭಿಲಾಷೆಯನ್ನು ಪೂರ್ತಿಗೊಳಿಸುವವನೂ ಆತನೇ ಅಲ್ಲವೋ?
6ದುಷ್ಟರು ದೂರಕ್ಕೆ ಬಿಸಾಡಲ್ಪಟ್ಟ ಮುಳ್ಳುಗಳಂತಿರುತ್ತಾರೆ;
ಅವುಗಳನ್ನು ಹಿಡಿಯಬೇಕೆಂದಿರುವವನು ಕೈಯಿಂದ ಹಿಡಿಯಲಾರದೆ
7ಕಬ್ಬಿಣದ ಆಯುಧವನ್ನೂ ಬರ್ಜಿಯ ಹಿಡಿಯನ್ನೂ ಉಪಯೋಗಿಸಬೇಕು;
ಅವು ಬಿದ್ದಲ್ಲಿಯೇ ಬೆಂಕಿಯಿಂದ ಸುಟ್ಟು ಹೋಗುವವು.
ದಾವೀದನ ರಣವೀರರೂ ಅವರ ಶೂರಕೃತ್ಯಗಳೂ
8ದಾವೀದನ ರಣವೀರರ ಪಟ್ಟಿ - ತಹ್ಕೆಮೋನ್ಯನಾದ ಯೋಷೆಬಷ್ಷೆಬೆತನು ಸರದಾರರಲ್ಲಿ ಮುಖ್ಯಸ್ಥನು. ಎಚ್ನೀಯನಾದ ಅದೀನೋ ಅನ್ನಿಸಿಕೊಳ್ಳುವ ಇವನು ಒಂದೇ ಸಾರಿ ಎಂಟುನೂರು ಮಂದಿಯನ್ನು ಕೊಂದನು. 9ಎರಡನೆಯವನು ಅಹೋಹ್ಯನಾದ ದೋದೋ ಎಂಬವನ ಮಗನಾಗಿರುವ ಎಲ್ಲಾಜಾರನು. ಫಿಲಿಷ್ಟಿಯರು ಅಲ್ಲಿ ಯುದ್ಧಕ್ಕೆ ಕೂಡಿಕೊಂಡಾಗ ಅವರನ್ನು ನಿಂದಿಸುವದಕ್ಕೆ ದಾವೀದನ ಜೊತೆಯಲ್ಲಿ ಹೋದ ಮೂರು ಮಂದಿ ಶೂರರಲ್ಲಿ ಇವನು ಒಬ್ಬನಾಗಿದ್ದನು. 10ಇಸ್ರಾಯೇಲ್ಯರು ಹೋದನಂತರ ಇವನು ನಿಂತು ಕತ್ತಿ ಹಿಡಿದ ಕೈ ಸೋತು ಮರಗಟ್ಟಿ ಹೋಗುವ ತನಕ ಫಿಲಿಷ್ಟಿಯರನ್ನು ಕೊಲ್ಲುತ್ತಲೇ ಇದ್ದನು. ಆ ದಿನದಲ್ಲಿ ಯೆಹೋವನು ಮಹಾಜಯವನ್ನುಂಟುಮಾಡಲು ಇಸ್ರಾಯೇಲ್ಯರು ಸುಲುಕೊಳ್ಳುವದಕ್ಕೋಸ್ಕರವೇ ಹಿಂದಿರುಗಿದರು. 11ಮೂರನೆಯವನು ಹರಾರ್ಯನಾದ ಆಗೇಯನ ಮಗ ಶಮ್ಮ ಎಂಬವನು. ಫಿಲಿಷ್ಟಿಯರು ದೊಡ್ಡ ಗುಂಪಾಗಿ ಒಂದು ಅಲಸಂದಿಯ ಹೊಲಕ್ಕೆ ಬಂದರು. 12ಇಸ್ರಾಯೇಲ್ಯರು ಅವರ ಎದುರಿನಿಂದ ಓಡಿಹೋದಾಗ ಇವನು ಆ ಹೊಲದ ಮಧ್ಯದಲ್ಲೇ ನಿಂತುಕೊಂಡು ಫಿಲಿಷ್ಟಿಯರನ್ನು ಕೊಂದು ಹೊಲವನ್ನು ಕಾಪಾಡಿದನು. ಹೀಗೆ ಯೆಹೋವನು ಮಹಾ ಜಯವನ್ನುಂಟುಮಾಡಿದನು.
13ಮೂವತ್ತು ಮಂದಿ ಪ್ರಸಿದ್ಧ ಶೂರರಲ್ಲಿ ದಾವೀದನು ಅದುಲ್ಲಾಮ್ ಗವಿಯಲ್ಲಿದ್ದಾಗ ಸುಗ್ಗೀಕಾಲದಲ್ಲಿ ಅವನ ಬಳಿಗೆ ಮೂರು ಮಂದಿ ಬಂದರು. ಫಿಲಿಷ್ಟಿಯರು ದಂಡೆತ್ತಿ ಬಂದು ರೆಫಾಯೀಮ್ ತಗ್ಗಿನಲ್ಲಿ ಪಾಳೆಯಮಾಡಿಕೊಂಡಾಗ 14ದಾವೀದನು ಆ ಅದುಲ್ಲಾಮ್ ದುರ್ಗದಲ್ಲಿದ್ದನು. ಫಿಲಿಷ್ಟಿಯರು ಬೇತ್ಲೆಹೇವಿುನಲ್ಲಿ ಕಾವಲುದಂಡನ್ನಿಟ್ಟಿದ್ದರು. 15ಅದೇ ಸಮಯದಲ್ಲಿ ದಾವೀದನು ಲವಲವಿಕೆಯಿಂದ - ಬೇತ್ಲೆಹೇಮ್ ಊರಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಯಾರಾದರೂ ನನಗೆ ತಂದುಕೊಡುವದಾದರೆ ಎಷ್ಟೋ ಒಳ್ಳೇದು ಅಂದನು. 16ಕೂಡಲೆ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿಯರ ದಂಡಿನೊಳಗೆ ನುಗ್ಗಿ ಹೋಗಿ ಬೇತ್ಲೆಹೇವಿುನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಂದುಕೊಟ್ಟರು. ಆದರೆ ಅವನು ಅದನ್ನು ಕುಡಿಯಲೊಲ್ಲದೆ - 17ಯೆಹೋವನೇ, ಈ ನೀರನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ಜೀವದಾಶೆ ತೊರೆದವರ ರಕ್ತ! ಇದನ್ನು ಕುಡಿಯುವದೇ ಇಲ್ಲ ಎಂದು ಹೇಳಿ ಅದನ್ನು ಯೆಹೋವನ ಮುಂದೆ ಹೊಯ್ದನು. ಆ ಮೂರು ಮಂದಿಯ ಪರಾಕ್ರಮವು ಇದೇ.
18ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಯು ಈ ಮೂರು#23.18 ಪಾಠಾಂತರ: ಮೂವತ್ತು ಮಂದಿಯಲ್ಲಿ. ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಬರ್ಜಿಯನ್ನು ಬೀಸುತ್ತಾ ಹೋಗಿ ಮುನ್ನೂರು ಮಂದಿಯನ್ನು ಕೊಂದದರಿಂದ ಈ ಮೂವರಲ್ಲಿ#23.18 ಪಾಠಾಂತರ: ಮೂವತ್ತು ಮಂದಿಯಲ್ಲಿ. ಕೀರ್ತಿಗೊಂಡನು. 19ಇವರಲ್ಲಿ ಘನವುಳ್ಳವನೂ ನಾಯಕನೂ ಇವನೇ. ಆದರೂ ಇವನು ಮೊದಲಿನ ಮೂರು ಮಂದಿಗೆ ಸಮಾನನಾಗಿರಲಿಲ್ಲ. 20ಯೆಹೋಯಾದಾವನ ಮಗನೂ ಕಬ್ಜಯೇಲಿನ ಪರಾಕ್ರಮಶಾಲಿಯೂ ಆದ ಬೆನಾಯನು ಇನ್ನೊಬ್ಬನು. ಇವನು ಅನೇಕ ಶೂರಕೃತ್ಯಗಳನ್ನು ನಡಿಸಿದನು. ದೃಷ್ಟಾಂತ - ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು. 21ಮತ್ತೊಮ್ಮೆ ಉನ್ನತನಾದ ಒಬ್ಬ ಐಗುಪ್ತ್ಯನನ್ನು ಕೊಂದನು. ಆ ಐಗುಪ್ತ್ಯನ ಕೈಯಲ್ಲಿ ಒಂದು ಬರ್ಜಿಯಿತ್ತು. ಇವನು ಕೈಯಲ್ಲಿ ಒಂದು ಕೋಲನ್ನು ಮಾತ್ರ ಹಿಡಿದುಕೊಂಡು ಹೋಗಿ ಅವನ ಕೈಯಲ್ಲಿದ್ದ ಬರ್ಜಿಯನ್ನು ಕಿತ್ತುಕೊಂಡು ಅದರಿಂದ ಅವನನ್ನು ಕೊಂದನು. 22ಈ ಪರಾಕ್ರಮ ಕೃತ್ಯದಿಂದ ಯೆಹೋಯಾದಾವನ ಮಗನಾದ ಬೆನಾಯನು ಈ ಮೂವರಲ್ಲಿ#23.22 ಪಾಠಾಂತರ: ಮೂವತ್ತು ಮಂದಿಯಲ್ಲಿ. ಹೆಸರುಗೊಂಡನು. 23ಮೂವತ್ತು ಮಂದಿಯಲ್ಲಿ ಇವನು ವಿಶೇಷ ಕೀರ್ತಿಯನ್ನು ಹೊಂದಿದ್ದರೂ [ಮೊದಲಿನ] ಮೂವರಿಗೆ ಸಮಾನನಾಗಿರಲಿಲ್ಲ. ದಾವೀದನು ಇವನನ್ನು ತನ್ನ ಕಾವಲುದಂಡಿನ ಮುಖ್ಯಸ್ಥನನ್ನಾಗಿ ಮಾಡಿದನು.
24ಮೂವತ್ತು ಮಂದಿ ರಣವೀರರ ಪಟ್ಟಿ -
ಯೋವಾಬನ ತಮ್ಮನಾದ ಅಸಾಹೇಲನು, ಬೇತ್ಲೆಹೇವಿುನ ದೋದೋವಿನ ಮಗನಾದ ಎಲ್ಹಾನಾನ್, 25,26ಹರೋದಿನವರಾದ ಶಮ್ಮ ಎಲೀಕರು, ಪೆಲೆಟಿನವನಾದ ಹೆಲೆಚ್, ತೆಕೋವದ ಇಕ್ಕೇಷನ ಮಗನಾದ ಈರಾ, 27ಅಣತೋತಿನವನಾದ ಅಬೀಯೆಜೆರ್, ಹುಷಾ ಊರಿನವನಾದ ಮೆಬುನ್ನೈ, 28ಅಹೋಹಿನವನಾದ ಚಲ್ಮೋನ್, ನೆಟೋಫದವನಾದ ಮಹರೈ, 29ನೆಟೋಫದವನಾದ ಬಾಣನ ಮಗ ಹೇಲೆಬ್, ಬೆನ್ಯಾಮೀನ್ ದೇಶದ ಗಿಬೆಯ ಊರಿನ ರೀಬೈ ಎಂಬವನ ಮಗನಾದ ಇತ್ತೈ, 30ಪಿರಾತೋನ್ಯನಾದ ಬೆನಾಯ, ನಹಲೇಗಾಷಿನವನಾದ ಹಿದ್ದೈ, 31ಅರಾಬಾ ತಗ್ಗಿನವನಾದ ಅಬೀ ಅಲ್ಬೋನ್, 32ಬರ್ಹುಮ್ಯನಾದ ಅಜ್ಮಾವೇತ್, ಶಾಲ್ಬೋನ್ಯನಾದ ಎಲೆಯಖ್ಬಾ, ಯಾಷೇನನ ಮಕ್ಕಳು, 33ಯೋನಾತಾನನು, ಹರಾರ್ಯನಾದ ಶಮ್ಮ, ಅರಾರ್ಯನಾದ ಶಾರಾರನ ಮಗ ಅಹೀಯಾಮ್, 34ಮಾಕಾ ಊರಿನ ಅಹಸ್ಬೈ ಎಂಬವನ ಮಗನಾದ ಎಲೀಫೆಲೆಟ್, ಗಿಲೋವಿನ ಅಹೀತೋಫೆಲ್ ಎಂಬವನ ಮಗನಾದ ಎಲೀಯಾಮ್, 35ಕರ್ಮೆಲ್ಯನಾದ ಹೆಚ್ರೋ, ಅರ್ಬೀಯನಾದ ಪಾರೈ, 36ಚೋಬ ಊರಿನ ನಾತಾನ್ ಎಂಬವನ ಮಗನಾದ ಇಗಾಲ್, ಗಾದ್ಯನಾದ ಬಾನೀ, 37ಅಮ್ಮೋನಿಯನಾದ ಚೆಲೆಕ್, ಬೇರೋತ್ಯನೂ ಚೆರೂಯಳ ಮಗನಾದ ಯೋವಾಬನ ಆಯುಧವಾಹಕನೂ ಆಗಿದ್ದ ನಹರೈ, 38ಇತ್ರೀಯರಾದ ಈರಾ ಗಾರೇಬರು, 39ಹಿತ್ತಿಯನಾದ ಊರೀಯ, ಒಟ್ಟಿಗೆ ಮೂವತ್ತೇಳು ಮಂದಿ.

Highlight

Share

Copy

None

Want to have your highlights saved across all your devices? Sign up or sign in

Videos for 2 ಸಮುವೇಲನು 23